ಹೂ ತೋಟದ ಶೋಭೆಗೆ ಪಾರಿಜಾತ ಸಸ್ಯ

ಹೂ ತೋಟದ ಶೋಭೆಗೆ ಪಾರಿಜಾತ ಸಸ್ಯ

ಹೂ ತೋಟದಲ್ಲಿ ವೈವಿಧ್ಯಮಯ ಪುಷ್ಪ ಗಿಡಗಳ ಸಾಲಿನಲ್ಲಿ ಕೆಲವು ಪರಿಮಳದ ಹೂ ಗಿಡಗಳಿದ್ದರೆ  ಅದರ ಶೋಭೆಯೇ ಬೇರೆ. ಪರಿಮಳದ ಹೂ ಬಿಡುವ ಪುಷ್ಪಗಳಲ್ಲಿ ಮಲ್ಲಿಗೆ, ಜಾಜೀ ಮಲ್ಲಿಗೆ, ಸೇವಂತಿಗೆ, ಸಂಪಿಗೆ ಹೂವುಗಳ ಜೊತೆಗೆ ರಾತ್ರೆ ಹೊತ್ತು ಹೂ ಬಿಟ್ಟು ಬೆಳಗ್ಗೆ ಏಳುವಾಗ ನಮ್ಮನ್ನು ಆಕರ್ಷಕ ಪರಿಮಳದೊಂದಿಗೆ ಸ್ವಾಗತಿಸುವ ಹೂ ಎಂದರೆ ಪಾರಿಜಾತ (Night-flowering Jasmine)ಪುಷ್ಪ ಮುಸ್ಸಂಜೆಯಲ್ಲಿ ಸ್ವಲ್ಪ ಸ್ವಲ್ಪವೇ ಅರಳಲು ಪ್ರಾರಂಭವಾಗಿ ಮಧ್ಯರಾತ್ರಿಗೆ ಪೂರ್ತಿ ಅರಳುತ್ತದೆ. ಬೆಳಗಾಗುವಾಗ ಅರಳಿದ ಹೂವು ತೊಟ್ಟಿನಿಂದ ಉದುರಿ ನೆಲದಲ್ಲಿ ಬಿದ್ದಿರುತ್ತದೆ. ವಿಶಿಷ್ಟ ಆಕರ್ಷಕ ಸುವಾಸನೆ ಸುಮಾರು ೨೫ ಮೀಟರು ವ್ಯಾಪ್ತಿಯವರೆಗೂ ಪಸರಿಸುತ್ತದೆ. ಪಾರಿಜಾತ ಹೂವನ್ನು ರಾತ್ರಿ ಮಲ್ಲಿಗೆ ಎಂದೂ ಕರೆಯುತ್ತಾರೆ. ಇದರ ತೊಟ್ಟು ಕೇಸರಿ ಬಣ್ಣ, ಪುಷ್ಪದಳ ಬಿಳಿ ಬಣ್ಣ. ತುಂಬಾ ಕೋಮಲವಾದ ಹೂವು.

ಇದು plantae ಜಾತಿಯ Oleaceae ಕುಟುಂಬಕ್ಕೆ ಸೇರಿದೆ. Nyctanthes arbor-tristis ಇದರ ವೈಜ್ಞಾನಿಕ ಹೆಸರು. ಆಂಗ್ಲ  ಭಾಷೆಯಲ್ಲಿ Coral jasmine, Tree sorrow, Queen of night ಈ ಎಲ್ಲಾ ಹೆಸರುಗಳಿಂದ ಕರೆಯುತ್ತಾರೆ. ಸಂಸ್ಕೃತ, ಮಲಯಾಳಂ, ಮರಾಠಿ, ಕನ್ನಡದಲ್ಲಿ ಪಾರಿಜಾತ ಎಂಬ ಹೆಸರು. ಹಿಂದಿಯಲ್ಲಿ ಹರ್ ಸಿಂಗಾರ್ ಎನ್ನುತ್ತಾರೆ. ದಕ್ಷಿಣ ಆಪ್ರಿಕಾ ಮೂಲದ್ದು ಎನ್ನಲಾಗುತ್ತಿದೆಯಾದರೂ, ನಮ್ಮ ದೇಶದ ಇತಿಹಾಸದಲ್ಲಿ ಇದರ ಉಲ್ಲೇಖ ಇದೆ. ಶ್ರೀಕೃಷ್ಣ  ದೇವರಿಗೆ ಪ್ರಿಯವಾದ ಹೂವು ಎಂಬ ಐತಿಹ್ಯವಿದೆ. ಶ್ರೀ ಕೃಷ್ಣನು ಇದನ್ನು ಇಂದ್ರನಿಂದ ತಂದನಂತೆ. ಇದನ್ನು ಅವನು ತನ್ನ ಹೆಂಡತಿ ರುಕ್ಮಿಣಿಗೆ ಕೊಟ್ಟನಂತೆ. ಅದು ಸತ್ಯಭಾಮೆಗೆ ನೋವನ್ನುಂಟು ಮಾಡಿತಂತೆ. ಅದಕ್ಕೆ ಸತ್ಯಭಾಮೆ ಈ ಹೂವು ರಾತ್ರೆಯೇ ಅರಳಿ ಹಗಲಿಗೆ ಯಾರಿಗೂ ಗೊತ್ತಾಗದೇ ಅದರ ವೈಭವ ಕಡಿಮೆಯಾಗುವಂತೆ ಶಾಪ ಕೊಟ್ಟಳಂತೆ. ಆ ಕಾರಣಕ್ಕೆ  ಈ ಹೂವು ರಾತ್ರಿ ಅರಳಿ ಬೆಳಗಾಗುವುದರೊಳಗೆ ನೆಲಕ್ಕೆ ಬಿದ್ದು ಹಾಳಾಗುತ್ತದೆಯಂತೆ.

ಈ ಹೂವಿನ ಗಿಡ ಔಷಧೀಯ ಸಸ್ಯ. ಆಯುರ್ವೇದ  ಮತ್ತು ಹೋಮಿಯೋಪತಿಯಲ್ಲಿ ಇದನ್ನು ಬಳಕೆ ಮಾಡಲಾಗುತ್ತದೆ.   ಬೇರೆ ಬೇರೆ ಗಂಟು ನೋವುಗಳು, ಮಲಬದ್ಧತೆ, ನೀರು ತುಂಬುವ ಬಾವು,  ಕೆಮ್ಮು, ತಲೆ ಹೊಟ್ಟು ಮತ್ತು ಹೊಟ್ಟೆ  ಹುಳುಗಳಿಗೆ ಇದು ಔಷಧಿ. ಇದರ ಹೂವು ಸುಗಂಧ ದ್ರವ್ಯ ತಯಾರಿಕೆಗೆ  ಬಳಕೆಯಾಗುತ್ತದೆ. ಇದನ್ನು ಗೆಲ್ಲುಗಳನ್ನು ಕತ್ತರಿಸಿ ನೆಟ್ಟು ಸಸಿ ಮಾಡಲಾಗುತ್ತದೆ. ಬೀಜಗಳಿಂದಲೂ ಸಸಿ ಮಾಡಲಾಗುತ್ತದೆ. 

ಮಾಹಿತಿ: ರಾಧಾಕೃಷ್ಣ ಹೊಳ್ಳ