ಹೃದಯದಲ್ಲಿ ಸದಾ ಗುರುವಿಗೆ ಜಾಗವಿರಲಿ

ಬದುಕಿನಲ್ಲಿ ಪ್ರತಿಯೊಬ್ಬರ ಯಶಸ್ಸಿನ ಹಿಂದೆ ಗುರುವಿನ ನೆರಳು ಇದ್ದೇ ಇರುತ್ತದೆ. ಆ ಕಾರಣಕ್ಕಾಗಿ ಗುರುವಿಗೆ ಸಮಾಜದಲ್ಲಿ ಶ್ರೇಷ್ಠ ಗೌರವ ಸಲ್ಲುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ವೇದವ್ಯಾಸರ ಜನ್ಮದಿನವಾದ ಆಷಾಢ ಮಾಸದ ಶುಕ್ಲ ಪೂರ್ಣಿಮೆ ತಿಥಿಯಂದು ಆಚರಿಸಲಾಗುವ 'ಗುರು ಪೂರ್ಣಿಮಾ' ಪರಿಪೂರ್ಣವಾಗಿ ಗುರುವಿಗಾಗಿಯೇ ಸಮರ್ಪಣೆಯಾದಂಥ ದಿವಸ, ನಮ್ಮೊಳಗಿನ ಪ್ರತಿಯೊಂದು ಮಿಂಚು, ಅರಿವಿನ ಕಿಡಿ, ಹೊಸ ಹೊಳಹು... ಇವೆಲ್ಲವಕ್ಕೂ ಮೂಲ ಗುರುವಿನ ಪ್ರೇರಣೆ. ಅಂಥ ಅರಿವಿನ ಬೆಳಕೇ ಜೀವಿತದುದ್ದಕ್ಕೂ ಬದುಕನ್ನು ಸರಾಗಗೊಳಿಸುತ್ತದೆ. ಸಂಕಷ್ಟಗಳನ್ನು ಜಯಿಸುವಂತೆ ಮಾಡುತ್ತದೆ. ತಲೆಯೆತ್ತಿ ಮುನ್ನಡೆಯಲು ನೆರವಾಗುತ್ತದೆ.
ಗುರುವಿನ ದಿವ್ಯಪ್ರಭೆಯಲ್ಲಿ ಬದುಕು ಕಟ್ಟಿಕೊಳ್ಳುವ ಈ ಸಮಾಜದಲ್ಲಿ ಗುರುವೆಂದರೆ ಯಾರೆಂಬುದರ ಹುಡುಕಾಟವೂ ನಿರಂತರ, ಗುರುವಿನ ಗುಣಗಳು ಅಸೀಮ, ನಮ್ಮೆದೆಗೆ ಅಕ್ಷರ ಬಿತ್ತಿದವರು. ಜ್ಞಾನವನ್ನುಣಿಸಿದವರು. ಇಂಥ ಹಾದಿಯಲ್ಲಿ ಸಾಗಿದರೆ ಒಳ್ಳೆಯ ಉದ್ಯೋಗ ಸಿಗುತ್ತದೆ ಎಂದು ಮಾರ್ಗದರ್ಶನ ಮಾಡಿದವರು, ಅಗತ್ಯ ಕೌಶಲವನ್ನು ಹೇಳಿಕೊಟ್ಟವರೆಲ್ಲರೂ ಗುರುಗಳಂತೆಯೇ ತೋರುತ್ತಾರೆ. ಗುರುವಿನ ಈ ಎಲ್ಲ ಗುಣಗಳೂ ನಮ್ಮ ಹೆತ್ತವರೊಳಗೆ ಪ್ರತಿಫಲಿಸಿದಾಗ, ಪೋಷಕರೇ ಆ ಗುರುವಿನ ಸ್ಥಾನವನ್ನು ಅಲಂಕರಿಸುತ್ತಾರೆ.
ಇಂದಿನ ಪ್ರತಿ ಮಕ್ಕಳಿಗೂ ಪೋಷಕರೇ ಗುರುವಾಗುವ ಅಗತ್ಯವೂ ಇದೆ. ವರ್ಚುವಲ್ ಜಗತ್ತನ್ನೇ ವಾಸ್ತವ ಜಗತ್ತೆಂದು ಭಾವಿಸುವ ಈ ದಿನಗಳಲ್ಲಿ ಸಂಬಂಧಗಳು, ಸಂವಹನಗಳ ಅಂತರ ಕಲ್ಪನಾತೀತವಾಗಿ ಹೆಚ್ಚುತ್ತಿದೆ. ಕೌಟುಂಬಿಕ ಸಂಬಂಧಗಳು ಕವಲುದಾರಿಗೆ ಹೊರಳಿವೆ. ಸಾಮಾಜಿಕ ಮೌಲ್ಯಗಳ ಹಾದಿಯಲ್ಲೇ ಸಾಗಬೇಕು ಎನ್ನುವ ಬದ್ಧತೆ ಕೆಲವೊಮ್ಮೆ ಕಣ್ಮರೆಗೊಳ್ಳುತ್ತಿರುವುದು ಕೂಡ ಆತಂಕಕಾರಿಯೇ. ನವಪೀಳಿಗೆಯನ್ನು ಸಕಲಮೌಲ್ಯಗಳ ಎಚ್ಚರದಲ್ಲಿ ಮುನ್ನಡೆಸಲು ಮನೆಯೊಳಗಣ ಗುರುವಿನ ಪ್ರೇರಣೆ ಅತಿಮುಖ್ಯ.
ಬಿಡುವಿಲ್ಲದ ಜೀವನಶೈಲಿಯ ನಡುವೆ ಮಕ್ಕಳಿಗಾಗಿ ಬಿಡುವು ಮಾಡಿಕೊಂಡು, ಅವರೊಳಗೆ ಸದ್ಗುಣಗಳನ್ನು ಅರಳಿಸುವ, ಕೌಟುಂಬಿಕ ಸಂಬಂಧಗಳ ಮೌಲ್ಯ ತಿಳಿಸುವ, ಸಾಮಾಜಿಕ ವ್ಯವಸ್ಥೆಯ ಸವಾಲುಗಳಿಗೆ ಎದೆಗೊಡಲು ಆತ್ಮಸ್ಥೆರ್ಯ ರೂಪಿಸುವ ಪ್ರಯತ್ನಗಳು ನಿರಂತರ ಸಾಗುತಿರಲಿ. ಮನೆಗಿಂತ ವಿಶ್ವವಿದ್ಯಾಲಯ ಬೇರೊಂದಿಲ್ಲ. ಇಲ್ಲಿ ಮೈಗೂಡಿಸಿಕೊಳ್ಳುವ ಆರೋಗ್ಯಕರ ಜೀವನಶೈಲಿ, ಆರೋಗ್ಯಕರ ಆಲೋಚನೆಗಳು ಇಡೀ ಬದುಕನ್ನು ಬೆಳಗಿಸುತ್ತವೆ. ಹಾಗೆ ಬಾಳ ಬೆಳಗಿದ ಗುರುವನ್ನು ಕಡೆಯ ತನಕ ಗೌರವಪೂರ್ವಕವಾಗಿ ನಡೆಸಿಕೊಳ್ಳುವುದೂ, ಆರೈಕೆ ಮಾಡುವುದೂ ಮಕ್ಕಳ ಕರ್ತವ್ಯವಾಗಲಿ. ಗುರುವಿನ ಸಕಲ ಗುಣಗಳು ಹೆತ್ತವರಲ್ಲಿ ಪ್ರತಿಫಲಿಸುವಂತಾಗಲಿ
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೧೦-೦೭-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ