ಹೆಣ್ಣಿನ ಹೆಜ್ಜೆ

ಹೆಣ್ಣಿನ ಹೆಜ್ಜೆ

ಕವನ

ನವಮಾಸದ ಮೊದಲೇ ಎನಗೆ

ಸಾವಿನ ದಾರಿಯ ತೋರದಿರಿ

ಹುಟ್ಟದು ಜೀವಿಯ ಬದುಕೆನ್ನುವುದನು

ಹಿರಿಯರೆ ಅನುದಿನ ಅರಿಯುತಿರಿ

 

ತಾಯಿಯ ಕರುಳಿನ ಕುಡಿಯಾಗಿಹೆನು

ಹೆಣ್ಣಿನ ರೂಪದಿ ಬೆಳೆಯುತಲಿಹೆನು

ನನ್ನಯ ಹರಣವು ನಿಮಗದು ತರವೆ

ನಿಮ್ಮಯ ಜೊತೆಗೆ ಇರಲದು ಬರುವೆನು

 

ಹೆಣ್ಣಿನ ಜನುಮಕೆ ಸ್ವಾಗತ ಹೇಳಿರಿ

ಮುಂದಿನ ವಂಶಕೆ ಹೆಣ್ಣೇ ಕಾರಣ

ಕುಟುಂಬದ ಪ್ರೀತಿಗೆ ಅವಳೇ ಮೂಲ

ಹೆಣ್ಣಿನ ಹೆಜ್ಜೆಯ ನೆರಳನು ಅರಿಯಿರಿ

***

ಗಝಲ್

ಮನುಜನ ಹಸಿವನ್ನು ತಣಿಸಲು ಅನ್ನ ನೀಡುವವ ರೈತ

ಕಣಜದಿ ಬೆಳೆದ ಕಾಳುಗಳ ಒಟ್ಟಾಗಿಸಿ ತುಂಬುವವ ರೈತ  

 

ನೊಗಕೆ ಹೆಗಲು ಕೊಡಲು ಎತ್ತುಗಳು ಜೊತೆಗೆ ಇರಬೇಕಲ್ಲವೇ

ಮೊಗದ ಬೆವರ ಲೆಕ್ಕಿಸದೆ ಹಗಲಿರುಳು ದುಡಿವವ ರೈತ

 

ಇಳೆಗೆ ಕಾಲಕ್ಕೆ ಸರಿಯಾಗಿ ಮಳೆ ಸುರಿಯದಿದ್ದಾಗ ಬೇಸರಿಸುವನು 

ಫಸಲಿಗೆ ಸರಿಯಾದ ಬೆಲೆ ಸಿಗದಿದ್ದಾಗ ಅಳುವವ ರೈತ

 

ಕೆಸರು ಗದ್ದೆಯ ಕೆಲಸಗಾರರಿಂದ ಕೇಳುವ  ಓಬೇಲೆ ಚಂದ 

ಹಸಿರು ತೆನೆ ಬಾಗಿದಾಗ ನೋಡಿ ನಗುವವ ರೈತ

 

ಕಾಯಕ ಯೋಗಿಯ ತನುವಿನಾಳದ ನೋವ ಅರಿವು ರತುನಾಳಿಗಿದೆ

ದೇಹವ ದಂಡಿಸಿ ದೇಶಕ್ಕಾಗಿ ತ್ಯಾಗ ಮಾಡುವವ ರೈತ

 

-ರತ್ನಾ ಕೆ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್