ಹೂವು - ದೇವರು

ಹೂವು - ದೇವರು

ಕವನ

ಚೆಲುವೇ ದೇವರು, ಒಲವೇ ಪೂಜೆ;

ಎಂಬುದೆ ರಸಜೀವನದೋಜೆ

ಕಲೆಯನು ಮೀರುವ ಸಾಧನೆಯಿಲ್ಲ;

ಕಲೆಯೊಳೆ ಪುರುಷಾರ್ಥಗಳೆಲ್ಲ;

ಕಲೆಯಿರದೆದೆಗೆ-ಏನಿಲ್ಲ!

 

ಕಾಮನ ಬಿಲ್ಲಿನ ಬಿತ್ತವ ಬಿತ್ತಿ

ಬೆಳೆಯಾದಂತಿದೆ ಹೂದೋಟ

ಮೋಹಿಸುವಪ್ಸರಿಯರೆ ನೆರೆ ಮುತ್ತಿ 

ಕುಣಿಕುಣಿವಂತಿದೆ ಈ ನೋಟ. 

ಹಳದಿಯ ಕೆಂಪಿನ ನೀಲಿಯ ಹಸುರಿನ

ಚಿನ್ನದ ಬೆಳ್ಳಿಯ ಮುತ್ತಿನ ಪಚ್ಚೆಯ

ತರತರ ಬಣ್ಣದ ತೆರೆತೆರೆಯಾಟ

ಎದೆಯಲಿ ನಲುಮೆಯ ಚಿಲುಮೆಯ ಚಿಮ್ಮಿಸೆ,

ಕಚಗುಳಿಯಿಡುತಿದೆ ಹೂದೋಟ!

 

ಪ್ರಾತಃಕಾಲದ ಹೊಂಬಿಸಿಲಲ್ಲಿ

ಸ್ವರ್ಗವೆ ಭೂಮಿಗೆ ಇಳಿದಿದೆ ಇಲ್ಲಿ; 

ಕಂಗಳೆ ತೇಲಿವೆ ಬಣ್ಣದ ಕಡಲಲಿ,

ಕೆಂಪಾಗಿಹ ನೆತ್ತರು ನನ್ನೊಡಲಲಿ

ಕಣ್ಣೀಂಟುವ ಬಣ್ಣವನೇ ತಾಳಿ

ಮಿನು ಮಿಂಚುತ್ತಿದೆ ಕಣ್ಣನೆ ಹೋಲಿ

 

ಹೂ ಕುಯ್ಯಲು ಬಂದನು ಪೂಜಾರಿ;

ಹೂ ಬುಟ್ಟಿ ಅದೋ ಕೈಯಲ್ಲಿ!

ಹೂಗಳ ಚೆಲುವಿಗೆ ದೇವರೆ ಮಾರಿ? 

ಪೂಜಾರಿಯೆ ಕಟುಕನೆ ಇಲ್ಲಿ? 

 

ಹಕ್ಕಿಯ ಮರಿಗಳ ಕುತ್ತಿಗೆ ಮುರಿದು 

ಬೇಡನು ಕೊಲ್ಲುವ ರೀತಿಯಲಿ, 

ಹೂಗಳ ತೊಟ್ಟನು ತಿರುಪ್ಪಿ ಹರಿದು 

ಬುಟ್ಟಿಗೆ ಬಿಡುವನು ʼಪ್ರೀತಿಯಲಿʼ!

 

ನಿತ್ಯಾಚಾರದ ನೀರಸ ದೃಷ್ಟಿ

ಅವನದು, ಸೌಂದರ್ಯದ ಶಿವಸೃಷ್ಟಿ

ಹೋಗಿಹುದಾತಗೆ ಮೃತವಾಗಿ.

ಕಾಣದೊ: ಕಲ್ಲೆದೆ ಹೂ ಕೊಯ್ವಂತೆ

ಕೊಯ್ವನು ಚೆಲುವಿಗೆ ಕುರುಡಾಗಿ!

 

ಓ ಪೂಜಾರಿ, 

ಕೋಮಲ ಸುಮಗಳ ಕತ್ತನು ಕೊಯ್ದು

ಕಗ್ಗಲ್ಲಿನ ಕಗ್ಗತ್ತಲೆಗೊಯ್ದು

ಗುಡಿಯಾ ಕಲ್ಲಿಗೆ ಬಲಿಕೊಡದಿದ್ದರೆ

ಪರಮಾತ್ಮಗೆ ತೃಪ್ತಿಯೆ ಇಲ್ಲೇನು? 

ಈ ಗಿಡದೊಳೆ ರಾರಾಜಿಸುತ್ತಿದ್ದರೆ

ಶಿವಪೂಜೆಯು ಸಲ್ಲುವುದಿಲ್ಲೇನು? 

ಚೆಲುವೆಂಬುದೆ ಆ ಶಿವನಲ್ಲೇನು? 

ಸೌಂದರ್ಯದ ಸುಮ ನಯನವ ಕಿತ್ತರೆ 

ಶಿವಾರಾಧನೆಯಾದೀತೇ? 

ಶಿವಮುಖ ಚಂದ್ರಿಕೆ ಚೆಲುವದು ಸತ್ತರೆ

ಭುವನಕೆ ಮಂಗಳವಾದೀತೇ? 

 

ಬಿಡೊ ಅಲ್ಲಿರಲಿ ಆ ಹೂವು!

ನೀ ಸೃಷ್ಟಿಸಲಾರದ ಚೆಲುವಿಗೆ ನಿನ್ನಿಂದೇತಕೆ ಸಾವು. 

(ಕೋಗಿಲೆ ಮತ್ತು ಸೋವಿಯಟ್‌ ರಷ್ಯಾ ಸಂಕಲನದಿಂದ)

-ಕುವೆಂಪು (17-09-1935)

(ಸಂಗ್ರಹ)

ಚಿತ್ರ್