ಹೆಣ್ಣು ಮಕ್ಕಳು ಮನದ ‘ಮಲ್ಲಿಗೆ’
ಬರವಣಿಗೆ, ಬಾಯಿಮಾತಿನಲ್ಲಿ ಮಾತ್ರವೇ, ಅಲ್ಲ ನಿಜವಾಗಿಯೂ ಹೌದೇ ಎಂಬ ಸಂಶಯವೊಂದು ಸುಳಿದಾಡುತ್ತದೆ. ರಣಹದ್ದುಗಳಾಗಿ, ಕಿತ್ತು ತಿನ್ನುವ, ರಕ್ತವನ್ನು ಬಸಿದು, ಹೃದಯಹೀನರಾಗಿ, ಕಣ್ಣಲ್ಲಿ ರಕ್ತವಿಲ್ಲದವರಂತೆ ಶವವಾಗಿಸುವುದು ಎಷ್ಟು ಸರಿ? ಒಂದು ಸಂಸಾರವೆಂದರೆ ಹೆಣ್ಣು ಗಂಡು ಬೇಕೇ ಬೇಕು. ಬಾಯಿ ಬಾರದ ಹಸುಳೆಯ ಮೇಲೆರಗುವ ಪೈಶಾಚಿಕತೆ ಎಂದರೇನು? ಎಷ್ಟು ಅಧೋಗತಿಗೆ ಇಳಿಯಿತು ನಮ್ಮ ಸಾಮಾಜಿಕ ಪ್ರಜ್ಞೆ, ನೈತಿಕ ಮೌಲ್ಯಗಳು. ಇದು ದುರಂತವಲ್ಲವೇ?
ಸಮಾಜದಲ್ಲಿ ಆಕೆಗೆ ಸಮಾನ ಅವಕಾಶಗಳು ಗೌರವಗಳು ಸಿಗಬೇಕೆಂದರೆ, ಅವಳಿಗೂ ಒಂದು ಹೃದಯವಿದೆ, ಸ್ವಾಭಿಮಾನವಿದೆ ಎಂದು ಅರಿತರೆ ಮಾತ್ರ ಸಾಧ್ಯ. ‘ನೀನು ಹೆಣ್ಣು’ ಎಂದು ಮಾತುಮಾತಿಗೂ ಚುಚ್ಚಿದರೆ ಆಕೆ ಚಿಗುರುವುದಾದರೂ ಹೇಗೆ? ಆಕೆಗೂ ಚೆನ್ನಾಗಿ ವಿದ್ಯಾಭ್ಯಾಸ ಕೊಡಿಸಬೇಕು .ಅವಳೂ ಸಹ ಅರಿತು ನಡೆಯಬೇಕು. ಸ್ವಾತಂತ್ರ್ಯವಿದೆ ಎಂದು ದುರುಪಯೋಗ ಮಾಡಬಾರದು. ಸಾಮಾಜಿಕ ಜಾಗೃತಿ ಮೂಡಿಸುವ ಕೆಲಸಗಳಾಗಬೇಕು. ಲಿಂಗ ತಾರತಮ್ಯ ಮನೆಯಿಂದಲೇ ತೊಡೆದು ಹಾಕಬೇಕು. ‘ಹೆಣ್ಣು ಮಕ್ಕಳನ್ನು ಉಳಿಸಿ’ ಆಂದೋಲನವೇನೋ ಜಾರಿಗೆ ಬಂತು. ಅವರ ಓದಿಗಾಗಿ ಹಲವಾರು ಯೋಜನೆಗಳನ್ನು ತರಲಾಯಿತು. ಜನನ ಪೂರ್ವ ಲಿಂಗ ಪರೀಕ್ಷೆ ಸಾರಾಸಗಟಾಗಿ ನಡೆಯುವ ಕಾಲವೊಂದಿತ್ತು. ಈಗ ಶಿಕ್ಷೆ ಕಟ್ಟಿಟ್ಟ ಬುತ್ತಿ. ಗರ್ಭಿಣಿಯರಿಗೆ ತಪಾಸಣೆ, ಆರೋಗ್ಯ ಕಿಟ್ ವಿತರಣೆಯಿಂದ ಆರೋಗ್ಯವಂತ ಮಗುವಿನ ಜನನಕ್ಕೆ ಯೋಜನೆಗಳನ್ನು ರೂಪಿಸಿತು. ಮಹಿಳಾ ದೌರ್ಜನ್ಯ, ವರದಕ್ಷಿಣೆ ಕಿರುಕುಳ ಇದರ ವಿರುದ್ಧ ಧ್ವನಿ ಎತ್ತುವ ಕೆಲಸಗಳು, ಸಂಘಸಂಸ್ಥೆಗಳು ಕೈಕೊಂಡವು. ಹೆಣ್ಣು ಮಕ್ಕಳಿಗಾಗಿ ರೂಪಿಸಲ್ಪಟ್ಟ ಕಾನೂನು ಕಾರ್ಯಕ್ರಮಗಳ ವ್ಯಾಪಕ ಪ್ರಚಾರ ಮಾಡಲಾಯಿತು. ಶಿಕ್ಷಣ, ಆರೋಗ್ಯ, ಮದುವೆಯ ವಯಸ್ಸು, ಪೌಷ್ಠಿಕತೆ, ಅಸಮಾನತೆ, ಎಲ್ಲದರ ಬಗ್ಗೆಯೂ ಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ, ಬೀದಿನಾಟಕಗಳಲ್ಲಿ ಪ್ರಚಾರ ಮಾಡಲಾಯಿತು. ಆದರೂ ದೌರ್ಜನ್ಯ ನಡೆಯುತ್ತಿದೆ ಎಂದು ಹೇಳಬಹುದು. ಆಕೆಗೂ ಎಲ್ಲರಂತೆ ಬದುಕುವ ಹಕ್ಕಿದೆಯಲ್ಲವೇ? ಆಕೆ ಅಡುಗೆ ಮನೆಗೆ ಸೀಮಿತವೇ?
‘ಹೆಣ್ಣಲ್ಲವೇ ನಮ್ಮ ಹಡೆದ ತಾಯಿ’ ‘ಪೆಣ್ಣಲ್ಲವೇ ಹೊತ್ತವಳು’ ಈ ಅರಿವಿದ್ದರೆ ಸಾಕು. ಆಕೆಯನ್ನು ಹೊನ್ನಿನ ಅಂಬಾರಿಯಲ್ಲಿ ಕೂರಿಸಿ ಮೆರವಣಿಗೆ ಮಾಡಬೇಕೆಂದು ಎಂದೂ ಬಯಸುವುದಿಲ್ಲ.ಎಲ್ಲರಂತೆ ಬದುಕಲು ಬಿಡಿ’
( ಅಕ್ಟೋಬರ್ ೧೧ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಸಂದರ್ಭದಂದು ಬರೆದ ಬರಹ)
-ರತ್ನಾ ಕೆ.ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ