ಹೇಮಾವತಿ ತೀರದ ಕೌತುಕ ಕತೆಗಳು
ಮಲೆನಾಡಿನ ರೋಚಕ ಕತೆಗಳು ಸರಣಿಯ ೯ನೇ ಭಾಗವೇ ‘ಹೇಮಾವತಿ ತೀರದ ಕೌತುಕ ಕತೆಗಳು' ಎಂಬ ಕಥಾ ಸಂಕಲನ. ಹೇಮಾವತಿ ನದಿಗೆ ಹೊಂದಿಕೊಂಡು ಬರೆದ ಕತೆಗಳು ಇವು. ಹಿಂದಿನ ಕತೆಗಳಂತೆಯೇ ನೈಜ ಪರಿಸರದ ಚಿತ್ರಣ ಇಲ್ಲಿದೆ. ಕಾಡು- ಮೇಡು, ಬೆಟ್ಟ -ಗುಡ್ಡ, ನದಿ -ತೊರೆ, ಕಾಡು ಪ್ರಾಣಿಗಳು, ಹಾವು- ಚೇಳು, ಸಾಕು ಪ್ರಾಣಿಗಳಾದ ನಾಯಿ, ಬೆಕ್ಕು, ದನ, ಎಮ್ಮೆ, ಕಾಫಿ-ಕಾಳುಮೆಣಸು ಎಲ್ಲವೂ ಈ ಪುಸ್ತಕದ ಕತೆಗಳಲ್ಲಿ ಇವೆ. ಗಿರಿಮನೆ ಶ್ಯಾಮರಾವ್ ಅವರು ಬರೆದ ಬೆನ್ನುಡಿಯನ್ನು ಗಮನಿಸಿದರೆ ನಿಮಗೆ ಪುಸ್ತಕ ಓದ ಬೇಕೆಂಬ ತುಡಿತ ಇನ್ನಷ್ಟು ಹೆಚ್ಚಾಗುವುದರಲ್ಲಿ ಸಂಶಯವಿಲ್ಲ.
“ಇದು ಸಾವಿರದ ಒಂಬೈನೂರಾ ತೊಂಬತ್ತರ ದಶಕದ ಆಚೀಚೆ ಹುಟ್ಟೂರಿನ ಹಳ್ಳಿ ಮತ್ತು ಅದನ್ನು ಬಿಟ್ಟು ಪೇಟೆ ಸೇರಿದ ಸಂದರ್ಭಗಳಲ್ಲಿ ಹೇಮಾವತಿ ನದಿಯ ಅಕ್ಕ-ಪಕ್ಕ ನಡೆದ ಘಟನೆಗಳ ಮಲೆನಾಡಿನ ಚಿತ್ರಣ. ನಮ್ಮ ಸುತ್ತ ಮುತ್ತ ದಿನನಿತ್ಯವೂ ನಡೆಯುವ ಘಟನೆಗಳಲ್ಲಿ ನಮಗೆ ಸಂಬಂಧ ಪಟ್ಟಿದ್ದು. ಪಡದಿರುವುದು ಎರಡೂ ಇರುತ್ತದೆ. ಅದರಲ್ಲೂ ಪ್ರಾಣಿ, ಪಕ್ಷಿ, ನದಿ, ಗುಡ್ಡ ಬೆಟ್ಟ, ಕಾಡು, ಮಳೆ, ಮಂಜುಗಳಿರುವ ಮಲೆನಾಡಿನಲ್ಲಿ ನಡೆಯುವ ಘಟನೆಗಳು ಯಾವತ್ತೂ ವಿಶೇಷವೇ. ಕೆಲವು ನಮ್ಮ ಗಮನಕ್ಕೇ ಬಾರದಿದ್ದರೆ ಕೆಲವೊಂದಕ್ಕೆ ನಾವು ಮೂಕ ಪ್ರೇಕ್ಷಕರು. ಅವು ನಮ್ಮಲ್ಲಿ ಯಾವ ಭಾವನೆಗಳನ್ನೂ ಹುಟ್ಟು ಹಾಕುವುದಿಲ್ಲ. ಕೆಲವು ನಮ್ಮ ಮನ ಕಲಕಿದರೆ ಇನ್ನು ಕೆಲವು ನೇರ ನಮಗೇ ಸಂಬಂಧಪಟ್ಟಿದ್ದಾಗಿ ಅದರ ಸಂತಸ, ನೋವು, ದುಗುಡ, ದುಮ್ಮಾನಗಳು ನಮ್ಮನ್ನೇ ನಲಿಸುತ್ತವೆ ; ಬಾಧಿಸುತ್ತವೆ. ನಮ್ಮದು ನಮಗೆ ಬೇಗ ಅರ್ಥವಾಗುತ್ತದೆ. ಅಂತಹಾ ಸಂದರ್ಭಗಳಲ್ಲಿ ಕೂಡಾ ಅವರವರ ಭಾವನೆಗಳು ಹೇಗಿರುತ್ತವೆ? ಹಾಗೆ ಕಳೆದ ಕಾಲದ ಕೆಲವು ಸಂಗತಿಗಳನ್ನು ಅಗತ್ಯಕ್ಕೆ ತಕ್ಕ ಬದಲಾವಣೆಗಳೊಂದಿಗೆ ಪರಿಣಾಮಕಾರಿಯಾಗಿ ದಾಖಲಿಸಲು ಇಲ್ಲಿ ಪ್ರಯತ್ನಿಸಿದ್ದೇನೆ.”
ಮಲೆನಾಡಿನ ರೋಚಕ ಕತೆಗಳ ಎಲ್ಲಾ ಸರಣಿಯಲ್ಲೂ ನಿಮಗೆ ಮಲೆನಾಡಿನ ಸುಂದರ ಪರಿಸರದ ಪ್ರವಾಸ ಉಚಿತವಾಗಿರುತ್ತದೆ. ಹೇಗೆ ಅಂತೀರಾ, ಈ ಪುಸ್ತಕಗಳನ್ನು ಓದುತ್ತಾ ಓದುತ್ತಾ ನೀವು ಮಲೆನಾಡಿನ ಕಾಡುಗಳಲ್ಲಿ, ಹಸಿರಾದ ಪರಿಸರದಲ್ಲಿ ಕಳೆದುಹೋಗುತ್ತೀರಿ. ಈ ಪುಸ್ತಕದಲ್ಲಿ ೧೨ ಕತೆಗಳಿವೆ.
ಮೊದಲ ಕತೆ ‘ಜೂಲಿ' ಎಂಬುವುದು ಲೇಖಕರು ಭಿಕ್ಷುಕನೊಬ್ಬನಿಗೆ ಆರು ರೂಪಾಯಿ ಕೊಟ್ಟು ಮನೆಗೆ ತಂದ ನಾಯಿ ಮರಿ. ನಾಯಿ ಮರಿಗೆ ಮನೆಯವರು ಜೂಲಿ ಎಂಬ ಹೆಸರಿಡುವುದು, ಲೇಖಕರು ಟೈಗರ್ ಎಂದು ಹೆಸರಿಡಲು ಬಯಸುವುದು ಎಂಬೆಲ್ಲಾ ರಸ ನಿಮಿಷಗಳಿವೆ. ಈ ಸಂಕಲನದಲ್ಲಿ ಸ್ವಲ್ಪ ದೀರ್ಘವಾಗಿರುವ ಕಥನವೆಂದರೆ ‘ಚಿಂಟಿಯ ಪ್ರಶ್ನೆಗಳು'. ಲೇಖಕರ ಚಿಕ್ಕಮ್ಮನ ಮಗಳಾದ ಚಿಂಟಿ ಲೇಖಕರ ಮನೆಗೆ ಅವಳ ಗೆಳತಿಯಾದ ನರ್ಮದಾ ಜೊತೆ ಬಂದು ಕಳೆವ ಹದಿನೈದು ದಿನಗಳ ಕಥೆ ಬಹಳ ಚೆನ್ನಾಗಿದೆ. ಈ ಇಬ್ಬರು ಹುಡುಗಿಯರು ದಿನಕ್ಕೊಂದರಂತೆ ಮಾಡುವ ಸಾಹಸಗಳು, ಅದರ ನಡುವೆ ಚಿಂಟಿಯು ಕೇಳುವ ಪ್ರಶ್ನೆಗಳು ಎಲ್ಲವೂ ಮನಗೆಲ್ಲುತ್ತದೆ. ಜೇನುಕಲ್ಲು ಬೆಟ್ಟದ ಚಾರಣ, ನೇರಳೆ ಹಣ್ಣಿನ ಪುರಾಣ, ತೋಟಕ್ಕೆ ಬಂದ ಗಡವ ಕೋತಿ, ಚಿಂಟಿಯ ಎಮ್ಮೆ ಸವಾರಿ, ಹೇಮಾವತಿ ಹೊಳೆಯ ಅನುಭವ ಇತ್ಯಾದಿಗಳನ್ನು ಓದುವಾಗಲಂತೂ ಆ ಪ್ರದೇಶಕ್ಕೆ ನಾವೂ ಹೋಗುವ ಎಂದೆಣಿಸಿಬಿಡುತ್ತದೆ. ಈ ಎಲ್ಲದರ ನಡುವೆ ಲೇಖಕರು ಕೋಲಾದಂತಹ ಹಾನಿಕಾರಕ ಪಾನೀಯದ ಬದಲು ಎಳನೀರನ್ನು ಕುಡಿಯಿರಿ ಎಂದು ಜನಜಾಗ್ರತಿ ಮೂಡಿಸುವುದು ಹಾಗೆಯೇ ಮಲೆನಾಡನ್ನು ಹಾಳು ಮಾಡುತ್ತಿರುವ ಶುಂಠಿ ವ್ಯವಸಾಯ ಮಾಡುವ ಜನರ ಬಗ್ಗೆ ವಿವರವನ್ನೂ ನೀಡಿದ್ದಾರೆ. ಕಡೆಗೊಮ್ಮೆ ಹದಿನೈದು ದಿನಗಳು ಮುಗಿದು ಚಿಂಟಿ ಮತ್ತು ಅವಳ ಗೆಳತಿ ಮರಳಿ ಹೋಗುವಾಗ ಲೇಖಕರಿಗಾದ ಬೇಸರ ಓದುಗರಾದ ನಮಗೂ ಆಗುತ್ತದೆ. ಅವರು ಇನ್ನಷ್ಟು ದಿನ ಇದ್ದಿದ್ದರೆ ನಾವೂ ಅವರ ಜೊತೆ ಮಲೆನಾಡಿನಲ್ಲಿ ಸುತ್ತಾಡಬಹುದಿತ್ತು ಅನಿಸುತ್ತದೆ. ಕತೆಯೊಂದು ಓದುಗರನ್ನು ಹಿಡಿದಿಡುವುದು ಎಂದರೆ ಇದೇ ಇರಬೇಕಲ್ವಾ?
ಉಳಿದಂತೆ ‘ಹದ್ದು ಮತ್ತು ಹಾವು' ಕತೆಯಲ್ಲಿ ನಿಸರ್ಗದ ಸಹಜ ನಿಯಮಗಳ ಬಗ್ಗೆ ಬರೆದಿದ್ದಾರೆ. ನಿಜವಾಗಿ ಮನಕಲಕುವ ಕತೆಯೆಂದರೆ 'ಅಜ್ಞಾನ ಮತ್ತು ಮೂಢ ನಂಬಿಕೆ'. ಈ ಕತೆಯಲ್ಲಿ ಸನ್ನಿಧಿ ಎಂಬ ಕೆಲಸದಾಳಿನ ಸಂಸಾರದ ಬಗ್ಗೆ ಬರೆದಿದ್ದಾರೆ. ಜನರಲ್ಲಿ ಬೇರೂರಿರುವ ಮೂಢನಂಬಿಕೆಗಳು ಹೇಗೆ ಸನ್ನಿಧಿಯ ಜೀವಮಾನದ ಗಳಿಕೆಯನ್ನೆಲ್ಲಾ ಹಾಳು ಮಾಡಿಬಿಡುತ್ತದೆ ಎಂಬುದುದನ್ನು ಬಹಳ ಮಾರ್ಮಿಕವಾಗಿ ಚಿತ್ರಿಸಿದ್ದಾರೆ. ಸನ್ನಿಧಿಯ ಗಂಡ, ಅವನ ಸೋಮಾರಿತನ, ಮಕ್ಕಳ ಆಸೆಗಾಗಿ ಸವತಿಯ ಜೊತೆ ಹೊಂದಾಣಿಕೆ ಇವೆಲ್ಲವೂ ಈ ಕತೆಯಲ್ಲಿದೆ. ಲೇಖಕರ ಮನೆಯಲ್ಲಿ ಕೂಲಿ ಮಾಡಿ ಉಳಿಸಿದ ಹಣವನ್ನು ಕೊನೆಗೆ ತನ್ನ ಗಂಡನ ಆತ್ಮಕ್ಕೆ ಸದ್ಗತಿ ನೀಡಲು ಪೂಜೆ ಮಾಡಿಸಲು ಹೋಗಿ ಎಲ್ಲವನ್ನೂ ಕಳೆದುಕೊಂಡು ಬಿಡುತ್ತಾಳೆ.
ಪ್ರತೀ ಕತೆಯ ಕೊನೆಗೆ ಲೇಖಕರು ಹಿತನುಡಿಗಳನ್ನು ನೀಡಿದ್ದಾರೆ. ಅವುಗಳು ಕತೆಗೆ ಪೂರಕವಾಗುವುದರ ಜೊತೆಗೆ ನಿಜ ಜೀವನಕ್ಕೂ ಹೊಂದುವಂತಿದೆ. ಸುಮಾರು ೨೨೫ ಪುಟಗಳ ಪುಸ್ತಕವನ್ನು ಗಿರಿಮನೆ ಶ್ಯಾಮರಾವ್ ಅವರೂ ತಮ್ಮದೇ ಆದ ಪ್ರಕಾಶನದ ಮೂಲಕ ಪ್ರಕಟಿಸಿದ್ದಾರೆ. ಶಂಭುರಿತ್ತಿಯವರು ಈ ಹಿಂದಿನ ಸರಣಿಗಳಂತೆ ಆಕರ್ಷಕ ಮುಖಪುಟ ರಚಿಸಿದ್ದಾರೆ.