ಹೆತ್ತೊಡಲು(ನೀಳ್ಗತೆ)

ಹೆತ್ತೊಡಲು(ನೀಳ್ಗತೆ)

ಸೃಷ್ಟಿಯ ಸೊಬಗು ಮನಸ್ಪೂತಿ೯ ಮೊಗೆದು ಕಣ್ತುಂಬಿಕೊಂಡ ಮನಸ್ಸು ಕೈಗೇ ಸಿಗುತ್ತಿಲ್ಲ. ಅದೆಂತಹ ತಾಕತ್ತಿದೆ ನಿನ್ನ ಸಹವಾಸದಲ್ಲಿ!
ನಿನ್ನೊಡಲಲ್ಲಿ ಮುಚ್ಚಿಟ್ಟುಕೊಂಡಷ್ಟೂ ನಾ ಬಿರಿದ ಹೂವಾಗುವೆ ಪರಿಮಳವ ಬೀರಿ; ಸುತ್ತೆಲ್ಲ ನಡೆದಾಡುವ ಜನ ಒಮ್ಮೆ ನಿಂತು ಆಗ್ರಾಣಿಸುವಂತೆ; ಪರಿಮಳದ ಪಾರಿಜಾತ ಪುಷ್ಪದ ಮೆಲು ನುಡಿ.   ಹೊಂಗೆಯ ಮರದ ಕೆಳಗೆ ಮೊಗ್ಗಿನ ಹೂವರಾಶಿ ನಾನೇನು ಕಡಿಮೆ ನಗುತಿವೆ ಚಿಗುರೆಲೆಗಳು ಗಾಳಿಗೆ ಓಲಾಡಿ.
ಹಸಿರಾಗಿದೆ ವನ ಸಿರಿಯೆಲ್ಲ ತಂಪಾದ ಗಾಳಿಯೊಳು ಹೊಂಗಿರಣದ ತೋರಣಕಟ್ಟಿ. ಇಬ್ಬನಿಯ ಸಿಂಚನ ಎಲೆಗಳ ಮೇಲೆ ಮುತ್ತಿನ ಮಣಿಗಳು ಪಳ ಪಳ ಹೊಳೆಯುತಿವೆ ಉಷೆಯ ನೋಟಕೆ. ಆ ಗಿಡದ ಟೊಂಗೆಗೆ ಜೇಡನ ಬಲೆ, ಇಬ್ಬನಿಯ ಮುತ್ತುಗಳಾವರಿಸಿ ಶೃಂಗಾರಗೊಂಡಿದೆ ಚಿಟ್ಟೆಯ ಆಗಮನಕ್ಕೆ ಮುಸಿ ಮುಸಿ ನಕ್ಕು.
ಅಲ್ಲೇಲ್ಲೊ ನವಿರಾಗಿ ಕಿವಿಗಿಂಪಾಗಿದೆ ಮಧುರ ಸ್ವರ ನಾದ. ಬೆಳಗಿನ ಜಾವವಲ್ಲವೆ; ಭೈರವಿ ರಾಗದ ಸಂಗೀತದ ಅಲೆಯ ಹಿಡಿತವ ಮೈಗೂಡಿಸಿಕೊಳ್ಳಲು ಹೆಣ್ಮಗಳೊಬ್ಬಳ ಹರ ಸಾಹಸ. ಯಾವ ಕಛೇರಿ ನಡೆಸಲು ಕಂಠಸಿರಿಯ ಪಳಗಿಸುವ ಪ್ರಯತ್ನ!  ಚಿಲಿ ಪಿಲಿ ಹಕ್ಕಿಗಳ ಕಲರವದೊಂದಿಗೆ ಸೇರಿ ಹೋಗುತ್ತಿದೆ ಇಂಪು.
ವನವೆಲ್ಲ ಭೂರಲ ಹತ್ತಿಯ ಬಿಳಿ ಹಾಸಿಗೆ ಹಾಸಿ ಮಲಗಿಬಿಟ್ಟಿವೆ ತರು ಲತೆಗಳು ಬಿಳಿ, ಹಳದಿ ಹೂಗಳ ಹೊತ್ತು. ಆಹಾ! ಎಂತ ಸೌಂದಯ೯ದ ಸೊಬಗು .
ಹೂವ ಹೊತ್ತ ತಾಯಿಯ ಹಿಂದೆ ಹಿಂದೆ ಅವಳಿಗಾಸರೆಯಾಗಲು ಈಗಲೇ ಪಣತೊಟ್ಟಂತಿರುವ ಹುಡುಗನ ಕೈಯಲ್ಲಿ ಗರಿಕೆ ತುಳಸಿಯ ಮಾಲೆ.  ವತ೯ನೆ ಮನೆ ಅಂಗಡಿಯ ಚಿಲಕದ ಕೊಂಡಿಗೆ ನೇತಾಡಿಸುವ ನಿಯತ್ತು.
ಜಗಕೆ ಬೆಳಕ ನೀಡುವ ಸೂರ್ಯನೊಂದಿಗೇ ಜೀವನದ ಗಾಡಿ ಎಳೆಯುವ ಹಾಲು, ತರಕಾರಿ ಹೂ ಮಾರುವವರ ಕಸರತ್ತು.  ಎಲ್ಲ ಸವಿಯಬೇಕೆಂದರೆ ಮುಂಜಾನೆಯೇ ನಾವು ಏಳಬೇಕು.  ಹೊರಡಬೇಕು ಹಾದಿಯ ಗುಂಟ. ಒಡಲ ಸಂಭ್ರಮ ಕಾಣಲು.
ಇವೆಲ್ಲ ಕಂಡು ಕೊನೆಯಿಲ್ಲದ ದಾಹ ಹುಮ್ಮನಸ್ಸಿಗೆ‌. ಉತ್ಸಾಹದ ಚಿಲುಮೆಯಾಗಿದೆ. ಕವಿ ಹೃದಯದೊಳಗೆಲ್ಲ ಭಾವನೆಗಳ ಮಹಾಪೂರ ಮುನ್ನುಗ್ಗುವ ಕ್ಷಣ ಪೃಕೃತಿಯ ಕೃಪೆ. ಎಲ್ಲವನ್ನೂ ಬಾಚಿ ತಬ್ಬಿಕೊಂಡು ಹಿಡಿದಿಟ್ಟುಕೊಳ್ಳುವ ತೃಷೆ, ಹೇಳಿಕೊಳ್ಳಲಾಗದ ಹೃದಯದ ಹಸಿವು‌ ಅವಳಿಗೆ.
“ಅಮ್ಮ ಟೀ ಆಯಿತಾ? ಬೇಗ ಕೊಡು. ನಾ ಸ್ನಾನಕ್ಕೆ ಹೋಗಬೇಕು.”..‌‌‌‌‌… ಮಗಳ ಕೂಗು ಭಾವುಕ ಪ್ರಪಂಚದಿಂದ ಹೊರಗೆ ಬಂದಳವಳು. “ಹೂ, ಇಗೊ ಈಗ ಮಾಡ್ತೀನಿ. ಇರು.”
ಬೆಳಗಿನ ವಾಯುವಿಹಾರ ಇಷ್ಟ ಪಡುವ ಪೃಕೃತಿ ಸೌಂದರ್ಯದ ಸೊಬಗ ಹೀರಿ ಆಗಷ್ಟೆ ಒಳಗೆ ಬಂದು ಇನ್ನೇನು ಹಾಲು ಕಾಯಿಸಲು ಇಡಬೇಕು ಅಷ್ಟರಲ್ಲಿ ಮಗಳ ಕೂಗು.
ಜೀವನ ಹೇಗೆ ಎದುರಾಗಲಿ ಅದರೊಂದಿಗೆ ಹೊಂದಾಣಿಸಿಕೊಂಡು ಹೋಗುವ ತಾಳ್ಮೆ ಅವಳಿಗೆ ಗೊತ್ತಿಲ್ಲದಂತೆ ಒಗ್ಗಿ ಹೋಗಿದೆ.
ನಗು ಬರುತ್ತಿದೆ. ಹೊರ ಜಗತ್ತಿನಲ್ಲಿ ನಡೆಯುವ ಯಾವ ವ್ಯವಹಾರಕ್ಕೂ ತಲೆ ಕೊಡದೆ ನಾನಾಯಿತು, ನನ್ನ ಕೆಲಸವಾಯಿತು ಅಂತಿರುವ ಈ ನನ್ನ ನಡೆ ಅದೆಷ್ಟು ಜನ ದುರುಗುಟ್ಟಿಕೊಂಡು ನೋಡುತ್ತಾರೊ!  ಇವಳಿಗೆ ಜಂಬ, ಅಹಂಕಾರ ಹೀಗೆ ಏನೇನೊ. ಆದರೆ ಒಂದಂತೂ ನಿಜ; ಜನರಿಗೇನು? ಎದುರಿಗೆ ಕಂಡರೆ ಕೂಲಂಕುಷವಾಗಿ ವಿಚಾರಿ‌ಸುವ ಪೃವೃತ್ತಿ . ಕಂಡವರ ಮನೆ ವಿಚಾರ ತಿಳಿದುಕೊಂಡು ಏನಾಗಬೇಕೊ. ಹಿಂದಿನಿಂದ ಮಾತಾಡಿಕೊಂಡು ಕಿಸಕ್ಕನೆ ಹಲ್ಲು ಕಿರಿಯುವ ಕೆಲವರ ಪೃವೃತ್ತಿ. ಅಸಹಾಯಕಥೆಯಲ್ಲಿ ಮೈಯ್ಯೆಲ್ಲ ಪರಚಿಕೊಳ್ಳುವಷ್ಟು ಕೋಪ ಬರುತ್ತದೆ. ಅವರು ನಡೆದುಕೊಳ್ಳುವ ರೀತಿ ಸ್ವಲ್ಪವೂ ಇಷ್ಟವಾಗದೆ ಮುದುಡಿಕೊಳ್ಳುತ್ತಾಳೆ.
ಒಂದೊಳ್ಳೆ ಸೀರೆ ಉಟ್ಟು ಹೊರ ನಡೆದರೂ ಇರೊ ಕೆಲಸ ಬಿಟ್ಟು ಸಂದಿಯಲ್ಲೆ ಬಗ್ಗಿ ನೋಡಿ ತಮ್ಮೊಳಗೆ ಅದೇನೊ ಇಲ್ಲದ ತೀಮಾ೯ನಕ್ಕೆ ಬರುವ ಜಾಯಮಾನ ಕೆಲವರದು. ಎಲ್ಲಿ ಯಾವಾಗ ಎದುರಿಗೆ ಸಿಗುತ್ತಾರೊ ಅಂತ ಕಾಯ್ದುಕೊಂಡಿರುವ ಜನ ಇನ್ನು ಹಲವರದು. ಮನೆಗೆ ಯಾರೇ ಬಂದರು ಅದನ್ನೂ ಅದ್ಯಾವ ಮಾಯೆಯಲ್ಲಿ ನೋಡಿಕೊಂಡಿರುತ್ತಾರೊ. ಯಾವಾಗಲಾದರೂ ಎದುರಿಗೆ ಸಿಕ್ಕರೆ ಸಾಕು ‘ ಎಲ್ಲೊ ಹೋದಾಂಗಿತ್ತು? ಯಾರೊ ಬಂದಾಂಗಿತ್ತು?’
ಆಗಾಗ ಕೇಳುವ ಇಂಥಹ ಮಾತುಗಳು ಕೇಳಿ ಕೇಳಿ ಮನಸ್ಸು ಮರಗೆಟ್ಟು ಹೋಗಿದೆ ಅವಳಿಗೆ. ಯಾರು ಏನೇ ಅಂದುಕೊಳ್ಳಲಿ; ನ್ಯಾಯ ನೀತಿ ಧರ್ಮದಿಂದ ಬದುಕು ನಡೆಸುತ್ತಿರುವ ಅವಳಿಗೆ ಯಾರ ಮಾತಿಗೂ ಅಂಜುವ ಪ್ರಮೇಯವೆ ಇಲ್ಲ. ಇರೋದರಲ್ಲೆ ಅಚ್ಚುಕಟ್ಟಾಗಿ ಯಾರೊಬ್ಬರು ತನ್ನ ಕಡೆ ಆಗಲಿ ತನ್ನ ಮಕ್ಕಳ ಕಡೆಯೆ ಆಗಲಿ ಬೆರಳು ತೋರಿಸದಂತೆ ಜೀವನ ಸಾಗಿಸುತ್ತಿದ್ದಾಳೆ. ಮೇಲೊಬ್ಬನಿದ್ದಾನೆ. ಎಲ್ಲಾ ನೀನೆ ನೋಡಿಕೊಳ್ಳಪ್ಪ ಅನ್ನೊ ನಿಟ್ಟುಸಿರು.
ಯಾರ ಗೊಡವೆ ನನಗೇಕೆ. ಏನೇ ಆದರೂ ಪರಮಾತ್ಮ ನನ್ನ ಕೈ ಬಿಡದಿರು ಅನ್ನುವ ಪ್ರಾಥ೯ನೆ. ಬಹುಶಃ ಆವನಿಗೆ ಕೇಳಿರಬೇಕು. ಈಗ ಎಲ್ಲರು ಗೌರವದಿಂದ ನೋಡುತ್ತಿದ್ದಾರೆ. ‘ನಿಮ್ಮನ್ನು ನೋಡಿ ಜೀವನ ಮಾಡೋದು ಹೇಗೆ ಅಂತ ಕಲಿಬೇಕು.’ ಇಂಥ ಮಾತುಗಳು ಈಗಿನ ಒಕ್ಕಣೆ. ನೆಮ್ಮದಿಯ ಜೀವನ ಕಷ್ಟ ಪಟ್ಟು ಕಂಡು ಕೊಂಡಿದ್ದಾಳೆ .
ಇರುವ ಮಕ್ಕಳ ಜೀವನ ಹೇಗೊ ಒಂದು ಹಂತಕ್ಕೆ ಬಂದಿದೆ. ಇನ್ನು ಮುಂದೆಯೂ ಅವನೆ ನಡೆಸುತ್ತಾನೆ ಅನ್ನುವ ನಂಬಿಕೆ.
“ಏನೆ ನಿನ್ನ ಅಣ್ಣ ಬಂದಿದಾನಾ ಜಿಮ್ ನಿಂದ? ಲೊ ಬಾರೊ ಮಗನೆ, ಟೀ ಆಗಿದೆ”
“ಗೊತ್ತಿಲ್ಲ, ನಾ ಏನು ಅವನ ಕರೆಯೋದಿಲ್ಲ‌ ನೀನೆ ಕರಿ. ಕೊಡು ಟೀ.”
“ಏಯ್ ಎನೇ ಹೀಗೆ ಮಾತಾಡುತ್ತೀಯಾ? ಒಂದು ಸಾರಿ ಹೇಳಿದರೆ ಅಥ೯ ಮಾಡಿಕೊಳ್ಳಬೇಕು. ಇರೋನೊಬ್ಬನು, ಅವನ ಮೇಲೆ ಹರಿ ಹಾಯುತ್ತೀಯಲ್ಲೆ.”
“ಹೂ ನಿನ್ನ ಮುದ್ದಿನ ಮಗ ನೋಡು, ಇನ್ನೂ ಪುಟ್ಟ ಪಾಪು ತೊಟ್ಟಿಲಲ್ಲಿ ಹಾಕಿ ಲಾಲಿ ಹಾಡೇಳಿ ತೂಗು. ಅವನಿಗೇನು ಕೇಳಲ್ವ. ನೀ ಕರೆದೆ ತಾನೆ. ಗೊತ್ತಾಗಲ್ವ ಬಂದು ಟೀ ಕುಡಿಬೇಕಂತ”.
“ಅಯ್ಯೋ ಹೋಗೆ ತಾಯಿ ಬೆಳಿಗ್ಗೆ ಬೆಳಿಗ್ಗೆ ಗಲಾಟೆ ಮಾಡಬೇಡ, ನೀನೊ ನಿನ್ನ ಬಾಯೋ, ನಡಿ ಸ್ನಾನ ಮಾಡು”.
“ಅಮ್ಮ, ಕೊಡು ಟೀ. ಏನಂತೆ ಅವಳದ್ದು, ನನ್ನ ಬಯ್ಯದೇ ಇದ್ರೆ ತಿಂದನ್ನ ಕರಗಲ್ವಂತ?”
“ಯೆ, ಹೋಗೊ ಈಗ ನೀನು ಶುರುಮಾಡ ಬೇಡ. ಅವಳು ಚಿಕ್ಕವಳು. ಮಾತಾಡುತ್ತಾಳೆ. ನೀನೂ ಹಾಗೆ ಆಡಬೇಡ.”
“ಹೂ, ಹೀಗೆ ಹೇಳಿ ಹೇಳಿ ತಲೆ ಮೇಲೆ ಕೂತಿರೋದು.”
ಅಬ್ಬಾ ಇವರಿಬ್ಬರನ್ನೂ ಸಂಬಾಳಿಸೋದು ಬಲು ಕಷ್ಟ. ಅಯ್ಯಬ್ಬಾ ಇನ್ನು ತಿಂಡಿ ಏನು ಮಾಡೋದು? ಅವನಿಗೆ ಆಗೋದು ಇವಳಿಗಾಗೋಲ್ಲ. ಇವಳಿಗಾಗೋದು ಅವನಿಗೆ ಆಗೋಲ್ಲ‌. ಯಾಕೊ ಇತ್ತೀಚೆಗೆ ಕೆಲಸ ಮೊದಲಿನ ಹಾಗೆ ಮಾಡೋಕು ಆಗುತ್ತಿಲ್ಲ. ಆಗಾಗ ಸುಸ್ತು. ಆದರೆ ದಿನ ನಿತ್ಯದ ಕೆಲಸ ಮಾಡಲೇ ಬೇಕು. ಸಂಸಾರ ಹೆಗಲಿಗೇರಿದ ದಿನದಿಂದ ನಿಭಾಯಿಸೋದರಲ್ಲೆ ಅದ೯ ಆಯುಷ್ಯ ಜಾರಿಕೊಂಡು ಹೋಯಿತು. ಯಜಮಾನರ ಕಳೆದುಕೊಂಡು ಪಟ್ಟ ಕಷ್ಟ ಯಾರಿಗೂ ಬೇಡ.
“ಅಮ್ಮ ತಿಂಡಿ. ವಾವ್! ಪುರಿ. ಯಮ್ಮಿ ಯಮ್ಮಿ. ಸೂಪರ ಅಮ್ಮ. ಸಾಗು. ಯಸ್ ಮಮ್ಮಿ I love you.” ತಬ್ಬಿಕೊಂಡು ಮುತ್ತು ಕೊಡುತ್ತಾಳೆ.
“ಹೊಗೆ ಇದಕೇನು ಕಮ್ಮಿ ಇಲ್ಲ. ಎಲ್ಲ ನಿನ್ನ ಮೂಗಿನ ನೇರಕ್ಕೆ ಆದರೆ ಆಯಿತು. ” ಸ್ವಲ್ಪ ಮುಂಗೋಪಿ. ಕೋಪ ಕ್ಷಣದಲ್ಲಿ ಮರೆತು ಬಿಡುತ್ತಾಳೆ. ಒಮ್ಮೊಮ್ಮೆ ಆಫೀಸಿಗೆ ಹೋಗಿ WhatsApp ನಲ್ಲಿ “sorry mom ” chat ಮಡೋದು. ಆಗೆಲ್ಲ ನಗುತ್ತೇನೆ ನನ್ನಷ್ಟಕ್ಕೆ.
“ಏನಮ್ಮ, ನಿನ್ನ ಮಗಳಿಗೆ ಹೇಗೆ ಬೇಕೊ ಹಾಗೆ ಮಾಡುತ್ತೀಯ. ನನಗೆ ಬೇಡ ಪೂರಿ. ಗೊತ್ತಿಲ್ವ ನಾನು ತಿನ್ನೋಲ್ಲ ಅಂತ.”
” ಇರೊ ಮಾರಾಯ. ನಿನಗೆ ರೊಟ್ಟಿ ಮಾಡುತ್ತೇನೆ. ಕೂತಿರು.”
” ಟಕ್ಕ ಟಡ ಟಕ್ಕ್” ಟೇಬಲ್ ಮುಂದೆ ಕೂತು ತಬಲ ಸ್ಟಾರ್ಟ ಮಗರಾಯಂದು. ಮಮತೆ ಉಕ್ಕುತ್ತದೆ ಮಕ್ಕಳ ನಡೆ ಕಂಡು.
“ಅಮ್ಮ, ಸಾಗು ಚೆನ್ನಾಗಿ ಆಗಿದೆ. ಸ್ವಲ್ಪ ಹಾಕು. ಮಧ್ಯಾಹ್ನ ಲಂಚ ಬೇಡ. ಊಟಕ್ಕೆ ಹೊರಗಡೆ ಹೋಗುತ್ತಿದ್ದೇನೆ. ನೀನೂ ತಿನ್ನಮ್ಮ. ಬಾ ಕೂತಕೊ”.
ಮಗನ ಇನ್ನೊಂದು ರೀತಿ ಪ್ರೀತಿ. ಭಗವಂತ ಇವರಿಬ್ಬರನ್ನೂ ಚೆನ್ನಾಗಿ ಇಟ್ಟಿರಪ್ಪಾ ತಾಯಿಯ ಪ್ರಾಥ೯ನೆ.
ಲಗುಬಗೆಯಿಂದ ಮನೆಕೆಲಸವೆಲ್ಲ ಮುಗಿಸಬೇಕು. ಬೇರೆ ಎಷ್ಟೆಲ್ಲ ಕೆಲಸವಿದೆ. ಬ್ಯಾಂಕಿಗೆ ಬೇರೆ ಹೋಗಬೇಕು. ಅದೇನು ಪೇನಷನ್ ಬಂತೊ ಇಲ್ವೊ. ನಾಡಿದ್ದು ಭಾನುವಾರ. ಟ್ಯಾಂಕ ಬೇರೆ ಕ್ಲೀನ ಮಾಡಿಸಬೇಕು. ಆ ಹುಡುಗ ಊರಲ್ಲಿ ಇದ್ದಾನೊ ಇಲ್ಲವೊ. ಫೋನ ಮಾಡಿ ಬಾ ಹೇಳಬೇಕು‌. ಹೀಗೆ ಅದೇನೇನೊ ಯೋಚನೆಯಲ್ಲಿ ಶಾರದಾಳ ಮನಸ್ಸು ಲೆಕ್ಕಾಚಾರ ಹಾಕುತ್ತಲೇ ಇತ್ತು.
ಫೋನ ರಿಂಗಾಗುತ್ತಿದೆ. “ಹಲೋ, ಯಾರು? ಹೊ ಅತ್ತೆ, ಆರಾಮಾ? ಏನ್ ಸಮಾಚಾರಾ? ”
“ಏನು ಸುದ್ದಿ ಗೊತ್ತಾಯಿತಾ? ನಯನಾ ಗಂಡ ತೀರಿಕೊಂಡನಂತೆ. ಆತ್ಮಹತ್ಯೆ ಅಂತೆ. ನೋಡೆ ಯಾಕಂತ ಹೀಗೆ ಮಾಡಿಕೊಂಡನೊ. ಬೇಜಾರಾಗುತ್ತಿದೆ. ಹೆತ್ತವರ ಕಥೆ ಹೇಳು. ಹೀಗೆ ಯಾಕೆ ಮಾಡಿಕೊಂಡನೊ.”
ನನಗೂ ಅದೆಷ್ಟು ಬೇಜಾರು ಆಗುತ್ತಿದೆ. ಪಾಪ ಇರೊ ಒಬ್ಬಳು ಮಗಳ ಮದುವೆ ಆಗಿ ಸ್ವಲ್ಪ ತಿಂಗಳಾಯಿತು‌. ಬದುಕೋದಕ್ಕೆ ಯಾವ ತೊಂದರೆಯೂ ಇಲ್ಲ. ಆದರೆ ಆಸ್ತಿ ದುಡ್ಡು ನೆಮ್ಮದಿ ಕೊಡುತ್ತಾ? ಪಾಪ ಈಗಿನ್ನೂ ಐವತ್ತು ವಷ೯ ಇರಬೇಕು. ಈ ವಯಸ್ಸಿನಲ್ಲೇ ಅಲ್ಲವೆ ಸಂಗಾತಿಯ ಅಗತ್ಯ ಇರೋದು. ಅದೇಗೆ ಒಬ್ಬಳೇ ಜೀವನ ಮಾಡುತ್ತಾಳೊ ಏನೋ.
ಹೆಣ್ಣಿನ ಜೀವನ ಅದೆಷ್ಟು ಅತಂತ್ರ‌. ಹುಟ್ಟಿನಿಂದ ಹೆತ್ತವರ ಮಡಿಲಲ್ಲಿ ಹಾಯಾಗಿ ಬೆಳೆದು ಕೊನೆಗೆ ಮದುವೆಯ ವಯಸ್ಸಿನಲ್ಲಿ ಇಷ್ಟ ಇದ್ದೊ ಇಲ್ಲದೆಯೊ ಗಂಡನ ಕಟ್ಟಿಕೊಂಡು ಸಂಸಾರದ ಬಂಡಿ ಸಾಗಿಸುತ್ತಿರುವಾಗ ಯಾರ ಜೀವನದಲ್ಲಿ ಯಾವ ರೀತಿ ಏರು ಪೇರು ಬೇಕಾದರೂ ಆಗಬಹುದು. ಹೆಣ್ಣು ಮಕ್ಕಳಿಗೆ ಮದುವೆ ಆಯಿತು ಅಂತ ನೆಮ್ಮದಿಯಿಂದ ಇರುವುದಕ್ಕೆ ಸಾಧ್ಯವೆ ಇಲ್ಲ.
ಯಾಕೊ ತಲೆಯೆಲ್ಲ ಬಿಸಿ ಆಗುತ್ತಿದೆ. ಇರುವ ನನ್ನ ಮಗಳ ಯೋಚನೆ ಆಗಾಗ ನೆಮ್ಮದಿ ಹಾಳು ಮಾಡುತ್ತದೆ. ಹೇಗೆ ಅವಳ ಬದುಕು ಕಟ್ಟಿ ಕೊಡೋದು. ಯಾರು ಹೇಗೊ ಏನೊ‌. ಬುದ್ಧಿವಂತೆ. ಹೆಣ್ಣಿಗೆ ಇರಬೇಕಾದ ಎಲ್ಲ ಗುಣ ಲಕ್ಷಣಗಳೂ ಅವಳಲ್ಲಿ ಇದೆ‌. ಆದರೆ ಇವಳಿಗೆ ತಕ್ಕಂತೆ ಗಂಡು ಸಿಗಬೇಕಲ್ಲ. ಜ್ಞಾನ ಜಾಸ್ತಿ‌ ಈಗಿನ ಕಾಲದ ಹುಡುಗಿಯರಿಗೆ. ಬದುಕನ್ನು ಬಹಳ ಚೆನ್ನಾಗಿ ಅಥ೯ ಮಾಡಿಕೊಂಡಿರುತ್ತಾರೆ. ಇವರ ವಯಸ್ಸಿಗೆ ನಮ್ಮ ಕಾಲದಲ್ಲಿ ಏನು ಗೊತ್ತಿತ್ತು. ಅಪ್ಪ ಅಮ್ಮನ ನೆರಳಷ್ಟೆ ಗೊತ್ತು. ಪ್ರಪಂಚದ ಜ್ಞಾನನೆ ಇರಲಿಲ್ಲ‌.
“ಅಮ್ಮ”
“ಏನೊ ರಾಜು ಇಷ್ಟು ಬೇಗ ಬಂದು ಬಿಟ್ಟೆ? ಆಫೀಸಿಗೆ ಹೋಗಿಲಿಲ್ವಾ? ಏನಾಯಿತೊ?”
“ಹೋಗಿದ್ದೆ, ರಜೆ ಹಾಕಿ ಬಂದೆ. ಯಾಕೊ ತುಂಬಾ ತಲೆ ನೋಯುತ್ತಿದೆ. ಸ್ವಲ್ಪ ಟೀ ಮಾಡಿಕೊಡುತ್ತೀಯಾ? ಕುಡಿದು ಮಲಕೊತೀನಿ.”
” ಹೂ, ಮಾಡಿಕೊಡ್ತೀನಿ ಇರು.”
ಯಾಕೆ ಇವನಿಗೆ ಏನಾಯಿತು. ಬೆಳಿಗ್ಗೆ ಆರಾಮಾಗೇ ಇದ್ದನಲ್ಲ. ತಾನು ಏನು ಅಡಿಗೆ ಮಾಡಿದ್ದೆ. ? ಊಟದಲ್ಲೇನಾದರೂ ವ್ಯತ್ಯಾಸ ಆಯಿತಾ?
ಮನೆಗೆ ವಾಪಸ್ಸು ಬಂದಾ ಅಂದರೆ ಬಹಳ ನೋವಿರಬೇಕು. ಪಾಪ! ಹೆತ್ತೊಡಲ ಚಡಪಡಿಕೆ. ಏನಾದರಾಗಲಿ. ಮೊದಲು ಒಂದಷ್ಟು ಎಣ್ಣೆ ಹಾಕಿ ತಲೆ ತಂಪು ಮಾಡಬೇಕು. ಆ ಕಂಪ್ಯೂಟರ್ ಮುಂದೆ ಕುಳಿತು ಸದಾ ಕೆಲಸ ; ಇಲ್ಲ ಓದೋದು. ಒಂದದ೯ ಗಂಟೆ ರೆಸ್ಟ ತಗೋಳೊದಂತೂ ಗೊತ್ತೇ ಇಲ್ಲ. ಹೇಳಿ ಹೇಳಿ ಸಾಕಾಗೋಗುತ್ತೆ. ಹಠ ಜಾಸ್ತಿ. ಅವಳಾದರೂ ವಾರಕ್ಕೊಮ್ಮೆ ತಪ್ಪದೆ “ಅಮ್ಮ ಎಣ್ಣೆ ಹಾಕು” ಅಂತ ಹಾಕಿಸ್ಕೋತಾಳೆ. ಇವನು ಮೊಂಡ ಕೆಲವು ವಿಷಯದಲ್ಲಿ.
“ಬಾರೊ ಇಲ್ಲಿ. ತಗೊ ಕುಡಿ.”
“ಹೂ ಕೊಡಮ್ಮ.”
“ನೋಡು ರಾಜು ನಾ ಎಷ್ಟು ಸಾರಿ ಹೇಳಿದೀನಿ ವಾರಕ್ಕೊಮ್ಮೆ ಎಣ್ಣೆ ಹಾಕಿ ತಲೆ ತಂಪು ಮಾಡಿಕೊ. ಈಗ ಮಾಡೊ ಕೆಲಸ ತಲೆ ಕಾಯುತ್ತೆ. ಎಷ್ಟು ಹೇಳಿದರೂ ಕೇಳೋದೆ ಇಲ್ಲ. ನೋಡು ಇವತ್ತು ನಾ ಹೇಳಿದ ಹಾಗೆ ಕೇಳಬೇಕು ಇಲ್ಲಾ ಅನ್ನೋ ಮಾತೇ ಇಲ್ಲ. ಟೀ ಕುಡಿದಾಯ್ತಾ? ಬಾ ಇಲ್ಲಿ. ಕೂತಕೊ. ಎಣ್ಣೆ ಹಾಕ್ತೀನಿ. ”
“ಆಯ್ತಮ್ಮ. ಹಾಕು. ಒಟ್ಟಿನಲ್ಲಿ ಈ ನೋವು ಕಡಿಮೆ ಆದರೆ ಸಾಕು. ಅಲ್ಲಮ್ಮ ಇಷ್ಟು ಸಣ್ಣ ನೋವಿಗೆ ಆಕಾಶವೇ ತಲೆ ಮೇಲೆ ಬಿದ್ದವಳ ತರ ಆಡ್ತೀಯಲ್ಲ? ಆಗಿಂದ observe ಮಾಡ್ತಾನೇ ಇದ್ದೀನಿ. ನಿನ್ನಲ್ಲೆ ಏನೊ ಯೋಚನೆ ಮಾಡ್ತಿದ್ದೀಯಾ, ಮಾತಾಡ್ತೀಯಾ. ಅಮ್ಮ ಇಷ್ಟೆಲ್ಲ ಪ್ರೀತಿ ತೋರಿಸ್ತೀಯಾ. ಅಮ್ಮ ನಿನ್ನ ಮಡಿಲಲ್ಲಿ ಮಲಕೊಳ್ಳಲಾ ನಾನು ಒಂದು ಸಾರಿ.”
“ಅಯ್ಯೋ ನನ್ನ ಕಂದಾ ಇದು ಅಮ್ಮನ ಕೇಳೊ ಮಾತೇನೊ. ಈ ಅಮ್ಮನ ಮಡಿಲು ಯಾವಾಗಲೂ ಮಕ್ಕಳನ್ನು ಮಲಗಿಸಿಕೊಳ್ಳೋಕೆ ಇರೋದು. ನನ್ನ ಮಗನೆ ಬಾರೊ, ನೀ ಕೇಳೋದು ಹೆಚ್ಚೊ; ನಾ ಕರೆಯೋದು ಹೆಚ್ಚೊ. ಇಷ್ಟೊಂದು ಪ್ರೀತಿ ಇಟ್ಟುಕೊಂಡಿರೊ ನೀನು ನಾಳೆ ನಿನ್ನ ಹೆಂಡತಿ ಬಂದ ಮೇಲೆ ದೂರ ಮಾಡಿ ಬಿಡ್ತೀಯೊ ಏನೊ”.
“ಹೋಗಮ್ಮ, ಬಿಡ್ತು ಅನ್ನು. ನಾನು ನಿನ್ನ ಮಗ ಅಮ್ಮ. ಯಾವತ್ತೂ ನೀ ನನಗೆ ಬೇಕಮ್ಮ. ನೀನು ನಮ್ಮನ್ನೆಲ್ಲ ಅದೆಷ್ಟು ಕಷ್ಟಪಟ್ಟು ಸಾಕಿದಿಯಾ. ನಾವು ಇವತ್ತು ಈ ಮಟ್ಟಕ್ಕೆ ಬರಲು ನೀನೆ ಕಾರಣ. ಹೇಗಮ್ಮ ಮರಿತೀವಿ. ನಾನೂ ಮರೆಯೋಲ್ಲ. ನನ್ನ ತಂಗೀನೂ ಮರೆಯೋಲ್ಲ. ನೀನು ಇಲ್ಲದ ಯೋಚನೆ ಮಾಡಿ ತಲೆ ಕೆಡಿಸಿಕೊಬೇಡ‌. ನೀನು ಇನ್ಮೇಲೆ ಹಾಯಾಗಿ ಇರಬೇಕು. ತಂಗಿ ಜವಾಬ್ದಾರಿ ನನಗಿರಲಿ. ಬಾಮ್ಮ ಎಣ್ಣೆ ಹಾಕು.”
ಮಗನ ಮಾತು ಕೇಳಿ ‘ಆಕಾಶಕ್ಕೆ ಮೂರೇ ಗೇಣು’. ಸಾಥ೯ಕ ಆಯಿತು. ಹೆತ್ತ ತಾಯಿಯ ಒಡಲು ತಂಪಾಗಿರಿಸುವ ಮಕ್ಕಳು ಇರುವಾಗ ನಾ ಯಾಕೆ ಯೋಚಿಸಲಿ?
” ಆಹಾ! ಅಮ್ಮ ನಿನ್ನ ಕೈ ತಲೆಯಲ್ಲಿ ಆಡುತ್ತಿದ್ದರೆ ಹೀಗೆ ಮಡಿಲಲ್ಲಿ ಮಲಗಿಕೊಂಡೇ ಇರೋಣ ಅನಿಸುತ್ತಮ್ಮ‌ ಅದೇನು ಮ್ಯಾಜಿಕ ಮಾಡಿದೆ? ತಲೆ ಎಷ್ಟು ತಂಪಾಗ್ತಿದೆ. ಸದ್ಯ ನೋವು ಕಡಿಮೆ ಆಗ್ತಿದೆ. Thanks ಅಮ್ಮ.”
” ಏಯ್, ಹುಚ್ ಮುಂಡೆದೆ ನಾನು ನಿನ್ನಮ್ಮ ಕಣೊ. ಅದೇನು thanks ಅಂತೆ. ನನಗ್ಯಾಕೊ ಈ ಥ್ಯಾಂಕ್ಸ್ ಪೀಂಗ್ಸು. ಏನು ಬೇಕಾಗಿಲ್ಲ. ಹೋಗಿ ಮಲಗು. ಹಾಃ, ಹಾಗೆ ದಿಂಬಿಗೆ ಒಂದು ಹಳೆ ಟವಲ್ ಹಾಕ್ಕೊ.”
ಮನಸ್ಸಿನಲ್ಲೆ ನಗುತ್ತಾ ತನ್ನ ರೂಮು ಸೇರಿಕೊಂಡ. ಅಲ್ಲಾ ಈ ಅಮ್ಮ ನನ್ನ ಅದೆಷ್ಟು ಚಿಕ್ಕವನಂತೆ ಟ್ರೀಟ್ ಮಾಡ್ತಾಳೆ. ಮಾತ ಮಾತಿಗೂ ಮರಿ, ಮರಿ ಅಂತಾಳೆ‌. Friends ಮುಂದೆನೂ ಹಾಗೆ ಕರಿತಾಳೆ‌. ಹೇಳಿದ್ರೆ “ಹೆತ್ತವರಿಗೆ ಹೆಗ್ಗಣನೂ ಮುದ್ದೇ, ನಿಂಗೇನೊ ಗೊತ್ತು?” ಅಂತ ಗಾದೆ ಬೇರೆ ಹೇಳುತ್ತಾಳೆ. ಒಳ್ಳೆ ಅಮ್ಮ, ನನ್ನಮ್ಮ!
ಮಗ ಮಲಗಿರೋದು ರೂಮಿನ ಕಡೆ ಬಗ್ಗಿ ನೋಡಿ ದೃಡಪಡಿಸಿಕೊಂಡ ಶಾರದಮ್ಮ ತಾನೂ ಸ್ವಲ್ಪ ಕಾಲು ಚಾಚಿ ವಿಶೃಮಿಸಲು ತನ್ನ ರೂಮಿನ ಕಡೆ ಹೋಗುತ್ತಾಳೆ. ಎದುರಿಗೆ ಕಂಡ ಅವಳಮ್ಮನ ಫೋಟೊ ಅಲ್ಲೆ ತಡೆದು ನಿಲ್ಲಿಸುತ್ತದೆ. ಅದೆಷ್ಟು ಹೊತ್ತು ನೋಡಿದರೂ ತೃಪ್ತಿ ಆಗೋದಿಲ್ಲ ಮನಸ್ಸಿಗೆ‌. ನೆನಪುಗಳ ಪುಟ ಬಿಚ್ಚಿ ಕೊಂಡಾಗಲೆಲ್ಲ ಅಳುವೊಂದೆ ಈಗವಳ ಪಾಲಿಗೆ. ಬದುಕಿರುವಷ್ಟು ದಿನ ಒಂದು ದಿನ ಕೂಡ ನೆಮ್ಮದಿಯ ಜೀವನ ಅಮ್ಮನಿಗೆ ಇರಲಿಲ್ಲ. ನನಗೆ ಬುದ್ದಿ ಬಂದಾಗಿಂದ ಅಮ್ಮ ಕಾಯಿಲೆಯಿಂದ ಯಾವಾಗಲೂ ಔಷಧೀಯ ಮೊರೆ ಹೋಗಿದ್ದು, ಅಪ್ಪ ಪೇಟೆಯಿಂದ ಬರುವಾಗ ತನಗೆ ಬೇಕಾದ ಔಷಧಿ ತಂದಿದ್ದಾರಾ ಅಂತ ಮೊದಲು ನೋಡೋದು. ಅಕಸ್ಮಾತ್ ಮರೆತು ಬಂದರೆ ಸಿಟ್ಟು, ಬೇಜಾರು ಮಾಡಿಕೊಂಡು ಆಮೇಲೆ ಅಪ್ಪ “ಮಾರಾಯಿತಿ ತಂದುಕೊಡ್ತೀನಿ, ಸುಮ್ನಿರು” ಹೇಳುತ್ತಿದ್ದ ಮಾತುಗಳು ತುಂಬಾ ದುಃಖ ತರಿಸುತ್ತದೆ. ಔಪಧಿ ಬದುಕಿನ ಜೀವಾಳ ಅಮ್ಮನಿಗೆ. ಸೀರೆ ಕೇಳುತ್ತಿರಲಿಲ್ಲ, ಒಡವೆ ಕೇಳುತ್ತಿರಲಿಲ್ಲ. ಅದೆಷ್ಟು ದೈಹಿಕವಾಗಿ ನೋವು ತಿನ್ನುತ್ತಿದ್ದೆ ಅಮ್ಮ ನೀನು. ದೊಡ್ಡ ನಿಟ್ಟುಸಿರು ಕಣ್ಣೀರ ಬೆರೆತು.
ಈ ನೆನಪುಗಳೆ ಹಾಗೆ ಹೊತ್ತಿಲ್ಲದ ಹೊತ್ತಲ್ಲಿ ಸುತ್ತಿಕೊಳ್ಳುತ್ತವೆ. ಕಣ್ಣು ಸೋತು ಮಲಗಿದರು ಒಂದರಗಳಿಗೆ ನಿದ್ದೆ ಸುಳಿಯುತ್ತಿಲ್ಲ. ತಲೆ ತುಂಬ ಯೋಚನೆ ನೆನಪುಗಳ ಹಾವಳಿ‌. ಬೆಳಿಗ್ಗೆ ಅತ್ತೆ ಹೇಳಿದ ವಿಚಾರ ಯಾಕೊ ತುಂಬಾ ಹಿಂಸೆಯಾಗುತ್ತಿದೆ. ಬೇಡ ಬೇಡಾ ಅಂದರು ಮನಸ್ಸು ಕೊರಿತಿದೆ. ಮಗಳು ಹುಟ್ಟಿದಾಗ ಇವರಮ್ಮ
“ಅಯ್ಯೋ ಹೆಣ್ಣು ಹುಟ್ಟಿತಲ್ಲ; ಹೆಣ್ಣಿನ ಜೀವನ ಕಷ್ಟ. ದೈಹಿಕವಾಗಿ ಮಾನಸಿಕವಾಗಿ ಹಿಂಸೆ ಪಡಬೇಕು.”
ಆದರೆ ಇವರಪ್ಪ ಅದೆಷ್ಟು ಖುಷಿಪಟ್ಟಿದ್ದರು.
” ನಮ್ಮನೆ ಪುಳ್ಳಿ, ಮಹಾಲಕ್ಮೀ. ಹೆಣ್ಣು ಮಕ್ಕಳಿರಲಿಲ್ಲ. ಇವಳು ನಮ್ಮನೆ ಮುದ್ದು ಗೌರಿ”
ಅಂತ ಅದೆಷ್ಟು ಸಂತೋಷ ಪಟ್ಟಿದ್ದರು. ಅವರ ಆಶಿವಾ೯ದವೊ ಏನೊ ಹಾಗೆ ಬೆಳೆದುಕೊಂಡು ಬಂದಿದ್ದಾಳೆ.
ಬೆಳೆದು ನಿಂತ ಮಗಳ ಬವಿಷ್ಯದ ಯೋಚನೆ ಈಗ. ಕೈ ಹಿಡಿದ ಗಂಡ, ಸೇರಿದ ಮನೆ ಎಲ್ಲ ಸರಿಯಾಗಿದ್ದರೆ ಬದುಕು ಸುಂದರ. ಅದಿಲ್ಲವಾದರೆ ಜೀವನ ನರಕ. ಮಾಡೊ ಪೂಜೆ ಪುನಸ್ಕಾರ ಎಲ್ಲ ಭಕ್ತಿಯಿಂದ ಮಾಡುತ್ತಿದ್ದೇನೆ. ಇನ್ನವಳ ಹಣೆ ಬರಹ ಹೇಗಿದೆಯೊ ಏನೊ.
ಛೆ, ನಾನ್ಯಾಕೆ ಇಷ್ಟೆಲ್ಲಾ ತಲೆ ಬಿಸಿ ಮಾಡಿಕೊಳ್ಳುತ್ತಿದ್ದೇನೆ? ಈ ತರ ಯೋಚಿಸಿದರೆ ಆರೋಗ್ಯ ಹಾಳಾಗುತ್ತೆ. ಇಲ್ಲ ನಾನು ಧೈರ್ಯಗೆಡಬಾರದು. ಇಲ್ಲೆ ಕೂತರೆ ಬೇಡಾದ ಯೋಚನೆನೆ ಬರೋದು. ಎದ್ದು ಹೊರಗೆ ಬರುತ್ತಾಳೆ.
ಮನೆಯೆಲ್ಲ ನಿಶ್ಯಬ್ದ ಮೌನ. ಮಗ ಏಳುವಷ್ಟರಲ್ಲಿ ಏನಾದರು ತಿಂಡಿ ಮಾಡೋಣ. ಪಾಪ ಊಟನೂ ಮಾಡಿಲ್ಲ. ಶಾವಿಗೆ ಬಾತು ಮಾಡಿದರಾಯಿತು. ಇಬ್ಬರೂ ತಿನ್ನುತ್ತಾರೆ.
ಮುಂಬಾಗಿಲಲ್ಲಿ ಯಾರೊ ಬಂದಂತಿದೆಯಲ್ಲ;
“ಯಾರು?ಯಾರಲ್ಲಿ?”
“ನಾನು ಕಣಮ್ಮ,ನಂಜಿ”
“ಏನಿದು ಇಷ್ಟು ಹೊತ್ತಲ್ಲಿ.”
“ಅದೆ ವಿನಿತಮ್ಮನವರ ಮನೆಯಲ್ಲಿ ಸ್ವಲ್ಪ ಕೆಲಸ ಇತ್,ಒಸಿ ಮೂರು ಗಂಟೆಗೆ ಬರಕಾತ್ತಾ ಅಂತ ಕೇಳೀರ್ ಕಣಮ್ಮ. ಹಂಗೆ ಆ ಕಡಿ ಹೋಗೊ ಮುಂದ ನೀವು ಕಂಡ್ರ ಕಿಟಕೀಲಿ. ಬಂದೆ. ಒಸಿ ನೀರ್ ಕೊಡ್ತ್ರಾ. ಏನ್ ದಗಿ ಮಾರಾಯ್ರೆ. ಆಸ್ರ ಆತ್ತ್.
“ಇರು. ತರ್ತೀನಿ.”
“ಅಬ್ಬ, ಈಗ ಒಸಿ ಸಮಾಧಾನ ಆಯ್ತ್ ಅಮ್ಮ. ನೀವೇನೊ ಅಡಿಗಿ ಮನಿಲಿ ಏನೊ ಮಾಡ್ತಿದ್ರಿ. ನಾ ಬಂದ ತೊಂದ್ರಿ ಕೊಟ್ನ ಅಂತ ಕಂಡೆ.”
” ಅಯ್ಯೋ ಹಾಗೇನಿಲ್ಲ ನಂಜಿ. ನೀ ಒಂದು ಕೆಲಸ ಮಾಡು. ವಿನಿತಮ್ಮನ ಹತ್ತಿರ ಸಾಯಂಕಾಲ ದೇವಸ್ಥಾನಕ್ಕೆ ಹೋಗೋಣ ಅಂತ ನಾ ಹೇಳಿದೆ ಅಂತ ಹೇಳು. ಹೇಗಿದ್ರೂ ಅವರ ಮನೆ ಕಡೆ ದಾರಿನೆ. ನಾನು ಆರು ಗಂಟೆಗೆ ಬರ್ತೀನಿ. ರೆಡಿಯಾಗಿರಕೇಳು. ನಾನು ಫೋನ ಮಾಡೋಣ ಅಂದುಕೊಂಡಿದ್ದೆ. ಅಷ್ಟರಲ್ಲಿ ನೀನೆ ಬಂದೆ. ನಂಜಿ ಟೀ ಮಾಡಲೆನೆ.”
“ಏ…ಬ್ಯಾಡ್ರಮ್ಮ. ನಾ ಬತಿನಿ. ಏನ್ ಕೆಲಸ ಐತೊ ಏನೊ!”
ಅಲ್ಲಾ ಈ ನಂಜಿ ಕೆಲಸದವಳಾದರೂ ಸುಮ್ ಸುಮ್ನೆ ಯಾರ ಮನೆಗು ಹಾಗೆಲ್ಲ ಬರುವವಳಲ್ಲ. ಇವತ್ಯಾಕೆ ಮಾತಾಡಿಸಿಕೊಂಡು ಬಂದಳು. ಸ್ವಲ್ಪ ಹೊತ್ತು ಮಾತಾಡಿ ಏನು ಅಂತ ತಿಳಿದುಕೊಳ್ಳಬೇಕಿತ್ತು. ಕೆಲಸದವಳಾದರು ಒಬ್ಬರ ಮನೆ ಸುದ್ದಿ ಇನ್ನೊಬ್ಬರ ಮನೆಗೆ ಹೋಗಿ ಹೇಳೊ ಚಾಳಿಯವಳಲ್ಲ. ಸ್ವಲ್ಪ ತಿಳುವಳಿಕೆ ಇರುವವಳು. ಅದಕೆ ತಾನೆ ನಾನೇನು ಮಕ್ಕಳೂ ಸಹ ಅವಳು ಬಂದರೆ ಮಾತಾಡಿಸೋದು.
ಮನುಷ್ಯ ಎಷ್ಟೇ ಶ್ರೀಮುಂತನಾಗಿರಲಿ, ಬಡವನಾಗಿರಲಿ, ಓದಿರಲಿ, ಓದದೇ ಇರಲಿ; ರೀತಿ ನೀತಿ ಸರಿಯಾಗಿದ್ದರೆ ಎಲ್ಲಿ ಹೋದರೂ ಮಯಾ೯ದೆ ಸಿಗೋದು!
ಬಾಗಿಲು ಹಾಕಿ ತನ್ನ ಕೆಲಸದಲ್ಲಿ ಮಗ್ನಳಾಗುತ್ತಾಳೆ.
“ಅಮ್ಮ ಏನಮ್ಮ ಮಾಡ್ತಿದ್ದೀಯಾ?
“ರಾಜು ಎದ್ಯ ಮರಿ. ಮುಖ ತೊಳೆದು ಬಾ. ಹೇಗಿದೆ ತಲೆ ನೋವು. ತಿಂಡಿ ತಿನ್ನುವಂತೆ ಬಾ.”
“ಅಮ್ಮ ಕೊಡಮ್ಮ. ನಿದ್ದೆ ಮಾಡಿದ್ದು ಸ್ವಲ್ಪ relief ಆಯ್ತು. ಎಣ್ಣೆ ಬೇರೆ ಹಾಕಿದ್ದೆ. I am cool cool. Now I am alright. ಟಕ್ಕ ಟಡ ಟಕ್ಕ” ಅದೆ style.
“ಸಧ್ಯ. ಹೀಗೆ ತುಂಟತನ, ಚೇಷ್ಟೆ, ಖುಷಿ ಯಾವಾಗಲೂ
ನಿನ್ನಲ್ಲಿ ಇದ್ರೆ ಸಾಕು ಕಣೊ. ಬಾ ತಿನ್ನು. ಮತ್ತೆ ಹೊರಗಡೆ ಎಲ್ಲೂ ಹೋಗಬೇಡ. ಆರಾಮಾಗಿರು ಮನೆಯಲ್ಲೆ.”
“Ok mom. ಅಷ್ಟಕ್ಕೂ ನಾ ಎಲ್ಲಿಗೆ ಹೋಗ್ತೀನಿ. ನಿನ್ನ ಕಣ್ಣ ಮುಂದೆ ಇರ್ತೀನಲ್ಲಮ್ಮ, officeಗೆ ಹೋಗೋದು ಬಿಟ್ರೆ. ಅವಳ ತರ ನನಗೆ ಅಷ್ಟು friends ಯಾರಿದ್ದಾರೆ. ನನಗೆ ನನ್ನ ಕೆಲಸವೇ ಬೇಕಾದಷ್ಟಿದೆ. ಒಂದಷ್ಟು ಬರೆಯೋದು pending ಇದೆ. ಓದೋದಿದೆ‌.”
“ಆಯ್ತು. ನಾನು ಸಾಯಂಕಾಲ ದೇವಸ್ಥಾನಕ್ಕೆ ಹೋಗಿ ಬರ್ತೀನಿ. ತಂಗಿಗೆ ತಿಂಡಿ ತಿನ್ನೋಕೆ ಹೇಳು ಬಂದ ಮೇಲೆ.”
ಮಗನ ಮುದ್ದು ಮುಖ ಕಣ್ತುಂಬಿಕೊಂಡು ನಗುತ್ತಾಳೆ ಸಂತೋಷದಿಂದ. ನನ್ನ ಮಗ, ಮುದ್ದು ಮಗ. ಅದ್ಯಾಕೊ ಮಗಳಿಗಿಂತ ಈ ಮಗನ ಕಂಡರೆ ಒಂದಿಡಿ ಪ್ರೀತಿ ಜಾಸ್ತಿ. ಅವನ ಗುಣನೆ ಹಾಗಿದೆ‌. ಇಷ್ಟು ಸಣ್ಣ ವಯಸ್ಸಿಗೆ ಎಷ್ಟೊಂದು ತಿಳಿದುಕೊಂಡಿದ್ದಾನೆ. ಜವಾಬ್ದಾರಿ ಹುಡುಗ. ತಾನಾಯಿತು ತನ್ನ ಕೆಲಸವಾಯಿತು. ನನ್ನ ಅದ೯ ಚಿಂತೆ ಕಡಿಮೆ ಮಾಡಿದ್ದಾನೆ. ನಾನಿಲ್ಲಾ ಅಂದರು ತನ್ನ ತಂಗೀನಾ ಕರೆದು ಕಳಿಸಿ ಮಾಡುವಂತ ಹುಡುಗ‌. ಗಂಡನ ಮನೆಯಲ್ಲಿ ಎಷ್ಟೇ ಇರಲಿ ತವರು ಮನೆ ಕರುಳು ಸಂಬಂಧವೇ ಹೆಚ್ಚು ಹೆಣ್ಣು ಮಕ್ಕಳಿಗೆ‌‌.
ರಾತ್ರಿ ಮಲಗಿದಾಗ ದೇವಸ್ಥಾನದಲ್ಲಿ ವಿನಿತ ಹೇಳಿದ ವಿಷಯ ತಲೆ ಕೊರಿತಾ ಇದೆ. ಅಲ್ಲ ಈ ಜಗತ್ತಿನಲ್ಲಿ ಏನೇನೆಲ್ಲ ನಡಿತಿದೆ. ನಾವು ನಮ್ಮ ಮಕ್ಕಳ ಮೇಲೆ ಸಂಶಯಪಡೋದಕ್ಕಾಗುತ್ತ. ಯಾರೊ ಏನೊ ಮಾಡಿದ್ರು ಅಂತ ನಾ ಯಾಕೆ ನನ್ನ ಮಕ್ಕಳ ಮೇಲೆ ಸಂಶಯ ಪಡಲಿ. ಆದರೆ ವಿನಿತ ಒಂದು ಮಾತೇಳಿದಳು.
“ರೀ ಕಮಲಮ್ಮ ನಿಮ್ಮ ಮಕ್ಕಳ ಬಗ್ಗೆ ಗಮನ ಇರಲಿ. ಈಗ ಸಹವಾಸ ದೋಷ. ಮಕ್ಕಳು ಹಾಳಾಗೋಕೆ ಎಷ್ಟು ದಿನನೂ ಬೇಡ.”
ಏನೆ ಇರಲಿ ಮಕ್ಕಳ ಹತ್ತಿರ ಮಾತಾಡಿ ಪರಿಹಾರ ಮಾಡಿ ಕೊಳ್ಳಬೇಕು. ಮೊದಲು ಮಗಳಿಗೆ ಮದುವೆ ಮಾಡಬೇಕು. ಆಮೇಲೆ ರಾಜೂಗೆ ಅಣ್ಣನ ಮಗಳನ್ನು ತಂದುಕೊಂಡರೆ ಆಯ್ತು. ಅವನು ನನ್ನ ಮಾತು ತೆಗೆದು ಹಾಕೋದಿಲ್ಲ.
ಬೆಳಗಿನ ವಾಕಿಂಗ ಬೇಡ ಇವತ್ತು. ರಜೆ ಇದೆ. ಬೇಗ ಎಲ್ಲ ಕೆಲಸ ಮುಗಿಸಿ ಅಣ್ಣನ ಮನೆಗೂ ಹೋಗಿ ಬರಬೇಕು.
“ಲೋ ರಾಜು, ಸಂಧ್ಯಾ ಇಬ್ಬರೂ ಬನ್ನಿ ಇಲ್ಲಿ.”
“ಏನಮ್ಮೋ, ಏನ್ ಬೆಳಿಗ್ಗೆ ಬೆಳಿಗ್ಗೆ ಮಾತೆಯ ಮಮತೆ ಉಕ್ಕಿ ಹರಿತಿದೆ.”
“ಹೂ ಕಣಮ್ಮ. ಇವತ್ತು ಒಂದು ಮಾತು ಕೇಳಬೇಕು. ಇಬ್ಬರೂ ನನ್ನ ಹತ್ತಿರ ನಿಜ ಹೇಳಬೇಕು. ಸುಳ್ಳು ಹೇಳಿ ದರೆ ನನ್ನಾಣೆ.”
“ಯಾಕಮ್ಮ, ನಿನ್ನ ತಲೆಗೆ ಯಾರು ಹುಳ ಬಿಟ್ರು. ಈ ತರ ಬೆಳಿಗ್ಗೇನೆ ಶರತ್ತು ಹಾಕ್ತಿದ್ದೀಯಾ? ಓ, ಗೊತ್ತಾಯಿತು ಬಿಡು. ನಿನ್ನೆ ದೇವಸ್ಥಾನಕ್ಕೆ ಹೋದ ಪ್ರಭಾವ.”
“ಹೂ, ಕಣೊ ಅವಳೇನೊ ಹೇಳಿದ್ಲು. ಅದನ್ನೇ ನಿಮ್ಮ ಹತ್ತಿರ ಕೇಳೋಣ ಅಂತ. ಸಾವಧಾನವಾಗಿ ಕೇಳಿ ಉತ್ತರ ಕೊಡಿ.”
“ಆಯ್ತಮ್ಮ. ಅದೇನು ನಿನ್ನ ತಲೇಲಿ ಇರೋದು. ಬೇಗ ಹೇಳು. ಬೆಳಗಿನ ಟೀ ನೂ ಗೋತಾ ಮಾಡಬೇಡ.”
“ಏಯ್ ನಿಂಗೇನೆ ಗೊತ್ತು ಹೆತ್ತೊಡಲ ಸಂಕಟ. ನಿನಗೆಲ್ಲ ತಮಾಷೆ. ನಾ ಕೇಳೋದಿಷ್ಟೆ. ನೀವು ನಿಮ್ಮ friends ಜೊತೆ ಸೇರಿ ಕೆಟ್ಟ ವಿಡಿಯೋ ನೋಡೋದು, ಕೆಟ್ಟ pic ನೋಡೋದು ಎಲ್ಲ ಮಾಡ್ತೀರೆನ್ರೊ. ಪಕ್ಕದ ಬೀದಿ ಹುಡುಗರು ಹುಡುಗೀರು ಸೇರಿಕೊಂಡು ಇವೆಲ್ಲ ನೋಡ್ತೀರೋದು ಅವರ ಮನೆಯವರಿಗೆ ಗೊತ್ತಾಗಿ ಎರಡೆರಡು ಭಾರಿಸಿದರಂತೆ. ನಂಗೆ ಇದು ಕೇಳಿದಾಗಿಂದ ನಿಮ್ಮಿಬ್ಬರ ಬಗ್ಗೆ ಯೋಚನೆ ಆಯ್ತು. ಅದಕೆ ಕೂಡಿಸಿಕೊಂಡು ಕೇಳುತ್ತಿದ್ದೀನಿ.”
“ಅಮ್ಮ ಇಷ್ಟೆನಾ.” ಇಬ್ಬರೂ ಜೋರಾಗಿ ನಗುತ್ತಿದ್ದಾರೆ.
“ಯಾಕ್ರೋ ನಗತೀರಾ.”
“ಮತ್ತಿನ್ನೇನಮ್ಮ‌. ನಾವಿಬ್ಬರೂ ಆ ತರ ಇಲ್ಲ. ಪ್ರಮಾಣ ಮಾಡಿ ಹೇಳುತ್ತಿದ್ದೇವೆ. ಇಷ್ಟು open ಆಗಿ ಕರೆದು ಕೇಳಿದೆಯಲ್ಲ; ಅದಕೆ ಖುಷಿಯಿಂದ ನಗು ಬಂತು. ಅಲ್ವೇನೆ.”
“ಹೂ ಅಣ್ಣ. ಈ ಅಮ್ಮ ಒಬ್ಬಳು. ಅಮ್ಮ ನೋಡಮ್ಮ. ನಾವಿಬ್ಬರೂ ಎಷ್ಟೇ ಕಿತ್ತಾಡ್ಲಿ. Office ನಲ್ಲಿ ಇದ್ರೂ ದಿನಕ್ಕೆ ಅದೆಷ್ಟು ಸಾರಿ WhatsApp ನಲ್ಲಿ ಮಾತಾಡಿಕೊಳ್ತೀವಿ ಗೊತ್ತಾ ನಿಂಗೆ‌? ಏನಿದ್ರು ಇಬ್ಬರೂ share ಮಾಡಕೋತೀವಿ. ಸುಮ್ಮನೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡ. ನಾವು ನೀ ಹೆತ್ತ ಮಕ್ಕಳು. ಯಾವತ್ತೂ ದಾರಿ ತಪ್ಪೋದಿಲ್ಲ. ಗೊತ್ತಾಯಿತಾ?”
ಅಬ್ಬಾ ಮಕ್ಕಳ ಮಾತು ಮನ ತುಂಬಿ ಬಂತು. ನಗುತ್ತಾ ಎದ್ದು ಹೋದ ಕಮಲಮ್ಮ ಗಂಡನ ಫೋಟೋದ ಎದುರು ನಿಂತು ಏನೇನೊ ಮಾತಾಡಿಕೊಳ್ಳುತ್ತಿದ್ದಾಳೆ. ಒಂಟಿ ಬದುಕಿನ ಬಂಡಿ ತಾನೊಬ್ಬಳೆ ಎಳೆದು ಮಕ್ಕಳ ಬೆಳೆಸಿದ ರೀತಿ, ಅವರ ಹೊಗಳಿಕೆಯಲ್ಲಿ ತನ್ನೊಡಲು ತಂಪು ಮಾಡಿಕೊಳ್ಳುತ್ತಿದ್ದಾಳೆ. ಆನಂದ ಬಾಷ್ಪ ಸುರಿಯುತ್ತಿದೆ‌. ಹೆತ್ತ ಕರುಳಿನ ಕುಡಿಗಳು ತದೇಕ ಚಿತ್ತದಿಂದ ಈ ದೃಶ್ಯ ಕಂಡು ಬೆರಗಾಗಿ ನಿಂತಿದ್ದಾರೆ. ಉಷಾ ಕಾಲ ತಿಳಿಯಾಗಿದೆ.