ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ . . . -3
ಹೆಜ್ಜೆ 12:
"ಪಂಚಶಕ್ತಿಗಳ ಪೈಕಿ ನೆಲ ಮತ್ತು ಜಲತತ್ತ್ವಗಳಿಗಿಂತ ಅಗ್ನಿತತ್ತ್ವ ದೊಡ್ಡದಿರಬಹುದೇ?"
"ನಿಮ್ಮ ಅನಿಸಿಕೆ ಸರಿಯಾಗಿದೆ. ಈ ಅಗ್ನಿ ಸೃಷ್ಟಿ, ಸ್ಥಿತಿ, ಲಯಕಾರಕ ಗುಣಗಳನ್ನು ಹೊಂದಿದೆ. ಸೃಷ್ಟಿಗೂ ಅಗ್ನಿ ಬೇಕು, ಬಾಳಲೂ ಅಗ್ನಿ ಬೇಕು ಮತ್ತು ನಾಶಕ್ಕೂ ಅಗ್ನಿ ಬೇಕು! ಸೂರ್ಯ ಅಗ್ನಿತತ್ತ್ವದ ಪ್ರಧಾನ ಪ್ರತಿನಿಧಿಯೆನ್ನಬಹುದು. ಅವನು ಬೆಳಕು ಮತ್ತು ಶಾಖ ನೀಡುವವನಾಗಿದ್ದಾನೆ. ಮಳೆ ಹೇಗೆ ಬರುತ್ತದೆ ಮತ್ತು ಸೂರ್ಯ ಅದಕ್ಕೆ ಹೇಗೆ ಕಾರಣಕರ್ತ ಎಂಬುದು ತಿಳಿದೇ ಇದೆ. ಈ ಮಳೆಯ ಚಕ್ರ ಏರಪೇರಾಗಲು ನೀವು ಜಲಮೂಲಗಳನ್ನು ಮುಚ್ಚುತ್ತಿರುವುದು, ಕಾಡುಗಳನ್ನು ನಾಶಪಡಿಸುತ್ತಿರುವುದು ಮುಖ್ಯ ಕಾರಣವಾಗಿದೆ. ಮಾಡುವುದನ್ನೆಲ್ಲಾ ಮಾಡಿ ದೇವರನ್ನು ದೂಷಿಸಿಬಿಡುತ್ತೀರಿ!
ಐದು ವಿಧದ ಅಗ್ನಿಯನ್ನು ಗುರುತಿಸುತ್ತಾರೆ - ಕಾಲಾಗ್ನಿ (ಸಮಯ), ಕ್ಷುದ್ಧಾಗ್ನಿ (ಹಸಿವು), ಶೀತಾಗ್ನಿ (ಶೀತಲ), ಕೋಪಾಗ್ನಿ (ಕೋಪ) ಮತ್ತು ಜ್ಞಾನಾಗ್ನಿ(ಜ್ಞಾನ). ಜೀವನದಲ್ಲಿ ಅನುಭವಕ್ಕೆ ಬರುವ ನವರಸಗಳೂ ಅಗ್ನಿಯ ಪ್ರತಿರೂಪವಾಗಿರುತ್ತವೆ. ಕಾಮಾಗ್ನಿ, ವಿರಹಾಗ್ನಿ, ಮೋಹಾಗ್ನಿ ಮುಂತಾದ ಪದಬಳಕೆಯನ್ನು ಗಮನಿಸಿ. ಬೆಂಕಿ ಉಗುಳುವ ಮಾತುಗಳು, ಕಣ್ಣಿನಲ್ಲೇ ಸುಡುವ ನೋಟ, ಹೊಟ್ಟೆಯುರಿ (ಮತ್ಸರ) ಮುಂತಾದವುಗಳೂ ಸಹ ಅಗ್ನಿಯ ಜೊತೆಗೂಡಿರುವುದನ್ನು ಕಾಣಬಹುದು. ಅಂದರೆ ಅಗ್ನಿ ನಮ್ಮತನವನ್ನು ಪ್ರತಿನಿಧಿಸುವ ಸಂಗತಿಯಾಗಿದೆ. ಅಗ್ನಿ ನೀರಿನಿಂದ ಉದುಯಿಸುತ್ತದೆ ಮತ್ತು ನೀರಿನಲ್ಲಿ ವಾಸಿಸುತ್ತದೆ ಎನ್ನುತ್ತಾರೆ. ವಿಷಯದ ಆಳಕ್ಕೆ ಹೋದರೆ ಇದರ ಅರ್ಥ ತಿಳಿಯಬಹುದು. ನೀರು ಜಲಜನಕ ಮತ್ತು ಆಮ್ಲಜನಕದ ಮಿಶ್ರಣವಾಗಿದೆ. ಜಲಜನಕ ಶೀಘ್ರವಾಗಿ ದಹಿಸುವ ಅನಿಲವಾಗಿದ್ದು, ಆಮ್ಲಜನಕ ದಹನಕ್ಕೆ ಸಹಕಾರಿಯಾಗಿರುತ್ತದೆ ಅಲ್ಲವೇ? ಪ್ರತಿ ಶುಭ, ಅಶುಭ ಕಾರ್ಯಗಳಿಗೆ ಅಗ್ನಿ ಸಾಕ್ಷಿಯಾಗಿರುತ್ತದೆ. ಅಂತ್ಯ ಸಂಸ್ಕಾರದ ಕ್ರಿಯೆಯಲ್ಲಿ ಶವದಹನಕ್ಕೂ ಅಗ್ನಿ ಬೇಕು. ವೈವಾಹಿಕ ಜೀವನಕ್ಕೆ ಕಾಲಿಡುವಾಗಲೂ ಅಗ್ನಿಸಾಕ್ಷಿಯಾಗಿ ಕೈ ಹಿಡಿಯುವುದು ಅನ್ನುತ್ತಾರೆ. ಅಗ್ನಿ ಪಾವಿತ್ರ್ಯದ ಸಂಕೇತವೂ ಆಗಿದೆ, ಪರಮಾತ್ಮನಂತೆ ದಾರಿ ತೋರುವ ಗುಣವನ್ನೂ ಹೊಂದಿದೆ."
"ಹೌದು. ದೇವರನ್ನು ಜ್ಯೋತಿರ್ಮಯ ಅನ್ನುವುದು ಇದೇ ಕಾರಣಕ್ಕೇ ಇರಬೇಕು. ಓ, ಜ್ಯೋತಿರ್ಮಯನೇ ನಮಸ್ಕಾರ!"
ಸತ್ಯಪಥದಿ ಮುಂದೆ ಸಾಗಲು ಮತಿಯ ಕರುಣಿಸು ದೇವನೆ
ಸಂಪತ್ತು ಬರಲಿ ನ್ಯಾಯ ಮಾರ್ಗದಿ ನಿನ್ನ ಕರುಣೆಯ ಬಲದಲಿ |
ರಜವ ತೊಳೆದು ತಮವ ಕಳೆದು ಸತ್ತ್ವ ತುಂಬಲು ಬೇಡುವೆ
ಬಾಳ ಬೆಳಗುವ ಜ್ಯೋತಿ ನೀನೆ ವಂದನೆ ಶತ ವಂದನೆ ||
ಹೆಜ್ಜೆ 13:
"ನೆಲ, ಜಲ, ಅಗ್ನಿತತ್ತ್ವಗಳಿಗಿಂತ ವಾಯು ಮತ್ತೂ ಹಿರಿದಾದುದಾಗಿದೆ. ಜೀವಿಗಳು ಜೀವ ಧರಿಸಲು ಸಾಧ್ಯವಾಗಿರುವುದು ಈ ವಾಯುವುನಿಂದಾಗಿಯೇ! ಮನುಷ್ಯನ ಹುಟ್ಟು ಮತ್ತು ಸಾವು ಎರಡೂ ಉಸಿರಿನ ಮೇಲೆ ನಿಂತಿದೆ. ಉಸಿರು ಹೇಗೆ ನಮ್ಮ ಜೀವನಾಧಾರವಾಗಿದೆಯೋ ಹಾಗೆಯೇ ಭಾವನೆಗಳನ್ನು ನಿಯಂತ್ರಿಸಿಕೊಳ್ಳಲೂ ಸಹಕಾರಿಯಾಗಿದೆ. ಕೋಪ ಬಂದಾಗ ಭುಸುಗುಡುತ್ತಾ ವೇಗವಾಗಿ ಉಸಿರಾಡುತ್ತಾರೆ. ಶೋಕದಲ್ಲಿದ್ದಾಗ, ಸಂತೋಷದಲ್ಲಿದ್ದಾಗ, ಶಾಂತವಾಗಿದ್ದಾಗ ಉಸಿರಾಡುವ ರೀತಿಗಳೇ ಬೇರೆಯಾಗಿರುತ್ತವೆ. ಶಾಂತವಾಗಿರುವಾಗ ಉಸಿರಾಟ ಬಹಳ ನಿಧಾನವಾಗಿರುತ್ತದೆ. ಕೋಪ ಬಂದಾಗ, ನಿರ್ಧಾರ ತೆಗೆದುಕೊಳ್ಳಬೇಕಾದ ಸಂದರ್ಭಗಳಲ್ಲಿ ಸ್ವಲ್ಪ ಹೊತ್ತು ನಿಧಾನವಾಗಿ ಮತ್ತು ದೀರ್ಘವಾಗಿ ಉಸಿರಾಟ ಮಾಡಿದರೆ ಮನಸ್ಸು ತಹಬಂದಿಗೆ ಬರುತ್ತದೆ. ದೀರ್ಘ ಉಸಿರಾಟ ದೀರ್ಘ ಆಯಸ್ಸಿನ ರಹಸ್ಯವೆಂದು ಹೇಳುತ್ತಾರೆ. ದೀರ್ಘಕಾಲ ಬದುಕುವ ಆಮೆ ಬಹಳ ನಿಧಾನವಾಗಿ ಉಸಿರಾಡುತ್ತದೆ. ಸುಗಂಧವಾಗಲೀ, ದುರ್ಗಂಧವಾಗಲೀ, ತರಂಗಗಳನ್ನಾಗಲೀ ಎಲ್ಲೆಡೆ ಪಸರಿಸುವ ಕೆಲಸ ಈ ವಾಯವಿನದೇ ಆಗಿದೆ."
"ಹೌದು, ವಾಯುವಿನ ಮಹಿಮೆ ದೊಡ್ಡದೇ ಸರಿ."
"ನಿಲ್ಲಿ, ನಾನಿನ್ನೂ ಮುಗಿಸಿಲ್ಲ. ಜೀವನಾಧಾರವಾದ ವಾಯುವನ್ನು ಶುದ್ಧವಾಗಿಡಬೇಕಾದುದು ಮಾನವನ ಕರ್ತವ್ಯ. ಆದರೆ ಈಗ ಏನಾಗುತ್ತಿದೆ? ಇಡೀ ಜಗತ್ತು ವಾಯುಮಾಲಿನ್ಯದಿಂದ ತತ್ತರಿಸುವಂತೆ ಮಾಡಿ, ರೋಗ-ರುಜಿನಗಳ ಬೀಡಾಗುವಂತೆ ಮಾಡುತ್ತಿರುವುದು ಎಷ್ಟು ಸರಿ? ವಾಯುವೂ ಸೇರಿದಂತೆ ಪಂಚಭೂತಗಳನ್ನು ಸಂರಕ್ಷಿಸುವ ಕೆಲಸ ಮಾಡಿದರೆ ಅದೇ ದೇವಋಣವನ್ನು ತೀರಿಸಿದಂತೆ ಎಂಬದನ್ನು ನೆನಪಿಟ್ಟುಕೊಳ್ಳಿ."
ಹೆಜ್ಜೆ 14:
"ವಾಯುವಿನ ಹಿರಿಮೆ ಮನದಟ್ಟು ಮಾಡಿದಿರಿ. ಉಳಿದದ್ದು ಆಕಾಶ. ಅದೇ ಎಲ್ಲಕ್ಕಿಂತ ಹಿರಿದು ಅಲ್ಲವೇ?"
"ಸತ್ಯಸ್ಯ ಸತ್ಯವಿದು. ಹೀಗೊಮ್ಮೆ ಕಲ್ಪಿಸಿಕೊಳ್ಳಿ. ಒಂದೊಮ್ಮೆ ಭೂಮಿ ನೀರಿನಲ್ಲಿ ಮುಳುಗಿ ಕರಗಿಹೋದರೆ? ನೀರು ಬೆಂಕಿಯಿಂದ ಒಣಗಿ ಆವಿಯಾದರೆ? ಬೆಂಕಿಯನ್ನು ಗಾಳಿ ನಂದಿಸಿದರೆ? ಗಾಳಿ ಆಕಾಶದಲ್ಲಿ ಐಕ್ಯವಾದರೆ? ಕೊನೆಯಲ್ಲಿ ಉಳಿಯುವುದು ಆಕಾಶ ಮಾತ್ರ, ಆಕಾಶ, ಆಕಾಶ, ಎಲ್ಲೆಲ್ಲೂ ಆಕಾಶ, ಅಷ್ಟೆ! ಪ್ರಳಯ ಎಂಬ ಕಲ್ಪನೆ ಸಹ ಇದನ್ನೇ ಹೇಳುತ್ತದೆ. ಅಂತಿಮವಾಗಿ ಉಳಿಯುವ ಆಕಾಶ ಮಾತ್ರ ಕಾಣುವ ಸತ್ಯ, ಎಲ್ಲವನ್ನೂ ಒಳಗೊಳ್ಳಬಲ್ಲ, ಸೇರಿಸಿಕೊಳ್ಳಬಲ್ಲ, ಎಲ್ಲೆಲ್ಲೂ ಇರುವಂತಹ ವಿಶಾಲ ಶಕ್ತಿಯಾಗಿರುತ್ತದೆ. ಹೀಗಾಗಿ ಇದು ಸರ್ವವ್ಯಾಪಿ, ಎಂದೆಂದೂ ನಾಶವಾಗದ ಸಂಗತಿಯಾಗಿದೆ.
ಆಕಾಶದ ಮಹತ್ವ ಅರಿವಾಗುವುದು ಅದು ಇರುವುದರಿಂದಲೇ! ಎಲ್ಲದರ ಅಸ್ತಿತ್ವಕ್ಕೆ ಅವಕಾಶವಾಗಿರುವುದು ಆಕಾಶದಿಂದಲೇ. ಪ್ರತಿಯೊಂದೂ ಪರಿಣಾಮಸ್ವರೂಪವಾಗಿ ಆಕಾಶದಿಂದಲೇ ಬರುತ್ತದೆ. ಸೂರ್ಯ, ಚಂದ್ರ, ನಕ್ಷತ್ರಗಳು, ಗ್ರಹಗಳು, ಗುಡುಗು, ಸಿಡಿಲು, ಇಂತಹದು ಇದೆ, ಇಂತಹದು ಇಲ್ಲನ್ನುವಂತಿಲ್ಲದೆ ಪ್ರತಿಯೊಂದಕ್ಕೂ ಅವಕಾಶ ಮಾಡಿಕೊಟ್ಟಿರುವುದು ಆಕಾಶವೇ. ಇರಲು ಜಾಗವಿರದಿರುತ್ತಿದ್ದರೆ ನಾವು ಎಲ್ಲಿರುತ್ತಿದ್ದೆವು? ನಮ್ಮ ಸುಖ-ದುಃಖಗಳು ಎಲ್ಲಿರುತ್ತಿದ್ದವು? ಆಕಾಶವಿರದಿದ್ದರೆ ಯಾವುದೇ ವಸ್ತುಗಳು ಇರುತ್ತಿರಲಿಲ್ಲ, ಸುಖ-ದುಃಖಗಳ ಅನುಭವವೂ ನಮಗೆ ಇರುತ್ತಿರಲಿಲ್ಲ. ಜೀವನದಲ್ಲಿ ನಾವು ಅನುಭವಿಸುವ ನವರಸಗಳಿಗೂ, ತೃಪ್ತಿ, ಅತೃಪ್ತಿಗಳಿಗೂ ಆಕಾಶ ಕಾರಣವೆಂದರೆ ಅತಿಶಯೋಕ್ತಿಯಲ್ಲ. ಭೂಮಿಯಿಂದ ಬೆಳೆಯುವ ಗಿಡ-ಮರಗಳಿಗೂ ಬೆಳೆಯಲು ಆಕಾಶವಿರುವುದರಿಂದಲೇ ಸಾಧ್ಯವಾಗಿದೆ. ಆಕಾಶದ ಕುರಿತು ಎಷ್ಟು ಹೆಚ್ಚು ವಿವರಣೆ ನೀಡಿದರೂ ಅದು ಕಡಿಮೆಯೇ ಆಗುತ್ತದೆ, ಏನೋ ಕೊರತೆ ಇದ್ದೇ ಇರುತ್ತದೆ. ಅದನ್ನು ವಿವರಿಸುವುದು ಕಷ್ಟ.
ಆಕಾಶ ಮೇಲೆ ಮಾತ್ರ ಇಲ್ಲ, ಎಲ್ಲೆಲ್ಲೂ ಇದೆ. ಎಲ್ಲೆಲ್ಲೂ ಅಂದರೆ ಎಲ್ಲೆಲ್ಲೂ! ಈ ಜಗತ್ತು/ವಿಶ್ವ/ಬ್ರಹ್ಮಾಂಡ ಎಂದರೆ ಕೇವಲ ಒಂದು ಭೂಮಿಯಲ್ಲ, ಒಂದು ಚಂದ್ರನಲ್ಲ, ಒಂದು ಸೂರ್ಯನಲ್ಲ. ಇಂತಹ ಅಸಂಖ್ಯ ಭೂಮಿ, ಸೂರ್ಯ, ಚಂದ್ರ, ಎಣಿಕೆಗೆ ಸಿಕ್ಕದ ಬೃಹತ್ ನಕ್ಷತ್ರಗಳ ಬೃಹತ್ ಸಮೂಹ ಇದರಲ್ಲಿದೆ. ಅಲ್ಲೆಲ್ಲಾ ಆವರಿಸಿರುವುದು ಈ ಆಕಾಶವೇ! ಆಕಾಶ ಎಲ್ಲರನ್ನೂ, ಎಲ್ಲವನ್ನೂ ಹೊಂದಿಕೊಂಡೇ ಇದೆ! ಅದು ಇಲ್ಲದ ಸ್ಥಳವೇ ಇಲ್ಲ. ಜೀವಿಗಳ ದೇಹ ಪಂಚಭೂತಗಳಿಂದ -ಜಲ, ವಾಯು, ಅಗ್ನಿ, ಭೂಮಿ ಮತ್ತು ಆಕಾಶ- ಕೂಡಿದ್ದುದಾಗಿದ್ದು, ಆಕಾಶ ಒಳಗೂ ಇದೆ, ಹೊರಗೂ ಇದೆ. ಒಳಗೂ ಇರುವ, ಹೊರಗೂ ಇರುವ, ಎಲ್ಲೆಲ್ಲೂ ಇರುವ, ಅದು ಇಲ್ಲದ ಸ್ಥಳವೇ ಇರದಿರುವುದು ಆಕಾಶ. ಆಕಾಶದ ಕಣ್ಣು ತಪ್ಪಿಸಿ ಯಾರಾದರೂ ಏನಾದರೂ ಮಾಡಲು ಸಾಧ್ಯವೇ? ಏನಾದರೂ ನಡೆಯಲು ಸಾಧ್ಯವೇ? ಜೀವಿಗಳು ವಾಸವಿರಲು ಸಾಧ್ಯವೇ ಇರದ ಸ್ಥಳದಲ್ಲೂ ಅದಿದೆ, ಧಗಧಗಿಸುವ ಅಗ್ನಿಯ ಜೊತೆಗೂ ಇದೆ, ಭೋರ್ಗರೆಯುವ ಸಮುದ್ರ, ಸಾಗರಗಳಿರುವಲ್ಲೂ ಇದೆ. ಆಕಾಶವನ್ನು ಬೆಂಕಿ ಸುಡಲಾರದು, ನೀರು ತೋಯಿಸಲಾರದು, ಅದನ್ನು ಯಾವುದೇ ಆಯುಧದಿಂದ ಕತ್ತರಿಸಲಾಗದು, ಅದನ್ನು ಯಾರೂ ಏನೂ ಮಾಡಲಾರರು. ಬ್ರಹ್ಮಾಂಡದ ಸೃಷ್ಟಿಯ ಜೊತೆಗೂ ಅದು ಇರುತ್ತದೆ, ಪ್ರಳಯ, ವಿನಾಶ ಕಾಲದಲ್ಲೂ ಅದು ಇರುತ್ತದೆ. ಅದಕ್ಕೆ ಪ್ರಾರಂಭವಿಲ್ಲ, ಕೊನೆಯಿಲ್ಲ, ಅರ್ಥಾತ್ ಆದಿಯೂ ಇಲ್ಲ, ಅಂತ್ಯವೂ ಇಲ್ಲ. ಅಶನ, ವಸನ, ವಸತಿಗಳನ್ನು ಕರಣಿಸುವ ಭೂಮಿ ಎಲ್ಲರ ತಾಯಿಯಾದರೆ, ಸದಾ ಎಲ್ಲರೊಡನಿದ್ದು ಎಲ್ಲರನ್ನೂ ಗಮನಿಸುವ ಆಕಾಶವೇ ತಂದೆ! ಜೊತೆಗೇ ಇದ್ದರೂ ತನ್ನ ಇರುವನ್ನು ಪ್ರಕಟಿಸದ, ಯಾವುದೇ ಚಟುವಟಿಕೆಗಳಿಗೆ ಅಡ್ಡಿಪಡಿಸದ, ಜಗತ್ತನ್ನು ಅನುಭವಿಸಲು ಅವಕಾಶ ಮಾಡಿಕೊಟ್ಟಿರುವ ಆಕಾಶಕ್ಕಿಂತ ಹೆಚ್ಚು ವಾತ್ಸಲ್ಯಮಯಿ ತಂದೆ ಬೇರೆ ಯಾರಾದರೂ ಇರಲು ಸಾಧ್ಯವೇ?"
ತಿಳಿದವರು ಯಾರಿಹರು ಆಗಸದ ನಿಜಬಣ್ಣ
ತುಂಬುವರು ಯಾರಿಹರು ಆಗಸದ ಶೂನ್ಯ |
ಆಗಸದ ನಿಜತತ್ವ ಅರಿತವರು ಯಾರು?
ಗಗನದ ಗಹನತೆಗೆ ಮಿತಿಯೆಲ್ಲಿ ಮೂಢ ||
ಹೆಜ್ಜೆ 15:
"ವಿವರಣೆಗೆ ನಿಲುಕದ, ಎಲ್ಲೆಯಿರದ ಆಕಾಶಕ್ಕಿಂತ ದೊಡ್ಡದು ಇರಲು ಸಾಧ್ಯವೇ ಇಲ್ಲ, ಅಲ್ಲವೇ?"
"ಏಕಿಲ್ಲ? ಆಕಾಶಕ್ಕಿಂತಲೂ ಹಿರಿದಾದುದು ಇದೆ. ಅದೇ ನಿಮ್ಮ 'ಸ್ವಂತ ಅಸ್ತಿತ್ವ'. ಹುಚ್ಚು ಹುಚ್ಚಾಗಿ ಬಡಬಡಿಸುತ್ತಿದ್ದಾನೆ ಅಂದುಕೊಳ್ಳಬೇಡಿ. ಈ ಆಕಾಶ ದೊಡ್ಡದು ಎಂಬ ಅರಿವು ನಮಗೆ ಬರಬೇಕಾದರೆ ನಮಗೆ ನಮ್ಮ ಅಸ್ತಿತ್ವದ ಬಗ್ಗೆ ಅರಿವು ಇರಬೇಕು. ಅಸ್ತಿತ್ವದ ಅರಿವು ಮೊದಲು ಬರುತ್ತದೆ, ನಂತರ ಹೊರಗಿನ ಆಕಾಶದ ಅರಿವು! ನಾವು ಮೊದಲು ಇದ್ದರೆ ತಾನೇ ಆಕಾಶ ಅನ್ನುವುದು ಇರುವುದು! ನೋಡಿ, ನಾವೇ ಇಲ್ಲದಿದ್ದರೆ, ಆಕಾಶ ಇದೆಯೋ ಇಲ್ಲವೋ ಅನ್ನುವ ಪ್ರಶ್ನೆಯೇ ಬರುವುದಿಲ್ಲ. ಯಾರಾದರೂ ತಮ್ಮ ಅಸ್ತಿತ್ವದ ಅರಿವನ್ನು ಕಳೆದುಕೊಂಡರೆ, ಅರ್ಥಾತ್ ತಾವು ಯಾರು ಎಂಬುದರ ಅರಿವೇ ಇಲ್ಲದಿದ್ದರೆ, ಅಂತಹವರಿಗೆ ಆಕಾಶದ ಕುರಿತು ಜಿಜ್ಞಾಸೆಯಾಗಲೀ, ಹೇಳುವುದಾಗಲೀ, ಕೇಳುವುದಾಗಲೀ, ಯೋಚಿಸುವುದಾಗಲೀ, ಅರ್ಥ ಮಾಡಿಕೊಳ್ಳುವ ಪ್ರಶ್ನೆಯಾಗಲೀ ಉದ್ಭವಿಸುವುದಿಲ್ಲ. ಸ್ವಪ್ರಜ್ಞೆ ಇಲ್ಲದಿದ್ದರೆ ಯಾವುದೇ ಉಪಯುಕ್ತವಾದ ಕ್ರಿಯೆಗಳಾಗಲೀ, ಕೆಲಸಗಳಾಗಲೀ ಅಸಾಧ್ಯವಾಗುತ್ತದೆ. ಎಲ್ಲೆಲ್ಲಿ ಸ್ವಪ್ರಜ್ಞೆ ಜಾಗೃತವಾಗಿರುತ್ತದೋ, 'ನಮ್ಮತನ' ಅನ್ನುವುದು ಹಾಜರಿರುತ್ತದೆಯೋ ಅಲ್ಲಿ ಎಲ್ಲಾ ವಿಧವಾದ ಜ್ಞಾನ ಲಭಿಸುತ್ತಾ ಹೋಗುತ್ತದೆ. ಅಲ್ಲಿ ಯೋಚಿಸುವ ಪ್ರಕ್ರಿಯೆ ಇರುತ್ತದೆ, ಅರ್ಥ ಮಾಡಿಕೊಳ್ಳುವ ಶಕ್ತಿ ಇರುತ್ತದೆ, ಕೇಳುವ, ತಿಳಿಯುವ ಕೆಲಸ ಆಗುತ್ತದೆ. ನಮ್ಮ ಎಲ್ಲಾ ಚಟುವಟಿಕೆಗಳು, ಕ್ರಿಯೆಗಳು ಅಸ್ತಿತ್ವದ ಅರಿವಿನ ಫಲಗಳಾಗಿವೆ. ಇದು ಇಲ್ಲದಿದ್ದರೆ ಇಡೀ ಜಗತ್ತೇ ಶೂನ್ಯ!
ನಾನಿಲ್ಲ ಅವನಿಲ್ಲ ಜಗವಿಲ್ಲ ನಿದ್ದೆಯಲಿ
ರಾಗ ದ್ವೇಷಗಳಿಲ್ಲ ನೋವು ನಲಿವುಗಳಿಲ್ಲ |
ತಮೋತ್ತುಂಗದಲಿ ಪ್ರಶ್ನೋತ್ತರದ ಸೊಲ್ಲಿಲ್ಲ
ಮಾಯಾ ಶಕ್ತಿಗೆದುರುಂಟೆ ಮೂಢ ||
ಅಸ್ತಿತ್ವದ ಮಹತ್ವವನ್ನು ತಿಳಿಯಲು ಗಾಢನಿದ್ದೆಯಲ್ಲಿ ಸ್ಥಿತಿ ಹೇಗಿರುತ್ತದೆಯೆಂಬುದನ್ನು ಕಲ್ಪಿಸಿಕೊಂಡರೆ ಸಾಕು. ಗಾಢ ನಿದ್ದೆಯಲ್ಲಿದ್ದಾಗ ನಮಗೆ ನಮ್ಮ ಅರಿವೇ ಇರುವುದಿಲ್ಲ. ಇನ್ನು ದೇವರು, ಜಗತ್ತು, ಆಕಾಶ ಮುಂತಾದವುಗಳು ಸಹ ಇವೆಯೋ, ಇಲ್ಲವೋ ಎಂಬುದರ ಯೋಚನೆ ಸಹ ಬರುವುದಿಲ್ಲ. ಆ ಸಮಯದಲ್ಲಿ ಸುಖ-ದುಃಖ, ಲಾಭ-ನಷ್ಟ, ನೋವು-ನಲಿವುಗಳ ಸುಳಿವೂ ಇರುವುದಿಲ್ಲ. ಯಾವ ಜಂಜಾಟವೂ ಇರುವುದೇ ಇಲ್ಲ. ನಿದ್ದೆಯಿಂದ ಎಚ್ಚರವಾದ ತಕ್ಷಣದಲ್ಲಿ 'ನಾನು' ಎದ್ದುಬಿಡುತ್ತದೆ! ಸುತ್ತಮುತ್ತಲ ಪ್ರಪಂಚವೂ ಎದ್ದುಬಿಡುತ್ತದೆ! 'ನಾನು' ಏಳದಿದ್ದರೆ ಯಾವುದರ ಅಸ್ತಿತ್ವವೂ ಇರುವುದೇ ಇಲ್ಲ. ಇದು ಅಸ್ತಿತ್ವದ ವಿಸ್ಮಯಕಾರಿ ಗುಣ. ನಮ್ಮ ತಡಕಾಟ, ಹುಡುಕಾಟಗಳು ಬಹುತೇಕ ಹೊರಗೆ ಇರುತ್ತವೆ. ಏನು ಹುಡುಕುತ್ತಿದ್ದೇವೆಯೋ ಅದು ಹೊರಗಿಲ್ಲ, ನಮ್ಮೊಳಗೇ ಇದೆ ಎಂಬ ಅರಿವು ಮೂಡತೊಡಗಿದಾಗ ಸ್ವಲ್ಪ ಸ್ವಲ್ಪವಾಗಿ ಬೆಳಕು ಮೂಡತೊಡಗುತ್ತದೆ. ಅಂತರಂಗದ ಕರೆಗೆ ಓಗೊಟ್ಟರೆ ಸ್ಪಷ್ಟವಾಗಿ ತಿಳಿಯುತ್ತದೆ: "ನಾವು ಇದ್ದರೆ ಎಲ್ಲವೂ ಇರುತ್ತದೆ; ನಾವು ಇಲ್ಲದಿದ್ದರೆ ಏನೂ ಇರುವುದಿಲ್ಲ. ಇದು ಅಸ್ತಿತ್ವದ ಮಹತ್ವ!"
-ಕ.ವೆಂ.ನಾಗರಾಜ್.
Comments
ಉ: ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ . . . -3
ಕವಿಗಳೇ ನಮಸ್ತೆ, ಅಗ್ನಿ, ಆಕಾಶ, ವಾಯು, ಹಾಗು ನಮ್ಮ ಅಸ್ತಿತ್ವ ಚಿಂತನೆಗೆ ಹಚ್ಚುತ್ತಿದೆ,,,,,,,,,,,,,,, ಯಾವುದೋ ಅವ್ಯಕ್ತ ಭಾವವೊಂದನ್ನು ತಡಕಾಡುವ ಮನದ ಪಲ್ಲಟಗಳು,,,,,,,,,,,, ಯಾವುದೋ ಹೊಸ ಸತ್ಯವನ್ನು ಕಂಡಂತೆ,,,,,
In reply to ಉ: ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ . . . -3 by naveengkn
ಉ: ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ . . . -3
ಧನ್ಯವಾದ, ನವೀನರೇ.