ಹೃದಯದ ವೇದನೆಗೆ ಒಂದಷ್ಟು ಅಕ್ಷರಗಳ ಸಮಾಧಾನ...

ಹೃದಯದ ವೇದನೆಗೆ ಒಂದಷ್ಟು ಅಕ್ಷರಗಳ ಸಮಾಧಾನ...

ಎಡವೂ ಅಲ್ಲ ಬಲವೂ ಅಲ್ಲ ಮಧ್ಯವೂ ಅಲ್ಲ, 

ಸತ್ಯದ ಹುಡುಕಾಟದ ಅನಾಥ ನಾ.

 

ಬಿಜೆಪಿ ಅಲ್ಲ ಕಾಂಗ್ರೆಸ್ ಅಲ್ಲ ಕಮ್ಯುನಿಸ್ಟ್ ಅಲ್ಲ ,

ವಾಸ್ತವದ ಹುಡುಕಾಟದ ಸಾಮಾನ್ಯ ನಾ.

 

ಹಿಂದೂ ಅಲ್ಲ ಮುಸ್ಲಿಂ ಅಲ್ಲ ಕ್ರಿಶ್ಚಿಯನ್ ಅಲ್ಲ,

ಮಾನವೀಯತೆಯ ಹುಡುಕಾಟದ ಜೀವಿ ನಾ.

 

ದಲಿತನಲ್ಲ ಬ್ರಾಹ್ಮಣನಲ್ಲ ಗೌಡನಲ್ಲ ಲಿಂಗಾಯಿತನೂ ಅಲ್ಲ, 

ಸಮಾನತೆಯ ಹುಡುಕಾಟದ ಪ್ರಾಣಿ ನಾ.

 

ಬಡವನಲ್ಲ ಭಿಕ್ಷುಕನಲ್ಲ ಶ್ರೀಮಂತನಲ್ಲ,

ಹೊಟ್ಟೆ ಪಾಡಿನ ಹುಡುಕಾಟದ ಸಾಮಾನ್ಯ ನಾ.

 

ಕವಿಯೂ ಅಲ್ಲ ಸಾಹಿತಿಯೂ ಅಲ್ಲ ವಿಮರ್ಶಕನೂ ಅಲ್ಲ,

ಅಕ್ಷರದ ಮುಖಾಂತರ ನಿಮ್ಮ ಹೃದಯ ತಲುಪಲು ಆಸೆಪಡುವ ಸ್ವಾರ್ಥಿ  ನಾ.

 

ಮನಸ್ಸುಗಳ ಅಂತರಂಗದ ಚಳವಳಿ ರೂಪಿಸಿ ಜನರನ್ನು ಪ್ರಬುದ್ದತೆಯೆಡೆಗೆ ಕೊಂಡೊಯ್ದು, ಅವರ ಜೀವನಮಟ್ಟ ಸುಧಾರಿಸಲು ಪ್ರಯತ್ನಿಸುವ ಅಳಿಲು ಯತ್ನ ( ಸೇವೆ ಅಲ್ಲ ) ಮಾಡುವ ಬಯಕೆಯ ಕನಸುಗಾರ ನಾ.

 

ನಿಮ್ಮ ಹೃದಯಗಳಲ್ಲಿ ಶಾಶ್ವತವಾಗಿ ನೆಲೆಸಲು ಇಚ್ಚಿಸುವ ಹುಚ್ಚ ನಾ.

***

ಮತ್ತೆ ಮತ್ತೆ ತಲೆ ಎತ್ತಿ ನೋಡುತ್ತೇನೆ ಆಕಾಶದ ಕಡೆಗೆ,

ಈ ಬಾರಿಯಾದರೂ ಹದವಾದ ಮಳೆಯಾಗುವುದೆ,

ಧೋ ಎಂದು ಸುರಿಯದೆ, ತುಂತುರು ಹನಿಯಾಗದೆ ಸಹಜ ಮಳೆಯಾಗುವುದೆ,

ಹಸನಾದ ಭೂಮಿಗೆ ಒಳ್ಳೆಯ ಬಿತ್ತನೆ ಮಾಡಬಹುದೆ,

ಎಲ್ಲರ ಶ್ರಮಕ್ಕೆ ಒಳ್ಳೆಯ ಫಸಲಾಗಬಹುದೆ,

ನಮ್ಮ ಬೆವರಿಗೆ ಉತ್ತಮ ಬೆಲೆ ಸಿಗಬಹುದೆ,

ಆಸೆಯ ಹಗಲುಗನಸಿನಿಂದ ಮನಸ್ಸು ಫಳಫಳ ಹೊಳೆಯುತ್ತದೆ,

ಈ ಸಲವಾದರೂ ನಾನು ಸಾಲಗಳಿಂದ ಮುಕ್ತನಾಗುವೆನೆ,

ಬೆಳೆದ ಮಗಳಿಗೆ ಲಗ್ನ ಮಾಡಲು ಸಾಧ್ಯವಾಗಬಹುದೆ,

ಅಪ್ಪನ ಹೃದಯ ಖಾಯಿಲೆಗೆ ಚಿಕಿತ್ಸೆ ಕೊಡಿಸಬಹುದೆ,

ಅಮ್ಮನ ರೇಷ್ಮೆ ಸೀರೆಯ ಆಸೆ ಪೂರೈಸಬಹುದೆ, 

ನನ್ನವಳ ಕನಸಾದ ಕಿವಿಯೋಲೆಯನ್ನು ಅವಳಿಗೆ ಕಾಣಿಕೆಯಾಗಿ ನೀಡಬಹುದೆ, 

ಆಮೇಲೆ ಚೂರು ಪಾರು ಉಳಿದರೆ,

ನನ್ನ ಬಾಲ್ಯದ ಚಡ್ಡೀ ದೋಸ್ತುಗಳಿಬ್ಬರ ಜೊತೆ ನಗರಕ್ಕೆ ಹೋಗಿ,‌ಸಿನಿಮಾ ನೋಡಿ, ಮಾದಯ್ಯನ ಹೋಟೆಲ್ ನಲ್ಲಿ,

ನಾಟಿ ಕೋಳಿ ಬಿರ್ಯಾನಿ ತಿನ್ನಬಹುದೆ,

ಕಣ್ಣುಗಳು ಆಸೆಯಿಂದ ಅರಳುತ್ತವೆ,

ಮನಸ್ಸು ವೇದನೆಯಿಂದ ಮುದುಡುತ್ತದೆ,

ನಾಳೆಯ ಬಲ್ಲವರಾರೋ....?

  • ಜ್ಞಾನ ಭಿಕ್ಷಾ ಪಾದಯಾತ್ರೆಯ 260 ನೆಯ ದಿನ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನಿಂದ ಸುಮಾರು 28 ಕಿಲೋಮೀಟರ್ ದೂರದ ಶೃಂಗೇರಿ ತಾಲ್ಲೂಕು ತಲುಪಿ ಅಲ್ಲಿ ವಾಸ್ತವ್ಯ ಹೂಡಿತು

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರ: ಪಾದಯಾತ್ರೆಯ ಸಮಯದಲ್ಲಿ ಸುರಿಯುತ್ತಿರುವ ಮಳೆಯ ನಡುವೆಯೂ ನನ್ನ ಜೊತೆ ಹೆಜ್ಜೆ ಹಾಕಿದ ಸಹೃದಯರೊಂದಿಗೆ...