ಹೆಣ್ಣೇ,,, ನೀ ಹುಟ್ಟುವ ಮುನ್ನ
ಮುಂದಿನ ದಿನಗಳಲ್ಲಿ
ಭಾರತದಲ್ಲಿ ಜನ್ಮಿಸುವ
ಹೆಣ್ಣು ಕೂಸುಗಳಿಗೆ
ಒಂದು ಕಿವಿಮಾತು
ಹೇಳಬೇಕಿದೆ,
ಹುಟ್ಟುವ ಮೊದಲು
ನಿಮ್ಮ ಕನಸುಗಳನ್ನೆಲ್ಲ
ಕಡಾಯಿಯಲ್ಲಿ ಬೇಯಿಸಿ
ಹಸಿದಿರುವವರಿಗೆ ಹಂಚಿ,
ನಂತರ
ಬರಿಯ ನಿಮ್ಮ ಸುಂದರ
ದೇಹವೊಂದನ್ನು ಹೊತ್ತು,
ಇಲ್ಲಿ ಜನಿಸಿ,
ಇಲ್ಲಿ ನಿಮ್ಮ ಕನಸುಗಳನು
ತನ್ನದೆಂದು ಬಾವಿಸಿ
ಪೊರೆಯುವ
ಒಂದು ಆತ್ಮವೂ ಇಲ್ಲ.
"ಜಾಗೃತರಾಗಿರಿ".
ನಿಮ್ಮ ಸೌಂದರ್ಯದ ಮೇಲೆ
ಬಂಡವಾಳ ಹೂಡಿ,,,,
ದುಡ್ಡು ಮಾಡುವ ಮಂದಿಗೆ.
ನಿಮ್ಮೊಡಲ
ಹಸಿವಾಗಲಿ-ಕನಸಾಗಲಿ
ಕಾಣುವುದಿಲ್ಲ.
ನಿಮ್ಮ ಮನೆಯ
ಚಾವಣಿಯೆ ಕುಸಿದು ಬಿದ್ದು
ನೀವೊಂದು ದಿನ
ಸಾಯಬಹುದು,
ಹಾಗೆಂದು
ನೀವು ಮನೆಯಿಂದ
ಹೊರಬರುವ ಯೋಚನೆ ಮಾಡದಿರಿ
ನಿಮ್ಮ ಮನೆಯ
ಗೇಟಿನ ಬಳಿ
ತೋಳಗಳು ಕಾದು ಕುಳಿತಿವೆ,
ಕುತ್ತಿಗೆಯಿಂದ-ಉಂಗುಷ್ಟದ ವರೆಗೂ
ನಿಮ್ಮ ಮಾಂಸ ಸವಿಯಲು.
ಈ ನನ್ನ ದೇಶದಲ್ಲಿ
ನೀವು ಹೆಣ್ಣಾಗಿ ಹುಟ್ಟುವ ಬದಲು
ಒಂದು ಗಿಡವಾಗಿಯೊ,
ಅನಾಥ ಕಲ್ಲು ಬಂಡೆಯಾಗಿಯೊ ಹುಟ್ಟಿ...
ಕಾರಣ ಬೇಕೆ, ??
ಈಗಾಗಲೆ ಹೆಣ್ಣಾಗಿ ಇರುವವರನ್ನು
ಕೇಳಿ ನೋಡಿ,
***********************************
ಈಗಾಗಲೆ ಹೆಣ್ಣಾಗಿ ಹುಟ್ಟಿರುವವರು
ನಿಮ್ಮೊಳಗಿನ ಹೆಣ್ಣನ್ನು ಸಾಯಿಸಿ
ಮೃಗಗಳಾಗಿ,
ಕೋರೆ ಹಲ್ಲುಗಳನ್ನು ಉದ್ದ ಬೆಳೆಸಿಕೊಳ್ಳಿ
ಉಗುರಗಳ ಹರಿತ ಹೆಚ್ಚಿಸಿಕೊಳ್ಳಿ
ಮುಲಾಜಿಲ್ಲದೆ ಕೊಂದುಬಿಡಿ,
ನಿಮ್ಮೊಳಗಿನ ತಾಯ್ತನವನ್ನು
ಇನ್ನೆಂದಿಗೂ ಹೊಸ ಹೆಣ್ಣು ಜೀವಕ್ಕೆ
ಹುಟ್ಟು ನೀಡದಿರಿ.
ಕೊಂಡು ಮಾರುವವರ ಮದ್ಯದ
ವಸ್ತು ನೀವು,
ಕಂಡೂ ಕಂಡು,,,
ನೀವ್ಯಾಕೆ ಇನ್ನೂ ಅಲ್ಲೇ
ನಡುಗುತ್ತ ನಿಂತಿರುವಿರಿ.
ಖಡ್ಗ ಹಿಡಿದು ತುಂಡರಿಸಿ,
ಬನ್ನಿ ಝೇಂಕರಿಸಿ,
-- ಜೀ ಕೇ ನ,
(ಕಮೆಂಟುಗಳು ಬೇಡ)