ಹೆಲೋ ಸಂಪದ !

ಹೆಲೋ ಸಂಪದ !

ಹೆಲೋ ಸಂಪದ !


ನಿನ್ನ ಹುಟ್ಟು ಹಬ್ಬಕ್ಕೆ ನಮ್ಮೆಲ್ಲರ ಹಾರ್ದಿಕ ಶುಭಾಶಯಗಳು ! 

 

ಜುಲೈ ೨೪ ರಂದು ನಿನ್ನ ೬ ನೇ ವರ್ಷದ ಹುಟ್ಟು ಹಬ್ಬ.  ಹುಟ್ಟಿದ ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಸಂಪದಕ್ಕೆ ನನ್ನ ಹಾರ್ದಿಕ ಅಭಿನಂದನೆಗಳು. ನನ್ನ ಒಡನಾಟಕ್ಕೂ ಸಂಪದದ ಮೊದಲಹೆಜ್ಜೆಗೂ ಸ್ವಲ್ಪ ಸಂಬಂಧವಿದೆ. ನಾನು ಆಗತಾನೇ, ಅಂದರೆ, ಸನ್, ೨೦೦೪ ರಲ್ಲಿ, ನಿವೃತ್ತನಾಗಿದ್ದೆ. ಮನೆಯಲ್ಲಿ ಸಮಯಕಳೆಯುವುದು ಒಂದು ಸವಾಲಾಗಿತ್ತು. ಇದನ್ನು ಗಮನಿಸಿದ ನನ್ನ ಮಕ್ಕಳು ನನ್ನನ್ನು ಬಿಜಿಯಾಗಿಡಲು ಒಂದು ಕಂಪ್ಯೂಟರ್ ಯಂತ್ರವನ್ನು ತಂದುಕೊಟ್ಟರು. ಅದಲ್ಲದೆ, ಇಂಟರ್ನೆಟ್ ನ ಪರಿಚಯಮಾಡಿಸಿಕೊಟ್ಟರು. ಈ ಕ್ರಮ ನನ್ನು ಸ್ವಲ್ಪಕಾಲ ಹಿಡಿದಿಡಲು ಸಹಕಾರಿಯಾಯಿತು. ಕೆಲಸವಿಲ್ಲದೆ ಮನೆಯಲ್ಲಿ ಕೂತ ಮನೆಯವರೆನ್ನಾ ಗೋಳುಹೊಯ್ದುಕೊಳ್ಳುವ ವಿಚಾರ ಅಷ್ಟೇನೂ ಅಪರಿಚಿತವಲ್ಲ. ಎಲ್ಲಕ್ಕಿಂತಾ ಹೆಚ್ಚಾಗಿ ಸುಲಭವಾಗಿ ಬಲಿಪಶುವಾಗುತ್ತಿದ್ದವರು ಮನೆಯ ಗೃಹಿಣಿಯರು. ಕೇಳಿದಾಗಲೆಲ್ಲಾ ಚಹ ಮಾಡಿಕೊಟ್ಟು ಸಾಕಾಗಿ ಹೋಗುತ್ತಿತ್ತು ಅನ್ನುವುದನ್ನು ಅವರ ಮುಖಚರ್ಯೆಯೇ ತಿಳಿಸುತ್ತಿತ್ತು.


ಸುಮಾರಾಗಿ ಕನ್ನಡ ಅಕ್ಷರಗಳನ್ನು ಗುರುತಿಸುತ್ತಿದ್ದ ನನ್ನ ಮಗ ಪ್ರಕಾಶ್ ಹೇಗೋ ಸಂಪದ ಅನ್ನೊ ಸೈಟನ್ನು ಕಂಡಿದ್ದನಂತೆ. ಅದರಲ್ಲಿ ಕನ್ನಡದಲ್ಲಿ ಲೇಖನಗಳು ಬರುವುದನ್ನು ಅವನು ಗಮನಿಸಿದ್ದ. ಆದರೆ ಅದು ಎಷ್ಟು ಸಮರ್ಪಕ ಎಂದು ಅವನಿಗೆ ಇನ್ನೂ ಗೊತ್ತಾಗಿರಲಿಲ್ಲ. ಇಷ್ಟು ಹೊತ್ತಿಗಾಗಲೇ ನಾನು ಕಂಪ್ಯೂಟರ್ ಬಳಕೆಯನ್ನು ಅರಿತಿದ್ದೆ. ನನ್ನ ಆಫೀಸ್ ನಲ್ಲಿ ತರಪೇತಿ  ದೊರೆತಿತ್ತು. ಅದೂ ಅಲ್ಲದೆ ನಾನೊಂದು ಪುಸ್ತಕವನ್ನು ಬರೆದಿದ್ದೆ. ಅದರ ಹೆಸರು, ’ಮೈ ಸ್ಪಿನ್ ಲ್ಯಾಬ್’ ಎಂದು. ನಾನು ಕೆಲಸಮಾಡುತ್ತಿದ್ದ ಹತ್ತಿ ಸಂಶೋಧನಾಲಯದಲ್ಲಿ ’ಸ್ಪಿನ್ ಲ್ಯಾಬ್’ ಎಂಬ ಉಪಕರಣಗಳನ್ನು ತಯಾರಿಸುವ ಅಮೆರಿಕದ ’ಟೆಕ್ಸಾಸ್’ ನ ಕಂಪೆನಿ ಬಹುದೊದ್ಡ ಪಾತ್ರವಹಿಸಿತ್ತು. ಆದಕ್ಕಾಗಿ ನಾನು ಅದರ ಹೆಸರನ್ನೇ ನನ್ನ ಪುಸ್ತಕಕ್ಕೆ ಇಟ್ಟಿದ್ದೆ. ಇ ಪುಸ್ತಕವನ್ನು  ನನ್ನ ನಿವೃತ್ತಿಯ  ದಿನದಂದು ನಮ್ಮ ಡೈರೆಕ್ಟರ್ ಬಿಡುಗಡೆಮಾಡಿದ್ದರು. ಈ ಹಿನ್ನೆಲೆಯಲ್ಲಿ ನಾನು ಲೇಖನಗಳನ್ನು ಬರೆಯಲು ಆರಂಭಿಸಿದೆ. ಆದರೆ ಸಂಪದದಲ್ಲಿ ಬರೆಯುವಾಗ  ನನ್ನ ಲೇಖನಗಳು ಕನ್ನಡದಲ್ಲೇ ಇರಬೇಕೆಂಬ ಖಡ್ಡಾಯವಿತ್ತು. ನನ್ನ ಮೊದಲ ಲೇಖನ ಕನ್ನಡ ಇಂಗ್ಲೀಷ್ ಮಿಶ್ರವಾಗಿದ್ದದ್ದನ್ನು   ಶ್ರೀನಿವಾಸ್ ಮತ್ತು ಮಿಶ್ರಿಕೋಟಿ ನೋಡಿ, ಕನ್ನಡದಲ್ಲೇ ಬರೆಯಿರಿ ಅದು ಸುಲಭ ಹೀಗೆ ಹೀಗೆ ಮಾಡಿ ಎಂದು ಆದೇಶನೀಡಿದರು.


ಆಗತಾನೇ ಸಂಪದ ಇನ್ನೂ ಗರಿಕೆದರಿಕೊಂಡು ಹಾರಲು ಹವಣಿಸುತ್ತಿದ್ದ ಚಿಕ್ಕ ಪಕ್ಷಿಯಂತಿತ್ತು. ಕೆಲವೇ ಲೇಖನಗಳು. ಶ್ರೀ. ಇಸ್ಮೈಲ್ ರವರ ದೀರ್ಘ ಲೇಖನಗಳು, ಅವುಗಳಲ್ಲಿ ಕೆಲವು ಉದಯವಾಣಿಯಲ್ಲಿ ಮೊದಲ ಬಾರಿ ಪ್ರಕಟಗೊಂಡವುಗಳೂ ಆಗಿದ್ದವು. ಸ್ವಾಮಿ, ರಾಘವೇಂದ್ರರಾವ್ ಮುಂತಾದವರ ಲೇಖನಗಳು. ಇವನ್ನೂ ಬಿಟ್ಟರೆ  ಕೆಲವಂತೂ ಒಂದು ಪ್ಯಾರದಷ್ಟು ಮಾತ್ರ. ಹೆಚ್ಚಾಗಿ ಭಾಷೆಯ ಉಪಯೋಗ ತಪ್ಪು-ನೆಪ್ಪುಗಳು ವ್ಯಾಕರಣ ಇತ್ಯಾದಿಗಳೇ ಇರುತ್ತಿದ್ದವು. ಅವಕ್ಕೆ ಹೆಚ್ಚಾಗಿ ಪ್ರತಿಕ್ರಿಯೆಯೂ ಬರುತ್ತಿತ್ತು. ನಾನು ನಂತರ ಬರೆದ ಫುಟ್ಬಾಲ್ ಲೇಖನಗಳನ್ನು ಯಾರೂ ಓದಿದರೂ ಪ್ರತಿಕ್ರಿಯೆಯಂತೂ ಇಲ್ಲ. ನನಗೆ ಗೊತ್ತಿದ್ದ ಒಬ್ಬ ವೈದ್ಯ ಡಾ. ಯು.ಬಿ.ರಾವ್ ಬಗ್ಗೆ, ಉದಯವಾಣಿ ವಾಹಿನಿಯಲ್ಲಿ ಬಿತ್ತರಗೊಳ್ಳುತ್ತಿದ್ದ ಶೈಲಜ ಸಂತೋಷ್ ನಡೆಸಿಕೊಡುತ್ತಿದ್ದ  ಕಾರ್ಯಕ್ರಮ ಬಗ್ಗೆ, ನಾನು ಚಿಕ್ಕ  ಪುಟ್ಟ ಲೇಖನಗಳನ್ನೂ  ಬರೆಯುತ್ತಿದ್ದೆ.  ಪಂಚತಂತ್ರ ಮಕ್ಕಳ ಕಥೆ ಪುಸ್ತಕ. ವಿಕೆಟ್ ಅಲ್ಲ ವಿಟೆಟ್ ಎನ್ನುವ ಚಿಕ್ಕ ಒಂದು ಪ್ಯಾರದ ಲೇಖನ ಇತ್ಯಾದಿ.

ಹೀಗೆ ಮುಂದುವರೆದ ಸಂಪದ ದಾಪಗಾಲು ಹಾಕುತ್ತಾ  ಹಾಕುತ್ತಾ  ಹಾಗೆ ತನ್ನ ನಡೆಯಲ್ಲಿ ಬದಲಾವಣೆ, ಹೊಸತನಗಳನ್ನೂ ಪ್ರದರ್ಶಿಸತು. ಅದೆಷ್ಟು ಬಾರಿ ತನ್ನ ಮುಖ ಪುಟ ಬದಲಾಯಿಸಿತೋ  ನನಗೆ ಜ್ಞಾಪಕವಿಲ್ಲ. ಒಮ್ಮೆ ಈ ಪತ್ರಿಕೆಯನ್ನು ಕೆಲವು ತಿಂಗಳು  ಹೆಚ್ಚಿನ ಸುಧಾರಣೆಗಳಿಗಾಗಿ  ಮುಚ್ಚಿದ್ದರು.  ಆ ಸಮಯದಲ್ಲಿ ನಮಗಂತೂ ಕೈ ಚುಟುಗುಟ್ಟುತ್ತಿತ್ತು. ಹರಿಯವರನ್ನು ನಾವು ದಿನವೆಲ್ಲಾ ನೆನೆಸಿಕೊಳ್ಳುತ್ತಿದ್ದೆವು. ಅವರಂತೂ ಎಷ್ಟೇ ಕಷ್ಟ ಕೋಟಲೆಗಳು ಅವರ ಮಾರ್ಗದಲ್ಲಿ ಬಂದಾಗಲೂ ಧರ್ಯಗೆಡದೆ ತಮ್ಮ ಸ್ವಂತ ಮಗುವಿನಂತೆ ಪ್ರೀತಿಯಿಂದ ಪೋಶಿಸುತ್ತಾ ಸಂಪದವನ್ನು ನಡೆಸಿಕೊಂಡು ಬಂದಿದ್ದಾರೆ.


ಒಮ್ಮೆ ನಾನು ಮತ್ತು ನನ್ನ ಪತ್ನಿ ಬೆಂಗಳೂರಿನ ಅವರ ಮನೆಗೆ ಭೇಟಿಕೊಟ್ಟೆವು. ಹರಿಯವರನ್ನು ಮೊದಲ ಬಾರಿಗೆ  ಕಣ್ಣಾರೆ ನೋಡಿ ಆನಂದಿಸಿದೆವು. ಹರಿಯವರನ್ನು ನಾನು ನೋಡಿರಲಿಲ್ಲ. ಗುರುತಿಸಿದಾಗ ನಮಗಾದ ಆನಂದಕ್ಕೆ ಮೇರೆಯಿರಲಿಲ್ಲ. ಹರಿಯವರು ಅಪಾರ ಕನ್ನಡ ಪ್ರೇಮಿ, ಒಳ್ಳೆಯ ಬರಹಗಾರ, ಒಳ್ಳೆಯ ವ್ಯಂಗ್ಯಚಿತ್ರಕಾರ, ಅತ್ಯಂತ ಸಂವೇದನಶೀಲ ಛಾಯಾಗ್ರಾಹಕ,  ಎಲ್ಲಕ್ಕಿಂತ ಹೆಚ್ಚಾಗಿ ಜೀವನವನ್ನು ಪ್ರೀತಿಸುವ, ಸರಳ ಸ್ವಭಾವದ ಸಹೃದಯಿ. ಈ ಚಿಕ್ಕ ಕಾಯದ ಮನುಷ್ಯ ಎಂತಹ ಜವಾಬ್ದಾರಿ ಕೆಲಸ ಮಾಡುತ್ತಿದ್ದಾರೆ. ಕನ್ನಡವನ್ನು ಕಟ್ಟುವ ಬೆಳೆಸುವ ಕಾರ್ಯ ಅಷ್ತು ಸುಲಭವಲ್ಲ. ಹಣದ ಹೊಂದಾಣಿಕೆಯನ್ನು ಮಾಡಬೇಕು. ಹೆಚ್ಚು ಸಮಯವನ್ನು ಕಳೆಯಬೇಕು. ಸರ್ವರ್ ಮೇನ್ಟೆನೆನ್ಸ್ ಇತ್ಯಾದಿಗಳ್ ಕರ್ಚು-ವೆಚ್ಚ ನಿಗಾವಹಿಸಬೇಕು.

ನಾವು ಹೊಸದಂಪತಿಗಳಿಗೆ ಆಶೀರ್ವದಿಸಿ ಸುಮ ನಾಡಿಗ್ ರವರ ರುಚಿಯಾದ ಊಟದ ಸವಿಯನ್ನು ಮೆದ್ದು, ಆತಿಥ್ಯವನ್ನು ಸ್ವೀಕರಿಸಿ, ಮನಸಾರೆ ಹರಸಿದೆವು. ತಮ್ಮ ಬಿಡುವಿಲ್ಲದ ಕಾರ್ಯಗಳಲ್ಲೂ ಇನ್ನೂ ಹೊಸದಾಗಿ ಮದುವೆಯಾದ ಮದುಮಗ-ಮದುಮಗಳು  ನಮ್ಮನ್ನು ಹೆಚ್ಚುಕಡಿಮೆ ಮನೆಯತನಕ ತಮ್ಮ ಕಾರಿನಲ್ಲಿ ಕರೆದೊಯ್ದು ನಮ್ಮ ಅಣ್ಣನವರ ಜಯನಗರದ ಮನೆಯನ್ನು ಮುಟ್ಟಿಸಿದರು.   

ನಾನು  ಬರೆದ ನೂರಾರು ಚಿಕ್ಕ-ಪುಟ್ಟ  ಲೇಖನಗಳಲ್ಲಿ  ಕೆಲವು ಲೇಖನಗಳು :

* ಸಂಪದ ಕನ್ನಡ ತಾಣಕ್ಕೆ ಪಾದಾರ್ಪಣೆ-ಅಂದರೆ ಮೊದಲಹೆಜ್ಜೆ.


* ಭಾರತದಲ್ಲಿ ಬಿ. ಟಿ. ಹತ್ತಿ-ಒಂದು ಸಮೀಕ್ಷೆ


* ನಮ್ಮ ಕನ್ನಡದ ಆಶುಕವಿ, ನಾಡಕವಿ-ಸರ್ವಜ್ಞ


* ವಿಕೆಟ್ ಅಲ್ಲ ವಿಟೆಟ್


* ಗ್ರೆಗೊರಿ ಪೆಕ್ ಒಂದು ಸ್ಮರಣೆ,


* ಬಂತು, ಬಂತು, ಸ್ವಾತಂತ್ರ್ಯದಿನದ ಹಬ್ಬ ಮತ್ತೆ ಬಂತು,


* ಕಗ್ಗಕ್ಕೊಂದು ಕೈಪಿಡಿ (ಮಂಕುತಿಮ್ಮ ಗುರುವಿನ ತತ್ವ ದರ್ಶನ) 

 

ಮುಂದೆ ದಿನಕಳೆದಂತೆ ಹರಿಯವರು  ಪಾಡ್ ಕಾಸ್ಟ್ ಗಳಲ್ಲಿ ದ್ವನಿಯನ್ನು ಸೆರೆಹಿಡಿದಿದ್ದರು : 

ಪಾಡ್ ಕಾಸ್ಟ್ ಗಳು ಅನಂತಮೂರ್ತಿ,  ಲಿಂಗದೇವರು ಹಳೆಮನಿ, ಜಿ.ಎಸ್.ಎಸ್.  ನಿಸ್ಸಾರ್ ಅಹ್ಮೆದ್, ಪೂರ್ಣಚಂದ್ರ ತೇಜಸ್ವಿ, ಹೆಗ್ಗಡೆ, ಟಿ.ಜಿ.ನಾರಾಯಣರಾವ್, ಟಿ.ಎನ್. ಸೀತಾರಾಂ, ವಿವೇಕ್ ಶ್ಯಾನಭಾಗ, ಕಯ್ಯಾರ ಕಿಞ್ಞಣ್ಣ ರೈ. ಮುಂತಾದವರ, ಜೊತೆ ನಡೆಸಿದ ಸಂವಾದಗಳು.

ನಾನು ಅಮೆರಿಕಕ್ಕೆ ಜುಲೈ ೨೦೦೮ ರಲ್ಲಿ ಹೊರಟು ಎರಡೂವರೆತಿಂಗಳು ಮಾಡಿದ ಪರ್ಯಟಣೆಯ ಹಲವಾರು ಸಂಗತಿಗಳನ್ನು ಸಂಪದದ ಗೆಳೆಯ/ಗೆಳತಿಯರ ಮಧ್ಯೆ ಹಂಚಿಕೊಂಡೆ. ಇದೊಂದು ಮರೆಯಲಾರದ ಅನುಭವ.


ಮೊದಲು ನಾನು ನನ್ನ ಪರಿವಾರ ಮತ್ತು ನನ್ನ ತಮ್ಮ, ಚಿಕಾಗೋನಗರದಲ್ಲಿ ಆಯೋಜಿಸಲಾಗಿದ್ದ ೫ನೆಯ ವಿಶ್ವ ಕನ್ನಡ ಸಮ್ಮೇಳನದಲ್ಲಿ ೩ ದಿನವೂ ತಪ್ಪದೆ ಭಾಗವಹಿಸಿದೆವು. ಅಲ್ಲಿ ನಡೆದ ವಿಚಾರಗೋಷ್ಟಿ, ಸಂಗೀತ, ನೃತ್ಯ, ಫ್ಯಾಶನ್ ಶೊ, ಮತ್ತು ಸಂವಾದ, ಪುಸ್ತಕ ಬಿಡುಗಡೆ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದೆವು. ನಮಗೆ ಮುದಕೊಟ್ಟ ಕರ್ಣಾಟಕ ಭಾಗವತ ಉದ್ಗ್ರಂಥವನ್ನು ಡಾ. ಚಂದ್ರಶೇಖರ್ ಕಂಬಾರ್ ವಿಶ್ವಾರ್ಪಣೆಮಾಡಿದ ಸಮಾರಂಭ, ಮತ್ತು ಜಯಂತ್ ಕಾಯ್ಕಿಣಿಯವರು ನಡೆಸಿಕೊಟ್ಟ ಕಾರ್ಯಕ್ರಮ ಮುದನೀಡಿತು. ಆ ಸಮಾರಂಭದ ಮಧ್ಯೆ, ಭೇಟಿಯಾದ, ಯಡಿಯೂರಪ್ಪನವರು, ತಾರಾ, ರಮೇಶ್, ಉಪೇಂದ್ರ,ರವರ ಜೊತೆ ಫೋಟೋ ತೆಗೆಸಿಕೊಂಡ ಬಗ್ಗೆ ವರದಿ. ಇತ್ಯಾದಿ. 

ನಂತರ,

ಅಮೆರಿಕದ ಅಂಚೆ ಕಚೇರಿ, ಸಾರ್ವಜನಿಕ ಪುಸ್ತಕಾಲಯ, ವೃದ್ಧರ ಮಧ್ಯಾನ್ಹದ ಮನೆ, ಬಗ್ಗೆ ವರದಿ  ಇತ್ಯಾದಿ,

ಸಿಯರ್ಸ್ ಟಾವರ್ಸ್, ಚಿಕಾಗೋ ನಗರದ ಸ್ಯೂಯೇಜ್ ಬಗ್ಗೆ, ಮಿಸ್ಸೂರಿನದಿ, ಜೆಫರ್ಸನ್ ಮೆಮೋರಿಯಲ್, ವಿನ್ಸ್ಟಲ್ ಚರ್ಚಿಲ್ ರವರ ಸ್ಮರಣಮಂದಿರ, ಅಬ್ರಹಮ್, ಲಿಂಕನ್ ರವರ, ಸ್ಮರಣ ಮಂದಿರ ಮತ್ತು ಪುಸ್ತಕಾಲಯ,  ಬ್ಲೂಮಿಂಗ್ಟನ್ ನಗರದ ಮೆಕ್ಕೇಜೋಳದ ಹೊಲಗಳು, ವಿಂಡ್ ಮಿಲ್ ಗಳು, ಸ್ನೋಕಲ್ಮಿ ಜಲಪಾತ, ಸ್ಯಾನ್ ಫ್ರಾನ್ಸಿಸ್ ನಗರದ ಹಲವು ವಿಚಾರಗಳು, ಗೋಲ್ಡನ್ ಬ್ರಿಡ್ಜ್ ಸೇತುವೆಯ ಹಲವರು ಸಂಗತಿಗಳು. ಕ್ಯಾಲಿಫೋರ್ನಿಯದಲ್ಲಿರುವ ಅನ್ ಹ್ಯಾಮ್ ನ, ವಾಲ್ಟ್ ಡಿಸ್ನಿ ವಿಚಿತ್ರ ಲೋಕದ ಬಗ್ಗೆ, ಅನೇಕ ಮಾಹಿತಿಗಳು, ಸಿಯಾಟಾಲ್ ನಗರದ ಬಗ್ಗೆ, ಹಂಟಿಂಗ್ ಟಾನ್ ಬೀಚ್, ನ್ಯೂಪೋರ್ಟ್ ಮತ್ತು ಕೆಲವು ಬೀಚ್ ಗಳ ವಿಚಾರ, ಶಾಂತಿಮಂದಿರ್, ಸ್ಯಾನ್ ಬಾರ್ನ್ ಪರಿಕ್ಷಾ ಹೊಲದ ಬಗ್ಗೆ ವರದಿ. 

 

ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿಗಳು, ಶಂಕರ ಲಿಂಗ ಭಗವಾನ್, ಗುರುಚರಿತ್ರೆ, ಗಾದೆಗಳು, ಆರ್.ಕೆ. ಲಕ್ಶ್ಮಣ್ ಬಗ್ಗೆ ಇಂಗ್ಲೀಷ್ ವ್ಯಂಗ್ಯಚಿತ್ರಗಳಿಗೆ ಕನ್ನಡದ ವಾಕ್ಯಗಳನ್ನು ಜೋಡಿಸಿಬರೆದ ಹಲವಾರು ಪುಟಗಳು, ಹತ್ತಿಯ ಬಗ್ಗೆ, ಜೀನ್ಸ್ ಬಗ್ಗೆ, ಹಿಮಾಲಯ ಸೊಸೈಟಿ, 
ಹಿರಿಯರು ಹೇಳಿದ್ದೆಲ್ಲಾ ಸರಿಯೇ. ತಪ್ಪಾದರೂ ವೈಭವೀಕರಿಸುವುದೇಕೆ ? ಒಂದು ಸಂಭಾಷಣೆ. 

 

ಕಾಲ್ಚೆಂಡ್ ಮತ್ತು ಕ್ರಿಕೆಟ್ ವಿಶ್ವಕಪ್ ಗಳ ಬಗ್ಗೆ ವಿವರಣೆ,

ಸ್ವಾತಂತ್ರ್ಯ ದಿನಾಚರಣೆ ಮತ್ತು, ಬಾಪೂಜಿ, ಖಾದಿಯ ಬಗ್ಗೆ ನನ್ನ ಅನಿಸಿಕೆಗಳು

ಹಲವಾರು ಪ್ರಶಸ್ತಿ ವಿಜೇತರ ಬಗ್ಗೆ ಲೇಖನ,

ಸಿನಿಮಾ ಕ್ಷೇತ್ರದಲ್ಲಿ ಉತ್ಕೃಷ್ಟ ಕೆಲಸಮಾಡಿದ ವ್ಯಕ್ತಿಗಳ ಬಗ್ಗೆ- ರಾಜ್ ಕುಮಾರ್, ಶ್ಯಾಮ್ ಬೆನೆಗಲ್, ಹೃಶೀಕೇಷ್ ಮುಖರ್ಜಿ,ನ್ನಾಡೆ,ಒ.ಪಿನಯ್ಯರ್,
ಜನಗಣಮನ, ಡಾ. ರಾಘವೇಂದ್ರ ರಾವ್ ಬರೆದ ಪುಸ್ತಕದ ಬಗ್ಗೆ. ಇನ್ನೂ ಹತ್ತು ಹಲವು ನನಗೆ ತೋಚಿದ ಮನಬಂದಂತೆ ಗೀಚಿದ ಬರವಣಿಗೆಗಳಿವೆ.

 

ನಿಜಹೇಳಬೇಕೆಂದರೆ, ಸಂಪದಲ್ಲಿ ಬರೆದ ತಕ್ಷಣ ನಮ್ಮ ಕಣ್ಣುಗಳಮುಂದೆ ಪ್ರಕಟವಾಗುವ ನಮ್ಮ ಲೇಖನಗಳನ್ನು ಕಂಡಾಗ ಐಸ್ಕ್ರೀಂ ಮಗುವಿನ ಕೈಗೆ ಟ್ಟಾಗ ಅದು ಸಂತಸದಿಂದ ಅಮ್ಮನನ್ನು ನೋಡುವ ನೋಟದ ಆ ಹೃದಯಸ್ಪರ್ಷಿ ಅನುಭವ ನನಗೆ ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ !

 

 -Venkatesh

 

 

 

 

 

 

 

 

 

 

 

Comments