ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ . . . -2
'ಮುಂದಿನದೆಲ್ಲಾ ಅಂತರಂಗದ ತರಂಗಗಳು; ಪ್ರಶ್ನೆಯೂ ಅಲ್ಲಿಯದೇ, ಉತ್ತರವೂ ಅದರದೇ!'
ಹೆಜ್ಜೆ 7:
"ಧ್ಯಾನದ ಮಹಿಮೆಯನ್ನು ಅರ್ಥ ಮಾಡಿಕೊಂಡವರು ಇತರರ ಮಾತುಗಳನ್ನು ಆಲಿಸುವುದರೊಂದಿಗೆ ತಮ್ಮೊಳಗೇ ಅಂತರಂಗದ ಮಾತುಗಳಿಗೆ ಕಿವಿಗೊಡುತ್ತಾರೆ. ಮನಸ್ಸನ್ನು ಒಂದು ವಿಷಯದ ಬಗ್ಗೆ ಕೇಂದ್ರೀಕರಿಸಿ ಮತ್ತು ಸತತ ಸಾಧನೆಯಿಂದ ಆ ವಿಷಯವನ್ನು ಬಿಟ್ಟು ಮನಸ್ಸನ್ನು ಬೇರೆಡೆಗೆ ಹೊರಳದಂತೆ ನೋಡಿಕೊಳ್ಳುವ, ನಮ್ಮ ಧೀ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಯಶಸ್ಸಿನ ಯಾನವೇ ಧ್ಯಾನ ಎಂಬುದು ಸರಿ. ಧ್ಯಾನವೆಂದರೆ ಕೇವಲ ಶುಚಿರ್ಭೂತರಾಗಿ ವಿಭೂತಿ ನಾಮ, ಪಟ್ಟೆಗಳನ್ನು, ಮುದ್ರೆಗಳನ್ನು, ಕುಂಕುಮವನ್ನು ಧರಿಸಿಕೊಂಡು ಕಣ್ಣುಮುಚ್ಚಿ ಕುಳಿತು ಯಾವುದೋ ಮಂತ್ರವನ್ನು ಜಪಿಸುವುದು ಮಾತ್ರವೇ ಅನ್ನಲಾಗದು. ಅದು ಮನಸ್ಸನ್ನು ಹತೋಟಿಯಲ್ಲಿಡುವ ಸಾಧನ. ಧ್ಯಾನದ ವಿಷಯದಲ್ಲಿ, ಅಂದರೆ ಯಾವುದರ ಕುರಿತು ಧ್ಯಾನಿಸುತ್ತೇವೆಯೋ ಆ ಕುರಿತು, ಸ್ಪಷ್ಟ ಕಲ್ಪನೆ ಇರದಿದ್ದರೆ ಧ್ಯಾನ ಪೂರ್ಣವಾಗದು. ಅಸ್ಪಷ್ಟ ಗುರಿ/ಕೇಂದ್ರವಿದ್ದರೆ ಮನಸ್ಸು ಅದರ ಮೇಲೆ ಹೇಗೆ ನಿಂತೀತು? ಧ್ಯಾನ ಎಂಬುದರ ಸ್ಪಷ್ಟ ಕಲ್ಪನೆ ಬರಬೇಕೆಂದರೆ 'ಭೂಮಿ ಧ್ಯಾನಿಸುತ್ತಿದೆ' ಎಂಬ ಹೇಳಿಕೆ ಕುರಿತು ಗಮನಿಸೋಣ. ಭೂಮಿ ಧ್ಯಾನಿಸುತ್ತಿದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು, ಆದರೆ ಧ್ಯಾನದ ಒಳಾರ್ಥವನ್ನು ಗ್ರಹಿಸಿದರೆ ಇದರಲ್ಲಿ ಸತ್ಯ ಕಾಣುತ್ತದೆ. ಭೂಮಿ ತನ್ನ ಅಕ್ಷದ ಸುತ್ತಲೂ ಸುತ್ತುತ್ತಾ ಸೂರ್ಯನ ಸುತ್ತಲೂ ಪ್ರದಕ್ಷಿಣೆ ಹಾಕುತ್ತಿದೆ. ನಿರ್ದಿಷ್ಟ ಪಥದಲ್ಲಿ, ನಿರ್ದಿಷ್ಟ ವೇಗ ಮತ್ತು ಸಮಯಗಳಲ್ಲಿ ಈ ಕೆಲಸ ಆಗುತ್ತಿದೆ. ಇದರಲ್ಲಿ ವ್ಯತ್ಯಯವಾಗುತ್ತಿದೆಯೇ? ತನ್ನ ಮೇಲೆ ಮಾನವ ನಡೆಸುತ್ತಿರುವ ಘೋರ ಅಪಚಾರಗಳನ್ನೂ ಸಹಿಸಿ ಭೂಮಿ ತನ್ನ ಕಾರ್ಯ ನಡೆಸಿದೆಯೆಂದರೆ ಅದು ಭೂಮಿ ತನ್ನ ನಿಶ್ಚಿತ ಪಥದಿಂದ ಸರಿಯದೆ ಧ್ಯಾನಿಸುತ್ತಿದೆಯೆಂದು ಹೇಳಬಹುದಲ್ಲವೇ? ಧಾರಣಾಶಕ್ತಿಯಿಲ್ಲದಿದ್ದರೆ, ಚಂಚಲತೆಯಿಂದಿದ್ದರೆ ಏನಾಗುತ್ತಿತ್ತು? ಭೂಮಿ ಹೇಗೆ ಹೇಗೋ ತಿರುಗಿದ್ದರೆ? ಒಮ್ಮೆ ವೇಗವಾಗಿ, ಒಮ್ಮೆ ನಿಧಾನವಾಗಿ ಚಲಿಸಿದ್ದರೆ? ಅದರ ಪರಿಣಾಮ ಊಹಿಸಲು ಸಾಧ್ಯವೇ? ಧ್ಯಾನ ಎಂದರೆ ನೀವು ಮಾಡುವ ಯಾವುದೇ ಕೆಲಸವನ್ನು ತನ್ಮಯತೆಯಿಂದ, ಶ್ರದ್ಧೆಯಿಂದ ಅದು ಪೂರ್ಣಗೊಳ್ಳುವವರೆಗೂ ಮಾಡುವುದು ಅಷ್ಟೆ. ನಿಮಗೇ ಅನುಭವಕ್ಕೆ ಬಂದಿರುವಂತೆ, ನೀವು ಯಾವುದೋ ಇಷ್ಟವಾದ ಕೆಲಸ ಮಾಡುತ್ತಿರುವಾಗ, ಅದು ಮುಗಿಯುವವರೆಗೂ ನಿಮಗೆ ಬೇರೆ ವಿಷಯಗಳ ಬಗ್ಗೆ ಪರಿವೆಯಿರುವುದಿಲ್ಲ. ಊಟ ಮಾಡುವಾಗಲೂ, ಬೇರೆ ಕೆಲಸಗಳಲ್ಲಿ ತೊಡಗಿರುವಾಗಲೂ ನಿಮ್ಮ ಇಷ್ಟದ ವಿಷಯದ ಬಗ್ಗೆಯೇ ಚಿಂತಿಸುತ್ತಿರುತ್ತೀರಿ ಮತ್ತು ಅವಕಾಶ ಮಾಡಿಕೊಂಡು ಪುನಃ ಆ ಕೆಲಸದಲ್ಲಿ ತೊಡಗುತ್ತೀರಿ ಅಲ್ಲವೇ? ಇದೇ ನಿಜವಾದ ಧ್ಯಾನ ಮತ್ತು ಧ್ಯಾನದ ಕುರಿತ ಅರಿವು! ಗುರಿ ನಿರ್ಧರಿಸಿ, ಅದನ್ನು ಈಡೇರಿಸಲು ತೊಡಗಿ. ಇದೇ ಯಶಸ್ಸಿನ ಮುಂದಿನ ಹೆಜ್ಜೆಯಾಗಿದೆ."
ಹೆಜ್ಜೆ 8:
"ಹೌದು, ಮೇಲೆ ಹೇಳಿದ ಎಲ್ಲವೂ ಒಂದಕ್ಕಿಂತ ಒಂದು ಮೇಲಿನ ಸಂಗತಿಯಾಗಿವೆ. ಇವುಗಳಿಗಿಂತ ಮೇಲಿನದು ಯಾವುದು?"
"ಶಕ್ತಿ, ದೈಹಿಕ ಮತ್ತು ಪೂರಕವಾಗಿ ಮಾನಸಿಕ ಶಕ್ತಿ, ಮೇಲಿನ ಎಲ್ಲವುಗಳಿಗಿಂತಲೂ ಮೇಲಿನದು. ಶಕ್ತಿ ಎಂದರೆ ಮನಸ್ಸು ಮತ್ತು ದೇಹದ ಕಾರ್ಯಗಳ ಹಿತಕರ ಮಿಶ್ರಣದ ಫಲ. ದೇಹ ಮತ್ತು ಮನಸ್ಸುಗಳು ಒಟ್ಟಾದರೆ ಒಂದು ಶ್ರೇಷ್ಠ ಚೈತನ್ಯದ ಉದಯವಾಗುತ್ತದೆ. ಒಬ್ಬ ವ್ಯಕ್ತಿಗೆ ಅಸಾಧಾರಣ ಮನೋಬಲವಿದ್ದು, ಆರೋಗ್ಯಕರ ಶರೀರವಿಲ್ಲದಿದ್ದರೆ ಆತನ ಚಿಂತನೆಗಳನ್ನು ಕಾರ್ಯರೂಪಕ್ಕೆ ತರಲು ಅವನು ಅಸಮರ್ಥನಾಗುತ್ತಾನೆ. ಕಾಯಿಲೆಗಳಿಂದ ನರಳುತ್ತಿರುವ, ಸಾಯುವ ಹಂತದಲ್ಲಿರುವವರು ತಮ್ಮ ಇಚ್ಛೆಗಳನ್ನು ತಾವು ಬಯಸಿದಂತೆ ಕ್ರಿಯಾರೂಪಕ್ಕೆ ತರಲಾರರು. ಒಬ್ಬ ಆರೋಗ್ಯಕರ, ಸಧೃಢಕಾಯ ವ್ಯಕ್ತಿ ಸಹ ಶಕ್ತ ಮನೋಬಲವಿಲ್ಲದಿದ್ದರೆ ಏನನ್ನೂ ಸಾಧಿಸಲಾರ. ಹೀಗಾಗಿ ಬಲವೆಂದರೆ ಅದು ಮನಸ್ಸು ಮತ್ತು ದೇಹಗಳ ಸಂಯುಕ್ತ ಕ್ರಿಯೆಯಾಗಿದೆ. ಬಲವಾಗಿರುವವರ ತಂಟೆಗೆ ಯಾರೂ ಹೋಗುವದಿಲ್ಲ. ಅಗಾಧ ಪಾಂಡಿತ್ಯವುಳ್ಳ ಒಬ್ಬ ಸಣಕಲನ ಮಾತಿಗಿಂತ ಅವಿದ್ಯಾವಂತನಾದರೂ ತೋಳ್ಬಲವುಳ್ಳ ರಾಜಕೀಯ ಪುಡಾರಿಯ ಮಾತಿಗೆ ಜನ ಇಷ್ಟವಿಲ್ಲದಿದ್ದರೂ ಬೆಲೆ ಕೊಡುತ್ತಾರೆ.
ಪ್ರಪಂಚದಲ್ಲಿನ ಎಲ್ಲಾ ದುಃಖಗಳ, ಅಸಂತೋಷಗಳ ಕಾರಣ ದುರ್ಬಲತೆ ಎಂದು ವೇದಾಂತ ಸಾರುತ್ತದೆ. ನಾವು ಅಸಹಾಯಕರಾಗುವುದು, ಸುಳ್ಳು ಹೇಳುವುದು, ಕೊಲೆಗಾರರಾಗುವುದು, ಇನ್ನಿತರ ಅಪರಾಧಗಳನ್ನು ಮಾಡುವುದು, ಇತ್ಯಾದಿಗಳ ಮೂಲ ಕಾರಣವೆಂದರೆ ದುರ್ಬಲರಾಗಿರುವುದು. ದುರ್ಬಲರಾಗಿರುವ ಭಯ ಕೀಳರಿಮೆಗೆ, ಪಾಪ ಮಾಡುವುದಕ್ಕೆ ನಿಶ್ಚಿತ ಮೂಲಕಾರಣವಾಗಿದೆ. ದುರ್ಬಲರಾಗಿರುವುದರಿಂದ ನಾವು ಸಾಯುತ್ತೇವೆ. ನಮ್ಮನ್ನು ದುರ್ಬಲಗೊಳಿಸುವಂತಹದು ಏನೂ ಇಲ್ಲವೆಂದರೆ, ಅಲ್ಲಿ ಸಾವಿಲ್ಲ, ದುಃಖವಿಲ್ಲವೆಂಬದು ವಿವೇಕಾನಂದರ ನುಡಿ. ಶಕ್ತಿಯೆಂಬುದು ಜೀವನ, ಶಕ್ತಿಯೆಂಬುದು ಪುಣ್ಯ; ದುರ್ಬಲತೆಯೆಂಬುದು ಮರಣ, ದುರ್ಬಲತೆಯೆಂಬುದು ಪಾಪ. ತೋಳ್ಬಲ, ಮನೋಬಲ ಮತ್ತು ಜ್ಞಾನಬಲವಿರುವವರು ಮುಂಚೂಣಿಯಲ್ಲಿರುತ್ತಾರೆ. ಎಲ್ಲಿ ಬ್ರಾಹ್ಮಶಕ್ತಿ (ಜಾತಿಯಲ್ಲ) ಮತ್ತು ಕ್ಷಾತ್ರಶಕ್ತಿ (ಜಾತಿಯಲ್ಲ) ಒಟ್ಟುಗೂಡುವುದೋ ಅಲ್ಲಿನ ದೇಶ ಬಲಿಷ್ಠವಾಗಿರುತ್ತದೆ. ಬಲಕ್ಕೇ ಬೆಲೆಯಿರುವಾಗ ಸಜ್ಜನಶಕ್ತಿ ಬಲಶಾಲಿಯಾದರೆ ಮಾತ್ರ ಸಮಾಜಕ್ಕೆ ಮತ್ತು ದೇಶಕ್ಕೆ ಹಿತ."
ನಿನ್ನ ಬಲದಲೆ ನಿಲ್ಲು ನಿನ್ನ ಬಲದಲೆ ಸಾಯು
ಇರುವುದಾದರೆ ಪಾಪ ದುರ್ಬಲತೆಯೊಂದೆ |
ದುರ್ಬಲತೆ ಪಾಪ ದುರ್ಬಲತೆಯೇ ಸಾವು
ವಿವೇಕವಾಣಿಯಿದು ನೆನಪಿರಲಿ ಮೂಢ ||
ಹೆಜ್ಜೆ 9:
"ನಿಜ, ನಿಜ. ಈ ಜಗತ್ತಿನಲ್ಲಿ ಬಲಕ್ಕೇ ಬೆಲೆ. ಅದು ಸರಿ, ಈ ಬಲಕ್ಕಿಂತಲೂ ಹೆಚ್ಚಿನದು ಯಾವುದಾದರೂ ಇದೆಯೇ?"
"ಯಾಕಿಲ್ಲ? ಯಾವುದು ಶಕ್ತಿಯನ್ನು ಕೊಡುತ್ತದೋ ಅದು ಶಕ್ತಿಗಿಂತಲೂ ಮಿಗಿಲಲ್ಲವೇ? ನಮಗೆ ಶಕ್ತಿ ಕೊಡುವುದೇ ಅನ್ನ! ಅನ್ನವೆಂದರೆ ಆಹಾರ ಎಂದೇ ಅರ್ಥ. ಅದು ಅಕ್ಕಿಯಿರಬಹುದು, ಗೋಧಿಯಿರಬಹುದು,
ಮತ್ತೇನೋ ಆಗಿರಬಹುದು, ಮಾನಸಿಕ ವಸ್ತುವೂ ಆಗಿರಬಹುದು. ಬೆಳವಣಿಗೆಗೆ, ಜೀವಿತಕ್ಕೆ ಪೂರಕವಾಗುವ ಯಾವುದೇ ಸಂಗತಿಯೂ ಅನ್ನವೇ! ವಿಶಾಲವಾಗಿ ಯೋಚಿಸಿ, ಗಾಳಿಯಿಲ್ಲದೆ ನಮಗೆ ಉಸಿರಾಡಲಾಗುವುದಿಲ್ಲ. ಶ್ವಾಸಕೋಶಗಳಿಲ್ಲದಿದ್ದರೂ ಉಸಿರಾಡಲಾಗುವದಿಲ್ಲ. ಸಾಮಾಜಿಕ ಜೀವನಕ್ಕೂ ಇದು ಅನ್ವಯವಾಗುತ್ತದೆ. ನಮ್ಮ ಜೀವನಕ್ಕೆ ಪ್ರಕೃತಿಯ ಶಕ್ತಿಗಳು, ಸಹಜೀವಿಗಳ ಶಕ್ತಿಗಳೂ ಪೂರಕವಾಗಿ ಸಹಕಾರಿಯಾಗಿರುತ್ತವೆ. ಪರಸ್ಪರ ಬಾಳುವುದಕ್ಕೆ ಸಹಾಯ ಮಾಡುವ, ಸಹಾಯವಾಗುವ ಪ್ರಕ್ರಿಯೆಗಳೂ ಸಹ ಅನ್ನವೇ!
'ಅನ್ನ'ವೆಂದರೆ ಕೇವಲ ತಿನ್ನುವ ಆಹಾರವಲ್ಲ. ಅದು ವಿಶ್ವದ ಉಗಮದ ಪ್ರತೀಕವಾಗಿದೆ. ಶಕ್ತಿಯ ಮೂಲವಾದ ಆಹಾರವೆಂದರೆ ಅದರಲ್ಲಿ ನಾವು ಸ್ವೀಕರಿಸುವುದೆಲ್ಲವೂ ಸೇರುತ್ತದೆ, ಅಂದರೆ ನಾವು ನೋಡುವುದು, ಕೇಳುವುದು, ತಿನ್ನುವುದು, ಇತ್ಯಾದಿಗಳೆಲ್ಲವೂ ಆಹಾರವೆಂದೇ ತಿಳಿಯಬೇಕು. ನಾವು ಎಂತಹ ಆಹಾರ ಸೇವಿಸುತ್ತೇವೆ ಎಂಬುದನ್ನು ಅವಲಂಬಿಸಿ ಅದಕ್ಕೆ ತಕ್ಕಂತೆ ನಾವು ಶಕ್ತಿ ಗಳಿಸಿಕೊಳ್ಳುತ್ತೇವೆ. ನಾವು ಸೇವಿಸುವ ಆಹಾರ ನಮ್ಮ ಕೃತಿಯ ಮೇಲೆ, ಸ್ವಭಾವದ ಮೇಲೆ ಪ್ರಭಾವ ಬೀರುತ್ತದೆ ಎಂಬುದೇ ಅದು. ಪ್ರಾಣಿಲೋಕದಲ್ಲೂ ಸಹ ಸಸ್ಯಾಹಾರಿ ಪ್ರಾಣಿಗಳು ಮತ್ತು ಮಾಂಸಾಹಾರಿ ಪ್ರಾಣಿಗಳ ಗುಣ, ಲಕ್ಷಣ ಮತ್ತು ಸ್ವಭಾವಗಳಲ್ಲಿ ಎದ್ದು ಕಾಣುವ ವ್ಯತ್ಯಾಸಗಳನ್ನು ಗಮನಿಸಬಹುದಾಗಿದೆ. ಸಾತ್ವಿಕರೇ ಬೇರೆ, ರಾಜಸಿಕರೇ ಬೇರೆ ಮತ್ತು ತಾಮಸಿಕರೇ ಬೇರೆ ಎಂದು ಪ್ರತ್ಯೇಕವಾಗಿ ಗುರುತಿಸಲ್ಪಡುವವರು ಇರುವದಿಲ್ಲ. ಪ್ರತಿಯೊಬ್ಬರೂ ಸಾತ್ವಿಕರೂ, ರಾಜಸಿಕರೂ ಮತ್ತು ತಾಮಸಿಕರೂ ಆಗಿರುತ್ತಾರೆ. ಅವರು ಈ ಮೂರೂ ಗುಣಗಳ ಮಿಶ್ರಣವಾಗಿರುತ್ತಾರೆ. ಕೆಲವರಲ್ಲಿ ಕೆಲವೊಂದು ಗುಣಗಳು ಪ್ರಧಾನವಾಗಿರುತ್ತವೆ. ಆ ಪ್ರಧಾನ ಗುಣಗಳು ಅವರ ವ್ಯಕ್ತಿತ್ವವನ್ನು ತೋರಿಸುತ್ತವೆ. ನೀವು ಏನಾಗಬೇಕು, ಹೇಗಿರಬೇಕು ಎಂಬುದನ್ನು ನೀವೇ ನಿರ್ಧರಿಸಿಕೊಳ್ಳಬಲ್ಲಿರಿ. ಸೂಕ್ತವಾಗಿ ಆರಿಸಿಕೊಳ್ಳುವ 'ಅನ್ನ'ದ ಮೂಲಕ ಮತ್ತು ಬದಲಾಿಯಸಿಕೊಳ್ಳುವ ಜೀವನಶೈಲಿಯಿಂದ ನೀವು ಅದನ್ನು ಪಡೆದುಕೊಳ್ಳಬಲ್ಲಿರಿ. ಇದೇ 'ಅನ್ನ'ದ ಮಹತ್ವ!"
ಹೆಜ್ಜೆ 10:
"ಒಂದಕ್ಕಿಂತ ಒಂದು ಹೆಚ್ಚಿನದು. ಮೇಲೆ ಹೇಳಿದ್ದಕ್ಕಿಂತಲೂ ಮೇಲಿನದು ಯಾವುದು?"
"ಪಂಚಭೂತಗಳು! ನೆಲ, ಜಲ, ವಾಯು, ಅಗ್ನಿ ಮತ್ತು ಆಕಾಶಗಳೆಂದು ಕರೆಯಲ್ಪಡುವ ಪಂಚಶಕ್ತಿಗಳು ಜೀವಿಗಳ ಅಸ್ತಿತ್ವಕ್ಕೆ ಆಧಾರವಾಗಿವೆ. ಈ ಪಂಚಶಕ್ತಿಗಳೂ ಸಹ ಒಂದಕ್ಕಿಂತ ಒಂದು ಮಿಗಿಲಾಗಿವೆ. ಈಗ ಭೂಮಿಯ ಕುರಿತೇ ನೋಡಿ. ಅದು ಜೀವಿಗಳೆಲ್ಲದಕ್ಕೂ ಆಧಾರ, ಆಸರೆಯಾಗಿವೆ. ಹಿಂದಿನ ಹೆಜ್ಜೆಯ ಅರ್ಥದಲ್ಲಿ ನೋಡಿದರೆ ನಮಗೆಲ್ಲಾ ಆಧಾರಪ್ರಾಯವಾಗಿರುವ ಭೂಮಿ 'ಅನ್ನ'ವನ್ನು ಪ್ರತಿನಿಧಿಸುತ್ತದೆ. ಇಂತಹ ಘನತತ್ತ್ವವಾದ ಭೂಮಿ/ಪೃಥ್ವಿ/ನೆಲವನ್ನು 'ತಾಯಿ' ಎನ್ನುತ್ತೇವೆ. ಈ ತಾಯಿಯನ್ನು ಈಗಿನ ಮತ್ತು ಮುಂದಿನ ಪೀಳಿಗೆಯ ದೃಷ್ಟಿಯಿಂದ ಗೌರವಿಸುವುದು, ಉಳಿಸುವುದು, ಸಂರಕ್ಷಿಸುವುದು ಮಕ್ಕಳಾದ ಜೀವಿಗಳ ಕರ್ತವ್ಯವಾಗಿದೆ."
ನೋಡುವ ಕಣ್ಣುಗಳಿದ್ದರೆ, ಕೇಳುವ ಕಿವಿಗಳಿದ್ದರೆ ಅತ್ಯಂತ ಕ್ಷಮಾಶೀಲ ಧರಿತ್ರಿ ತನ್ನ ಮೇಲೆ ಮಾನವನಿಂದ ಆದ, ಆಗುತ್ತಿರುವ ಅತ್ಯಾಚಾರಗಳಿಗಾಗಿ ರೋದಿಸುತ್ತಿರುವುದು ಕಾಣುತ್ತದೆ, ಕೇಳುತ್ತದೆ. ಆದರೆ ಆ ರೋದನ ತನಗಾಗಿ ಅಲ್ಲ, ತನ್ನನ್ನು ಆಶ್ರಯಿಸಿರುವ ಜೀವಸಂಕುಲಕ್ಕಾಗಿ ಎಂಬುದನ್ನು ಸಾಧಕ ಮಾತ್ರ ಅರಿಯಬಲ್ಲ!
ಹೆಜ್ಜೆ 11:
"ನೆಲಕ್ಕಿಂತ ಜಲ ಮೇಲಿನದಾಗಿದೆ. ಈ ಭೂಮಿ ಸಹ ದ್ರವಮೂಲದಿಂದಲೇ ಉಗಮವಾದುದ್ದಾಗಿದೆ. ಕೇವಲ ಭೂಮಿಯಲ್ಲ, ವಿಶ್ವದ ಯಾವುದೇ ಘನರೂಪದ ಕಾಯವಾಗಲೀ, ವಸ್ತುವಾಗಲೀ ಮೊದಲು ದ್ರವರೂಪದಲ್ಲಿ ಇದ್ದುದಾಗಿದೆ. ಈ ದ್ರವರೂಪದಲ್ಲಿದ್ದ ವಸ್ತು ಅದಕ್ಕೂ ಮೊದಲು ಅನಿಲರೂಪದಲ್ಲಿದ್ದಿತ್ತು. ಹೀಗಾಗಿ 'ಜಲ' ಎಂಬ ಪದದಲ್ಲಿ ಸಂಬೋಧಿಸಬಹುದಾದ ಈ ಸಂಗತಿ ಭೂಮಿಗಿಂತ ಮೇಲಿನದಾಗಿದೆ.
ಜಲತತ್ತ್ವವಿಲ್ಲದಿರುತ್ತಿದ್ದರೆ ಜೀವನ ದುಸ್ತರವಾಗುತ್ತಿತ್ತು. ಮಳೆ ಇರದಿದ್ದಿದ್ದರೆ ಬೆಳೆ ಇರುತ್ತಿರಲಿಲ್ಲ. ನೆಲ ಒಣಗಿ ಫಲವತ್ತತೆಯನ್ನು ಕಳೆದುಕೊಳ್ಳುತ್ತಿತ್ತು. ಮಳೆ ಇಲ್ಲದಿದ್ದರೆ ನೆಲ ಆಹಾರ ಉತ್ಪಾದಿಸುವ ಶಕ್ತಿ ಕಳೆದುಕೊಳ್ಳುತ್ತಿತ್ತು. ನೆಲದ ಘನತತ್ತ್ವ ಮತ್ತು ಜಲತತ್ತ್ವಗಳ ಸಂಯೋಗ 'ಅನ್ನತತ್ತ್ವ'ದ ಉಗಮಕ್ಕೆ ಅಗತ್ಯ. ಮಳೆ ಬರದಿದ್ದರೆ ಕ್ಷಾಮ ಆವರಿಸಿ ಎಲ್ಲೆಲ್ಲೂ ಆಹಾರದ ಕೊರತೆಯಿಂದ ಜೀವಜಗತ್ತು ತಲ್ಲಣಿಸುತ್ತದೆ. ಮಳೆ ಬಂದರೆ ಪಶು, ಪಕ್ಷಿಗಳು ಸೇರಿದಂತೆ ಎಲ್ಲಾ ಜೀವಗಳಿಗೂ ತಂಪಾಗುತ್ತದೆ, ಪ್ರಕೃತಿ ಸಂತಸದಿಂದ ನಳನಳಿಸುತ್ತದೆ. 'ಅನ್ನ'ದ ಕುರಿತು ಹೇಳಿದ ಎಲ್ಲಾ ಸಂಗತಿಗಳೂ ಜಲಕ್ಕೂ ಅನ್ವಯಿಸುತ್ತದೆ. ಪ್ರಪಂಚದ ನಾಗರಿಕತೆಗಳು ಬೆಳೆದದ್ದು, ಉಳಿದದ್ದು ನದಿ ತಟಗಳಲ್ಲಿಯೇ! ಭೂಮಿಯಲ್ಲಿ ಲಭ್ಯವಿರುವ ಒಟ್ಟು ನೀರಿನ ಪ್ರಮಾಣದಲ್ಲಿ ಕೇವಲ ಶೇ.1ರಿಂದ2ರಷ್ಟು ಮಾತ್ರ ಉಪಯೋಗಕ್ಕೆ ಯೋಗ್ಯವೆಂದು ಹೇಳಲಾಗಿದೆ. ಉಳಿದ ನೀರೆಲ್ಲವೂ ಸಾಗರಗಳಲ್ಲಿರುವಂತಹ ಉಪ್ಪು ನೀರಾಗಿದೆ ಅಥವ ಹೆಪ್ಪುಗಟ್ಟಿದ, ಉಪಯೋಗಿಸಲಾಗದ ನೀರಾಗಿದೆ. ಜನಸಂಖ್ಯೆ ಹೆಚ್ಚಾದಂತೆ ನೀರಿನ ಬಳಕೆ ಸಹ ಹೆಚ್ಚಾಗುತ್ತಿದೆ. ನೀರಿನ ಬಳಕೆಯನ್ನು ಎಚ್ಚರದಿಂದ, ಜಾಣತನದಿಂದ ಮಾಡದೆ, ಉಪಯೋಗಿಸಬಹುದಾದ ನೀರಿನ ಜಲಮೂಲಗಳಾದ ಕೆರೆ, ಕಟ್ಟೆಗಳನ್ನು ಮುಚ್ಚಿ, ಅತಿಕ್ರಮಿಸಿ, ನಾಶಪಡಿಸಲಾಗುತ್ತಿದೆ. ಕೊಳವೆ ಬಾವಿಗಳನ್ನು ವಿವೇಚನೆಯಿಲ್ಲದೆ ತೋಡುತ್ತಾ ಅಂತರ್ಜಲದ ಮಟ್ಟವನ್ನು ತಗ್ಗಿಸಲಾಗುತ್ತಿದೆ. ಹೀಗೇ ಆದರೆ ಮುಂದೊಮ್ಮೆ ಪ್ರಕೃತಿಯ ಸಮತೋಲನ ತಪ್ಪಿ ಅನಾಹುತಗಳಾಗುವುದು ಶತಃಸ್ಸಿದ್ಧ. ಮನುಕುಲದ ಉಳಿವಿಗಾಗಿ ಈ ಮಾತುಗಳನ್ನು ನೆನಪಿನಲ್ಲಿಟ್ಟುಕೊಳ್ಳಿ: ನೀರನ್ನು ರಕ್ಷಿಸಿ, ಅದು ನಿಮ್ಮನ್ನು ರಕ್ಷಿಸುತ್ತದೆ!"
-ಕ.ವೆಂ.ನಾಗರಾಜ್.
Comments
ಉ: ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ . . . -2
ಕವಿ ನಾಗರಾಜರವರಿಗೆ ವಂದನೆಗಳು
ಸೊಗಸಾದ ವಿಶಿಷ್ಟ ಅನುಭವ ನೀಡುವ ಲೇಖನ ದನ್ಯವಾದಗಳು
In reply to ಉ: ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ . . . -2 by H A Patil
ಉ: ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ . . . -2
ವಂದನೆಗಳು, ಪಾಟೀಲರೇ.
ಉ: ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ . . . -2
ತನ್ನ ಮೇಲಿನೆಲ್ಲ ಅತ್ಯಾಚಾರವನ್ನು ಸಹಿಸಿಯು ಭೂಮಿ ಏಕಾಗ್ರತೆಯಿಂದ ಧ್ಯಾನಿಸುತ್ತಿದೆ ಎನ್ನುವುದು ನಿಜಕ್ಕು ಒಂದು ಶಕ್ತಿಯುತ ಉದಾಹರಣೆ. ಧ್ಯಾನವನ್ನಧಿಗಮಿಸುವ ಪಾಪ ಕಾರ್ಯ ಮೂಲವಾಗಿರುವ ದುರ್ಬಲತೆಯನ್ನು ಗೆಲ್ಲಿಸುವ ಬಲ, ಆ ಬಲದ ಮೂಲವಾದ ತ್ರಿಗುಣ ಸಂತುಲನಾ ಸಾಮರ್ಥ್ಯವುಳ್ಳ ಅನ್ನ, ಅದನ್ನು ಮೀರಿಸುವ ಪಂಚಭೂತಗಳು, ಜೀವ ಮೂಲವಾದ ಜಲ ತತ್ವದ ಪ್ರಾಮುಖ್ಯತೆ - ಹೀಗೆ ಎಲ್ಲವನ್ನು ಹೆಜ್ಜೆಜ್ಜೆಯಾಗಿ ಅಂಬೆಗಾಲಿಡಿಸುತ್ತ ಸಹನೆಯಿಂದ ಪ್ರೌಢ ಬರಹದ ಮೂಲಕ ಕಲಿಸುತ್ತಿರುವ ನಿಮಗೆ ಧನ್ಯವಾದಗಳು - ಕವಿಗಳೆ!
In reply to ಉ: ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ . . . -2 by nageshamysore
ಉ: ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ . . . -2
ವಂದನೆಗಳು, ನಾಗೇಶರೇ. ಪ್ರತಿಯೊಂದು ಹೆಜ್ಜೆಗೂ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಸುಮಾರು 20 ಲೇಖನಗಳನ್ನು ಈಗಾಗಲೇ ಸಂಪದದಲ್ಲಿ ಪ್ರಕಟಿಸಿರುವೆ. ಅವುಗಳನ್ನು ಚುಟುಕಾಗಿಸಿ 4 ಕಂತುಗಳಲ್ಲಿ ಅಳವಡಿಸುವ ಪ್ರಯತ್ನವಿದು.
ಉ: ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ . . . -2
ಕ ವಿ ನಾಗರಾಜ್ ಸರ್, ವಂದನೆಗಳು. ಧ್ಯಾನದೊಂದಿಗೆ ನೆಲ ಜಲ ವಾಯು ಅಗ್ನಿ ಆಕಾಶವೆಂಬ ಪಂಚಶಕ್ತಿಗಳ ಕುರಿತು ತುಂಬ ಗಹನ ವಿಷಯಗಳ ಸರಳ ನಿರೂಪಣೆ ಸರ್, ತಮ್ಮ ಬರಹಗಳ ಆಳ ವಿಸ್ತಾರಗಳಿಗೆ ನಮಿಸುತ್ತದೆ ಮನ. ವಂದನೆಗಳು
In reply to ಉ: ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ . . . -2 by lpitnal
ಉ: ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ . . . -2
ಧನ್ಯವಾದಗಳು, ಇಟ್ನಾಳರೇ.
ಉ: ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ . . . -2
ಒ೦ದೊಂದು ಶಕ್ತಿಯೂ ಒಂದಕ್ಕಿಂತ ಮಿಗಿಲು !
ಎಲ್ಲರದರ ಸಮನ್ವಯವೇ ಜೀವನದ ತಿರುಳು!
ಒಂದು ಶಕ್ತಿಯೂ ಮತ್ತೊಂದಕ್ಕೆ ಅಧಾರ!
ಸಮನ್ವಯ ತಪ್ಪಿದರೆ ಎಲ್ಲವೂ ನಿರಾಧಾರ !
ನಾಗರಾಜ ಸರ್ ಸಧ್ಯಕ್ಕೆ ನನಗೆ ನಿಮ್ಮ ಬರಹದಿಂದ ಅರ್ಥವಾದ ಸತ್ಯ !
ವಾಮನನಂತೆ ನೀವು ಮೂರನೆ ಹೆಜ್ಜೆಯನ್ನು ಇಟ್ಟಲ್ಲಿ
ತಿಳಿಯುವುದು ಮುಂದಿನ ಸತ್ಯ !
ಪಾರ್ಥಸಾರಥಿ
In reply to ಉ: ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ . . . -2 by partha1059
ಉ: ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ . . . -2
ಒಂದಕ್ಕಿಂತ ಒಂದು ಮಿಗಿಲಾಗಿರುವುದೇ ಸೃಷ್ಟಿಯ ರಹಸ್ಯವಾಗಿದೆ, ನಿರಂತರತೆಗೂ ಇದೇ ಕಾರಣವಾಗಿದೆ. ಪ್ರತಿಕ್ರಿಯೆಗೆ ಧನ್ಯವಾದಗಳು, ಪಾರ್ಥರೇ.