ಹೆಜ್ಜೆ ಊರುವ ತವಕ

ಹೆಜ್ಜೆ ಊರುವ ತವಕ

ಪುಸ್ತಕದ ಲೇಖಕ/ಕವಿಯ ಹೆಸರು
ನವೀನಕೃಷ್ಣ ಎಸ್, ಉಪ್ಪಿನಂಗಡಿ
ಪ್ರಕಾಶಕರು
ಕನ್ನಡ ಸಂಘ, ನೆಹರೂ ನಗರ, ಪುತ್ತೂರು
ಪುಸ್ತಕದ ಬೆಲೆ
ರೂ. ೧೨೦.೦೦, ಮುದ್ರಣ: ೨೦೨೪

ಪರಿಸರ ಸಂಬಂಧಿ ಬರಹಗಳನ್ನು ಬರೆಯುವವರು ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ನವೀನಕೃಷ್ಣ ಎಸ್. ಉಪ್ಪಿನಂಗಡಿ ಎನ್ನುವ ಹುಡುಗ ‘ಹೆಜ್ಜೆ ಊರುವ ತನಕ' ಎನ್ನುವ ಕೃತಿಯನ್ನು ಹೊರತಂದಿದ್ದಾರೆ. ಈ ಕೃತಿಯ ಕುರಿತು ಸೊಗಸಾದ ಬೆನ್ನುಡಿ ಬರೆದು ಬೆನ್ನು ತಟ್ಟಿದ್ದಾರೆ ಪರಿಸರ ತಜ್ಞ, ಪತ್ರಕರ್ತ ಶಶಿಧರ ಹಾಲಾಡಿ. ಇವರು ತಮ್ಮ ಬೆನ್ನುಡಿಯಲ್ಲಿ “ ಪರಿಸರ, ಪರಿಸರದೊಂದಿಗಿನ ಒಡನಾಟದ ಅನುಭವಗಳು, ಪರಿಸರ ವ್ಯಾಪಾರಗಳನ್ನು ನಿಕಪಕ್ಕೆ ಒಡ್ಡುವುದು ಮುಂತಾದ ವಿಷಯಗಳ ಕುರಿತಾಗಿ ಆಪ್ತವಾಗಿ ಬರೆಯುವವರ ಸಂಖ್ಯೆ ಕಡಿಮೆ. 

ಕಾಡು, ಬೆಟ್ಟ, ಪಕ್ಷಿ ಪ್ರಪಂಚ, ಮರ, ಗಿಡ, ಬಳ್ಳಿಗಳನ್ನು ಎಲ್ಲರೂ ನೋಡಿರುತ್ತಾರೆ. ಆದರೆ ಅವುಗಳ ನಡುವಿನ ಸಂಬಂಧವನ್ನು ಗುರುತಿಸಿ, ಈ ವಿಸ್ಮಯಭರಿತ ಲೋಕದ ಬೆರಗುಗಳನ್ನು ಅಕ್ಷರ ರೂಪದಲ್ಲಿ ದಾಖಲಿಸುವವರು ವಿರಳ. ಅಂತಹ ಅಪರೂಪದ ಪ್ರಯತ್ನದಲ್ಲಿ ತೊಡಗಿಸಿಕೊಂಡು, ಬರಹಗಳನ್ನು ಬರೆದು ಪ್ರಕಟಿಸಿ, ಈಗ ಸಂಕಲನ ರೂಪದಲ್ಲಿ ಹೊರತರುತ್ತಿದ್ದಾರೆ ನವೀನಕೃಷ್ಣ ಎಸ್. ಉಪ್ಪಿನಂಗಡಿಯವರು ತಮ್ಮ ಸುತ್ತಲಿನ ಪರಿಸರವನ್ನು ಸೂಕ್ಷ್ಮವಾಗಿ ಅವಲೋಕಿಸಿದ್ದು ಮಾತ್ರವಲ್ಲ, ಅಲ್ಲಿ ಕಂಡು ಬರುವ ಅಪರೂಪದ ಸಂಗತಿಗಳನ್ನು ಹೆಕ್ಕಿತೆಗೆದು, ವಿಶ್ಲೇಷಣೆಗೊಳಪಡಿಸಿ ಬರಹರೂಪದಲ್ಲಿ ದಾಖಲಿಸಿರುವ ಅವರ ಈ ಅಕ್ಷರಾಭಿಮಾನ ನಿಜಕ್ಕೂ ಅಭಿನಂದನಾರ್ಹ.” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ ಖ್ಯಾತ ಪರಿಸರ ಬರಹಗಾರ ಶಿವಾನಂದ ಕಳವೆ. ಇವರು ತಮ್ಮ ಮುನ್ನುಡಿ “ಅಜ್ಜಿಮನೆ, ಕೆಮರಾ ಹಾಗೂ ಬನದ ಹುಡುಗ” ದಲ್ಲಿ ಹೀಗೆ ಬರೆಯುತ್ತಾರೆ...

“ಲೇಖನ ಬರವಣಿಗೆ ಆರಂಭಿಸಿದ ಮೊದಲಲ್ಲಿ ಎಲ್ಲರಿಗೂ ಬರೆಯುವುದಕ್ಕೆ ವಿಷಯ ಹುಡುಕುವ ಸವಾಲು. ನಮ್ಮೂರಿನ ಚಿತ್ರಕಲಾವಿದ, ಹಾಡುಗಾರ, ಯಕ್ಷಗಾನ ಕಲಾವಿದ, ದೇಗುಲ, ಪ್ರವಾಸಿ ತಾಣ, ಜಲಪಾತವೆಂದು ಒಂದರನಂತರ ಒಂದು ಬರೆದಿದ್ದೇ ಬರೆದಿದ್ದು. ಮಕ್ಕಳು ಜಾತ್ರೆಗೆ ಹೋದ ಮೊದಲಲ್ಲಿ ಅಲ್ಲಿ ಕಂಡಿದ್ದೆಲ್ಲ ಬೇಕೆನ್ನುವ ಆಸೆಯಂತೆ ಬರೆಯುವ ಆರಂಭಿಕ ಉತ್ಸಾಹದ ಘಳಿಗೆ ಅದು. ಇದಾದ ನಂತರ ನಮ್ಮದೇ ಕ್ಷೇತ್ರ ಗುರುತಿಸಿ ಒಂದು ವಿಷಯದ ಆಸುಪಾಸಿನ ಸಂಗತಿಗಳನ್ನು ಹುಡುಕಿ ಹುಡುಕಿ ಬರೆಯುತ್ತಾ ಹೋಗುವ ಹಂತ, ಇಲ್ಲಿ ವಿಷಯ ಆಯ್ಕೆಗೆ ಮಾಗುವ ಕಾಲ. ಅಧ್ಯಯನಕ್ಕೆ ಪುಸ್ತಕ ಎಲ್ಲಿದೆ? ವಿಷಯ ತಜ್ಞರು ಎಲ್ಲಿದ್ದಾರೆಂದು ಹುಡುಕಾಟ ಶುರು. ನಾವು ಸರ್ವಜ್ಞರಲ್ಲ, ತಿಳಿಯುವುದು ಬಹಳವಿದೆಯೆಂಬ ಅರಿವಿನಲ್ಲಿ ಈಗ ಎಚ್ಚರದ ನಡಿಗೆ ಬೇಕು. ಪತ್ರಿಕೆ ಪ್ರಕಟಿಸುವುದೇ ಮುಖ್ಯವಲ್ಲ, ಪ್ರಕಟಿತ ಲೇಖನ ಓದುವ ಓದುಗರು ಹಳಸಲು ಸಂಗತಿ ಗಮನಿಸಿ ಇವ ಬರೆಯೋದೇ ಇಷ್ಟು ಎಂಬಂತಾಗದೇ ಹೆಜ್ಜೆ ಹೆಜ್ಜೆಗೂ ಬೆಳೆದರೆ ಗೆಲುವು. ಪ್ರತೀ ದಿನ ನಾವು ಕಲಿಯುವ ಹುಡುಗರು. ನಾವು ಲೇಖನದಲ್ಲಿ ಬಳಸುವ ಪದಗಳು ನಮಗೇ ಬೇಜಾರಾಗಿ ಹೊಸ ಪದ ಹುಡುಕುತ್ತ ಹುಡುಕುತ್ತ ಬರಹ ಶೈಲಿ, ಭಾಷೆ ಕ್ರಮೇಣ ಸುಧಾರಣೆಯಾಗುತ್ತದೆ. ಕ್ಷೇತ್ರಕಾರ್ಯ, ಮಾಹಿತಿ ಸಂಗ್ರಹದಲ್ಲಿ ಪಳಗುತ್ತ ಬರವಣಿಗೆಯ ವಿಶಿಷ್ಟ ದಾರಿಯೊಂದು ಆಗ ತೆರೆದುಕೊಳ್ಳುತ್ತದೆ.

ಯುವ ಬರಹಗಾರ, ಈಗಿನ್ನೂ ಕಾಲೇಜು ಓದುತ್ತಿರುವ ನವೀನಕೃಷ್ಣ ಎಸ್. ಉಪ್ಪಿನಂಗಡಿಯವರ ‘ಹೆಜ್ಜೆ ಊರುವ ತವಕ’ ಕೃತಿಯ ಲೇಖನಗಳನ್ನು ಗಮನಿಸಿ ಓದಿದಾಗ ಬರವಣಿಗೆಯ ಆರಂಭದ ದಿನಗಳು ನನಗೂ ನೆನಪಾದವು. ಕೆಮರಾ ಹೆಗಲಿಗೇರಿಸಿ ಕಾಡು, ಹಳ್ಳಿ ಸುತ್ತಾಡುವಾಗ ಬರಹಕ್ಕೆ ಆಯ್ದುಕೊಂಡ ವಿಷಯಗಳು ಕಾಡಿದವು. ಪಾಠ ಹೇಳುವವರಿಲ್ಲ, ಮಾರ್ಗದರ್ಶಕರಿಲ್ಲ, ಪತ್ರಿಕೆಗೆ ಬರೆದು ಕಳಿಸಿದ್ದೆಲ್ಲ ಸ್ವವಿಳಾಸ ಅಂಟಿಸಿದ ಲಕೋಟೆ ಸಹಾಯದಿಂದ ಅಸ್ವೀಕೃತವಾಗಿ ಹಿಂದಿರುಗುತ್ತಿದ್ದ ಕಾಲವದು. ಅಲ್ಲೊಂದು ಇಲ್ಲೊಂದು ಪ್ರಕಟವಾದಾಗ ಮುಂದೆ ಬರೆಯಲು ನೂರ್ಮಡಿ ಉತ್ಸಾಹ. ನಾನು ಬರಹಗಾರನಾದೆನಲ್ಲ ಎಂಬ ಖುಷಿ! ನಾವು ಬರೆದು ಬರೆದು ಕೊನೆಗೆ ಬರೆಯುವುದಕ್ಕೆ ವಿಷಯವೇ ಇರುವುದಿಲ್ಲವೇನೋ ಎಂಬ ಭಾವನೆ ಒಳಗೊಳಗೇ ಕಾಡಿದ್ದಿದೆ. ಮಿತ್ರ ಡಾ. ನಿರಂಜನ ವಾನಳ್ಳಿ ಪತ್ರಿಕೋದ್ಯಮ ಪಾಠ ಮಾಡುವಾಗೆಲ್ಲ ‘ಹುಡುಕುವ ಕಣ್ಣಿದ್ದರೆ ನಮ್ಮ ಕಾಲುಬುಡದಲ್ಲಿಯೇ ವಿಷಯ ಕಾಲು ಮುರಿದು ಬಿದ್ದಿರುತ್ತದೆ’ ಎನ್ನುತ್ತಿದ್ದರು. 

ನುಡಿಚಿತ್ರ ಬರಹಗಾರನಿಗೆ ‘ಕೆಮರಾ’ ಎಂಬುದು ವಿಷಯ ನೋಡುವ ಧ್ಯಾನ ಸಲಕರಣೆ, ಓಡುವ ಮನಸ್ಸು ಒಂದು ಚೌಕಟ್ಟಿನಲ್ಲಿ ದೃಶ್ಯ ನೋಡುವ ಪರಿಯಲ್ಲಿ ಆಂತರಿಕ ಶಿಸ್ತು ಜನಿಸುತ್ತದೆ. ಸಂಯಮ, ಅಧ್ಯಯನ ಶ್ರದ್ಧೆ, ಕ್ಷೇತ್ರಕಾರ್ಯದ ಉತ್ಸಾಹ ಜೊತೆಗೆ ಈ ನವೀನ್ ಒಳ್ಳೆಯ ಓದುಗರು. ಕಾದಂಬರಿ, ಪರಿಸರ ಕೃತಿಗಳನ್ನು ಓದುವ ಆಸಕ್ತಿ ಇವರ ಭಾಷೆಯ ಬೆಳವಣಿಗೆಗೆ ಪೂರಕವಾಗಿದೆ. ಹಳ್ಳಿಗಾಡಿನ ಬದುಕಿನ ವಾತಾವರಣ, ಹಿರಿಯರ ಮಾರ್ಗದರ್ಶನ, ಪ್ರೋತ್ಸಾಹದಲ್ಲಿ ಉತ್ತಮ ಬರಹಗಾರರಾಗಿ ಬೆಳೆಯುವ ಭರವಸೆ ಈ ಮೊದಲ ಹೆಜ್ಜೆಯಲ್ಲಿಯೇ ಕಾಣಿಸುತ್ತಿದೆ.

ಉತ್ತಮ ವಿಷಯ ಆಯ್ಕೆ, ಶೈಲಿ, ಪದ ಬಳಕೆ, ಸಣ್ಣ ಸಣ್ಣ ಸಾಲುಗಳ ಸಹಜ ಅಭಿವ್ಯಕ್ತಿ ಸೊಗಸಾಗಿದೆ. ಸುಧಾರಣೆಗೆ ಅವಕಾಶವೂ ಇದೆ, ಇವರಿಗೆ ಸಾಮರ್ಥ್ಯವೂ ಇದೆಯೆಂಬುದು ಪುಸ್ತಕದ ಬರಹ ಓದಿದರೆ ಅರ್ಥವಾಗುತ್ತದೆ. ಈಗಾಗಲೇ ಇವರ ಬಹುತೇಕ ಬರಹ ಪ್ರಕಟಿತವಾಗಿವೆ. ಮೆಚ್ಚುವುದಕ್ಕೆ ಇವು ಪ್ರಕಟವಾಗಿವೆ ಎನ್ನುವುದಕ್ಕಿಂತ ಎಲ್ಲರ ಆಸಕ್ತಿ ಹುಟ್ಟಿಸುವ ಲೇಖನವಾಗಿದೆಯೆಂಬುದು ಹೆಮ್ಮೆಯ ಸಂಗತಿ. ಈಗಿನ್ನೂ ಓದುವ ಹುಡುಗ ಬರೆಯುತ್ತ ಬೆಳೆಯುತ್ತಿರುವುದು ಕಾಲೇಜಿನ ಹೆಮ್ಮೆ. ಪುತ್ತೂರು ವಿವೇಕಾನಂದ ಕಾಲೇಜಿನ ಕನ್ನಡ ಸಂಘ ನವೀನರ ಲೇಖನ ಸಂಕಲನ ಪ್ರಕಟಣೆಗೆ ಮುಂದಾಗಿದ್ದು, ಇದು ಕನ್ನಡ ಸಂಘದ ವಿಶೇಷ ಹೆಜ್ಜೆಯಾಗಿದೆ. ಇಂಥ ಪ್ರೋತ್ಸಾಹ ಮತ್ತೆಲ್ಲಿಯೂ ಸಿಗಲಿಕ್ಕಿಲ್ಲ! ಇದಕ್ಕಾಗಿ ಕಾಲೇಜಿನ ಎಲ್ಲರಿಗೆ ಅಭಿನಂದನೆಗಳು. 

ಕಾಡಿನಲ್ಲಿ ಆಹಾರಕ್ಕಾಗಿ ಜೋರಾಗಿ ಕಾದಾಡಿ ಕೊನೆಗೆ ಎಲ್ಲ ಮರೆತು ಅರೆಕ್ಷಣದಲ್ಲಿ ಒಂದಾಗುವ ಪಕ್ಷಿ ಸಂಕುಲದ ಘಟನೆ ಗಮನಿಸಿದ ನವೀನ್ ಕೊನೆಗೆ ದ್ವೇಷದ ಕಾಳ್ಗಿಚ್ಚು ಹಚ್ಚುವ ಈ ಮನುಷ್ಯನೆಲ್ಲಿ? ಎಂದು ಮಾರ್ಮಿಕವಾಗಿ ಲೇಖನವೊಂದರಲ್ಲಿ ಪ್ರಶ್ನಿಸುತ್ತಾರೆ. ಪರಿಸರ ವಿಸ್ಮಯ ಗಮನಿಸಿ ಬರೆದ ಸಾಲು ಓದಿದ ಪ್ರತಿಯೊಬ್ಬರಿಗೂ ಕಾಡುತ್ತದೆ. ಅಜ್ಜಿಮನೆ, ಕೆಮರಾ, ಕಾಡು, ಹಕ್ಕಿ, ಬನದ ಹುಡುಗನ ನಿಸರ್ಗ ಸಂರಕ್ಷಣೆಯ ಅರಿವಿನ ಇನ್ನಷ್ಟು ಬರಹ ಬರಲೆಂದು ಹಾರೈಸುವೆ. ಪತ್ರಿಕೋದ್ಯಮ ಓದುವ ಮಕ್ಕಳಿಗೆ, ಪರಿಸರ ಆಸಕ್ತರಿಗೆ ಸುತ್ತಲಿನ ನಿಸರ್ಗ ನೋಡುವ ಕಣ್ಣು ನೀಡುವ ಕೃತಿ ಇದಾಗಿದೆ.”