ಹೆಮ್ಮೆಯ ವಿಜ್ನಾನ ಪರಂಪರೆ

ಹೆಮ್ಮೆಯ ವಿಜ್ನಾನ ಪರಂಪರೆ

ಪುಸ್ತಕದ ಲೇಖಕ/ಕವಿಯ ಹೆಸರು
ವಿದ್ವಾಂಸರು
ಪ್ರಕಾಶಕರು
ಸಂಸ್ಕೃತ ಭಾರತಿ, ಗಿರಿನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ.೧೦೦/-

ನಮ್ಮ ಪೂರ್ವಿಕರ ಜ್ನಾನ ಅಗಾಧ. ಆದರೆ ಇಂದಿಗೂ ಹಲವಾರು ಹೊಸ ಸಂಗತಿಗಳ ಶೋಧಕರು ವಿದೇಶೀಯರೆಂದು ನಮ್ಮಲ್ಲಿ ಹಲವರು ಭಾವಿಸುತ್ತಾರೆ. ಉದಾಹರಣೆಗಳು: ಸೂರ್ಯನೇ ಶಕ್ತಿಯ ಮೂಲ, ಆಕಾಶಕಾಯಗಳೆಲ್ಲದರ ಮಾರ್ಗವೂ ದೀರ್ಘವೃತ್ತಾಕಾರಕ, ಗುರುತ್ವಾಕರ್ಷಣ ನಿಯಮ, ಬೆಳಕಿನ ವೇಗ, ಪೈಥಾಗೋರಸ್ ಸಿದ್ಧಾಂತ ಇತ್ಯಾದಿ.

ಭಾರತೀಯರನ್ನು ಆಳುಗಳಾಗಿ ಉಳಿಸಿಕೊಳ್ಳಲಿಕ್ಕಾಗಿ ಬ್ರಿಟಿಷರು ರೂಪಿಸಿದ ಶಿಕ್ಷಣ ಪದ್ಧತಿಗೆ ಅನುಸಾರವಾಗಿ ಬರೆಯಲ್ಪಟ್ಟ ನಮ್ಮ ಈಗಿನ ಶಾಲಾ ಪಠ್ಯಪುಸ್ತಕಗಳೂ ಅದನ್ನೇ ಬೋಧಿಸುತ್ತವೆ. ಸತ್ಯ ಏನೆಂದರೆ, ವಿದೇಶಿಯರ ಶೋಧನೆಗಳೆಂದು ಈಗಲೂ ಹೇಳಲಾಗುವ ಹಲವು ಸಂಗತಿಗಳನ್ನು ಅವರಿಗಿಂತ ಸಾವಿರಾರು ವರುಷಗಳ ಮುಂಚೆಯೇ ವೇದೋಪನಿಷತ್ತುಗಳ ಕಾಲದಲ್ಲಿ  ಭಾರತೀಯ ಋಷಿಮುನಿಗಳು ಶೋಧಿಸಿದ್ದರು. ಮಾತ್ರವಲ್ಲ, ಅವನ್ನು ಸಂಸ್ಕೃತ ಭಾಷೆಯಲ್ಲಿ ದಾಖಲಿಸಿದ್ದರು.

ಆದ್ದರಿಂದಲೇ, ಸಂಸ್ಕೃತ ಬರೀ ಭಾಷೆಯಷ್ಟೇ ಅಲ್ಲ. ಅದು ಭಾರತದ ಆತ್ಮದ ದನಿ, ಬುದ್ಧಿಮತ್ತೆಯ ಗಣಿ, ನಮ್ಮ ರಾಷ್ಟ್ರೀಯ ಜೀವನದ ಜೀವನಾಡಿ. ಪ್ರಾಚೀನ ಹಾಗೂ ಅರ್ವಾಚೀನ ಬದುಕುಗಳನ್ನು ಬೆಸೆಯುವ ಕೊಂಡಿ. ಭಾರತೀಯ ಜ್ನಾನ ಪರಂಪರೆಯ ಅಕ್ಷಯ ನಿಧಿ. ಇಷ್ಟೆಲ್ಲ ಹೇಳಿದರೂ ಸಂಸ್ಕೃತದ ಬಗ್ಗೆ ಹೇಳಿದ್ದು ಕಡಿಮೆ. ಅಂತಹ ಹಿರಿಮೆ-ಗರಿಮೆ, ಆಳ-ವಿಸ್ತಾರ ಆ ಭಾಷೆಯದ್ದು. ಹಾಗಾಗಿಯೇ ಸಂಸ್ಕೃತದ ಬಗ್ಗೆ ಎಲ್ಲ ಭಾರತೀಯರಿಗೂ ಹೆಮ್ಮೆ. ಸಂಸ್ಕೃತದ ಬಗ್ಗೆ ಕಿಂಚಿತ್ ತಿಳಿದಿರುವ ವಿದೇಶೀಯ ವಿದ್ವಾಂಸರೂ ಅದನ್ನು ಗೌರವಿಸುವುದು ಇದೇ ಕಾರಣಕ್ಕಾಗಿ.

ಇಂದಿನ ವಿಜ್ನಾನ ಯುಗದಲ್ಲಿ ದಿನದಿನವೂ ಹೊಸಹೊಸ ಆವಿಷ್ಕಾರಗಳು ಮೂಡಿ ಬರುತ್ತಿದ್ದು ವಿಸ್ಮಯದ ವೇಗದಲ್ಲಿ ಜಗತ್ತು ಮುಂದುವರಿಯುತ್ತಿದೆ. ಈ ವೈಜ್ನಾನಿಕತೆಗೆ ಹೊಂದದ ಸಂಗತಿಗಳೆಲ್ಲವೂ ಮೂಲೆಗುಂಪಾಗುತ್ತಿವೆ ಅಥವಾ ಅಳಿಯುತ್ತಿವೆ. ಇಂಥ ಪರಿಸ್ಥಿತಿಯಲ್ಲಿ ಸಂಸ್ಕೃತ ಭಾಷೆಯಿಂದ ನಮಗೇನು ಪ್ರಯೋಜನ ಎಂಬುದು ಹಲವರ ಪ್ರಶ್ನೆ. ಯಾಕೆಂದರೆ, ಸಂಸ್ಕೃತಕ್ಕೂ ವಿಜ್ನಾನಕ್ಕೂ ಇರುವ ಸಂಬಂಧ ಅನೇಕರಿಗೆ ಇವತ್ತಿಗೂ ಊಹೆಗೆ ನಿಲುಕದ ಮಾತು. ಸಂಸ್ಕೃತದ ಬಗ್ಗೆ ಮತ್ತು ಭಾರತೀಯ ಜ್ನಾನ ಪರಂಪರೆಯ ಬಗ್ಗೆ ನಮಗಿರುವ ಅಜ್ನಾನದಿಂದಾಗಿ ಈ ತಪ್ಪು ಭಾವನೆ ಇಂದಿಗೂ ವ್ಯಾಪಕವಾಗಿ ತೋರಿಬರುತ್ತಿದೆ. ಇದನ್ನು ತೊಲಗಿಸುವತ್ತ ಒಂದು ಪುಟ್ಟ ಪ್ರಯತ್ನ ಈ ಪುಸ್ತಕ.

ಇಂಗ್ಲಿಷಿನಲ್ಲಿ ರಚಿತವಾದ “ಸೈನ್ಸ್ ಇನ್ ಸಂಸ್ಕೃತ್” ಎಂಬ ಪುಸ್ತಕದ ಕನ್ನಡಾನುವಾದ ಇದು. ನಮ್ಮ ಪೂಜ್ಯ ಋಷಿಮುನಿಗಳು ತಮ್ಮ ಅಗಾಧ ಜ್ನಾನವನ್ನು ದಾಖಲಿಸಿದ ಸಂಸ್ಕೃತ ಗ್ರಂಥಗಳ, ಶ್ಲೋಕಗಳ ಹಾಗೂ ಪಠ್ಯಗಳ ಆಧಾರದಿಂದ, ಈ ಕೆಳಗಿನ ೨೬ ಜ್ನಾನವಿಭಾಗಗಳಿಗೆ ಸಂಬಂಧಿಸಿದ ಹಲವಾರು ಅತ್ಯಪೂರ್ವ ವೈಜ್ನಾನಿಕ ಸಂಗತಿಗಳನ್ನು ಈ ಪುಸ್ತಕದಲ್ಲಿ ನೀಡಲಾಗಿದೆ:
ಖಗೋಳ ಶಾಸ್ತ್ರ, ಭೌತಶಾಸ್ತ್ರ, ಯಂತ್ರಶಾಸ್ತ್ರ, ವಿಮಾನಶಾಸ್ತ್ರ, ರಸಾಯನ ಶಾಸ್ತ್ರ, ಲೋಹಶಾಸ್ತ್ರ, ಗಣಿತಶಾಸ್ತ್ರ, ರೇಖಾಗಣಿತ, ವೈದ್ಯಶಾಸ್ತ್ರ, ಸಸ್ಯಶಾಸ್ತ್ರ, ಕೃಷಿವಿಜ್ನಾನ, ಪರಿಸರವಿಜ್ನಾನ, ಪ್ರಸಾಧನ ವಸ್ತುಗಳು, ಕಲೆ ಮತ್ತು ಸಂಸ್ಕೃತಿ, ಯೋಗಶಾಸ್ತ್ರ, ಭೂಗೋಳಶಾಸ್ತ್ರ, ವಾಸ್ತುಶಾಸ್ತ್ರ, ರಾಜ್ಯಶಾಸ್ತ್ರ, ಧ್ವನಿಶಾಸ್ತ್ರ, ಋಷಿ-ವಿಜ್ನಾನಿಗಳು, ವೇದ ಪರಂಪರೆ, ತಾಳೆಗರಿ ಸಂಪತ್ತು, ಸಂಸ್ಕೃತ ಮತ್ತು ಕಂಪ್ಯೂಟರ್, ಬಲ್ಲವರ ಮಾತು, ಸಂಸ್ಕೃತ ಮತ್ತು ಮೆದುಳು, ನಮ್ಮ ಹೊಣೆಗಾರಿಕೆ.

ಈ ಪುಸ್ತಕದಿಂದ ಒಂದು ಉದಾಹರಣೆ: ತ್ರಿಕೋನದ ಕ್ಷೇತ್ರಫಲ. ಆಧುನಿಕ ವಿಧಾನದ ಅನುಸಾರ: ಎಬಿಸಿ ಎಂಬ ತ್ರಿಕೋನದ ಕ್ಷೇತ್ರಫಲ: ಅರ್ಧಪಾದ x ಎತ್ತರ. ಇದನ್ನು ಆರ್ಯಭಟನು ಕ್ರಿ.ಶ. ೪೭೬ರಲ್ಲೇ ಆರ್ಯಭಟೀಯದಲ್ಲಿ (೨.೬) ಹೀಗೆ ತಿಳಿಸಿದ್ದ:
ತ್ರಿಭುಜಸ್ಯ ಫಲಶರೀರಂ ಸಮದಲಕೋಟೀ ಭುಜಾರ್ಧಸಂವರ್ಗಃ (ವಿವರಣೆ) ಒಂದು ತ್ರಿಕೋಣದ ಕ್ಷೇತ್ರಫಲವು ಅದರ ಬಾಹುವಿನ ಅರ್ಧ ಭಾಗ ಮತ್ತು ಲಂಬದ ಗುಣಲಬ್ಧಕ್ಕೆ ಸಮವಾಗಿರುತ್ತದೆ.

ಇದು ಎಲ್ಲರೂ ಓದಲೇ ಬೇಕಾದ ಪುಸ್ತಕ. ಕೇವಲ ಓದಿದರೆ ಸಾಲದು, ಇದರಲ್ಲಿರುವ ಪ್ರತಿಯೊಂದು ವೈಜ್ನಾನಿಕ ಸಂಗತಿಗಳನ್ನು ಆವಿಷ್ಕರಿಸಿದವರು ನಮ್ಮ ಪೂರ್ವಿಕರು ಎಂದು ನಾವೆಲ್ಲರೂ ಹೆಮ್ಮೆ ಪಡುವಂತಾಗಲಿ.