ಹೆದ್ದಾರಿಗಳ ಅಭಿವೃದ್ಧಿಗೆ ವೇಗ ಬರಲಿ
ರಾಜ್ಯದ ಆಡಳಿತಾತ್ಮಕ ರಾಜಧಾನಿ ಬೆಂಗಳೂರು ಮತ್ತು ಸಾಂಸ್ಕೃತಿಕ ರಾಜಧಾನಿ ಮೈಸೂರಿನ ನಡುವೆ ನಿರ್ಮಿಸಲಾಗುತ್ತಿರುವ ದಶಪಥ ಹೆದ್ದಾರಿ ಫೆಬ್ರವರಿ ವೇಳೆಗೆ ಲೋಕಾರ್ಪಣೆಯಾಗಲಿದೆ ಎಂಬ ಸುದ್ದಿ ಬಂದಿದೆ. ಬೆಂಗಳೂರು.- ಚೆನ್ನೈ ಎಕ್ಸ್ ಪ್ರೆಸ್ ವೇ ಹೆದ್ದಾರಿಯನ್ನು ಸಮೀಕ್ಷೆ ನಡೆಸಿರುವ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರೇ ಈ ವಿಷಯ ಬಹಿರಂಗಪಡಿಸಿದ್ದಾರೆ. ಈ ಬಹುನಿರೀಕ್ಷಿತ ದಶಪಥ ಹೆದ್ದಾರಿಯನ್ನು ಮುಂದಿನ ತಿಂಗಳು ರಾಷ್ಟ್ರಪತಿ ಅಥವಾ ಪ್ರಧಾನಿಯವರೇ ಉದ್ಘಾಟನೆ ಮಾಡಲಿದ್ದಾರೆ ಎಂಬುದು ಸಚಿವರು ನೀಡಿದ ಮಾಹಿತಿ. ಈ ಹೆದ್ದಾರಿಯಲ್ಲಿ ಕೇವಲ ಒಂದು ಗಂಟೆ ಹತ್ತು ನಿಮಿಷದಲ್ಲಿ ಎರಡು ನಗರಗಳ ನಡುವೆ ಸಂಚರಿಸಬಹುದು. ಇದರಿಂದ ಸಮಯ ಮತ್ತು ಮಾನವ ಶಕ್ತಿ ಉಳಿತಾಯವಾಗಲಿದೆ. ಬೆಂಗಳೂರು ಸಂಚಾರ ದಟ್ಟನೆ ನಿಭಾಯಿಸಲು ಸಬ್ ಅರ್ಬನ್ ರಸ್ತೆ ನಿರ್ಮಿಸಿ ನಗರ ಹೊರವಲಯದ ಹೊಸಕೋಟೆ, ರಾಮನಗರ, ದೊಡ್ಡಬಳ್ಳಾಪುರ, ದೇವನಹಳ್ಳಿ, ಆನೇಕಲ್ ಗೆ ಸಂಪರ್ಕ ಕಲ್ಪಿಸುವುದು ಕೂಡ ಮುಂದಿನ ಹಂತದ ಅಭಿವೃದ್ಧಿ ಯೋಜನೆಯಲ್ಲಿ ಸೇರಿದೆ. ರಾಜ್ಯದ ಪಾಲಿಗೆ ಇದೊಂದು ಮಹತ್ವದ ಕೊಡುಗೆ ಎಂಬುದರಲ್ಲಿ ಸಂಶಯವಿಲ್ಲ. ಈ ಹೆದ್ದಾರಿ ನಿರ್ಮಾಣಕ್ಕೆ ಒಟ್ಟು ೫೧೦೦ ಕೋಟಿ ವೆಚ್ಚವಾಗಿದೆ. ಬಹುತೇಕ ಕಾಮಗಾರಿ ಪೂರ್ಣಗೊಂಡು ಸಣ್ಣಪುಟ್ಟ ಕೆಲಸಗಳಷ್ಟೇ ಈಗ ನಡೆಯುತ್ತಿವೆ. ಎರಡು ನಗರಗಳ ನಡುವೆ ಎಕ್ಸ್ ಪ್ರೆಸ್ ಹೈವೇ ನಿರ್ಮಾಣವಾಗಿರುವುದರಿಂದ ಸಂಚಾರ ದಟ್ಟಣೆ ಬಹುತೇಕ ಕಡಿಮೆಯಾಗಲಿದೆ. ಕೆಲವು ತಾಂತ್ರಿಕ ಕಾರಣಗಳಿಂದ ನಿರೀಕ್ಷಿತ ಸಮಯದಲ್ಲಿ ಇದು ಪೂರ್ಣಗೊಳ್ಳಲಿಲ್ಲ. ಆದರೂ, ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇಲ್ಲಿ ಹೆಲಿಪ್ಯಾಡ್ ಕೂಡ ನಿರ್ಮಾಣವಾಗಿದೆ. ತುರ್ತು ಸಂದರ್ಭಗಳಲ್ಲಿ ಇದನ್ನು ಬಳಸಬಹುದು. ನೂತನ ಹೆದ್ದಾರಿಗೆ ಕಾವೇರಿ- ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ನಾಮಕರಣ ಮಾಡಬೇಕೆಂಬ ಬೇಡಿಕೆ ಬಂದಿದೆ. ಈ ಎರಡು ಹೆಸರುಗಳಲ್ಲಿ ಯಾವುದನ್ನು ಇರಿಸಿದರೂ ಸೂಕ್ತವಾಗುತ್ತದೆ. ನಿರ್ಮಾಣ ಹಂತದಲ್ಲಿ ಕೆಲವೊಂದು ಅಡಚಣೆಗಳು ಉಂಟಾಗಿದ್ದರೂ ಯೋಜನೆ ಪೂರ್ಣಗೊಂಡ ನಂತರ ಆಗುವ ಅನುಕೂಲವನ್ನು ಪರಿಗಣಿಸಿದರೆ ತೊಂದರೆಗಳು ಸಹನೀಯ ಎನ್ನಬಹುದು.
ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೦೬-೧೧-೨೦೨೩
ಚಿತ್ರ ಕೃಪೆ: ಅಂತರ್ಜಾಲ ತಾಣ