ಹೆಣ್ಣಿಗೆ ಹಟವಿರಬಾರದು, ಗಂಡಿಗೆ ಚಟವಿರಬಾರದು

ಹೆಣ್ಣಿಗೆ ಹಟವಿರಬಾರದು, ಗಂಡಿಗೆ ಚಟವಿರಬಾರದು

ಖಂಡಿತಾ ನೂರಕ್ಕೆ ನೂರು ಸತ್ಯವಾದ ಮಾತಿದು. ಯಾವ ಮನೆಯಲ್ಲಿ ಹೆಣ್ಣು ಹಟವಾದಿಯಾಗಿರುವಳೋ ಆ ಮನೆ ಸ್ಮಶಾನ ಸದೃಶ. ದಿನನಿತ್ಯ ವೈಮನಸ್ಸು, ಜಗಳ, ನೆಮ್ಮದಿ ಕನಸಿನ ಮಾತು. ಗಂಡ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಲಾರಳು. ಹಿರಿಯರ ಬಗ್ಗೆ ಸದಾ ಅಸಡ್ಡೆ. ತಾನು ಹೇಳಿದ್ದೇ ಆಗಬೇಕೆಂದು 'ಛಲದಂಕ ಮಲ್ಲ ರಾವಣನ ಹಾಗೆ, ಹಠ ಸ್ವಭಾವದ ಕೌರವನ ಹಾಗೆ ವರ್ತನೆ ಆಕೆಯದು. ಮನೆಯ ವಾತಾವರಣ ಬೂದಿ ಮುಚ್ಚಿದ ಕೆಂಡದಂತೆ.

ಹೆಣ್ಣು ಹಟದಿಂದ ಹೆಣವಾಗಿ ಹೋದ ಎಷ್ಟೋ ಉದಾಹರಣೆಗಳನ್ನು ಪುರಾಣ ಕಾಲದಿಂದ ಪ್ರಸಕ್ತವರೆಗೂ ನೋಡುತ್ತಿದ್ದೇವೆ, ಓದುತ್ತಿದ್ದೇವೆ. ಕುಟುಂಬಗಳೇ ಸರ್ವನಾಶವಾದ್ದೂ ಇದೆ. ಹೊಂದಾಣಿಕೆಯ ಕೊರತೆ ಅಲ್ಲಿ ಕಾಣಬಹುದು. ಎಷ್ಟೆಷ್ಟೋ ಪೌರಾಣಿಕ ಕಥೆಗಳೇ ಹುಟ್ಟಿಕೊಂಡಿವೆ ಈ ಹಟದಿಂದ. ಬಹುಶ: ಈ ಮತ್ಸರ, ಹೊಟ್ಟೆಕಿಚ್ಚು, ಹಟ ಅಣ್ಣತಮ್ಮಂದಿರಬಹುದು ಅನಿಸುವುದುಂಟು. ಆ ಎರಡು ಪದಗಳು ಮನೆಮಾಡಿದಲ್ಲಿಗೆ ಹಟ ಹೇಳದೆ ಕೇಳದೆ ಬರುತ್ತದೆ. ಮನೆ ಮುರಿಯುವ, ಮನಸ್ಸನ್ನು ಹಾಳು ಮಾಡುವ ಹಟವನ್ನು ಸುಟ್ಟು ಹಾಕೋಣ ಸಹೋದರಿಯರೇ.

ಗಂಡಿನ ಚಟದಿಂದ ಬದುಕು ಮೂರಾಬಟ್ಟೆ. ಬೀದಿಗೆ ಬೀಳುವುದಂತೂ ಗ್ಯಾರಂಟಿ. ಒಮ್ಮೆ ಅಭ್ಯಾಸವಾದರೆ ಅದೇ ಚಟವಾಗಿ ಅಂಟಿಕೊಳ್ತದೆ. ಮತ್ತೆ ಆತ ಇದ್ದರೂ ಜೀವಂತ ಶವದಂತೆ. ಎಲುಬಿನ ಹಂದರವಾದ ಸಹೋದರರನ್ನು ನೋಡಿದ್ದೇನೆ. ಆ ಹೆತ್ತವರ, ಹೆಂಡತಿಯ ಕಣ್ಣೀರು ನೋಡಿದಾಗ ಕರುಳೇ ಕತ್ತರಿಸ್ತದೆ. ಹೆಣ್ಣು, ಹೊನ್ನು, ಮಣ್ಣು, ಜೂಜು, ಕುಡಿತ, ಮಾದಕ ವಸ್ತುಗಳ ಸೇವನೆ, ಬೇಗನೆ ಹಣ ಮಾಡಬೇಕೆಂಬ ಬಯಕೆ ಇದೆಲ್ಲ ಮೊದಮೊದಲು ಅರಿವಾಗದು. ಅನಂತರ ಚಟವೇ ಆಗಿಬಿಡ್ತದೆ. ಯಾರ ಮಾತಿಗೂ ಸೊಪ್ಪು ಹಾಕದ, ಬಗ್ಗದ ವ್ಯಕ್ತಿಯಾಗುವನು. ನಮ್ಮ ಕಣ್ಣೆದುರೇ ಎಷ್ಟೊಂದು ಸಂಸಾರಗಳು ಹಾಳಾದ್ದಿದೆ.

ಮಾಧ್ಯಮಗಳಲ್ಲಿ ಈ 'ಹಟ-ಚಟ' ದಿಂದಾಗಿ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡವರನ್ನು ನೋಡಿದ್ದೇವೆ. ಮೊನ್ನೆ ಮೊನ್ನೆ ಓರ್ವ ಸಹೋದರ ಹಣ ಡಬ್ಬಲ್ ಮಾಡುವ ಚಟಕ್ಕೆ ಬಿದ್ದು ಜೀವಕ್ಕೆ ಇತಿಶ್ರೀ ಹಾಡಿದ್ದಾನೆ. ಅಯ್ಯೋ ಆ ಪುಟ್ಟ ಮಕ್ಕಳು, ವೃದ್ಧ ಹೆತ್ತವರ, ಪತ್ನಿಯ ಗತಿಯೇನು? ಐಷಾರಾಮಿ ಬದುಕಿನ ಆಸೆ ಯಾಕೆ? 'ಹಾಸಿಗೆಯಿದ್ದಷ್ಟೇ ಕಾಲು ಚಾಚಬಾರದೇ?'

ಹೆಣ್ಣು ಗಂಡು ಇಬ್ಬರೂ ಇತ್ತೀಚೆಗೆ ಮೊಬೈಲ್ ದಾಸರಾಗಿರುವುದು ಸ್ಪಷ್ಟ. ಕೆಲವು ಜನವಂತೂ ರಾತ್ರಿಯಿಡೀ ಚಾಟ್ ಮಾಡುವುದು, ಮೆಸೇಜ್ ಚಟಕ್ಕೆ ಒಳಗಾಗಿ ಆಸ್ಪತ್ರೆಯ ದಾರಿ ಹಿಡಿದಿರುವುದೂ ಇದೆ. ಭಗವಂತನಿತ್ತ ಈ ಮನುಜನೆಂಬ ಜನ್ಮವನ್ನು ಇರುವುದರಲ್ಲಿಯೇ ಬಾಳಿ ಬದುಕಿ ಸಾರ್ಥಕ ಪಡಿಸಿಕೊಳ್ಳೋಣ.

-ರತ್ನಾ ಕೆ.ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ