ಹೆಜ್ಜೆ ಮೂಡದ ಹಾದಿ..

ಹೆಜ್ಜೆ ಮೂಡದ ಹಾದಿ..

ಬರಹ

ಮಾಯಾಲೋಕವನ್ನು ತ್ಯಜಿಸಿ ಮತ್ತ್ಯಾವ ಲೋಕಕ್ಕೆ ಪಯಣ ಬೆಳೆಸಿದ ತೇಜಸ್ವಿ ಸಾವಿನ ಆಚೆಗಿರುವ ಸತ್ಯವನ್ನು ಇಷ್ಟು ಹೊತ್ತಿಗೆ ಆವಗಲೇ ತಿಳಿದು ಕೊ೦ಡು , "ಸಾವು ಅ೦ದರೆ ಹೆದರ್ ಬೇಡರೋ !!! ಈ ಸಾವಿನ ಸತ್ಯವೇನೆ೦ದು ಬರೆದು ಒ೦ದು ಪುಸ್ತಕ Publish ಮಾಡ್ತೀನ. ಆದರೆ ಕಲರ್ ಚಿತ್ರಗಳು ಇರೋದಿಲ್ಲಾ." ಅ೦ತಾ ತಮ್ಮ ಪೆನ್ನು ಹುಡುಕುತ್ತಿರುತ್ತಾರೆ. ಆದರೆ ಸಾವಿನಾಚೆಯ "ಈ ಲೋಕದಲ್ಲಿ ಕನ್ನಡವಿಲ್ಲಾ..ಅದೇ ಬೇಜಾರು" ಅನ್ನುತ್ತಿರಬಹುದು.

ನಾನು ನಾಡಿಗ್ ಮತ್ತು ಸ೦ಗಡಿಗರೊ೦ದಿಗೆ ಅವರ ಮನೆಗೆ ಹೋದಾಗ ಘ೦ಟೆ ಸುಮಾರು ಎರಡಾಗಿತ್ತು. ಬ೦ದದ್ದು ಹೋಗುವ ಬಗ್ಗೆ ಅದು ಇದು, ಹರಟೆ ಹತ್ತು ನಿಮಿಷ. ಐದು ನಿಮಿಷದಲ್ಲಿ River Interlinking ನಿ೦ದ ಪ್ರಾರ೦ಭವಾಯಿತು .ಆಮೇಲೆ ನಾನು ನನ್ನ ಕೆಲವು Photos ತೋರಿಸಿದೆ. ಆ Photoಗಳು ನಮ್ಮ ಬೆ೦ಗಳೂರಿನ ಕೂಲಿಕಾರರ ಚಿತ್ರವಾಗಿತ್ತು. ಚಿತ್ರವನ್ನು ನೋಡುತ್ತಾ "ಅಲ್ಲಾ ಈಗ ತಿ೦ಗಳಿಗೆ ಐನ್ನೂರ್ ರೂಪಾಯಿ ಟೋಮಾಟೊ ಮತ್ತು ತರಕಾರಿ ಬೆಳೆದುಕೊ೦ಡು ಕಡೂಬಡತನದಲ್ಲಿ ಜೀವಿಸುವ ರೈತನಿಗೆ ಯಾರಾದರೂ ಲಕ್ಷ ಕೊಟ್ಟು ನೆಲ ಬಿಡು ಅ೦ದರೆ ಬೇಡ ಅನ್ನೋಕ್ಕಾಗುತ್ತೇನು ?? ಈ ಸಮಸ್ಯೆಗೆ ನನಗೆ ದಾರಿ ಕಾಣಿಸ್ತಿಲ್ಲಾ.
ಆದರೆ ನೀವುಗಳು ಪರಿಹಾರ ಹುಡುಕಬೇಕು. ಯಾವುದೇ ಸಮಸ್ಯೆಗೆ ಉತ್ತರ ಸಿಗೋದಿಲ್ಲಾ ಅ೦ದರೆ ಆಗೋಲ್ಲಾ.ಉತ್ತರ ಹುಡುಕಬೇಕು".
ದನಿಯಲ್ಲಿ ಒಬ್ಬ ಯುವಕನನ್ನು ಚಾಲೆ೦ಜ್ ಮಾಡುವ ಧಾಟಿಯಿತ್ತು.

ಅಲ್ಲಾ ಐವತ್ತು ವರ್ಷವಾದರೂ ಇನ್ನೂ ಶಿಕ್ಷಣ ಮಾಧ್ಯಮ ಯಾವುದು ಅನ್ನೋ ಚಿ೦ತೆನೇ ಮಾಡ್ತಾಯಿದ್ದಿವಲ್ಲಾ..ಅ೦ದು .. ನಮ್ಮ ರಾಜ್ಯದ ಶಿಕ್ಷಣ ಸಚಿವರ ಪಟ್ಟಿ ಹೇಳಿಕೊ೦ಡು..ಎಲ್ಲರನ್ನೂ ತರಾಟೆಗೆ ತೆಗೆದುಕೊ೦ಡರು. ಆಮೇಲೆ ರಾಜ್ಯದ ರಾಜಕೀಯವನ್ನು
"ಹೊಲಸು ಹೊಲಸು" ಎ೦ದು ತೀರಾ ತಿರಸ್ಕಾರದಿ೦ದ ನಿ೦ದಿಸಿದರು.

ಅ೦ದು ಇಸ್ಮೇಲ್ ಮಾಡಿದ ಮಹಾಪರಾಧವಾದರೇನು ? ನಮ್ಮೆಲ್ಲರನ್ನು ಹೊಟೆಲ್ ಗೆ ಕರೆದುಕೊ೦ಡು ಹೋಗಿದ್ದು. ತೇಜಸ್ವಿ ಊಟಕ್ಕಾಗಿ ಒಳ್ಳೆ ಅಡಿಗೆ ಮಾಡಿಸಿ ಕಾಯ್ತಾಯಿದ್ದರು ಅನ್ಸತ್ತೆ.

"ನಿಮ್ಗೇ ಯಾರಿಗೂ ಹಸಿವು ಆಗೋಲ್ವೇನೂ ?? ಎಲ್ಲರೂ ಹಾಗೇ ಮಾತಾಡ್ತಾಯಿದ್ದೀರಲ್ಲಾ ?"
"ಸಾರ್ ! ಆಯಿತು ನಮ್ಮದು ಊಟ."
"ಎಲ್ಲಿ"
"ಮೂಡಿಗೆರಯಲ್ಲಿ"
"ಯಾರು ಕರ್ಕೊ೦ಡು ಹೊಗಿದ್ದು"
"ಇಸ್ಮೇಲ್"..
"ಶುದ್ಧ ಮೂರ್ಖತನ. ಅಲ್ಲಾ ಇಲ್ಲಿವರೆಗೂ ಬ೦ದು ಮನೆಗೆ ಬಾರದೇ ಹೋಟೆಲ್ ಗೆ ಹೋಗಿದ್ದೀರಲ್ಲಾ ?
ನಾನು ಬೆಳಿಗ್ಗೆಯಿ೦ದ ಕಾಯ್ತಾಯಿದ್ದೇನೆ. "
"ನಮ್ಮ guide ಇಸ್ಮೇಲ್ . ಅವರೇ ಈ ಪ್ಲಾನ್ ಮಾಡಿದ್ದು"
ಇಸ್ಮೇಲ್ನವರನ್ನು ತು೦ಬಾ ಪ್ರೀತಿಯಿ೦ದ ಬೈಯುತ್ತಾ.
"ನೀವು ಇವನ ಜೊತೆ ಬರೋಕ್ಕ್ ಯಾಕ್ ಹೋದರಿ ?? ಇವನು ಯಾವಗಲೂ ಹಿ೦ಗೆ.. ಆವತ್ತು ಹ೦ಗೆ ಮಾಡಿದ್ದಾ".
ಎ೦ದು ಕೈ ತೋರಿಸಿ ಬೈದರು.

ಅ೦ತವರ ಕೈಯಲ್ಲಿ ಮತ್ತು ಬಾಯಲ್ಲಿ ಬೈಗಳನ್ನು ತಿನ್ನಿಸಿಕೊಳ್ಳಬೇಕಾದರೆ,ಇಸ್ಮೇಲ್ ನಿಜವಾಗಲೂ ಪುಣ್ಯವ೦ತ ಮತ್ತು ಭಾಗ್ಯವ೦ತ.

ನಾವು ಏಷ್ಟ್ತೇ 'ಬೇಡಾ ಸಾರ್ !' ಅ೦ದರು .. ಡೈನಿ೦ಗ್ ರೂಮಿಗೆ ಎಳೆದು ಕೊ೦ಡು ಹೋದರು. ಕೋಸ೦ಬರಿ ಜೊತೆ ಪುಳಿಯೊಗರೆ ಅನ್ಸತ್ತೆ ತಿ೦ದಿದ್ದು. ನಾನು ಆಷ್ಟು ತಿನ್ನಲ್ಲಿಲ್ಲ. ಹೊಟ್ಟೆ ತು೦ಬಿತು. ಆದರೆ ಈ ಇಸ್ಮೇಲ್ ಮಾಹಾಶಯ ತಟ್ಟೆಯನ್ನೂ ಸ್ಪೋನಿನಿ೦ದ ತಿನ್ನುವ೦ತೆ ಕ೦ಡ. ಅಲ್ಲಿ ಚರ್ಚೆ ಸಿನಿಮಾದತ್ತ ಸಾಗಿತು.ಗಿರೀಶ್ ಕಾಸರವಳ್ಳಿಯವರನ್ನು ನೆನಪಿಸಿಕೊಳ್ಳುತ್ತಾ.."ತು೦ಬಾ Proffessional.. ಆದರೆ sense of humour ಇಲ್ಲವೇ ಇಲ್ಲಾ". ಅಷ್ಟು ಹೊತ್ತಿಗೆ ಮಳೆಯು ಜೋರಾಗಿ ಬಿದ್ದು ಅಲೀ..ಕಲ್ಲುಗಳು 'ಠಪ ಠಪ'
ಶಬ್ದದ ಆರ್ಭಟ ಪ್ರಾರ೦ಭ ಮಾಡಿದವು . ಹೆಗ್ಗಡತಿ ಸಿನಿಮಾದಲ್ಲಿ 'ಮಲೆನಾಡಿನ ಮಳೆಯ scene' ಇಲ್ಲದಿರುವ ಬಗ್ಗೆ ಬೇಸರ ವ್ಯಕ್ತ ಪಡಿಸಿದರು.

ಊಟ ಮುಗಿದ ನ೦ತರ ಅವರ "ಹೆಜ್ಜೆ ಮೂಡದ ಹಾದಿ" ಪುಸ್ತಕದಲ್ಲಿ ಬರುವ (ಹಾರುವ) ಪಕ್ಷಿಗಳನ್ನು ಹುಡುಕಿಕೊ೦ಡು ಹೊರಟೆ. ದೊಡ್ಡದೊ೦ದು ಮರಕುಟುಕ ಕಾಣಿಸಿತು.ದೂರದಲ್ಲಿ ನವಿಲೊ೦ದರ ದನಿಯು ಕಿವಿಗೆ ಹಿತವನ್ನು ಉ೦ಟು ಮಾಡಿತು.ಆದರೆ ನವಿಲು ಕಣ್ಣೆಗೆ ಕಾಣಲಿಲ್ಲಾ. ಉತ್ತಮ ಸಾಹಿತಿಗಳು ಈ ನವಿಲಿನ೦ತೆ, ತಮ್ಮ ಕಲೆಯ ಚೆಲುವಿನ ರಹಸ್ಯವನ್ನು ತೋರಿಸದೆ ಕೇವಲ ತಮ್ಮ ಸೊಗಸಾದ ದನಿಯಲ್ಲಿ ಹಾಡಿ ಲೋಕವನ್ನು ನಲಿಸುತ್ತಾರೆ. ನಲಿಸಿ ಯಾರಿಗೂ ಕಾಣದ೦ತೆ ಹಾರಿ ಹೋಗುತ್ತಾರೆ.

ಆವತ್ತು ಅಲ್ಲಿಯೆ ಬಿಡಾರ ಹೂಡ ಬೇಕು ಅನ್ನಿಸಿತು.ನಾಡಿಗ್ ಹೇಗಿದ್ದರೂ ಅವರ ಕ೦ಪ್ಯೂಟರ್ upgradation ಗೆ ಬರಬೇಕು ಕೆಲಸ ವಿದೆ..ಮತ್ತೊಮ್ಮೆ ಕರೆದುಕ್ಕೊ೦ಡು ಬರುತ್ತೇನೆ "ಬಾ ಮಹಾರಾಯ". ಅವರ paintings ಕೂಡ ನೋಡಬಹುದು ಅ೦ದ್ಕೊ೦ಡು
ಬ೦ದದ್ದು. ಆದೆರೆ ಇ೦ದು ಅವರೆ ಮುಖಪುಟದ ಚಿತ್ರವಾಗಿದುವುದು ಅತ್ಯ೦ತ ದು:ಖಕರವಾದ ಸ೦ಗತಿ.

ಕಾರ್ ಹತ್ತಿಸುವಾಗ ಅವರ ಕೊನೆಯ ಮಾತು.."ಬರೀ ಮಾತಾಡಿದರೆ ಸಾಲದು... Action is important."
"ಮೊದಲು ಮಾಡಿ ಆಮೇಲೆ ಮಾತಾಡಿ" ಎ೦ದವರಿ೦ದು ಮಾತಾಡದವರಾಗಿದ್ದಾರೆ. ಆದರೆ ಅವರ ಬರವಣಿಗೆ ನಮ್ಮೊ೦ದಿಗೆ ಸತತವಾಗಿ ಬದುಕಿನುದ್ದಕ್ಕೂ ಮಾತಾಡಿ ಸ್ಪೂರ್ತಿಯ ಧಾರೆಯನ್ನು ಹರಿಸುತ್ತಿರುತ್ತದೆ. ಮಲೆನಾಡಿನ ಘಟ್ಟಗಳನ್ನು ದಾಟಿ ಈ ಲೋಕವನ್ನು ಮೀರಿದ ವ್ಯಕ್ತಿತ್ತ್ವ ಅವರದು. ನಾನು ಅವರ "ಆತ್ಮಕ್ಕೆ ಶಾ೦ತಿ" ಸಿಗಲಿ ಅನ್ನುವ ರಾಜಕಾರಣಿಗಳ ಮಾತನ್ನು ಹೇಳೋಲ್ಲಾ. ಆದರೆ ನಮ್ಮ ಆತ್ಮಕ್ಕೆ ಅವರ ಬಾಳಿನಿ೦ದ, ಅವರ ಕೆಲಸದಿ೦ದ ಮತ್ತು ಬರವಣಿಗೆಯಿ೦ದ ಹೊಸ ಚೇತನವು ಸಿಗುವ೦ತಾದರೆ ನಮ್ಮ ಬಾಳಿಗೊ೦ದು ಅರ್ಥವಿದೆ .