ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು ಕಳವಳಕಾರಿ

ಸಾಮಾಜಿಕ ಸ್ವಾಸ್ಥ್ಯ ಉತ್ತಮವಾಗಿ ಇರಬೇಕು ಎಂದರೆ ಅಲ್ಲಿ ಶಾಂತಿ, ಸುವ್ಯವಸ್ಥೆ, ಸಾಮರಸ್ಯ, ಸೌಹಾರ್ದ, ಸಹಬಾಳ್ವೆಯಂಥ ಮೌಲ್ಯಗಳು ಪರಿಣಾಮಕಾರಿಯಾಗಿ ನೆಲೆಗೊಳ್ಳಬೇಕು. ಜನರು ಪರಸ್ಪರ ಪ್ರೀತಿ, ವಿಶ್ವಾಸ, ಬಾಂಧವ್ಯದ ವಾತಾವರಣದಲ್ಲಿ ಬದುಕಬೇಕು. ವ್ಯವಸ್ಥೆ ಸರಿದಾರಿಯಲ್ಲಿ ಸಾಗಲು ಈ ಅಂಶಗಳೇ ಪೂರಕ. ಆದರೆ ಇತ್ತೀಚಿನ ವರ್ಷಗಳಲ್ಲಿ ಇದಕ್ಕೆ ತದ್ವಿರುದ್ಧವಾದ ಬೆಳವಣಿಗೆಗಳು ಸಂಭವಿಸುತ್ತಿದ್ದು, ಹಿಂಸಾಚಾರ ಹೆಚ್ಚುತ್ತಿದೆ. ಹೊಸ ಬಗೆಯ ಅಪರಾಧಗಳು ತಲೆಯೆತ್ತಿವೆ. ಕ್ಷುಲ್ಲುಕ ಕಾರಣಕ್ಕೂ ಗಂಭೀರ ಅಪರಾಧಗಳು ಘಟಿಸುತ್ತಿದ್ದು, ಮನುಷ್ಯನ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ. ಸೈಬರ್ ಅಪರಾಧದ ಲೋಕವಂತೂ ಇನ್ನಷ್ಟು ಕರಾಳ. ಬಿಗಿಯಾದ ಕಾನೂನು, ಬಲಗೊಳ್ಳುತ್ತಿರುವ ಪೋಲೀಸ್ ಹಾಗೂ ಗುಪ್ತಚರ ಪಡೆ ಸೇರಿ ಸಂಬಂಧಿತ ಇಲಾಖೆಗಳು, ವಿಭಾಗಗಳು, ಕೆಲಸದ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿದ್ದರೂ, ಅಹಿತಕರ ಘಟನೆಗಳ ಸಂಖ್ಯೆ ಏರಿಕೆ ಆಗುತ್ತಿದೆ. ಇದು ಅಪಾಯಕಾರಿ ಮನೋವೃತ್ತಿ. ಇದನ್ನು ತಡೆಯಲು ಸರ್ಕಾರ ಮತ್ತು ನಾಗರಿಕ ಸಮಾಜದ ಸಾಮೂಹಿಕ ಪ್ರಯತ್ನ ಅತ್ಯಗತ್ಯವಾಗಿದೆ.
ರಾಷ್ಟ್ರೀಯ ಅಪರಾಧ ದಾಖಲಾತಿ ಸಂಸ್ಥೆ (ಎನ್ ಸಿ ಆರ್ ಬಿ) ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯು ಬೆಚ್ಚಿಬೀಳಿಸುವ ಅನೇಕ ಸಂಗತಿಗಳನ್ನು ಒಳಗೊಂಡಿದೆ. ಸೈಬರ್ ಅಪರಾಧದಲ್ಲಿ ಬೆಂಗಳೂರು ಅತಿ ಹೆಚ್ಚು ಪ್ರಕರಣಗಳು ದಾಖಲಾಗುತ್ತಿರುವ ನಗರವೆನಿಸಿದ್ದರೆ, ಕರ್ನಾಟಕ ರಾಜ್ಯಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ದೇಶದಲ್ಲಿ ೨೦೨೧ರಲ್ಲಿ ೫೨,೯೭೪ ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದ್ದರೆ ೨೦೨೨ರಲ್ಲಿ ೬೫,೮೯೩ ಕೇಸ್ ದಾಖಲಾಗಿದ್ದು, ಭಾರೀ ಏರಿಕೆ ಕಂಡಿರುವುದಕ್ಕೆ ನಿದರ್ಶನ. ದೇಶದಾದ್ಯಂತ ೨೮,೫೨೨ ಕೊಲೆ ಪ್ರಕರಣಗಳು ನಡೆದಿದ್ದು, ಪ್ರತಿದಿನ ೭೮ ಕೊಲೆಗಳು ಅಥವಾ ಪ್ರತಿ ಗಂಟೆಗೆ ಮೂರಕ್ಕಿಂತ ಹೆಚ್ಚು ಕೊಲೆಗಳು ವರದಿಯಾಗುತ್ತಿವೆ ಎಂದು ಎನ್ ಸಿ ಆರ್ ಬಿ ತನ್ನ ವರದಿಯಲ್ಲಿ ತಿಳಿಸಿದೆ. ಮಹಿಳೆಯರ ಮೇಲೆ ನಡೆದ ಅಪರಾಧ ಪ್ರಕರಣಗಳ ಸಂಖ್ಯೆ ೪.೪೫ ಲಕ್ಷಕ್ಕೂ ಅಧಿಕ. ಕೊಲೆಯ ಹೆಚ್ಚು ಪ್ರಕರಣಗಳು (೨,೯೩೦) ಉತ್ತರ ಪ್ರದೇಶದಲ್ಲಿ ಕಂಡುಬಂದಿದ್ದರೆ, ಕಡಿಮೆ ಪ್ರಕರಣಗಳು (೯) ಸಿಕ್ಕಿಂನಲ್ಲಿ ದಾಖಲಾಗಿದೆ. ಎಫ್ ಐ ಆರ್ ದಾಖಲು, ತಪ್ಪಿತಸ್ಥರಿಗೆ ಶಿಕ್ಷೆಯ ಪ್ರಮಾಣ ಕೂಡಾ ಏರಿಕೆಯಾಗಿದೆ. ಹಾಗಾಗಿಯೂ, ಕುಕೃತ್ಯಗಳ ನಿಯಂತ್ರಣ ಸಾಧ್ಯವಾಗುತ್ತಿಲ್ಲ.
ಕೊಲೆ, ಕೊಲೆಯತ್ನ, ಹಲ್ಲೆ, ಮಹಿಳೆಯರ ವಿರುದ್ಧ ಅಪರಾಧ. ಸೈಬರ್ ಕ್ರೈಂ, ಸೇರಿದಂತೆ ಬಹುತೇಕ ಎಲ್ಲ ಬಗೆಯ ಅಪರಾಧ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು ತೀವ್ರ ಕಳವಳದ ಸಂಗತಿ. ಇದನ್ನು ಕೇಂದ್ರ ಮತ್ತು ಆಯಾ ರಾಜ್ಯ ಸರಕಾರಗಳು ಗಂಭೀರವಾಗಿ ಪರಿಗಣಿಸಿ, ಈ ಬಗೆಯ ಕುಕೃತ್ಯಗಳಿಗೆ ಕಡಿವಾಣ ಹಾಕಲು ಹೊಸ ಯೋಜನೆ, ಕಾರ್ಯತಂತ್ರಗಳನ್ನು ರೂಪಿಸಬೇಕಾದ ಅಗತ್ಯವಿದೆ. ಮುಖ್ಯವಾಗಿ, ಇಂಥ ವಿಷಯಕ್ಕೆ ರಾಜ್ಯಗಳ ನಡುವೆ ಸಮನ್ವಯ ಮತ್ತು ಸಹಕಾರ ಅಗತ್ಯ. ಅಪರಾಧಿಗಳ ಹೆಡೆಮುರಿಕಟ್ಟುವ, ಅಹಿತಕರ ಘಟನೆಗಳನ್ನು ತಡೆಗಟ್ಟುವ ಕೆಲಸಗಳು ಹಿಂದೆಂದಿಗಿಂತ ವೇಗ ಪಡೆಯಬೇಕಾಗಿದೆ ಎಂಬುದು ಸ್ಪಷ್ಟ.
ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೦೫-೧೨-೨೦೨೩
ಚಿತ್ರ ಕೃಪೆ: ಇಂಟರ್ನೆಟ್ ತಾಣ