ಹೆಜ್ಜೇನು ಕಡಿತ ; ಆಸ್ಪತ್ರೆ ಓಡಾಟ ! (ಭಾಗ 1)

ಅದು 2020 ಮಾರ್ಚ್ ಹದಿನೈದು - ಹದಿನಾರು.... ವಾಟ್ಸಾಪ್, ಫೇಸ್ಬುಕ್ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಕೊರೊನಾ ವೈರಸ್ ಬಗ್ಗೆ ಚಿತ್ರಣಗಳು ರಾರಾಜಿಸುತ್ತಿದ್ದವು. ಚೀನಾದ ಹಲವು ನಗರಗಳು ಮತ್ತು ಬೇರೆ ಯಾವುದೋ ದೇಶಗಳಲ್ಲಿ ನಿತ್ಯ ವ್ಯವಹಾರದಲ್ಲಿದ್ದ ಜನರು ಏಕಾಏಕಿ ಯಾವ ಸ್ಥಿತಿಯಲ್ಲಿರುವರೋ ಅದೇ ಸ್ಥಿತಿಯಲ್ಲಿ ಜನರು ಗಂಡು ಹೆಣ್ಣು ಅಬಾಲ ವೃದ್ಧರವರೆಗೆ ರಸ್ತೆ ಮನೆ ಮಾರುಕಟ್ಟೆ ಹಾಗೆ ಎಲ್ಲೆಂದರಲ್ಲೆ ಕುಸಿದ್ದು ಬಿದ್ದು ಹುಳುಗಳಂತೆ ಒದ್ದಾಡಿ ಒದ್ದಾಡಿ ಅಕಾಲಿಕ ಸಾವಿಗೀಡಾಗುತ್ತಿರುವ ಭಯಾನಕ ವೀಡಿಯೋಗಳು..! ನೋಡಿದರೆ ಎದೆ ಝಲ್ಲೆಂದು ಇಡೀ ಮನುಕುಲವೇ ಕೆಲವೇ ಘಂಟೆ, ದಿನಗಳಲ್ಲಿ ಸಾಂಕ್ರಾಮಿಕ ರೋಗದಿಂದ ನಾಶವಾಗುವುದಾ...? ಪ್ರಪಂಚವೇ ಬೆಚ್ಚಿಬಿದ್ದು ತಲ್ಲಣಗೊಂಡ ದಿನಗಳು. ಗಾಸಿಪ್ ಗಾಳಿಸುದ್ದಿಗಳು ಇನ್ನೂ ವ್ಯಾಪಕವಾಗಿ ಹರಡಿ ಬದುಕಿದ್ದವರಿಗೆ ಕೊರೋನಾದ ನಡುಕ ಶುರುವಾಗಿ ಲೋ ಬೀಪಿ - ಹೈ ಬೀಪಿ ಆಗಿ ಪ್ರತಿಯೊಬ್ಬರ ಪರಿಚಯದ ಒಂದಿಬ್ಬರು ಹಠಾತ್ತನೇ ಇದ್ದಕ್ಕಿಂದ್ದಂತೆ ಸಾವೀಗೀಡಾದುದು ಇನ್ನೂ ಭಯ ಜನರಲ್ಲಿ ಹೆಚ್ಚಾಯಿತು. ಎಲ್ಲರೂ ಒಂದು ರೀತಿಯ ಸಾವಿನ ಭಯದಿಂದ ತತ್ತರಿಸಿದ ದಿನಗಳು. ಬಹುಶಃ ಈ ವೀಡಿಯೋಗಳು ಮತ್ತು ಸ್ಪಷ್ಟತೆಯಿಲ್ಲದ ಕೊರೋನಾ ರೋಗದ ಲಕ್ಷಣಗಳು ಜನರನ್ನು ಭಯಪಡಿಸಿದಷ್ಟು ಬೇರೆ ಯಾವ ಸಂಗತಿಗಳು ಭಯಪಡಿಸಲಿಲ್ಲ. ತೊಂಭತ್ತರ ದಶಕದಲ್ಲೂ ಪ್ರಳಯ ಆಗುತ್ತೆ ಅಂದಾಗಲೂ ಈ ಮಟ್ಟಿನ ಭಯ ಆಗಿರಲಿಲ್ಲ. ಅದಾಗಲೇ ಅಧಿಕೃತ ವಾಗಿ ಭಾರತದಲ್ಲಿ ಕೊರೋನ ವೈರಸ್ ಹರಡಿ ಕೊರೋನಾ ವೈರಸ್ ನಿಂದಲೇ ಸಂಭವಿಸುತ್ತಿದ್ದ ಸಾವಿನ ಸರಣಿ ಮುಂದುವರೆದಿತ್ತು.
ದೇಶಾದ್ಯಂತ ಸಾಂಕ್ರಾಮಿಕ ಕಟ್ಟೆಚ್ಚರ ವಹಿಸಿ ಆರೋಗ್ಯ ನಿಯಮಾವಳಿಗಳನ್ನು ರೂಪಿಸಲಾಗಿತ್ತು. ಇತ್ತ ನಾವು ಕನಸಿನ ಮನೆಯೊಂದನ್ನು ಕೊಳ್ಳಲು ನಮ್ಮ ಜೀವನದಲ್ಲಿ ಬದುಕಿನ ಬಹುದೊಡ್ಡ ವ್ಯವಹಾರವೊಂದನ್ನು ಮಾಡಿಕೊಂಡು ಹತ್ತು ಲಕ್ಷಗಳನ್ನು ಅಡ್ವಾನ್ಸ್ ಕೊಟ್ಟಿದ್ದೆವು. ಈ ಕೊರೋನಾ ಮಧ್ಯೆ ಈ ವ್ಯವಹಾರ ಏನಾಗುವುದೋ ಏನೋ ಎಂಬ ಆತಂಕ! ಆಸ್ತಿಯ ರಿಜಿಸ್ಟರ್ ಮಾಡಿಸಲು ಸಬ್ ರಿಜಿಸ್ಟರ್ ಕಚೇರಿಗೆ ದಿನಾಲು ಎಡತಾಕಿದರೆ ರಿಜಿಸ್ಟ್ರಾರ್ ಕಛೇರಿಯಲ್ಲಿ ಆಗುತ್ತಿರುವ ಅವ್ಯವಹಾರಗಳನ್ನು, ಆಸ್ತಿ ದಾಖಲೆಗಳಲ್ಲಿ ಆಗುತ್ತಿರುವ ವ್ಯಾಪಕ ಮೋಸಗಳನ್ನು ತಡೆಗಟ್ಟಲು ಬಳಸುತ್ತಿರುವ ''ಕಾವೇರಿ' ತಂತ್ರಾಂಶದ update ಗಾಗಿ ಒಂದೆರಡು ವಾರಗಳು ತಡವಾಯಿತು. ಪ್ರಾಯೋಗಿಕವಾಗಿ ದಿನಕ್ಕೆ ಲಿಮಿಟ್ ಆಗಿ ರಿಜಿಸ್ಟರ್ ಮಾಡುವ ಕಾರ್ಯ ಆರಂಭವಾಯಿತು. ಅದ್ಯಾರೋ ಪೇಪರ್ ರೈಟರ್ ಗಳ ಕರಾಮತ್ತಿನಿಂದ ಮಾರ್ಚ್ ೨೦ ಕ್ಕೆ ನಮ್ಮ ಆಸ್ತಿಯ ನೊಂದಣಿಗೆ ದಿನಾಂಕ ಗೊತ್ತು ಮಾಡಿದರು.
ಐದು ವರ್ಷದ ಮಗಳೊಂದಿಗೆ ಹತ್ತೇ ಹತ್ತು ನಿಮಿಷದ ರಿಜಿಸ್ಟರ್ ಕೆಲಸಕ್ಕೆ ಉರಿ ಬಿಸಿಲಲ್ಲಿ ಈಗ ಆಗುವುದು.... ಆಗ ಆಗುವುದು... ಆಗಿಯೇ ಬಿಡ್ತು.. ಎಂದು ಹೊಟ್ಟೆ ಹಸಿವಾದರೂ ಹತ್ತು ನಿಮಿಷ 'Register' ಆದರೆ ನೆಮ್ಮದಿಯಿಂದ ಆಸ್ತಿ ನಮ್ಮ ಹೆಸರಿಗೆ ನೊಂದಣಿಯಾದ ಖುಷಿಗೆ ಹೋಳಿಗೆ ಊಟವನ್ನೇ ಸವಿಯೋಣವೆಂದು ಕೊನೆಗೆ ದಿನವಿಡೀ ನೀರು ಊಟ ಇಲ್ಲದೇ ರಿಜಿಸ್ಟರ್ ಕೆಲಸಕ್ಕೆ ಕಾಯುವಂತಾಯಿತು. ಕೊನೆಗೆ ಅಂದು ಸಂಜೆ SOFTWARE Close ಆದುದರಿಂದ ಬಾಯಿ ಮುಚ್ಚಿಕೊಂಡು ಅಂದು ದಿನವಿಡೀ ಊಟ ನೀರಿಲ್ಲದೇ ಉಪವಾಸಕ್ಕೆ ಅರ್ಥ ಬಾರದೇ ವಿಧಿಯಿಲ್ಲದೆ ನಾನು ಕುಮುದಾ ಮಗಳು ಬೈಕ್ ಹತ್ತಿ ಕೊರೊನಾ, ಬಿಸಿಲು ಸಾಪ್ಟ್ವೇರ್, ಆ ಪೇಪರ್ ರೈಟರ್, ಈ ಬಳ್ಳಾರಿ ಜನ... ಹಾಗೆ ಹೀಗೆ ಅಂತ ಇಡೀ ವ್ಯವಸ್ಥೆಯನ್ನು ಬಹಳ ಕಟುವಾಗಿ ಶಪಿಸುತ್ತಾ ಮನೆ ಕಡೆ ಹೋಗಲು ಸಿದ್ಧವಾದೆವು. ರಿಜಿಸ್ಟರ್ ಆಫೀಸಲ್ಲೇ ಏಳು ಗಂಟೆಯಾಗಿತ್ತು. ದಿನವೆಲ್ಲಾ ಉಪವಾಸ ಇದ್ದುದರಿಂದ ಕುಮುದಾಳಿಗಾಗಲೀ ನನಗಾಗಲಿ, ಮೇಲಾಗಿ ಲಕ್ಷಾಂತರ ವ್ಯವಹಾರದ 'ನೊಂದಣಿಯ' ವಿಷಯವಾಗಿ ಆದ ಟೆನ್ಶನ್ ನಿಂದ ಮನೆಗ್ ಹೋಗಿ ಅಡುಗೆ ಮಾಡುವ ಸಮಾಧಾನ ಇಬ್ಬರಿಗೂ ಇಲ್ಲದಿದ್ದರಿಂದ ಹೋಗುವ ಹಾದಿಯಲ್ಲೇ ಏನಾದರೂ 'ಪಾರ್ಸೆಲ್' ತೆಗೆದುಕೊಂಡು ಹೋಗಬೇಕೆಂದು ನಿರ್ಧರಿಸಿ ಬೈಕನ್ನು ಕೌಲ್ ಬಜಾರ್ ಕಡೆಗೆ ತಿರುಗಿಸಿ ಪ್ರಸಿದ್ದ ಪಾಸ್ಟ್ ಪುಡ್ ಹೋಟೆಲ್ ಒಂದರಿಂದ ಊಟವನ್ನು ಕಟ್ಟಿಸಿಕೊಂಡು ಬೈಕಿನ ಬ್ಯಾಗಿಗೆ ಹಾಕಿಕೊಂಡೆವು.
ಅಂದು ಬೆಳಿಗ್ಗೆಯಿಂದ ಒಳ್ಳೆಯ ಕೆಲಸಕ್ಕೆ ಹೋಗುತ್ತಿದ್ದೀವಿ... ಗಣೇಶ ದೇವಸ್ಥಾನ ಕ್ಕೆ ಹೋಗಬೇಕಿತ್ತು ಎಂದು ಕುಮುದಾ ಗೊಣಗುತ್ತಿದ್ದಳು. ನಾಸ್ತಿಕನಾದ ನಾನು ಆಸ್ತಿಯ ನೋಂದಣಿ ದಿನವೂ ದೇವಸ್ಥಾನಕ್ಕೆ ಹೋಗಲು ಸಮ್ಮತಿಸಲಿಲ್ಲ. ಆಗೂ ಹೀಗೂ ಹೋಗುತ್ತಿದ್ದೇನೇನೋ ಆದರೆ ಮನೆಯಲ್ಲಿ ಇರುವಾಗಲೇ ಆ writer ಬೇಗ ಬನ್ನಿ ಎಂದು ಕರೆ ಮಾಡಿದುದರಿಂದ ದೇವಸ್ಥಾನ ಗಣೇಶ ಎನ್ನದೇ ರಿಜಿಸ್ಟರ್ ಕಚೇರಿಗೆ ಓಡಿ ಹೊಗಿದ್ದೆವು. ಆದರೆ ಇಂದಿನ ಕೆಲಸವೂ ಆಗದೇ ಇದ್ದುದ್ದರಿಂದ ಈಗಲಾದರೂ ದೇವಸ್ಥಾನಕ್ಕೆ ಹೋಗಿ ಹೋಗಾಣ ಎಂಬ ಬೇಡಿಕೆಗೆ ಆ ದಿನವೆಲ್ಲವೂ ಪೇಚಾಡಿಯೂ ಕೆಲಸ ಆಗದೇ ಇರುವ ಅಸಮಾಧಾನ ಕ್ಕೆ 'ಆಯ್ತು ಬಾ... ಆದರೆ ನನ್ನ ಬಲವಂತ ಮಾಡೋ ಹಾಗೆ ಇಲ್ಲ' ಎಂದು ಹೇಳಿ ಬರುತ್ತಿದ್ದೆವು. ಬೆಳಗಲ್ ಕ್ರಾಸ್ ಮುಂದೆ ಬರುತ್ತಾ ಇದ್ದಾಗ ಜನನಿಬಿಡ ರಸ್ತೆಯಲ್ಲೇ ರೋಡ್ Divider ನಿಂದ ಎತ್ತಲೂ ಸರಿಯಲಾಗದೇ, ಹಾರಲಾಗದೇ 500 ರೂಪಾಯಿಯ ನೋಟೊಂದು ವಾಹನಗಳು ಹಾದುಹೋದ ರಭಸಕ್ಕೆ ಸರಿದಾಡುತ್ತಾ ಇತ್ತು. ಬೈಕನ್ನು ಸ್ಲೋ ಮಾಡುತ್ತಾ "ಕುಮುದಾ ಮುಂದೆ 500 ನೋಟು ಬಿದ್ದಿದೆ. ಇಳಿದು ತೆಗಿದುಕೊ" ಎಂದೆ. ನಾನು ರಸ್ತೆಯ ಮಧ್ಯದಲ್ಲಿ ಬೈಕ್ ನಿಲ್ಲಿಸಿದ್ದಕ್ಕೆ ಹಿಂದಿನ ವಾಹನಗಳು ಹಾರನ್ ಮಾಡುತ್ತಿದ್ದರೂ ರಸ್ತೆಯಲ್ಲಿ ಬಿದ್ದಿದ್ದ ಐನೂರು ರುಪಾಯಿ ಬಿಟ್ಟು ಹೋಗಲಾದೀತೇ? ಕುಮುದಾ ಇಳಿದು ತೆಗೆದುಕೊಂಡು ಯಾರದ್ದೋ ಏನೂ ಎಂದು ನಗುಮುಖದಿಂದ ನನ್ನ ಕೈಗಿತ್ತಳು. ನಾನು ಆ ನೋಟನ್ನು ಕೈಯಲ್ಲಿ ಹಿಡಿದುಕೊಳ್ಳುವುದಕ್ಕೂ ಇನ್ನೊಬ್ಬ ಅನಾಮಿಕ ವ್ಯಕ್ತಿಯಾರೋ ಆ ನೋಟು ನನ್ನದೆಂದು, ನನ್ನ ಜೇಬಿನಿಂದಲೇ ಬಿದ್ದಿತೆಂದು, ಆಟೋ ನಿಲ್ಲಿಸಿ ಬರುವ ಅಷ್ಟೊತ್ತಿಗೆ ನೀವು ಈ ನೋಟನ್ನು ನೋಡಿ ತೆಗೆದುಕೊಂಡಿರೆಂದು ವಾದ ಮಂಡಿಸಿದ. ಪ್ರತಿಯಾಗಿ ನಾನು ನನ್ನದಲ್ಲದ ದುಡ್ಡಿಗಾಗಿ ವಾದ ಮಂಡಿಸಲು ನನ್ನ ಬಳಿ ಏನೂ ಇಲ್ಲದೇ ಕೆಲವೇ ಸೆಕೆಂಡ್ ಹಿಡಿದ ನೋಟು ನನ್ನ ಕೈಯಿಂದ ಅವನ ಕೈಗೆ ಜಾರಿತು. ಬಹುಶಃ ಈ ಐನೂರು ರೂಪಾಯಿ ಸಿಕ್ಕಿದ್ದರೇ ಆ ಖುಷಿ ಆ ದಿನವಿಡೀ ಊಟ ನೀರಿಲ್ಲದೇ ರಿಜಿಸ್ಟರ್ ಕಚೇರಿಯ ಮುಂದೆ ಕಾದಿದ್ದು, ಅಲೆದಾಡಿದ್ದು ಆ ನೋವಿನ ತೀವ್ರತೆಯನ್ನು ಕಡಿಮೆ ಮಾಡುತ್ತಿತ್ತೇನೋ...?? ಆದರೆ ಅದೂ ಕೈಗೆ ಬಂದದ್ದು ಜೇಬಿಗೆ ಬರದೇ ಪರರ ಕೈಗೆ ಹೋಯಿತು.
"ಯಾಕೋ ನಮ್ ಟೈಮ್ ಇನ್ನೂ ಪಕ್ಕ ಕೂಡಿ ಬರುತ್ತಿಲ್ಲ ಕಣ್ರಿ..." ಇಷ್ಟು ದಿನ ಕೆಲವು ಸಂಬಂಧಿಕರು, ಸ್ನೇಹಿತರ ಬಳಿ ಹಣಕಾಸಿನ ಹೊಂದಾಣಿಕೆಯನ್ನು ಮಾಡುತ್ತಿದ್ದಾಗ ಇನ್ನೇನು ಅಕೌಂಟಿಗೆ ಹಣ ಬಿತ್ತು ಬಿತ್ತು ಅನ್ನುತ್ತಲೇ ನಿರೀಕ್ಷಿಸಿದ ಎಲ್ಲವೂ ಇಲ್ಲವಾದವು. ಹತ್ತಾರು ಭರವಸೆಗಳೆಲ್ಲವೂ ಬರಿದಾಗಿ ಉಳಿದದ್ದು ಒಂದೆರಡು. ಇಂದು ದಿನವಿಡೀ ಸಬ್ ರಿಜಿಸ್ಟರ್ ಆಪೀಸ್ನಲ್ಲಿ ಕಾದರೂ ಕೆಲಸವಾಗಲಿಲ್ಲ... ಈಗ ಐದುನೂರು ಕೈಗೆ ಸಿಕ್ಕಿದ್ದರೂ ನಮ್ಮದಾಗಲಿಲ್ಲ... ಎನ್ನುತ್ತಾ ಇದ್ದಳು.
ಕುಮುದಾ... ಹಣಕಾಸಿನ ವ್ಯವಹಾರ - ವಿಚಾರವೇ ಹಾಗೆ.. ನಮ್ಮದು.. ನನ್ನದು.. ಬರತ್ತೆ ಅನಿಸುವುದು ಆದರೆ ಅದು ಬರಲ್ಲ. ಏನೇನೋ ಭರವಸೆಗಳಲ್ಲಿ ಮಾತಿನಬಲೆಯೇ ಕಟ್ಟಿ ಬಹಳಷ್ಟು ಸಂದರ್ಭಗಳಲ್ಲಿ ಭ್ರಮೆಯೇ ಆಗಿರುತ್ತದೆ. ಅದು ನಮ್ಮದಾಗಲೂ ಪವಾಡವೇ ಆಗಬೇಕು. ಆಗುವ ಕಾಲಕ್ಕೆ ಒದಗುವುದು.
(ಇನ್ನೂ ಇದೆ)
-ನಾಗೇಂದ್ರ ಬಂಜಗೆರೆ, ಬಳ್ಳಾರಿ
ಸಾಂದರ್ಭಿಕ ಚಿತ್ರ ಕೃಪೆ: ಇಂಟರ್ನೆಟ್ ತಾಣ