ಹೆಚ್ಚು ಆಡಳಿತ - ಕಡಿಮೆ ಸರಕಾರ
ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಬಳಿಕ “ಹೆಚ್ಚು ಆಡಳಿತ - ಕಡಿಮೆ ಸರಕಾರ" ಎಂಬ ತಮ್ಮ ಘೋಷಣೆಯನ್ನು ಸಾಕಾರಗೊಳಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ದುರದೃಷ್ಟವಶಾತ್ ದೇಶದಲ್ಲಿ ‘ಇನ್ಸ್ಪೆಕ್ಟರ್ ರಾಜ್' ವ್ಯವಸ್ಥೆಯಲ್ಲಿ ಬೆಳೆದು ಬಂದ ಭ್ರಷ್ಟಾಚಾರ, ಅಶಿಸ್ತು, ಲಂಚಾವತಾರದ ವ್ಯವಸ್ಥೆಯ ದುರ್ಲಾಭ ಮಾಡಿಕೊಂಡ ಶಕ್ತಿಗಳಿಗೆ ಈ ‘ಹೆಚ್ಚು ಆಡಳಿತ - ಕಡಿಮೆ ಸರಕಾರ' ದ ವ್ಯವಸ್ಥೆಯನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಇದಕ್ಕಾಗಿಯೇ ಈ ಶಕ್ತಿಗಳು ದೇಶದಲ್ಲಿ ರೈತರ ಇಲ್ಲವೇ ಇನ್ನಾವುದೇ ಹೆಸರಿನಲ್ಲಿ ಅರಾಜಕತೆ, ಕ್ಷೋಭೆ ಸೃಷ್ಟಿಸಿ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿವೆ.
ದುಬೈನಲ್ಲಿ ನಡೆದ ವಿಶ್ವ ಸರಕಾರಗಳ ಶೃಂಗಸಭೆಯಲ್ಲಿ ಮಾತನಾಡುವ ವೇಳೆ, ಪ್ರಧಾನಿ ಮೋದಿಯವರು ‘ಸರಕಾರದ ಕೊರತೆಯಾಗಲಿ ಅಥವಾ ಸರಕಾರದ ಒತ್ತಡವಾಗಲಿ ಇರಬಾರದು' ಎಂಬ ಮಾತನ್ನು ಪ್ರಸ್ತಾಪಿಸಿದ್ದಾರೆ. ಸ್ವಾತಂತ್ರ್ಯೋತ್ಸವದ ಸುಮಾರು ಆದು ದಶಕಗಳಲ್ಲಿ ಆಡಳಿತ ನಡೆಸಿದವರು ಅರಾಜಕ ಸ್ಥಿತಿಯಲ್ಲೇ ತಮ್ಮ ಅಸ್ತಿತ್ವ ಎಂಬಂತೆ ಆಡಳಿತ ನಡೆಸುತ್ತಾ ಬಂದವು. ಇದರಿಂದ ವಿದ್ರೋಹಿ, ವಿಚ್ಛದ್ರಕಾರಿ ಶಕ್ತಿಗಳು, ಅರಾಜಕತಾವಾದಿ ಶಕ್ತಿಗಳು ಬಲಿತವು. ಸರಕಾರ ಹೆಚ್ಚೆಚ್ಚು ಕಾನೂನುಗಳನ್ನು ತಂದರೂ ಅವೆಲ್ಲಾ ಅರಾಜಕ ಶಕ್ತಿಗಳಿಗೆ ನೆರವಾಯಿತೇ ವಿನಾ ದೇಶದ ಸಜ್ಜನ ಶಕ್ತಿಗೆ ರಕ್ಷೆಯಾಗಲಿಲ್ಲ. ಮೋದಿಯವರು ಅಧಿಕಾರಕ್ಕೆ ಬರುವವರೆಗೂ ದೇಶದಲ್ಲಿ ೫೦ ಕೋಟಿಗೂ ಅಧಿಕ ಜನರು ಬ್ಯಾಂಕ್ ಖಾತೆಯನ್ನೇ ಹೊಂದಿರಲಿಲ್ಲ. ಕೇಂದ್ರ ಸರಕಾರ ಜನಧನ್ ಯೋಜನೆಯನ್ನು ಜಾರಿಗೊಳಿಸಿದ ಬಳಿಕವೇ ದೇಶದ ಅರ್ಧಭಾಗ ಜನತೆ, ವಿಶೇಷವಾಗಿ ದುರ್ಬಲ ವರ್ಗದವರು, ಮಹಿಳೆಯರು, ಬಡವರು ಬ್ಯಾಂಕಿಂಗ್ ವ್ಯವಹಾರ ಕ್ಷೇತ್ರವನ್ನು ಪ್ರವೇಶಿಸಲು ಸಾಧ್ಯವಾಯಿತು.
ಹಿಂದೆ ಜನತೆ ಸರಕಾರಿ ಸೌಲಭ್ಯ ಪಡೆಯಲು ಲಂಚರುಷುವತ್ತುಗಳಿಗೆ ಶರಣಾಗಲೇ ಬೇಕಾಗಿತ್ತು, ಮೋದಿ ಸರಕಾರ ಬಂದ ಬಳಿಕ ನೇರ ಲಾಭ ವರ್ಗಾವಣೆ ಸೌಲಭ್ಯದಿಂದ ಜನತೆಗೆ ನೆರವು ಶೇ. ೧೦೦ ರಷ್ಟು ತಲುಪುವಂತಾಗಿದೆ. ಮೋದಿ ಆಡಳಿತ ಬ್ರಿಟೀಷ್ ಕಾಲದ ಸಾವಿರಾರು ಕಾನೂನುಗಳನ್ನು ರದ್ದುಗೊಳಿಸಿತು. ಇದೀಗ ಕ್ರಿಮಿನಲ್ ಕಾನೂನುಗಳಿಗೂ ತಿದ್ದುಪಡಿ ತರಲು ಮುಂದಾಗಿದೆ.’ನ್ಯಾಯ ಎಂಬುದು ಮರೀಚಿಕೆ' ಎಂದು ನಿರಾಶರಾಗಿದ್ದ ದೇಶದ ಜನಸಾಮಾನ್ಯರು ಇನ್ನು ಒಂದಷ್ಟು ನಿರಾಳರಾಗುವ ಭರವಸೆಯಿದೆ.
ಮೋದಿಯವರು ಬಂದ ಬಳಿಕ ದೇಶದ ಆಡಳಿತದಲ್ಲಿ ಜನರ ಸಹಭಾಗಿತ್ವ ಹೆಚ್ಚುವಂತೆ ಮಾಡಿರುವುದು ಗಮನಾರ್ಹ. ಸರಕಾರದ ಯೋಜನೆಗಳು ಯಾವುದೇ ತಾರತಮ್ಯವಿಲ್ಲದೇ, ಸಾಮಾಜಿಕ ಮತ್ತು ಆರ್ಥಿಕ ನೆಲೆಗಟ್ಟಿನಲ್ಲಿ ದೇಶದ ಎಲ್ಲರಿಗೂ ತಲುಪುವಂತಾಗಿದೆ. ದೇಶದ ೨೫ ಕೋಟಿ ಜನರು ಬಡತನದ ಕೂಪದಿಂದ ಮೇಲೆ ಬರುವಂತಾಗಿದೆ. ಇದರ ಪರಿಣಾಮವಾಗಿಯೇ ಮೋದಿ ಸರಕಾರದ ಬಗ್ಗೆ ದೇಶದ ಜನತೆಯ ವಿಶ್ವಾಸ ವರ್ಧಿಸುತ್ತಲೇ ಹೋಗುತ್ತಿದೆ. ಮೋದಿ ಆಡಳಿತದಿಂದಾಗಿ ದೇಶದ ವ್ಯವಸ್ಥೆಯಲ್ಲಿ ಮಹಿಳೆಯರ ಪಾತ್ರ ಹೆಚ್ಚುತ್ತಿದೆ. ಇದೇ ವೇಳೆ, ಮೋದಿ ಸರ್ವಾಧಿಕಾರಿ ಎಂದು ಆರೋಪಿಸುತ್ತಲೇ ರೈತರ ಹೆಸರಿನಲ್ಲಿ ಮಾಧ್ಯಮ ಸ್ವಾತಂತ್ರ್ಯ ಹೆಸರಿನಲ್ಲಿ, ಜೋಡಿಸುವ ಹೆಸರಿನಲ್ಲಿ ಟೂಲ್ ಕಿಟ್ ಪ್ರೇರಿತ ಪ್ರತಿಭಟನೆಗಳು ನಡೆಯುತ್ತಿರುವುದನ್ನು ನೋಡುತ್ತಿದ್ಡೇವೆ. ಆ ಮೂಲಕ ಪ್ರಜಾತಂತ್ರವನ್ನು ದುರ್ಬಳಕೆ ಮಾಡಿ ಅರಾಜಕತೆ ಸೃಷ್ಟಿಸುವ ಶಕ್ತಿಗಳು ಇನ್ನೂ ಸಕ್ರಿಯವಾಗಿದೆ ಎಂದು ಎಚ್ಚರಿಕೆ ಸಂದೇಶವೂ ವ್ಯಕ್ತಗೊಳ್ಳುತ್ತಿದೆ.
ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೧೫-೦೨-೨೦೨೪
ಚಿತ್ರ ಕೃಪೆ: ಅಂತರ್ಜಾಲ ತಾಣ