ಹೆಮ್ಮೆಯ ಪರಂಪರೆ ಜಾನಪದ ಲೋಕ ಉಳಿಸಲೇಕೆ ಮೀನಮೇಷ?
ಸುಮಾರು ನಾಲ್ಕು ದಶಕಗಳಿಂದ ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿ, ಜಾನಪದ ಕ್ರೀಡೆಯನ್ನು ಪೋಷಿಸಿಕೊಂಡು ಬಂದ ಕರ್ನಾಟಕ ಜಾನಪದ ಕಲಾ ಪರಿಷತ್ ಗೆ ವಾರ್ಷಿಕ ಅನುದಾನ ಕಡಿತದಿಂದ ಮುಚ್ಚುವ ಭೀತಿ ಎದುರಾಗಿರುವುದು ಕಳವಳಕಾರಿ ಸಂಗತಿ. ಕರುನಾಡಿನ ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತ, ಹಿಂದಿನವರ ಜೀವನಶೈಲಿ, ಅವರು ಬಳಸುತ್ತಿದ್ದ ವಸ್ತು, ಅವರು ಉಸಿರಾಗಿಸಿಕೊಂಡಿದ್ದ ಜಾನಪದ ಕಲೆಗಳನ್ನು ಪರಿಚಯಿಸಲು ರಾಯಭಾರಿಯಂತಿದ್ದ ಜಾನಪದ ಕಲಾ ಪರಿಷತ್ ಹಾಗೂ 'ಜಾನಪದ ಲೋಕ'ವು ಜಾನಪದ ತಜ್ಞ ಎಚ್ ಎಲ್ ನಾಗೇಗೌಡರ ಕನಸಿನ ಕೂಸು. ಪೂರ್ವಜರು ಬದುಕಿದ ರೀತಿಯನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಸಲುವಾಗಿಯೇ ೧೯೯೪ರಲ್ಲಿ ರಾಮನಗರದಲ್ಲಿ 'ಜಾನಪದ ಲೋಕ' ಎಂಬ ೧೫ ಎಕರೆ ವಿಸ್ತೀರ್ಣದ ವಸ್ತು ಸಂಗ್ರಹಾಲಯವನ್ನು ನಿರ್ಮಿಸಿದರು.
ಆ ನಿವೃತ್ತ ಐಎಎಸ್ ಅಧಿಕಾರಿಗೆ ಜಾನಪದ ಕುರುಹು ಸಂಗ್ರಹ ಕೆಲಸ ಅಷ್ಟು ಸುಲಭವೂ ಆಗಿರಲಿಲ್ಲ. ಆ ಹೊತ್ತಿನಲ್ಲಿ ಅವರು ಹಳ್ಳಿಹಳ್ಳಿಗೆ ಸುತ್ತಾಡಿದ್ದರು. ಕರಾವಳಿ, ಮಲೆನಾಡು, ಬಯಲುಸೀಮೆ, ಆದಿವಾಸಿ ಜನಾಂಗದ ನೆಲೆಗಳಿಗೆಲ್ಲ ಭೇಟಿ ನೀಡಿ ಅವರ ಸಂಸ್ಕೃತಿ, ಭಾಷೆ, ಹಾಡು, ಆಹಾರ ಪದ್ಧತಿ, ಕೃಷಿ ವಿಧಾನಗಳೆಲ್ಲ ಅಧ್ಯಯನಿಸಿದ್ದರು. ಸಾಕಷ್ಟು ಕುರುಹುಗಳು ನಾಶವಾಗಿದ್ದರೂ, ಅದನ್ನೆಲ್ಲ ಮರು ದಾಖಲಿಸಿಕೊಂಡು, ಒಟ್ಟಾರೆ ೫ ಸಾವಿರ ಕಲಾಕೃತಿಗಳನ್ನು ಜಾನಪದ ಲೋಕದಲ್ಲಿ ಒಂದೆಡೆ ಸಾಕಾರಗೊಳಿಸಿದ್ದ ನಾಗೇಗೌಡರ ಪ್ರಯತ್ನಕ್ಕೆ ಇಡೀ ನಾಡೇ ತಲೆದೂಗಿತ್ತು.
ಇಂಥ ಹಿರಿಮೆಯುಳ್ಳ ಜಾನಪದ ಪರಿಷತ್ ಗೆ ಇಂದು ಹುದ್ದೆಗಳೇ ಭರ್ತಿಯಾಗುತ್ತಿಲ್ಲ. ಇರುವ ೩೦ ಸಿಬ್ಬಂದಿಗಳಿಗೆ ವೇತನ ನೀಡಲು ವಾರ್ಷಿಕ ೯೨,೭೪,೬೬೦ ರೂ. ಅವಶ್ಯಕತೆಯಿದ್ದು ಈ ಅನುದಾನವೂ ಸಿಗದೇ ಜಾನಪದ ಲೋಕ ಬಡವಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತನಗೂ ಜಾನಪದ ಲೋಕಕ್ಕೂ ಸಂಬಂಧವೇ ಇಲ್ಲ ಎಂದು ವರ್ತಿಸುತ್ತಿರುವುದೇ ಅತ್ಯಂತ ಅಚ್ಚರಿ ಹಾಗೂ ಕಳವಳಕಾರಿ ಸಂಗತಿಯಾಗಿದೆ. ರಂಗಾಯಣದಂತೆ ಜಾನಪದ ಪರಿಷತ್ ವಿಚಾರದಲ್ಲಿಯೂ ಸರಕಾರ ನಡೆದುಕೊಳ್ಳುತ್ತಿರುವ ರೀತಿ ಸರಿ ಇಲ್ಲ. ಇತ್ತೀಚೆಗೆ ೭೫ನೇ ಸುವರ್ಣ ಸಂಭ್ರಮದ ಸ್ವಾತಂತ್ರ್ಯೋತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ 'ಯಾವುದೇ ದೇಶ ತನ್ನ ಪರಂಪರೆ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸದೇ ಬಲಶಾಲಿಯಾಗಲು ಸಾಧ್ಯವಿಲ್ಲ' ಎಂದಿದ್ದರು. ಜಾನಪದ ಲೋಕದ ಕುರಿತ ರಾಜ್ಯದ ಸರಕಾರದ ನಿರ್ಲಕ್ಷ್ಯದಿಂದ ಪ್ರಧಾನಿ ಅವರ ಮಾತಿಗೇ ಕಿಮ್ಮತ್ತಿಲ್ಲ ಎನ್ನುವುದೂ ಜಾಹೀರಾಗಿದೆ.
ರಾಜಕೀಯ ಸಮಾವೇಶ, ಜಯಂತಿ ಮುಂತಾದ ಸರಕಾರಿ ಸಮಾರಂಭಗಳಿಗೆ ಅದ್ದೂರಿತನ ತರುವುದೇ ಜಾನಪದೀಯ ನೃತ್ಯ ಕಲೆಗಳ ವೈಭವ. ಈ ಸಾಂಸ್ಕೃತಿಕ ಜೀವಕಲೆಯನ್ನು ಕೇವಲ ಪ್ರಚಾರಕ್ಕಷ್ಟೇ ದುಡಿಸಿಕೊಂಡು. ಮಿಕ್ಕಂತೆ ಅದರ ಪೋಷಣೆ ಮರೆಯುವ ಸರಕಾರದ ನೀತಿ ನಿಜಕ್ಕೂ ಸ್ವಾರ್ಥವೇ ಸರಿ. ೨೦೧೭ರ ಗಣರಾಜ್ಯೋತ್ಸವದ ಸ್ತಬ್ಧಚಿತ್ರದಲ್ಲಿ ನಾಡನ್ನು ಪ್ರತಿನಿಧಿಸಿದ ಜಾನಪದ ಕಲೆಗೆ ಅಪಮಾನ ಎಸಗುತ್ತಿರುವುದು ತರವಲ್ಲ.
ಸಾಮಾನ್ಯವಾಗಿ ಬಿಜೆಪಿಯು ಸಂಸ್ಕೃತಿ, ಕಲೆ, ಸಂಪ್ರದಾಯಗಳ ಜತೆಗೆ ನಿಲ್ಲುವಂಥ ಪಕ್ಷ. ಸಾಂಸ್ಕೃತಿಕ ನಂಬಿಕೆಗಳ ಸಮರ್ಥನೆಯಿಂದ ಹಿಡಿದು ತೀರಾ ಮೊನ್ನೆ ಮೊನ್ನೆಯ ರಾಷ್ಟ್ರಪತಿ ಆಯ್ಕೆ ವಿಚಾರದಲ್ಲೂ ಈ ನಿಲುವನ್ನೇ ಬಿಜೆಪಿ ಎತ್ತಿ ಹಿಡಿದಿದೆ. ಆದರೆ, ರಾಜ್ಯದ ಬಿಜೆಪಿ ಸರಕಾರ ಆ ಸಾಂಸ್ಕೃತಿಕ, ಜಾನಪದೀಯ ಉಸಿರನ್ನೇ ಹೊಸಕಿ ಹಾಕಲು ವ್ಯವಸ್ಥಿತ ಮಾರ್ಗ ಹುಡುಕುತ್ತಿರುವಂತೆ ಭಾಸವಾಗುತ್ತಿದೆ. ನಿಜಕ್ಕೂ ಸರಕಾರಕ್ಕೆ ಸಂಸ್ಕೃತಿ ಮೇಲೆ ಪ್ರೀತಿ ಇದ್ದಲ್ಲಿ ಜಾನಪದ ಪರಿಷತ್ತನ್ನು ಕತ್ತಲಿನಿಂದ ಮೇಲೆತ್ತುವ ಕೆಲಸ ಮಾಡಲಿ. ಸೂಕ್ತ ಅನುದಾನ ಬಿಡುಗಡೇ ಮಾಡಿ, ಅಗತ್ಯ ಸಿಬ್ಬಂದಿ ನೇಮಿಸಿ, ನಮ್ಮ ಹೆಮ್ಮೆಯ ಪರಂಪರೆ ಉಳಿಸಲು ಮುಂದಾಗಲಿ.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೧೨-೦೯-೨೦೨೨
ಚಿತ್ರ ಕೃಪೆ: ಅಂತರ್ಜಾಲ ತಾಣ