ಹೆಣ್ಣವಳು
ಹೆರುವ ಮೊದಲೇ ಶಾಪವನಿತ್ತಿರಿ
ಹುಟ್ಟುವಾಗ ಮೊಗವ ತಿರುವಿದಿರಿ
'ಅದು' ಎನಗೆ ಬೇಡ ಎಂದಿರಲ್ಲಾ..?
ಹೆತ್ತವಳೂ ಹೆಣ್ಣು ಎಂಬುದ ಮರೆತಿರಾ...
ಬದುಕಲು ಬಿಡಿ 'ಹೆಣ್ಣವಳು'.
ಬೆಳೆದು ಅರಳಬೇಕಾದ ಹೂವವಳು
ಮೊದಲೇ ಕಿವುಚಿ ಬಿಟ್ಟಿರಲ್ಲಾ..?
ಬೆಳೆದು ಸೇರಲಿ ಪುಣ್ಯ ಪಾದಕೆ
ತಾನಂತೆ ಬಾಡಲಿ ಬಿಡಿ
ಇರುವಂತೆ ಇರಲು ಬಿಡಿ 'ಹೆಣ್ಣವಳು'.
ಗರ್ಭದಲೂ ಬಿಡಲಿಲ್ಲ,ಮುಪ್ಪಿನಲೂ
ಬಿಡಲಿಲ್ಲ ಒದೆದು ಬಿಟ್ಟಿರಲ್ಲಾ..?
ಬೆಳೆದ ದಿನದಲ್ಲೂ ನೋವ ಕಂಡಳಲ್ಲಾ
ಗಂಡನ ಕಳೆದ ಕ್ಷಣಕೆ
ವಿಧವೆಯಾದಳು ಮನೆಗೆ; ಕೊನೆಗೆ...!
ಕಷ್ಟವಾದಳು ಇಳೆಗೆ,
ಖುಷಿಯ ಹಂಚಿ ಬದುಕಲು ಬಿಡಿ 'ಹೆಣ್ಣವಳು'.
ಹೆಣ್ಣೆಂಬ ಕಾರಣಕೆ ಬಂಧಿಖಾನೆಯಾಗಿದೆ
ಮನೆಯು, ಹಾರಲು ಬಿಡದಿರೆ
ಆಕಾಶವನ್ನ ಮುಟ್ಟವಳಾದರೆ ಹೇಗೆ.. ಆಕೆ...!?
ತಾಯಿಯ ಮಗಳಾಗಿ ತನಗೂ ತಾಯಿಯಾಗಿ
ಯೌವ್ವನದ ಪಯಣದಲಿ ಜೊತೆಯಾದಳಲ್ಲಾ...?
ಲೋಕ ಜನನಿಯವಳು 'ಹೆಣ್ಣವಳು'.
ಹುಟ್ಟುವಾಗ ಅಳುತ ಹುಟ್ಟಿದೆ,ತಾನೂ ಅತ್ತಳು
ಆನಂದದಿ, ಹೆರಿಗೆ ಬೇನೆಯ ಮರೆತು.
ಭವಿಷ್ಯದಲಿ ಕುವರಿಯಾದರೆ...!
ಹಾರಲು ಬಿಡು ಆಕಾಶವನ್ನೇ ಮುಟ್ಟುವಳು
ಜನ್ಮದಾತೆಯವಳು 'ಹೆಣ್ಣವಳು'.
-ಆಕಾಶ್, ಪುಂಜಾಲಕಟ್ಟೆ ದ.ಕ.
ಚಿತ್ರ ಕೃಪೆ: ಇಂಟರ್ನೆಟ್ ತಾಣ