*ಹೃದಯ ವೀಣೆಯ ಸ್ವರ..*

*ಹೃದಯ ವೀಣೆಯ ಸ್ವರ..*

ಕವನ

ಕರೆಗೆ ಓಗೊಡು ಮುರಳಿ ಮಾಧವ

ರಾಧೆ ಕೂಗದು ಕೇಳದೆ ?

ಸಲಿಗೆಯಿಂದಲಿ ನನ್ನ ಸಂಗವ ಸವಿದ ಚಣವದು ಮರೆಯಿತೆ?

 

ಪಿಳ್ಳಂಗೋವಿಯ ನುಡಿಸಿ ಮನವನು

ಸೂರೆಗೊಂಡಿಹೆ ಕೇಶವ

ಕಳ್ಳತನದಲಿ ಬೆಣ್ಣೆಯ ಸವಿದಿಹ

ಬಾಲ ತುಂಟನೆ ಮಾಧವ||

 

ಮೂಢ ಕಂಸನ ಮಧಿಸೆ ಗೋಕುಲ

ಧರೆಗೆ ನಾಕವ ತಂದಿತು

ನೋಡ ನೋಡುತ ನಂದ ಗೋಕುಲ

ಹರುಷ ಮುಗಿಲನು ಮುಟ್ಟಿತು||

 

ಜೀವ ಭಾವವು ನಿನ್ನ ನುತಿಸುತ

ಸ್ವಪ್ನ ಲೋಕದಿ ತೇಲಿದೆ

ನೋವ ಮರೆಯಿಸು ಒಲವ ತೋರುತ

ನೊಂದ ತನುವಿನ ರಾಧೆಗೆ||

 

ಎದೆಯ ಗೂಡಿನ ಅಂತ ಪುರವಿದು

ನಿನಗೆ ಎಂದಿಗು ಮೀಸಲು

ಹೃದಯ ವೀಣೆಯ ತಂತಿ ಮೀಟುತ

ಪ್ರೇಮ ಸ್ವರವನು ಹೊರಡಿಸು||

 

-*ಶ್ರೀ ಈರಪ್ಪ ಬಿಜಲಿ* 

 

ಚಿತ್ರ್