ಹೃದ್ಭವತಿ

ಹೃದ್ಭವತಿ

ಕವನ

                                   ಇಬ್ಬನಿಯ ಎಳೆ ಎಳೆಯನು ಬಳಸಿ, ಸುತ್ತಿ

ಕನಸಿನಾ ದಾರಕೆ ಹೊನ್ನ ಹೂಗಳ ಬೆಸೆದು ಹೊಸೆದು
ಅಮೃತದ ಬಿಂದಿಗೆಯಲಿ ಮಿಂದೆದ್ದ ಒಲವ ಹೂಮಾಲೆಯ
ಮುದದಿ ತೊಡಿಸಬಂದಳು, ಅವಳು
ನನ್ನೆದೆಗೆ ತಂತಾನೇ ಬೆಳದಿಂಗಳಾದವಳು!
 
ಹೇ ನನ್ನ ಮುದ್ದು,
ಎಲ್ಲಿಓಡುವೆ ಇಷ್ಟೆಲ್ಲ ಕನಸಕದ್ದು?
 
ಬೆಣ್ಣೆಪಾದ ಸೋಕುತ ಸ್ನಿಗ್ಧಚೆಲುವ ಶೋಭಿತ
ರಸಿಕ ಕಂಗಳೋ ನಿತ್ಯಾಕರ್ಷಕ
ನಗುವೇ ಚಿರಂತನ ಚಿನ್ಮೋಹಕ
ಸುವರ್ಣವ  ಮೈಗೂಡಿಸಿಕೊಂಡವಳು, ಅವಳು
ಬಣ್ಣನೆಗೆ ಅವರ್ಣನೀಯ
ಮನ್ನಣೆಗೆ ವಿಧೇಯ!
 
ಎಷ್ಟು ಸಲ ಹೇಳಲಿ ಚಿನ್ನು?
ಅಂತರವ ಹತ್ತಿರವಾಗಿಸಿ ವಿರಹ ಒದ್ದುಬಾ ಸಾಕಿನ್ನು!
 
ಪ್ರಣಯದುರಿಗೆ ಮನೋಲ್ಲಾಸಿನಿ ಕರುಣಾಸುಹಾಸಿನಿ
ಮೆದುಭಾವದ ಸುಕೋಮಲ ಮಂದಹಾಸ ಶಿಲ್ಪ
ಸುಗುಣರಸಧಾರೆ ಪ್ರಾಂಜಲಿ ಹೃದಯಕ್ಕೆನಿಪ
ಪಂಚಮವೇದ ವೇದ್ಯ ಹೃದ್ಯ ಆದ್ಯ ಜಾನಕಿ
ನಿಲುವಳು ಇವಳು, ನನ್ನವಳು
ಜೀವಕೆ ಪ್ರಾಣವಾಗುತ...
 
 
ಅರೆ, ಜಾನು! ಏನಿದೀ ಅವಸ್ಥೆ?
ಹೂಕನಸೆ ನಿಬ್ಬೆರಗಾಗಿ ನನಸ ನೋಡುತ ನಿಂತಂತೆ!
 
ಮುಸ್ಸಂಜೆಯಲಿ ಮೈಮರೆತು ಕುಣಿವ ಚೆಂದದ ನವಿಲು
ಸಾವಿರ ಕಣ್ಣ ಚಿತ್ತಾರ ವೈವಿಧ್ಯದ ಒಡಲು
ವಿಸ್ತಾರ ಸವಿಸ್ತಾರ ಕಡಲು; ಶುಭ್ರ ಮನಮುಗಿಲು
ಸಾರ್ಥಕ ಜೀವನ ಸರ್ವರಸಾನುಭಾವಾಲಂಕೃತ
ಆದ್ಯಂತ ಪರ್ಯಂತ ಅನಂತ ಪ್ರಣಾಮ ಪ್ರಮಾಣುವು
ನಿನಗರ್ಪಿತ ಸಾರಸರ್ವಸ್ವ, ವೇದವತಿ
ಆದ್ಯ ಹೃದ್ಭವತಿ!

Comments