ಹೇಡಿ ಕೃತ್ಯಕ್ಕೆ ತಕ್ಕ ಶಾಸ್ತಿ ಆಗಲಿ

ಹೇಡಿ ಕೃತ್ಯಕ್ಕೆ ತಕ್ಕ ಶಾಸ್ತಿ ಆಗಲಿ

ಜಮ್ಮು-ಕಾಶ್ಮೀರದ ಪಸಿದ್ಧ ಧಾರ್ಮಿಕ ಶ್ರದ್ಧಾಕೇಂದ್ರವಾದ ವೈಷ್ಣೋದೇವಿಯ ದರ್ಶನಕ್ಕೆ ಹೊರಟಿದ್ದ ಯಾತ್ರಿಕರ ಬಸ್ ಮೇಲೆ ಉಗ್ರಗಾಮಿಗಳು ಗುಂಡಿನ ದಾಳಿ ನಡೆಸಿ, ೯ ಭಕ್ತರ ಸಾವಿಗೆ ಕಾರಣರಾಗಿದ್ದಾರೆ. ಬಸ್ ನಲ್ಲಿ ಉತ್ತರಪ್ರದೇಶ, ರಾಜಸ್ಥಾನ ಮತ್ತು ದೆಹಲಿ ಮೂಲದ ಒಟ್ಟು ೪೧ ಯಾತ್ರಿಕರಾಗಿದ್ದರು. ಗುಡ್ದಗಾಡು ಪ್ರದೇಶದಲ್ಲಿ ಬಸ್ ಹೋಗುತ್ತಿದ್ದಾಗ ಭಯೋತ್ಪಾದಕರು ಬೆಟ್ಟ ಪ್ರದೇಶದ ಮೇಲೆ ನಿಂತು ಬಸ್ಸಿನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಹಿಂದೆಲ್ಲ ಉಗ್ರಗಾಮಿಗಳು ಭದ್ರತಾ ಪಡೆಗಳ ವಾಹನಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದರು. ಈಗ ಯಾತ್ರಾರ್ಥಿಗಳ ವಾಹನವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದು ಗಮನಾರ್ಹ.

ಕೇಂದ್ರದಲ್ಲಿ ಎನ್ ಡಿ ಎ ಅಧಿಕಾರಕ್ಕೆ ಬಂದ ಬಳಿಕ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಯ ಘಟನೆಗಳು ಕ್ರಮೇಣ ಕಡಿಮೆಯಾಗುತ್ತ ಸಾಗಿರುವುದು ಅಂಕಿಅಂಶಗಳಿಂದ ವೇದ್ಯವಾಗುತ್ತದೆ. ತತ್ಪರಿಣಾಮ, ಆ ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಮತ್ತೆ ಇಂಬು ದೊರೆಯುತ್ತಿದೆ. ಅದರಲ್ಲೂ ವಿಶೇಷವಾಗಿ ಧಾರ್ಮಿಕ ಯಾತ್ರಾ ಕೇಂದ್ರಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಇದನ್ನು ಸಹಿಸಲಾಗದ ವಿಚ್ಛಿದ್ರಕಾರಿ ಶಕ್ತಿಗಳು ಪ್ರವಾಸಿಗರ ಮನೋಸ್ಥೈರ್ಯ ಉಡುಗಿಸುವ ಪ್ರಯತ್ನಕ್ಕೆ ಕೈ ಹಾಕಿರುವುದು ಸ್ಪಷ್ಟವಾಗಿದೆ.

ಇದಲ್ಲದೇ ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಮಯದ ಆಸುಪಾಸಿನಲ್ಲೇ. ಅಂದರೆ ಭಾನುವಾರ ಸಂಜೆ ೬ ಗಂಟೆಯ ವೇಳೆಗೆ ಭಯೋತ್ಪಾದಕರು ದಾಳಿ ನಡೆಸಿರುವುದು ಗಮನಿಸಬೇಕಾದ ಮತ್ತೊಂದು ವಿಷಯ. ತಾವಿನ್ನೂ ಜೀವಂತವಾಗಿದ್ದೇವೆ ಎಂಬ ಸ್ಪಷ್ಟ ಸಂದೇಶವನ್ನು ಭಾರತದ ಜನತೆಗೆ ಕೊಡುವುದಕ್ಕಾಗಿಯೇ ಉಗ್ರರು ಈ ಸಮಯವನ್ನು ಉದ್ದೇಶಪೂರ್ವಕವಾಗಿ ಆಯ್ಕೆ ಮಾಡಿಕೊಂಡಂತಿದೆ. ಇದರಿಂದ ಭಾರತೀಯರು ಧೃತಿಗೆಡುವ ಪ್ರಮೇಯವೇ ಇಲ್ಲ. ಕಳೆದ ಹತ್ತು ವರ್ಷಗಳ ಎನ್ ಡಿ ಎ ಅಧಿಕಾರಾವಧಿಯಲ್ಲಿ ಇಂತಹ ಘಟನೆಗಳು ನಡೆದಾಗಲೆಲ್ಲ ಸರ್ಕಾರ ಉಗ್ರರಿಗೆ ತನ್ನ ಉತ್ತರ ನೀಡಿದೆ. ಈ ಬಾರಿಯೂ ೯ ಜನರ ಸಾವಿಗೆ ಮತ್ತು ಹಲವರು ಗಾಯಗೊಳ್ಳುವುದಕ್ಕೆ ಕಾರಣವಾದ ಉಗ್ರರಿಗಾಗಿ ಶೋಧ ನಡೆಯುತ್ತಿದೆ. ಘಟನೆಯ ತನಿಖೆಯನ್ನು ನ್ಯಾಷನಲ್ ಇನ್ ವೆಸ್ಟಿಗೇಷನ್ ಏಜೆನ್ಸಿ (ಎನ್ ಐ ಎ) ಕೈಗೆತ್ತಿಕೊಂಡಿದೆ.

ಈ ಮಧ್ಯೆ ದಾಳಿಯ ಹೊಣೆಯನ್ನು ದಿ ರೆಸಿಸ್ಟನ್ಸ್ ಫ್ರಂಟ್ (ಟಿ ಆರ್ ಎಫ್) ಎಂಬ ಸಂಘಟನೆ ಹೊತ್ತುಕೊಂಡಿದೆ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ ಆರ್ಟಿಕಲ್ ೩೭೦ನ್ನು ೨೦೧೯ರಲ್ಲಿ ಕೇಂದ್ರ ಸರಕಾರ ರದ್ದು ಮಾಡಿದ ಬಳಿಕ ಟಿ ಆರ್ ಎಫ್ ಹುಟ್ಟಿಕೊಂಡಿದ್ದು, ಇದನ್ನು ೨೦೨೩ರಲ್ಲಿ ನಿಷೇಧಿಸಲಾಗಿದೆ. ಇದು ಪಾಕಿಸ್ತಾನ ಬೆಂಬಲಿತ ಸಂಘಟನೆ ಎಂಬುದು ಗುಟ್ಟೇನಲ್ಲ. ಹಾಗಾಗಿ ಭಾನುವಾರದ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡ ಇರುವುದು ಸ್ಪಷ್ಟವಾಗಿದೆ. ಕೇಂದ್ರದ ಎನ್ ಡಿ ಎ ಸರ್ಕಾರ, ಪಾಕಿಸ್ತಾನಕ್ಕೆ ಕಟ್ಟೆಚ್ಚರ ನೀಡುವುದಲ್ಲದೆ, ಮತ್ತೆ ಉಗ್ರಗಾಮಿಗಳು ತಲೆ ಎತ್ತದಂತೆ ಸದೆ ಬಡಿಯುವ ಕಾರ್ಯಕ್ಕೆ ಮುಂದಾಗಬೇಕಿದೆ. 

ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೧೧-೦೬-೨೦೨೪  

ಚಿತ್ರ ಕೃಪೆ: ಅಂತರ್ಜಾಲ ತಾಣ