ಹೂ ಬಿಡುವ ಮೊದಲು ಮಾವಿನ ಗಿಡದ ಆರೈಕೆ

ಹೂ ಬಿಡುವ ಮೊದಲು ಮಾವಿನ ಗಿಡದ ಆರೈಕೆ

ಮಾವು ಹಣ್ಣುಗಳ ರಾಜ. ಅಬಾಲವೃದ್ದರವರೆಗೆ ಎಲ್ಲರಿಗೂ ಮಾವಿನ ಹಣ್ಣು ಇಷ್ಟ. ಅದಕ್ಕಾಗಿ ಕೃಷಿ ಭೂಮಿ ಹೊಂದಿದವರೂ ಅಲ್ಲದೆ, ಬರೇ ಮನೆ ಹಿತ್ತಲು ಉಳ್ಳವರೂ ಸಹ ಒಂದು- ಎರಡು ಮಾವಿನ ಸಸಿ ನೆಟ್ಟು ಬೆಳೆಸುತ್ತಾರೆ. ಅವರವರು ಬೆಳೆಸಿದ ಮಾವಿನ ಮರದ ಹಣ್ಣು ತಿನ್ನುವುದೆಂದರೆ ಅದಕ್ಕಿಂತ ಆನಂದ ಬೇರೆ ಇಲ್ಲ.

ಇನ್ನು ಮಾವಿನ ಹೂ ಬಿಡುವ ಸಮಯ ಬರುತ್ತಿದೆ. ಡಿಸೆಂಬರ್- ಜನವರಿಯಲ್ಲಿ ಮಾವಿನ ಮರ ಹೂ ಬಿಟ್ಟು ಮಿಡಿಯಾಗಿ, ಮಾರ್ಚ್- ಎಪ್ರಿಲ್ ಗೆ ಹಣ್ಣಾಗುತ್ತದೆ. ಮರ ಹೂ ಬಿಡುವ ಮುನ್ನ ಮಾವಿನ ಮರದ ಆರೋಗ್ಯ ಉತ್ತಮವಾಗಿರಬೇಕು. ಹೂ ಮೊಗ್ಗು ಮೂಡುವ ಭಾಗ ಆರೋಗ್ಯವಾಗಿದ್ದಷ್ಟು ಹೂವು ಬರುವ ಪ್ರಮಾಣ ಅಧಿಕ ಇರುತ್ತದೆ. ಮಳೆಗಾಲ ಕಳೆದ ತಕ್ಷಣ ಮಾವಿನ ಮರದ ಬುಡವನ್ನು ಸ್ವಚ್ಚವಾಗಿಡಬೇಕು. ಕಳೆಗಳನ್ನು ತೆಗೆದು ನೆಲವನ್ನು ಒಮ್ಮೆ ಅಗೆತ ಮಾಡುವುದು ಉತ್ತಮ. ಇದರಿಂದ ನೆಲದಲ್ಲಿ ಆಶ್ರಯಿಸಿರುವ ಹುಳು ಹುಪ್ಪಟೆಗಳು ಬಿಸಿಲಿಗೆ ನಾಶವಾಗುತ್ತವೆ. ಈ ಸಮಯದಲ್ಲಿ ಮಾವಿನ ಮರದ ಗೆಲ್ಲುಗಳಲ್ಲಿ ಅದೇ ಮರದ ಎಲೆಗಳನ್ನು ಸೇರಿಸಿ ಬಲೆಯಂತೆ ಗೂಡು ಕಟ್ಟಿಕೊಂಡಿರುವುದು ಕಂಡು ಬರುವುದು ಸಾಮಾನ್ಯ. ಆ ಭಾಗವನ್ನು ಬಿಡಿಸಿ ನೋಡಿದರೆ ಒಂದು ಹುಳ ವಾಸವಾಗಿರುತ್ತದೆ. ಇದು ಮಾವಿನ ಜೇಡ ಹುಳುವಾಗಿದ್ದು (Orthaga) ಈ ಹುಳವು ಮರದ ಚಿಗುರನ್ನು/ ಹೂ ಮೊಗ್ಗನ್ನು ಬೆಳೆಯಲು ಬಿಡದೆ ಭಕ್ಷಿಸಿ ತೊಂದರೆ ಮಾಡುತ್ತದೆ. ಇದರಿಂದಾಗಿ ಎಲೆಗಳು ಒಣಗಿ ಹೂ ಬಿಡುವ ಪ್ರಮಾಣ ಕಡಿಮೆಯಾಗುತ್ತದೆ. ಕೆಲವು ಕಡೆ ಇದು ಅಧಿಕ ಪ್ರಮಾಣದಲ್ಲಿಯೂ ಮತ್ತೆ ಕೆಲವು ಕಡೆ ಕಡಿಮೆಯೂ ಇರುತ್ತದೆ. ಈ ಹುಳುಗಳು ಚಿಗುರಿನ ರಸ ಹೀರಿ ಮೊಗ್ಗು ಮೂಡುವ ಭಾಗವನ್ನು ನಿಸ್ತೇಜಗೊಳಿಸುತ್ತದೆ. ಇದರ ನಿವಾರಣೆಗೆ ಹೂ ಬರುವ ಮುನ್ನ ಮರಕ್ಕೆ ಕ್ಲೋರೋಪೆರಿಫಾಸ್ ಅಥವಾ ಮೋನೋಕ್ರೋಟೋಫಾಸ್ ಕೀಟನಾಶಕ (ಕ್ಲೋರೋ. ೩ ಮಿಲಿ- ೧ಲೀ ನೀರು, ಮೊನೋ.  ಮಿಲಿ ೧ ಲೀ ನೀರು) ಸಿಂಪರಣೆ ಮಾಡಬೇಕು. ಇದು ಕೇವಲ ಬಲೆ ಕಟ್ಟಿ ಚಿಗುರು ಭಕ್ಷಿಸುವ ಹುಳಗಳನ್ನು ಮಾತ್ರವಲ್ಲದೆ ಎಳೆ ಚಿಗುರು ಕೊರಕಗಳನ್ನು ನಿಯಂತ್ರಿಸಲೂ ಸಹಕಾರಿ. ಕೀಟನಾಶಕ ಬಳಕೆ ಮಾಡದೇ ಇರುವ ಮರಗಳಲ್ಲಿ - ಫಸಲು ಆದ ನಂತರ ಸವರುವಿಕೆ (ಪ್ರೂನಿಂಗ್) ಮಾಡದೇ ಇರುವ ಮಾವಿನ ತೋಪುಗಳಲ್ಲಿ ಇದು ಹೆಚ್ಚು.  ಕೀಟ ನಾಶಕವಲ್ಲದೆ  ಇದಕ್ಕೆ ಬೇವಿನ ಬೀಜದ ಕಷಾಯ ಅಥವಾ ಬೇವು ಮೂಲದ ಸಿದ್ದ ಕೀಟನಾಶಕವನ್ನು ಸಿಂಪರಣೆ ಮಾಡಬಹುದು. ಜೈವಿಕ ಕೀಟನಾಶಕಗಳನ್ನೂ (ವರ್ಟಿಸೀಲಿಯಂ ಅಥವಾ ಬೆವೇರಿಯಾ)ವನ್ನು ಬಳಕೆ ಮಾಡಬಹುದು. ಇದಲ್ಲದೆ ಕೆಲವು ಕಡೆ ಕಾಂಡ ಕೊರಕ ಹುಳುವಿನ ಉಪಟಳವೂ ಇರುತ್ತದೆ. ಮರದಲ್ಲಿ ಗೆಲ್ಲುಗಳು ಒಣಗಿದಂತೆ ಕಂಡು ಬರುತ್ತದೆ. ಕೆಲವೊಮ್ಮೆ ದೊಡ್ದ ಗೆಲ್ಲುಗಳೂ ಒಣಗಬಹುದು. ಇದನ್ನು ಹಾಗೆಯೇ ಬಿಟ್ಟರೆ ಬೇರೆ ಗೆಲ್ಲುಗಳಿಗೂ ತೊಂದರೆಯಾಗುತ್ತದೆ. ಇಂತಹ ಚಿನ್ಹೆ ಕಂಡು ಬಂದರೆ ಆ ಗೆಲ್ಲನ್ನು ಸೂಕ್ಷ್ಮವಾಗಿ ಗಮನಿಸಿ ತೂತು ಇರುವ ಭಾಗದಿಂದ ಕತ್ತರಿಸಿ ತೆಗೆಯಬೇಕು. ಕೆಳಭಾಗದಲ್ಲೂ ತೂತು ಇದ್ದರೆ, ಅದನ್ನೂ ಸ್ವಚ್ಚಗೊಳಿಸಿ ಆ ಭಾಗಕ್ಕೆ ಡೈಕ್ಲೋರೋವಾಸ್ ಹಾಕಬೇಕು. ಕಾಂಡ ಕೊರೆಯುವ ಹುಳು ಮರದ  ಕಾಂಡದ ಬುಡದಲ್ಲಿ ವಾಸ್ತವ್ಯವಿರುತ್ತದೆ. ಕಾಂಡದ ಸುತ್ತಲೂ ಬರುವಂತೆ ಭಾರತೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆಯ IIHR Sealer Powder  ಮತ್ತು Copper Oxychloride ಅನ್ನು ಸ್ವಲ್ಪ ನೀರು ಬೆರೆಸಿ ಪೈಂಟ್ ತರಹ ದ್ರಾವಣ ಮಾಡಿ ಲೇಪನ ಮಾಡಬೇಕು. ಮಾವಿನ ಫಲ ಕೊಡುವ ಮರಕ್ಕೆ ೭೦೦ ಗ್ರಾಂ ಸಾರಜನಕ, ೧೮೦ ಗ್ರಾಂ ರಂಜಕ, ಮತ್ತು ೭೦೦ ಗ್ರಾಂ ಪೊಟ್ಯಾಶ್ ಶಿಫಾರಿತ ಗೊಬ್ಬರ. ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಮಾವು ಸ್ಪೆಷಲ್ ಸಿಂಪರಣೆ ಮಾಡಿದರೆ ಫಸಲಿಗೆ ಅನುಕೂಲವಾಗುತ್ತದೆ.

ಮಾಹಿತಿ ಮತ್ತು ಚಿತ್ರಗಳು : ರಾಧಾಕೃಷ್ಣ  ಹೊಳ್ಳ