ಹೆಸರು - ಉದ್ದು ಧಾನ್ಯಗಳನ್ನು ಬೆಳೆದು ಲಾಭ ಗಳಿಸಿರಿ
ನಮ್ಮ ಮನೆಗಳಲ್ಲಿ ನಾವು ಮಾಡುವ ಯಾವುದೇ ತಿಂಡಿ ತಿನಸುಗಳಿಗೆ ಉದ್ದು ಹಾಗೂ ಹೆಸರು ಅನಿವಾರ್ಯವೇ ಆಗಿರುತ್ತದೆ. ಉದ್ದು ಇಲ್ಲವೇ ಉದ್ದಿನ ಬೇಳೆಯನ್ನು ನಾವು ಬಹುತೇಕ ದೋಸೆಗಳಿಗೆ, ಇಡ್ಲಿ ತಯಾರಿಕೆಗೆ ಬಳಸುತ್ತೇವೆ. ಈ ಧಾನ್ಯಗಳಿಗೆ ಉತ್ತಮ ಮಾರುಕಟ್ಟೆ ಇದೆ. ಹೆಸರು ಮತ್ತು ಉದ್ದು ಮಳೆಗಾಲ, ಚಳಿಗಾಲ ಮತ್ತು ಬೇಸಿಗೆ ಕಾಲಗಳೆಂಬ ಮೂರು ಋತುಮಾನದಲ್ಲೂ ಬೆಳೆಯಬಹುದಾದ ಉತ್ತಮ ಲಾಭದ ಬೆಳೆ. ಮಳೆಗಾಲದಲ್ಲಿ ಮಳೆಯಾಶ್ರಯದಲ್ಲೂ, ಚಳಿಗಾಲದಲ್ಲಿ ಮತ್ತು ಬೇಸಿಗೆಯಲ್ಲಿ ಭತ್ತದ ಹೊಲದ ಉಳಿಕೆ ತೇವಾಂಶದಲ್ಲೂ ಬೆಳೆಸಿ ಎಕ್ರೆಗೆ ೩-೪ ಕ್ವಿಂಟಾಲು ಇಳುವರಿ ಪಡೆಯಲು ಸಾಧ್ಯ.
ಹೆಸರು ಕಡಿಮೆ ಅವಧಿಯ ಪ್ರಮುಖ ದ್ವಿದಳ ಧಾನ್ಯದ ಬೆಳೆ. ಹಿಂದೆ ಹೆಚ್ಚಿನೆಲ್ಲಾ ಭತ್ತದ ಬೆಳೆಗಾರರು ಹೊಲದಲ್ಲಿ ಭತ್ತ ಕಟಾವು ಮಾಡಿದ ನಂತರ ಆ ಹೊಲದಲ್ಲಿ ಉಳುಮೆ ಸಹ ಮಾಡದೇ ಹೆಸರು, ಉದ್ದು ಬಿತ್ತಿ ಬಂದಷ್ಟು ಇಳುವರಿಯನ್ನು ಲಾಭದ್ದೆಂದು ಪಡೆಯುತ್ತಿದ್ದರು. ಸಾಮಾನ್ಯವಾಗಿ ಏಣಿಲು ಬೇಸಾಯ ಮಾತ್ರ ಮಾಡುವ ಗದ್ದೆಯಲ್ಲಿ ಕಟಾವು ಮುಗಿದ ಅಕ್ಟೋಬರ್ ನವೆಂಬರ್ ತಿಂಗಳಲ್ಲಿಯೂ, ಸುಗ್ಗಿ ಬೇಸಾಯ ಮಾಡುವಲ್ಲಿ ಅದು ಕಟಾವಾಗುವಾಗ ಮಾರ್ಚ್ ತಿಂಗಳಲ್ಲಿಯೂ ಬಿತ್ತನೆ ಮಾಡುತ್ತಿದ್ದರು. ಇನ್ನೇನೂ ಭತ್ತದ ಪೈರು ನಾಳೆ ನಾಡಿದ್ದಿನಲ್ಲಿ ಕಟಾವು ಆಗುತ್ತದೆ ಎಂದಿದ್ದಾಗ ಎರಡು ದಿನಕ್ಕೆ ಮುಂಚೆ ಒಂದೆರಡು ಸೇರು ( ಸುಮಾರು ೨ ಕಿಲೋ ದಷ್ಟು) ಉದ್ದು ಇಲ್ಲವೇ ಹೆಸರನ್ನು ಬಿತ್ತುವ ಕ್ರಮ ಇತ್ತು. ಆದರೆ ಇದರಲ್ಲಿ ಹೆಚ್ಚಿನ ಹೆಚ್ಚಿನ ಬೀಜಗಳು ಭತ್ತದ ಪೈರಿನಲ್ಲಿ ಸೇರಿ ನಷ್ಟವಾಗುತ್ತಿತ್ತು. ಅದಕಾಗಿ ಕೆಲವರು ಭತ್ತ ಕಟಾವು ಮಾಡಿದ ತಕ್ಷಣ ಗದ್ದೆಯನ್ನು ಒಮ್ಮೆ ಉಳುಮೆ ಮಾಡಿ ಬೂದಿ ಎರಚಿ ಹೆಸರು, ಉದ್ದು ಬಿತ್ತುತ್ತಿದ್ದರು. ಕ್ರಮೇಣ ಭತ್ತದ ಹೊಲಗಳೇ ಕಡಿಮೆಯಾದವು. ಭತ್ತವನ್ನೇ ಕೊಯಿಲು ಮಾಡುವುದು ಕಷ್ಟ ಇನ್ನು ಹೆಸರು ಉದ್ದು ಬೆಳೆಸಿದರೆ ಯಾರು ಕೊಯ್ಲು ಮಾಡುವುದು ಎಂದು ಅದನ್ನು ಬೆಳೆಸುವುದೇ ಕಡಿಮೆಯಾಯಿತು. ಇದರ ಪರಿಣಾಮವಾಗಿ ಉದ್ದು ಹಾಗೂ ಹೆಸರಿನ ಬೆಲೆ ಏರುತ್ತಾ ಹೋಯಿತು. ೬೦-೭೦ ದಿನದಲ್ಲಿ ನೀರಾವರಿ ಇಲ್ಲದೆ ಅಥವಾ ಒಂದೆರಡು ನೀರಾವರಿಯಲ್ಲಿ ಯಾವುದೇ ಖರ್ಚು ಇಲ್ಲದೇ ಪಡೆಯಬಹುದಾದ ಬೆಳೆ ಎಂದರೆ ಈ ಬೆಳೆಗಳು ಮಾತ್ರ. ಬರುವ ಕಾಳುಗಳಿಂದ ಬಂದಷ್ಟು ಆದಾಯ. ಉಳಿದ ಸಸ್ಯವು ಜಾನುವಾರುಗಳಿಗೆ ಪೌಷ್ಟಿಕ ಮೇವಾಗುತ್ತದೆ. ಎರಡು ಸೇರು ಉದ್ದು ಬಿತ್ತಿ ಸುಮಾರು ೧ ತಿಂಗಳ ಕಾಲ ನಿಮ್ಮ ಮನೆಯ ಜಾನುವಾರುಗಳಿಗೆ ಹೊಟ್ಟೆ ತುಂಬಾ ಪೌಷ್ಟಿಕ ಮೇವನ್ನು ಪಡೆಯಿರಿ. ದ್ವಿದಳ ಧಾನ್ಯದ ಸಸ್ಯವನ್ನು ಜಾನುವಾರುಗಳು ಬಹಳ ಇಷ್ಟಪಟ್ಟು ತಿನ್ನುತ್ತದೆ. ಉತ್ತಮ ಹಾಲನ್ನೂ ಕೊಡುತ್ತವೆ.
ನಮ್ಮ ರಾಜ್ಯದಲ್ಲಿ ಹೆಸರು ಮತ್ತು ಉದ್ದನ್ನು ಸುಮಾರು ೩-೪ ಲಕ್ಷ ಹೆಕ್ಟೇರಿನಷ್ಟು ಪ್ರದೇಶದಲ್ಲಿ ಬೆಳೆಸಲಾಗುತ್ತದೆ. ಇದು ಸುಮಾರು ೨೫ ವರ್ಷಕ್ಕೆ ಹಿಂದೆ ೫ ಲಕ್ಷ ಹೆಕ್ಟೇರಿಗೂ ಹೆಚ್ಚಿನ ಪ್ರದೇಶದಲ್ಲಿತ್ತು. ದಿನ ಕಳೆದಂತೆ ಈ ಧಾನ್ಯಗಳ ಬೇಸಾಯ ನಮ್ಮ ರಾಜ್ಯದಲ್ಲಿ ಕಡಿಮೆಯಾಗುತ್ತಿದೆ. ಆದರೆ ಉಳಿದ ರಾಜ್ಯಗಳಲ್ಲಿ ಅಂಥಹ ಇಳಿಕೆ ಕಂಡು ಬಂದಿಲ್ಲ. ಬೇಸಿಗೆ ಮತ್ತು ಚಳಿಗಾಲದ ಹಂಗಾಮಿನಲ್ಲಿ ಬೆಳೆಸುವ ಪ್ರದೇಶಗಳು ತುಂಬಾ ಕಡಿಮೆಯಾಗಿವೆ.
ಹೆಸರಿನಲ್ಲಿ ಹಿಂದೆ ಸ್ಥಳೀಯ ತಳಿಗಳೇ ಚಾಲ್ತಿಯಲಿತ್ತು. ಅವುಗಳಲ್ಲಿ ಇಳುವರಿ ಕಡಿಮೆ, ಸಸ್ಯ ಗಾತ್ರವೂ ಸಣ್ಣದು. ಆದರೆ ಈಗ ಬೇರೆ ಬೇರೆ ಸುಧಾರಿತ ತಳಿಗಳ ಪರಿಯವಾಗಿವೆ. ಇದರಲ್ಲಿ ಇಳುವರಿ ಹೆಚ್ಚು ಮಾತ್ರವಲ್ಲದೆ ಸಸ್ಯವೂ ಸ್ಥಳೀಯ ತಳಿಗಿಂತ ದೊಡ್ಡದು. ಇವುಗಳಲ್ಲಿ ಕೆಲವು ತಳಿಗಳು ಮಳೆಗಾಲಕ್ಕೆ ಸೂಕ್ತವಾದರೆ ಮತ್ತೆ ಕೆಲವು ಚಳಿಗಾಲ ಮತ್ತು ಬೇಸಿಗೆಗಳೆರಡಕ್ಕೂ ಹೊಂದಿಕೆಯಾಗುತ್ತವೆ. ಬೇಸಿಗೆಯ ತಳಿಯ ಅವಧಿ ಸುಮಾರು ೬೦ ದಿನಗಳಾಗಿದ್ದು, ಕೀಟ ಮತ್ತು ರೊಗ ಬಾಧೆ ರಹಿತವಾಗಿ ಉತ್ತಮ ಇಳುವರಿ ನೀಡಬಲ್ಲುದು.
ಹೆಸರಿನ ಸುಧಾರಿತ ತಳಿಗಳು:
ಕೆ ಕೆ ಎಂ.-೩: ಇದು ಮಳೆಗಾಲ ಮತ್ತು ಬೇಸಿಗೆ ಕಾಲಗಳೆರಡಕ್ಕೂ ಹೊಂದಿಕೆಯಗುವ ತಳಿ. ೬೦-೬೫ ದಿನಗಳಲ್ಲಿ ಕಟಾವಿಗೆ ಬರುತ್ತದೆ. ಎಕ್ರೆಗೆ ೩-೪ ಕ್ವಿಂಟಾಲು ಇಳುವರಿ.
ಸೆಲೆಕ್ಷನ್ ೪: ಇದು ಮುಂಗಾರು ಹಂಗಾಮಿಗೆ ಮಾತ್ರ ಸೂಕ್ತವಾದ ತಳಿ. ಅವಧಿ ೬೦-೬೫ ದಿನಗಳು. ಕೀಳುವ ಸಮಯದಲ್ಲಿ ಮಳೆ ಬಂದರೂ ಹಾಳಾಗುವುದಿಲ್ಲ. ಸಸಿಯಲ್ಲಿ ಕೋಡುಗಳು ಬಲಿತಾದ ನಂತರ ಕೀಳಲು ೩-೪ ದಿನವಾದರೂ ಕೋಡು ಸಿಗಿಯದೇ ಉಳಿಯುತ್ತದೆ.
ಶೈನಿಂಗ್ಮೂಂಗ್ ಅಥವಾ ಚೈನಾ ಮೂಂಗ್: ಇದು ಮುಂಗಾರು ಹಂಗಾಮಿಗೆ ಮಾತ್ರ ಸೂಕ್ತವಾದ ತಳಿ. ಕಾಳುಗಳು ದಪ್ಪ ಮತ್ತು ತುಂಬಾ ಹೊಳಪಾಗಿರುತ್ತದೆ. ಸುಮಾರು ೭೦ ದಿನಗಳ ವಾಯಿದೆಯ ಬೆಳೆ.
ಪೂಸಾ ಬೈಸಾಕಿ: ಇದು ಮಳೆಗಾಲ, ಚಳಿಗಾಲ ಮತ್ತು ಬೇಸಿಗೆ ಕಾಲಗಳಿಗೆಲ್ಲಾ ಹೊಂದುವ ತಳಿ. ೬೫ ದಿನಗಳ ಬೆಳೆ.
ಬಿ ಜಿ ಎಸ್: ಇದು ಸಹ ಬೇಸಿಗೆ ಮತ್ತು ಮಳೆಗಾಲಕ್ಕೆ ಹೊಂದುವ ತಳಿ. ಇಳಿವರಿ ೪ ಕ್ವಿಂಟಾಲಿಗೂ ಹೆಚ್ಚು ಕೊಡುತ್ತದೆ.
ಪಿ ಡಿ ಎಂ: ಇದು ಬೇಸಿಗೆ ಮತ್ತು ಮಳೆಗಾಲಕ್ಕೆ ಹೊಂದುವ ತಳಿ. ಬೂದಿ ರೋಗ ಮತ್ತು ನಂಜು ರೋಗಕ್ಕೆ ನಿರೋಧಕ ಶಕ್ತಿ ಪಡೆದಿದೆ. ೭೦ ದಿನಗಳ ತಳಿ.
ಹೆಸರನ್ನು ಬಿತ್ತನೆ ಮಾಡುವಾಗ ಬಿತ್ತನೆ ಬೀಜವನ್ನು ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕು. ಸುಮಾರು ೮ ಕಿಲೋ ರೈಝೋಬಿಯಂ ೨೦೦ ಗ್ರಾಂ ರಂಜಕ ಕರಗಿಸುವ ಜೀವಾಣು ಗೊಬ್ಬರ, ಮತ್ತು ೨೦೦ ಗ್ರಾಂ ಟ್ರೈಕೋಡರ್ಮಾವನ್ನು ೪ ಕಿಲೋ ಬೀಜಕ್ಕೆ ಉಪಚಾರ ಮಾಡಿ ಬಿತ್ತನೆ ಮಾಡಬೇಕು. ಮೊದಲು ೧೫೦ ಗ್ರಾಂ ಬೆಲ್ಲವನ್ನು ೧ ಲೀಟರ್ ನೀರಿನಲ್ಲಿ ಕರಗಿಸಿ ೪ ಕಿಲೋ ಬಿತ್ತನೆ ಬೀಜದ ಮೇಲೆ ಈ ದ್ರಾವಣವನ್ನು ಚಿಮುಕಿಸಿ ನಂತರ ಮೇಲಿನ ಜೀವಾಣು ಗೊಬ್ಬರಗಳನ್ನು ಮಿಶ್ರಣ ಮಾಡಿ ನೆರಳಿನಲ್ಲಿ ಒಣಗಿಸಿ ನಂತರ ಬಿತ್ತನೆ ಮಾಡಬೇಕು. ಇದರಿಂದ ಸಸ್ಯ ಬೆಳವಣಿಗೆ ಉತ್ತಮವಾಗಿ ಫಸಲು ಹೆಚ್ಚಾಗುತ್ತದೆ.
ಬಿತ್ತನೆ ಮಾಡುವ ಹೊಲವನ್ನು ಉಳುಮೆ ಮಾಡಿ ಬೀಜಗಳನ್ನು ೩೦ ಸೆಂ. ಮೀ. ಅಂತರದ ಸಾಲುಗಳಲ್ಲಿ ಬೀಜದಿಂದ ಬೀಜಕ್ಕೆ ೧೦-೧೨ ಸೆಂ.ಮೀ. ಅಂತರ ಇರುವಂತೆ ಬಿತ್ತನೆ ಮಾಡಬೇಕು. ಬಿತ್ತನೆ ಮಾಡಿ ಎರಡು ಬಾರಿ ಅವಶ್ಯಕವಾಗಿ ಕಳೆ ನಿಯಂತ್ರಣ ಮಾಡಬೇಕು. ಒಂದು ಎಕ್ರೆ ಬಿತ್ತನೆಗೆ ೪-೫ ಕಿಲೋ ಹೆಸರು ಬೇಕಾಗುತ್ತದೆ. ಇದರಿಂದ ಏನಿಲ್ಲವೆಂದರೂ ೩ ಕ್ವಿಂಟಾಲು ಇಳುವರಿ ಬರುತ್ತದೆ. ಸುಮಾರು ೬-೭ ಕ್ವಿಂಟಾಲು ಮೇವು ದೊರೆಯುತ್ತದೆ.
ಉದ್ದು: ಉದ್ದು ನಮ್ಮ ರಾಜ್ಯದ ಪ್ರಮುಖ ದ್ವಿದಳ ಧಾನ್ಯದ ಬೆಳೆಯಾಗಿದ್ದು ಇದನ್ನು ಮಳೆಗಾಲ, ಚಳಿಗಾಲ ಮತ್ತು ಬೇಸಿಗೆ ಕಾಲ ಎಂಬ ಮೂರು ಹಂಗಾಮಿನಲ್ಲೂ ಬೆಳೆಯಬಹುದು. ಹೆಸರಿನಂತೇ ಉದ್ದೂ ಸಹ ಉತ್ತಮ ಮೇವಿನ ಬೆಳೆ. ಉದ್ದಿಗೆ ಬೆಲೆ ಚೆನ್ನಾಗಿದ್ದು ಒಂದು ಎಕರೆ ಉದ್ದು ಬೇಸಾಯದಲ್ಲಿ ೩-೪ ಕ್ವಿಂಟಾಲು ಇಳುವರಿ ಪಡೆಯಬಹುದು.
ಉದ್ದಿನಲ್ಲಿ ಸ್ಥಳೀಯ ತಳಿಗಳಲ್ಲದೆ ಸುಧಾರಿತ ತಳಿಗಳೂ ಇವೆ. ಇವು ಉತ್ತಮ ಇಳುವರಿಯನ್ನು ಕೊಡಬಲ್ಲವು. ಡಿ ಯು-೧ ಮತ್ತು ಟಿ ಎ ಯು ಎಂಬ ಎರಡು ತಳಿಗಳು ಮಳೆಗಾಲದ ಹಂಗಾಮಿಗೆ ಸೂಕ್ತ ತಳಿಗಳಾಗಿವೆ. ಹೆಸರಿನ ಬೇಸಾಯ ಕ್ರಮದಂತೆಯೇ ಬೆಳೆಸಬೇಕು.
ಉದ್ದು ಹೆಸರಿನಂತಹ ದ್ವಿದಳ ಧಾನ್ಯದ ಬೆಳೆಗಳನ್ನು ಬೆಳೆಸುವಾಗ ಕಳೆಗಳ ನಿರ್ವಹಣೆಯೆ ಅತೀ ದೊಡ್ದ ಸಮಸ್ಯೆ. ಕಳೆಯನ್ನು ಕಿತ್ತು ತೆಗೆಯಲು ಸಾಕಷ್ಟು ಕೆಲಸಗಾರರು ಬೇಕಾಗುತ್ತದೆ. ಇದು ಈ ಕಾಲದಲ್ಲಿ ತುಂಬಾ ಕಷ್ಟವಾಗಿದ್ದು ಅದಕ್ಕಾಗಿ ಕಳೆನಾಶಕಗಳನ್ನು ಬಳಕೆ ಮಾಡುವುದು ಸಮಂಜಸ. ಹೊಲವನ್ನು ಚೆನ್ನಾಗಿ ಉಳುಮೆ ಮಾಡಿ ಮಣ್ಣನ್ನು ತೇವಮಾಡಿ ಬಿತ್ತನೆಗೆ ಮುಂಚಿನ ದಿನ ಉತ್ತಮ ಕಳೆನಾಶಕಗಳನ್ನು ಹೊಲಕ್ಕೆ ಸಿಂಪರಣೆ ಮಾಡಿ ನಂತರ ಬಿತ್ತನೆ ಮಾಡಿದರೆ ಉದ್ದು, ಹೆಸರು ಬೆಳೆಯುವ ಹೊಲದಲ್ಲಿ ೨೫-೩೦ ದಿನಗಳ ಕಾಲ ಮೊಳೆಯುವ ಕಳೆ ಬೀಜಗಳು ಸತ್ತು ಹೋಗುತ್ತವೆ. ಇದರಿಂದ ಹೆಚ್ಚಿನ ಕಳೆ ಹತೋಟಿ ಸುಲಭವಾಗುತ್ತದೆ. ನಂತರ ಮೊಳೆಯುವ ಕಳೆಗಳನ್ನು ಮುಖ್ಯ ಬೆಳೆಯು ನಿಯಂತ್ರಣ ಮಾಡುತ್ತದೆ.
ಚಿತ್ರಗಳು: ರಾಧಾಕೃಷ್ಣ ಹೊಳ್ಳ