ಹೆಣ…!

ಹೆಣ…!

ಕವನ

ಈಗೀಗ......!

ಹೆಣವೆಂದರೆ ತಾಯಿಯ

ಗೋಳು ತಂದೆಯ ಕಂಬನಿ...

ಅಲ್ಲ ಮಾರಾಯ....!

ಧರ್ಮದ ದಂಗಲ್ ಗೆ

ಕಾದಿಟ್ಟ ಕಿಚ್ಚು.....!

 

ಈಗೀಗ.....!

ಹೆಣವೆಂದರೆ ಹೆಂಡತಿಯ

ಹಣೆಮೇಲಿನ ಕುಂಕುಮ

ಮಕ್ಕಳ ತೆಲೆಮೇಲಿನ ನೆರಳು...

ಅಲ್ಲ ಮಾರಾಯ...!

ಚುನಾವಣೆಯ ಮುನ್ನ

ಮತ ಬ್ಯಾಂಕಿಗೆ ಕಾಯ್ದಿಟ್ಟ

ನಿಶ್ಚಿತ ಠೇವಣಿ....!!

 

ಈಗೀಗ.....!

ಹೆಣವೆಂದರೆ ಅಣ್ಣನಿಗೊ

ಅಕ್ಕನಿಗೊ ಕಾಡುವ

ಅನಾಥ ಪ್ರಜ್ಞೆ....

ಅಲ್ಲ ಮಾರಾಯ

ಚುನಾವಣಾ ಚಾಣಕ್ಯನ

ಬತ್ತಳಿಕೆಯಲ್ಲಿಯ ಅತ್ಯಂತ

ಪ್ರಬಲ ಅಸ್ತ್ರ....!!

 

ಈಗೀಗ....!

ಹೆಣವೆಂದರೆ ಮನೆಯಿಂದ

ಸ್ಮಶಾನದವರೆಗಿನ ದುಃಖದ

ಮಡುವು...!

ಅಲ್ಲ ಮಾರಾಯ

ಮಾಧ್ಯಮಗಳಿಗಾಗಿಯೇ

ಕಾಯ್ದಿಟ್ಟ ಟಿಆರ್ ಪಿಯ

ಮೀಸಲು ಕೋಟಾ...!

 

ಈಗೀಗ....!

ಹೆಣವೆಂದರೆ....ಸಂತಾಪ

ಸೂಚಕ ಮೌನ ಪ್ರಾರ್ಥನೆ....!

ಅಲ್ಲ ಮಾರಾಯ...

ಸ್ವ ಪಕ್ಷದಲ್ಲಿಯ ತಲೆ ಹಿಡುಕರು

ಭಿಕ್ಷೆ ಬೇಡಲೆಂದೇ ಮಾಡಿದ

ಚಟ್ಟದ ಥೈಲಿ....!!

 

ಈಗೀಗ.....!

ಹೆಣವೆಂದರೆ....

ಬರೀ ಮೃತ ದೇಹವಲ್ಲ....ಮಾರಾಯ

ಗದ್ದುಗೆಗಾಗಿಯೇ ನಿರ್ಮಿಸಿದ

ಶವದ ಮೆಟ್ಟಿಲು....!!

ತಾವೇ ತೂಗಿ ತಾವೇ ನಿಲ್ಲಿಸಿ

ಆಟವಾಡಿಸುವ ಅಧಿಕಾರ

ದಾಹದ ತೊಟ್ಟಿಲು....!!

- ದೇವರಾಜ್ ಹುಣಸಿಕಟ್ಟಿ. 

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್