*ಹೃದಯಗೀತೆ*

*ಹೃದಯಗೀತೆ*

ಕವನ

ನೀಲಿ ಗಗನದಿ ನಿತ್ಯ ಚಲಿಸುವ

ಚಿತ್ತ ಚೋರಿಯೆ ಚಂದ್ರಿಕೆ

ಖಾಲಿ ಹೃದಯದಿ ಅಚ್ಚು ಹೊತ್ತಿಹೆ

ಚೆಂದದಿಂದಲಿ ಮುದ್ರಿಕೆ||

 

ಬೆಳ್ಳಿ ಮೋಡದ ರಥವ ಏರುತ

ಬಳಿಗೆ ಬಂದಳು ನೈದಿಲೆ

ಕಳ್ಳ ನೋಟದಿ ಮನವ ಕದ್ದಳು

ಇಡುತ ಕಚಗುಳಿ ಕೋಮಲೆ||

 

ಸುತ್ತ ಚೆಲುವಿನ ಹಚ್ಚ ಐಸಿರ

ನಿನ್ನ ಅಂದಕೆ ನಾಚಲು

ಮುತ್ತು ಮಳೆಯನು ಹೊತ್ತು ತಂದಿಹೆ

ತನುವ ಚೆಂದವ ದೋಚಲು||

 

ಲಜ್ಜೆಯಿಂದಲಿ ಮೊಗವು ಅರಳಿತು

ಲತೆಯ ತೆರದಲಿ ನುಲಿದಳು ಗೆಜ್ಜೆನಾದವು ಮೋದ ನೀಡಿತು

ಎದೆಯ ಗೂಡನು ಬೆಳಗಲು||

 

ಜೋಡಿವಿಹಗವು ಕೊಳದಿ ಈಜುತ

ಹಂಸರಾಗವ ಮಾಡಿತು

ಜೋಡಿ ಹೃದಯವು ಮೋಡಿ ಮಾಡುತ

ಹೃದಯ ಗೀತೆಯ ಹಾಡಿತು||

 

-*ಶ್ರೀ ಈರಪ್ಪ ಬಿಜಲಿ* 

 

ಚಿತ್ರ್