ಹೆಣ್ಣು ಮಕ್ಕಳು ನಿರ್ಭಯದಿಂದ ಓಡಾಡುವಂತಿಲ್ಲವೇ?

ಹೆಣ್ಣು ಮಕ್ಕಳು ನಿರ್ಭಯದಿಂದ ಓಡಾಡುವಂತಿಲ್ಲವೇ?

Comments

Submitted by venkatb83 Tue, 01/01/2013 - 16:29

""ನನ್ನ ಪ್ರಕಾರ ಅತ್ಯಾಚಾರಕ್ಕೆ ಕಠಿಣ ಶಿಕ್ಷೆ ವಿಧಿಸ ಬೇಕು. ಅದರ ಜೊತೆಗೆ ಸಿನಿಮಾ, ಟಿವಿ ಮಾಧ್ಯಮಗಳಲ್ಲಿ ಹೆಣ್ಣನ್ನು ಒಂದು ಭೋಗದ ವಸ್ತುವನ್ನಾಗಿ ತೋರಿಸುವದನ್ನು ನಿಲ್ಲಿಸಬೇಕು. ಬಹುಶಃ ಅದೂ ಸಹ ಸಮಾಜದ ಮೇಲೆ ತನ್ನ ಕೆಟ್ಟ ಪರಿಣಾಮ ಬೀರುತ್ತಿರಬಹುದು. ಇಂತಹ ಹೀನ ಕೃತ್ಯಕ್ಕೆ ಪ್ರಚೋದಿಸುತ್ತಿರಬಹುದು""

ಇದು ನಿಜವಾಗಿಯೂ ಮನುಕುಲ ಅದರಲ್ಲೂ ನಾವ್ ನವ ಭಾರತದ -ನವ ತರುಣರು -ಹುಡುಗರು ತಲೆ ತಗ್ಗಿಸಬೇಕಾದ ವಿಚಾರ..
ಇದನ್ನು ಯಾರೋ ಮಾಡಿದ್ದರೂ ಅದ್ಕೆ ನಾವೂ ಒಂದಲ್ಲ ಒಂದು ವಿಧದಲ್ಲಿ ಕಾರಣರು ಎಂಬ ಅಪರಾಧಿ ಭಾವ ಮನದಲ್ಲಿ ಮೂಡುತಿದೆ..
ಈ ವಯಸಿನ ತರುಣರು ಅಂದು ಸ್ವಾತಂತ್ರ್ಯಕ್ಕಾಗಿ ನಗು ನಗುತ್ತ ಗಲ್ಲಿಗೇರಿದರು -ಅದು ಸ್ವಾತಂತ್ರ್ಯಕ್ಕಾಗಿ.
ಅಂದು ಅವರು ಮಾಡಿದ ತ್ಯಾಗ-ಬಲಿದಾನ-ಸಶಕ್ತ-ಸುಂದರ -ಸದೃಢ -ಭಾರತಕ್ಕಾಗಿ
ಆದರೆ ಇಂದು ಟೀ ವಿ-ಮುದ್ರಣ-ದೃಶ್ಯ ಮಾಧ್ಯಮಗಳಿಂದ ಅವುಗಳ ಕಾಮ ಪ್ರಚೋದಕ ದೃಶ್ಯಗಳು -ಕಾರ್ಯಕ್ರಮಗಳು-ಮೊಬೈಲ್ ನೆಟ್ ಕಾರಣವಾಗಿ ಹದಿಹರೆಯದವರು ಹಾದಿ ತಪ್ಪಿ ಅಡ್ಡ ದಾರಿ ಹಿಡಿದು ಮಾಡುತ್ತಿರುವ ಈ ಕೆಟ್ಟ ಕೆಲಸಗಳು ಖಂಡನೀಯ -ಅಂಥವರಿಗೆ ಅತ್ಯುಗ್ರ ಶಿಕ್ಷೆ ಕೊಡಬೇಕು..
ಈಗಿರುವ ದುರ್ಬಲ ಕಾನೂನುಗಳು-ಪ್ರಕರಣಗಳ ಆಮೆ ವೇಗದ ವಿಚಾರಣೆ -ವಿಚಾರಣ ನೆಪದಲ್ಲಿ ಹಿಂಸೆ (ಮಾನಸಿಕ)-ಕೇಸ್ ಮುಂದಕ್ಕೆ ಹಾಕುವುದು ಇತ್ಯಾದಿ ತೊಡಕುಗಳು ನಿವಾರಿಸಿ ಆತಿ ತ್ವರಿತ ನ್ಯಾಯ ಸಿಕ್ಕು ಅಪರಾಧಿಗಳಿಗೆ ಶಿಕ್ಷೆ ಆಗಬೇಕು..

ಸಹೋದರಿ ನಿರ್ಭಯ ರ ಈ ಘಟನೆಯಲ್ಲಿ ಎಲ್ಲ ಮಾಧ್ಯಮಗಳು ಸ್ವ ನಿಯಂತ್ರಣ ಹಾಕಿಕೊಂಡು ವರ್ತಿಸದ ಪರಿ ಅಭಿನಂದನಾರ್ಹ..
ಈ ಘಟನೆ ನಂತರ ಯುವ ಜನತೆಯ ವ್ಯಾಪಕ ಪ್ರತಿಭಟನೆ -ಬೀದಿಗಿಳಿದು ಪ್ರತಿಭಟಿಸಿದ ಯುವ ಜನತೆಯ ಬಗ್ಗೆ ಹೆಮ್ಮೆ ಅನಿಸುತ್ತಿದೆ..
ಆ ನಂತರವೂ ಈ ತರಹದ ಅತ್ಯಾಚಾರದ ಘಟನೆಗಳು ದಿನ ನಿತ್ಯ ನಡೆಯುತ್ತಿರುವುದು- ಅಪರಾಧಿಗಳಿಗೆ ಭಯ ಇಲ್ಲದಿರುವಿಕೆ ತೋರಿಸುತ್ತಿದೆ.ಈ ಕಾರಣಕ್ಕಾಗಿಯಾದರೂ ಈಗಿರುವ ಕಾನೂನು ತೊಡಕು ನಿವಾರಿಸಿ ಅತ್ಯುಗ್ರ ಶಿಕ್ಷೆಯನ್ನ ತ್ವರಿತವಾಗಿ ನೀಡಿ ಆ ತರಹದ ಅಪರಾಧಗಳಿಗೆ ಕಡಿವಾಣ ಹಾಕಿ ಅಪರಾಧ ಎಸಗುವವರು ಭಯ ಪಡುವ ಹಾಗೆ ಮಾಡುವ ಅವಶ್ಯಕತೆ ಇದೆ...

ಮುಂದೆಂದೂ ಈ ತರಹದ ಘಟನೆಗಳು ಮರುಕಳಿಸದಿರಲಿ ಎಂದು ಆಶಿಸುವೆ...
ಸಕಾಲಿಕ ಅಶ್ರು ತರ್ಪಣ . ಸಂತಾಪಪ ಬರಹ.
ಸಹೋದರಿ ನಿರ್ಭಯ ಆತ್ಮಕ್ಕೆ ಶಾಂತಿ ಸಿಗಲಿ- ಆವರ ಅಕಾಲಿಕ ಅಂತ್ಯಕ್ಕೆ ಕಾರಣರಾದ ಅಪರಾಧಿಗಳಿಗೆ ತ್ವರಿತವಾಗಿ ಶಿಕ್ಷೆ ಆಗಲಿ...

\|

ಬರಹ

ದೆಹಲಿಯಲ್ಲಿ ಭಾನುವಾರ ನಡೆದ ಘಟನೆ ಇಡೀ ದೇಶವನ್ನೇ ತಲ್ಲಣಗೊಳಿಸಿದೆ. ಇಂತಹ ಅಮಾನವೀಯ ಘಟನೆಗಳು ಆಗಾಗ ದೇಶದೆಲ್ಲೆಡೆ ನಡೆಯುತ್ತಿದ್ದರೂ, ಪೋಲಿಸ್ ಇಲಾಖೆಯು ಅಪರಾಧಿಗಳಿಗೆ ಯಾವುದೇ ರೀತಿಯ ಕಠಿಣ ಕ್ರಮ ತೆಗೆದುಕೊಳ್ಳದಿರುವುದು ಅಥವಾ ಅಸಹಾಯಕರಾಗಿರುವುದು ಇಂತಹ ಅಪರಾಧಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರಲು ಪ್ರಮುಖ ಕಾರಣವೆನ್ನಬಹುದು. ಕ್ರಿಮಿನಲ್ ಗಳು ಯಾವುದೇ ರೀತಿಯ ಕಾನೂನು ಭಯ ಹೊಂದಿರದೆ ಇರುವುದರಿಂದ ಇಂತಹ ಘಟನೆಗಳಿಂದ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವುದು ಸಾಮಾನ್ಯವಾಗಿದೆ.
ಪೋಲೀಸರ ಅಸಹಾಯಕತೆಯಿಂದಾಗಿ ಹೆಣ್ಣು ಮಕ್ಕಳು ನಿರ್ಭಯದಿಂದ ಓಡಾಡುವಂತಿಲ್ಲವೇ? ಸಮಾಜ ಈ ಘಟನೆಯನ್ನು ಒಂದೆರಡು ದಿನಗಳಲ್ಲಿ ಮರೆತುಬಿಡಬಹುದು. ಆದರೆ ಆ ನೊಂದ ಹೆಣ್ಣು? ಪ್ರತಿ ಕ್ಷಣ, ಪ್ರತಿ ದಿನ ಆ ಕೆಟ್ಟ ಘಟನೆಯನ್ನು ನೆನಸಿಕೊಂಡು, ತಾನು ಮಾಡದ ತಪ್ಪಿಗಾಗಿ ಶಿಕ್ಷೆ ಅನುಭವಿಸಿಕೊಂಡು, ಅದೇ ಸಮಾಜದ ಜನರಿಂದ ಕೆಟ್ಟ ಮಾತುಗಳನ್ನು ಕೇಳಿ, ಯಾತನಾಮಯ ಬದುಕನ್ನು ನಡೆಸುವ ಆಕೆಯ ನೋವನ್ನು ಯಾರು ಕೇಳಬಲ್ಲರು? ತನ್ನನ್ನು ಹೊತ್ತು ಹೆತ್ತಿರುವ ತಾಯಿ, ಮಡಿಲಲ್ಲಿಟ್ಟುಕೊಂಡ ಭೂಮಿತಾಯಿ 'ಹೆಣ್ಣು' ಎಂಬ ಭಾವನೆಯನ್ನೂ ಮರೆತು, ಅಕ್ಕ,ತಂಗಿ,ಮಗಳು, ಸ್ನೇಹಿತೆ ಎನ್ನುವ ಭಾಂದವ್ಯವನ್ನೂ ಮರೆತು ಮೃಗಗಳಾಗಿ ವರ್ತಿಸುತ್ತಿರುವ ಇಂತಹ ಪುರುಷರಿಗೆ ಎಷ್ಟು ಕಠಿಣ ಶಿಕ್ಷೆ ನೀಡಿದರೂ ಕಡಿಮೆಯೆ.
ಇಂದಿನ ಸಮಾಜದಲ್ಲಿ ಆಗುತ್ತಿರುವ ವಿದ್ಯಮಾನಗಳು- ಸ್ವಂತ ಮಗಳ ಮೇಲೆಯೇ ತಂದೆಯ ಅತ್ಯಾಚಾರ, ಎರಡು ವರ್ಷಗಳ ಕಾಲ ಸತತವಾಗಿ ತನ್ನ ತಂಗಿಯನ್ನೇ ಬಳಸಿಕೊಂಡ ಸಹೋದರ, ಇನ್ನೂ ಸರಿಯಾಗಿ ಓಡಾಡಲು ಕಲಿತಿರದ -ಪ್ರಪಂಚವೇನೆಂದು ತಿಳಿಯದ ನಾಲ್ಕು ವರ್ಷದ ಪುಟ್ಟ ಹೆಣ್ಣುಮಗಳ ಮೇಲೆ ಆಕೆಯ ತಂದೆಯ ಸ್ನೇಹಿತನಿಂದ ಲೈಂಗಿಕ ದೌರ್ಜನ್ಯ, ರಾತ್ರಿಪಾಳಿ ಉದ್ಯೋಗ ಮುಗಿಸಿಕೊಂಡು ಬರುತ್ತಿದ್ದ ಮಹಿಳೆಯನ್ನು ಅಪಹರಿಸಿ-ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ, ಶಿಕ್ಷಕನಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ. ಹೀಗೆ ನಿರಂತರವಾಗಿ ಹೆಣ್ಣಿನ ಮೇಲಿನ ದೌರ್ಜನ್ಯಗಳು ಸಾಗುತ್ತಲೇ ಇವೆ. ಇಂತಹ ಘಟನೆಗಳು ನಡೆಯುತ್ತಿರುವ ಈ ಸಮಾಜದಲ್ಲಿ ಹೆಣ್ಣಿಗೆ ರಕ್ಷಣೆ ಕೊಡುವವರಾರು? ತಾಯಿ-ತಂಗಿ ಎಂಬುದನ್ನೂ ನೋಡದ ಕೆಲವು ಪುರುಷ ಮೃಗಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದಾದರೂ ಹೇಗೆ?
ಇಂತಹ ಭಯಾನಕ ಕೃತ್ಯದ ಆರೋಪಿಗಳನ್ನು ಗಲ್ಲಿಗೇರಿಸಬೇಕು ಅಥವಾ ಕಠಿಣವಾದ ಜೀವಾವಧಿ ಶಿಕ್ಷೆ ನೀಡಿ,ಅತ್ತ ಸಾಯಲೂ ಬಿಡದ - ಇತ್ತ ಬದುಕಲೂ ಬಿಡದಂತಹ ಸ್ಥಿತಿಯಲ್ಲಿ ಇರಿಸಬೇಕು.
ಈ ಪ್ರಕರಣದ ನಂತರ ದೆಹಲಿ ಪೋಲೀಸ್ ಇಲಾಖೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿನ ಕೆಲವು ಉತ್ತಮ ಸಲಹೆಗಳು ಹೀಗಿವೆ.
ದೆಹಲಿ ಪೋಲಿಸ್ ಇಲಾಖೆ ಮಹಿಳೆಯರ ರಕ್ಷಣೆಯ ಭರವಸೆಯನ್ನು ಕೊಡುತ್ತಿದ್ದರೂ, ದೆಹಲಿ ಹಾಗೂ ನಗರದ ಎಲ್ಲಾ ಕಡೆ ವರ್ಷದಿಂದ ವರ್ಷಕ್ಕೆ ಅಪರಾಧಗಳು ಹೆಚ್ಚುತ್ತಲೇ ಇವೆ. ಹೀಗಿರುವಾಗ ಅಪರಾಧ ನಿಯಂತ್ರಣಾ ಪೋಲಿಸ್ ಇಲಾಖೆ ಯಶಸ್ವಿಯಾಗಿ ಕಾರ್ಯನಿರ್ವಹಿಸುವಲ್ಲಿ ವಿಫಲವಾಗುತ್ತಿದೆಯೇ? ಎಂಬ ಚರ್ಚೆಯಲ್ಲಿನ ಪ್ರಮುಖರ ಅಭಿಪ್ರಾಯ ಹಾಗೂ ಸಲಹೆಗಳು.
* ಪೊಲೀಸರು ಅಪರಾಧಿಗಳಿಗೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ ಆದರೆ, ಕೆಲವೊಂದು ಸಂದರ್ಭಗಳಲ್ಲಿ ವಿ.ಐ.ಪಿ ಗಳು ಪೊಲೀಸರ ಮೇಲೆ ಹೇರುವ ಒತ್ತಡದಿಂದಾಗಿ ತನಿಖೆಗಳು ತಾನಾಗಿಯೇ ಹಿಂದೆ ಸರಿಯುತ್ತವೆ.
* ಅಪರಾಧ ನಿಯಂತ್ರಣ ಕಾಯಿದೆ ಅಥವಾ ತನಿಖೆಯ ಸಂದರ್ಭಗಳಲ್ಲಿ ಸಾರ್ವಜನಿಕರ ಸಹಕಾರ ಪ್ರಾಮುಖ್ಯತೆಯನ್ನು ವಹಿಸುತ್ತದೆ. ಸ್ಥಳೀಯ ಹಾಗೂ ನಗರ ಮಟ್ಟದಲ್ಲಿ, ಅಪರಾಧ ತಡೆ ಕಾರ್ಯಾಚರಣೆಯ ಸದಸ್ಯರು ಸಮುದಾಯದ ಒಂದು ಭಾಗವಾಗಿ ಕೆಲಸ ಮಾಡಬೇಕು, ನಾಗರಿಕ ಹಿತರಕ್ಷಣಾ ವೇದಿಕೆಯಲ್ಲಿ ತರಭೇತಿ ಪಡೆದ ಸಾವಿರಕ್ಕೂ ಹೆಚ್ಚು ಮಹಿಳೆಯರು ಹಾಗೂ ಪುರುಷರು ನಮ್ಮಲ್ಲಿ ಇದ್ದಾರೆ. ಅವರನ್ನು ಸೂಕ್ತವಾಗಿ ಬಳಸಿಕೊಳ್ಳಬೇಕಾಗುವುದು.
* ಇಂತಹ ಸಂದರ್ಭಗಳಲ್ಲಿ ಪೊಲೀಸರು ನಡೆಸುವ ತನಿಖೆಯಲ್ಲಿ ಬದಲಾವಣೆಯಾಗಬೇಕಿದೆ. ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳಯರನ್ನು ಮೊದಲು ಮಾನವೀಯವಾಗಿ ಚಿಕಿತ್ಸೆ ಕೊಡಿಸಬೇಕು ನಂತರ ಘಟನೆಯ ಬಗ್ಗೆ ಮಾಹಿತಿ ಕಲೆಹಾಕುವ ಸಂದರ್ಭದಲ್ಲಿ ಯಾವುದೇ ರೀತಿಯಲ್ಲಿ ಮನಸ್ಸಿಗೆ ನೋವಾಗದಂತೆ ನೋಡಿಕೊಳ್ಬೇಕು. ಈ ನಿಟ್ಟಿನಲ್ಲಿ ಪೋಲಿಸರಿಗೆ ಸೂಕ್ತ ರೀತಿಯ ತರಭೇತಿ ನೀಡಬೇಕು. ಹುಡುಗಿಯರನ್ನು ಚುಡಾಯಿಸುವಂತಹ ಕ್ಷುಲ್ಲಕ ಅಪರಾಧಗಳು ಕಂಡು ಬಂದಾಗಲೂ ಗಂಭೀರವಾಗಿ ಪರಿಗಣಿಸಬೇಕು. ಸಣ್ಣ ಅಪರಾಧವನ್ನು ನಿಯಂತ್ರಿಸಿದಾಗಲೇ ದೊಡ್ಡ-ಅಪರಾಧಗಳನ್ನು ಮಟ್ಟ ಹಾಕಲು ಸುಲಭವಾಗುತ್ತದೆ.

ಪ್ರಿಯ ಸಂಪದಿಗರೆ ಇದು ನನ್ನ ಅನಿಸಿಕೆ. ನಿಮ್ಮ ಅಭಿಪ್ರಾಯ ಹಾಗೂ ಚರ್ಚೆಗಳಿಗೆ ಮುಕ್ತ ಸ್ವಾಗತ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet