ಹೆಣ್ತನಕ್ಕೆ ನಮನ

ಹೆಣ್ತನಕ್ಕೆ ನಮನ

ಬರಹ

ತಾಯಿಯಾಗಿ ಕಲಿಸಿದಳು ಮಾತು
ಗುರುವಾಗಿ ಕಲಿಸಿದಳು ಜೀವನದ ದಾರಿ
ಪತ್ನಿಯಾಗಿ ಸಲಹಿದಳು ಆನೂಚಾನವಾಗಿ
ಮಗಳಾಗಿ ಪೂಜಿಸಿದಳು ದೈವವಾಗಿ

ಪುಟ್ಟ ಪುಟ್ಟ ಹೆಜ್ಜೆ ಇಟ್ಟಳಂದು ಪುಟ್ಟ ಲಕ್ಷ್ಮಿ
ದಿನಂಪ್ರತಿ ಮನೆಯ ಬೆಳಗುತ್ತಿರುವ ಮಹಾಲಕ್ಷ್ಮಿ
ನಸುಕಿನಿಂದ ಕಾಯುವಳೆನ್ನ ಮಾತೃಸ್ವರೂಪಿ
ಎನ್ನ ಕಣ್ಣಿಗೆಂದೂ ಕಾಣುವಳು ಸ್ಫುರದ್ರೂಪಿ

ನೋವನುಂಡೂ ಉಂಡೂ ಮರಗಟ್ಟಿಹಳು
ನೋವಿನಲೂ ಸಂತಸವ ಕಾಣುವವಳು
ಜೀವನದ ಮರ್ಮವನು ಸುಲಭದಲಿ ಅರಿತವಳು
ಮನೆಯ ದೀಪವೆಂದೂ ಆರಗೊಡದವಳು

ತಾಳ್ಮೆ ಸಹಿಷ್ಣುತಾ ಭಾವಕ್ಕೆ ಇಟ್ಟೆನಿವಳ ಹೆಸರು
ಗಂಡಿನ ಬಾಳು ಬಾಳಾಗಲು ಇವಳೇ ಉಸಿರು
ಯಾವುದೇ ಕೆಲಸದಲೂ ತಾ ಬೀಳಳು ಹಿಂದು
ಮನೆಮಂದಿಯ ಪ್ರಶ್ನೆಗಳಿಗೆ ಇವಳುತ್ತರ ಮುಂದು

ಹೆಜ್ಜೆ ಹೆಜ್ಜೆಗೆ ತಪ್ಪು ತಿದ್ದುವ ಸುಗುಣಗಳ ಗಣಿ
ಎಂದಿಗೂ ನಾನಾಗಿರಲೇಬೇಕಿವಳಿಗೆ ಚಿರಋಣಿ