ಹೆಲ್ಮೆಟ್ ಧರಿಸುವಿಕೆಯಿಂದ ಕೂದಲು ಉದುರುತ್ತಿದೆಯೇ?

ಹೆಲ್ಮೆಟ್ ಧರಿಸುವಿಕೆಯಿಂದ ಕೂದಲು ಉದುರುತ್ತಿದೆಯೇ?

ದ್ವಿಚಕ್ರ ವಾಹನ ಸವಾರರಿಗೆ ತಲೆಗೆ ಹೆಲ್ಮೆಟ್ ಧರಿಸುವುದು ಒಂದು ಕಿರಿಕಿರಿಯ ಸಂಗತಿ ಎಂದು ಅನಿಸುವುದು ಸಹಜ. ಆದರೆ ಹೆಲ್ಮೆಟ್ ವ್ಯಕ್ತಿಯೊಬ್ಬನ ಜೀವವನ್ನು ಉಳಿಸುವ ಸಾಧನ ಎಂಬ ವಿಷಯವನ್ನೂ ಮರೆಯುವಂತಿಲ್ಲ. ಹೆಲ್ಮೆಟ್ ಧರಿಸುವುದರಿಂದ ಕೂದಲು ಉದುರುತ್ತದೆ ಎನ್ನುವುದು ಬಹಳಷ್ಟು ಮಂದಿಯ ಆರೋಪ. ಇದು ಸಂಪೂರ್ಣ ಸುಳ್ಳೂ ಅಲ್ಲ. ಆದರೆ ತಲೆಯ ಕೂದಲಿಗಿಂತ ತಲೆ ಮುಖ್ಯ ಅನಿಸುತ್ತೆ ಅಲ್ವಾ? ಅದಕ್ಕಾಗಿ ದ್ವಿಚಕ್ರ ವಾಹನ ಚಲಾಯಿಸುವಾಗ ಹೆಲ್ಮೆಟ್ ಧರಿಸುವುದು ಅತ್ಯವಶ್ಯಕ.

ಬೇಸಿಗೆ ಕಾಲದಲ್ಲಿ ದಿನಾಲೂ ಹೆಲ್ಮೆಟ್ ಧಾರಣೆಯಿಂದ ಬೆವರು ಹೊರಬರುವ ಕಾರಣದಿಂದ ತಲೆಹೊಟ್ಟಿನ ಸಮಸ್ಯೆ ಕಾಡುವುದು ಸಹಜ. ಪ್ರತೀ ದಿನ ತಲೆಗೆ ಸ್ನಾನ ಮಾಡಿ ತಲೆ ಕೂದಲಿನ ಬುಡವನ್ನು ಸ್ವಚ್ಛವಾಗಿ ಇರಿಸಿಕೊಳ್ಳುವುದು ಅಗತ್ಯ. ಇದರಿಂದ ಕೂದಲಿನ ನಡುವೆ ಕೊಳೆ ಕೂರದೇ, ಶುಷ್ಕತೆಯನ್ನು ನಿವಾರಿಸಿ ಕೂದಲು ಉದುರುವ ಪ್ರಮಾಣವನ್ನು ನಿಯಂತ್ರಿಸಬಹುದು. ಇದರಿಂದ ಕೂದಲಿನ ತುರಿಕೆಯೂ ಕಡಿಮೆಯಾಗುತ್ತದೆ. ತಲೆಗೆ ಸ್ನಾನ ಮಾಡಿ ಬಂದ ಕೂಡಲೇ ಅದು ಒಣಗುವ ಮುನ್ನ ಹೆಲ್ಮೆಟ್ ಧರಿಸಿದರೆ ಬ್ಯಾಕ್ಟೀರಿಯಾಗಳು ಬೆಳೆದು ತಲೆಯಲ್ಲಿ ಫಂಗಸ್ ಕಾಟ ಶುರುವಾಗುತ್ತದೆ. ತಲೆ ಹೊಟ್ಟು, ಸೀಳು ಕೂದಲಿನ ಸಮಸ್ಯೆ ಪ್ರಾರಂಭವಾದರೆ ಅದು ಬಹುಬೇಗನೇ ನಿವಾರಣೆಯಾಗುವುದಿಲ್ಲ. ಅದಕ್ಕಾಗಿ ತಲೆಗೆ ಸ್ನಾನ ಮಾಡಿದ ಬಳಿಕ ಅದು ಚೆನ್ನಾಗಿ ಒಣಗಿದ ಬಳಿಕವೇ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವುದು ಉತ್ತಮ.

ತಲೆಗೆ ತೆಳುವಾದ ಹತ್ತಿ ಬಟ್ಟೆಯನ್ನು ಕಟ್ಟಿಕೊಳ್ಳುವುದರಿಂದ ಸೆಖೆಯ ಕಾರಣದಿಂದ ಹೊರಬರುವ ಬೆವರನ್ನು ಆ ಬಟ್ಟೆ ಹೀರಿಕೊಳ್ಳುವುದರಿಂದ ಹೆಲ್ಮೆಟ್ ಗೆ ತಾಗುವ ಸಮಸ್ಯೆ ಕಡಿಮೆಯಾಗುತ್ತದೆ. ಇದರಿಂದ ಹೆಲ್ಮೆಟ್ ನ ಒಳ ಪದರ ಹಾನಿಗೀಡಾಗುವುದಿಲ್ಲ. ಬೆವರಿನ ಕೆಟ್ಟ ವಾಸನೆ ಬರುವುದಿಲ್ಲ. ಕೂದಲು ಉದುರುವ ಸಮಸ್ಯೆಯೂ ತಕ್ಕಮಟ್ಟಿಗೆ ಪರಿಹಾರವಾಗುತ್ತದೆ. ಕೂದಲಿಗೆ ಸರಿಯಾದ ಪೋಷಕಾಂಶಗಳು ದೊರೆಯದೇ ಹೋದರೂ ಕೂದಲು ಉದುರುವ ಸಾಧ್ಯತೆ ಇರುತ್ತದೆ. ಎರಡು ದಿನಕ್ಕೊಮ್ಮೆ ಉಗುರು ಬೆಚ್ಚಗೆಯ ಎಣ್ಣೆ ಹಚ್ಚಿ ತಲೆಯ ಕೂದಲನ್ನು ಮಸಾಜ್ ಮಾಡಿ. ಇದು ತಮ್ಮ ತಲೆಯಲ್ಲಿರುವ ರಕ್ತನಾಳಗಳಲ್ಲಿ ರಕ್ತ ಸರಾಗವಾಗಿ ಹರಿಯಲು ನೆರವಾಗುತ್ತದೆ. ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ. 

ನೀವು ಧರಿಸುವ ಹೆಲ್ಮೆಟ್ ನ ಒಳಭಾಗವನ್ನು ವಾರಕ್ಕೆ ಒಮ್ಮೆಯಾದರೂ ಸ್ವಚ್ಛಗೊಳಿಸಬೇಕು. ಇದರಿಂದ ಅದರ ಒಳಗೆ ಇರುವ ಧೂಳು ಮತ್ತು ಕ್ರಿಮಿ ಕೀಟಗಳನ್ನು ನಿವಾರಿಸಬಹುದು. ಉತ್ತಮ ದರ್ಜೆಯ ಹೆಲ್ಮೆಟ್ ನ ಒಳ ಭಾಗಗಳನ್ನು ಬಿಡಿಸಲು ಆಗುತ್ತದೆ. ಇದರಿಂದ ಆ ಭಾಗಗಳನ್ನು ಬಿಡಿಸಿ ಅವುಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿದರೆ ನಿಮ್ಮ ಹೆಲ್ಮೆಟ್ ನ ಒಳಭಾಗದಿಂದ ಬರುವ ದುರ್ಗಂಧ ನಿವಾರಣೆಯಾಗುತ್ತದೆ. ಹೀಗೆ ಮಾಡುವುದರಿಂದ ಹೆಲ್ಮೆಟ್ ಒಳಗೆ ಬೆಳೆದ ಬ್ಯಾಕ್ಟೀರಿಯಾಗಳು ಮತ್ತು ಶಿಲೀಂದ್ರಗಳ ನಾಶವಾಗಿ ನಿಮ್ಮ ಕೂದಲು ಉದುರುವ ಪ್ರಮಾಣ ಕಡಿಮೆಯಾಗುತ್ತದೆ.

ದ್ವಿಚಕ್ರ ವಾಹನ ಚಲಾಯಿಸುವ ಮಹಿಳೆಯರಿಗೆ ಹೆಲ್ಮೆಟ್ ಧರಿಸುವುದು ಒಂದು ದೊಡ್ದ ರಗಳೆ ಎಂಬ ಭಾವನೆ ಇದೆ. ತಲೆಗೆ ಹೂ ಮುಡಿಯುವಂತಿಲ್ಲ, ಕ್ಲಿಪ್ ಹಾಕುವಂತಿಲ್ಲ. ಚೆನ್ನಾಗಿ ಬಾಚಿದ ಕೂದಲು ಹೆಲ್ಮೆಟ್ ಧರಿಸುವುದರಿಂದ ಹಾಳಾಗುತ್ತದೆ ಹೀಗೆ ಹತ್ತು ಹಲವಾರು ಸಮಸ್ಯೆಗಳು ಅವರಿಗಿದೆ. ಆದರೆ ಹೆಲ್ಮೆಟ್ ಧರಿಸುವುದು ಅತೀ ಅಗತ್ಯ. ಇತ್ತೀಚೆಗೆ ೬ ವರ್ಷದ ಮೇಲಿನ ಎಲ್ಲಾ ಮಕ್ಕಳೂ ಸಹ ಹೆಲ್ಮೆಟ್ ಧರಿಸಬೇಕು ಎಂದು ಪ್ರಕಟಣೆ ಹೊರಡಿಸಲಾಗಿದೆ. ಈ ಕಾರಣದಿಂದ ಅಪಘಾತವಾಗುವಾಗ ಸಾವನ್ನಪ್ಪುವ ಪುಟ್ಟ ಮಕ್ಕಳನ್ನು ರಕ್ಷಿಸಬಹುದು. ೬ ವರ್ಷಕ್ಕಿಂತ ಪುಟ್ಟ ಮಕ್ಕಳನ್ನು ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಹೋಗದೇ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವುದು ಉತ್ತಮ. ಏಕೆಂದರೆ ಯಾವುದೇ ದ್ವಿಚಕ್ರ ವಾಹನದ ಅಪಘಾತವಾದಾಗ ಮೊದಲು ಪೆಟ್ಟಾಗುವುದು ತಲೆಗೇ. ಈ ಕಾರಣದಿಂದ ಉತ್ತಮ ದರ್ಜೆಯ ಹೆಲ್ಮೆಟ್ ನಿಮ್ಮ ತಲೆಯನ್ನೂ, ಜೀವವನ್ನೂ ಉಳಿಸುತ್ತದೆ. ಹೀಗಾಗಿ ಹೆಲ್ಮೆಟ್ ಧಾರಣೆಯಿಂದ ಕೂದಲು ಉದುರುತ್ತದೆ ಎನ್ನುವ ಆಪಾದನೆಯನ್ನು ದೂರವಿಟ್ಟು ದ್ವಿಚಕ್ರ ವಾಹನ ಚಲಾಯಿಸುವಾಗ ತಪ್ಪದೇ ಐ ಎಸ್ ಐ ಗುರುತು ಹೊಂದಿರುವ ಉತ್ತಮ ದರ್ಜೆಯ ಹೆಲ್ಮೆಟ್ ಅನ್ನೇ ಧರಿಸಿ. 

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ