"ಹೇಳದಿರು ಹೋರಾಡಿ ಫಲವಿಲ್ಲವೆಂದು” - ಬಿ. ಎಂ. ಶ್ರೀ. ಕವನ
ಇವತ್ತು "ಪುಸ್ತಕ ಪರಿಚಯ” ವಿಭಾಗದಲ್ಲಿ, ಕನ್ನಡದ ಕಾವ್ಯಲೋಕದಲ್ಲಿ ಹೊಸ ಹೆದ್ದಾರಿಯೊಂದನ್ನು ತೆರೆದ ಬಿ. ಎಂ. ಶ್ರೀಕಂಠಯ್ಯ ಅವರ “ಇಂಗ್ಲಿಷ್ ಗೀತಗಳು” ಕವನ ಸಂಕಲನವನ್ನು ಪರಿಚಯಿಸಿದ್ದೇನೆ. ಅದು 1926ರಲ್ಲಿ ಪ್ರಕಟವಾದ ಕವನ ಸಂಕಲನ.
“ಇವು ಅಚ್ಚ ಕನ್ನಡದ ಕವನಗಳೇ” ಎಂದು ಅನಿಸುವಂತೆ ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದಿಸಿರುವುದೇ ಅವರ ಪ್ರತಿಭೆ, ಎರಡೂ ಭಾಷೆಗಳ ಮೇಲಿನ ಅವರ ಪ್ರಭುತ್ವ ಮತ್ತು ಸೃಜನಶೀಲತೆಯ ಪುರಾವೆ. ಆ ಸಂಕಲನದ ಯಾವುದೇ ಕವಿತೆಯನ್ನು ಓದಿದರೂ "ಅನುವಾದಿಸಿದರೆ ಹೀಗಿರಬೇಕು" ಎಂದು ಅನಿಸುವುದು ಖಂಡಿತ.
ಅದರಿಂದ ಆಯ್ದ, ಕ್ಲೋ ಕವಿಯ "ಸೇ ನಾಟ್ ದ ಸ್ಟ್ರಗಲ್ ನಾಟ್ ಎವೆಯ್ಲೆತ್” ಕವಿತೆಯ ಅನುವಾದ "ಹೇಳದಿರು ಹೋರಾಡಿ ಫಲವಿಲ್ಲವೆಂದು" ಇಲ್ಲಿದೆ:
ಹೇಳದಿರು ಹೋರಾಡಿ ಫಲವಿಲ್ಲವೆಂದು;
ತೋಳ ದಣಿಸಿದೆ ಬರಿದೆ ಘಾಸಿಯಾಯ್ತೆಂದು;
ಗೆಲ್ಲುವುದು ಕಾಣೆ, ಹಗೆ ಹಿಮ್ಮೆಟ್ಟನೆಂದು;
ಎಲ್ಲ ಇದ್ದಂತಿಹುದು - ಅಲ್ಲಾಡದೆಂದು.
ನೆಚ್ಚಿ ಕೆಡುವೊಡೆ ಕೆಚ್ಚು, ಸೆಡದಳುಕು ಕೆಡದೆ?
ಮುಚ್ಚಿ ಆ ಹೊಗೆಯೊಳಗೆ, ಈ ಗಳಿಗೆ, ಬಿಡದೆ
ನಿನ್ನ ಕೆಳೆಯರು ಹಗೆಯ ತರುಬುತಿರಬಹುದು -
ನಿನ್ನ ಬೆಂಬಲವಿದ್ದು, ಕಳದ ಗೆಲಬಹುದು!
ತೆರೆ ಬಳಲಿ, ಹೊಯ್ದು ಹೊಯ್ದುರುಳುರುಳಿ, ಚೆಲ್ಲಿ
ಬೆರಳುನೆಲವನು ಕೊಳದೆ ಕುದಿಯುತಿಹುದಿಲ್ಲಿ -
ಬಲುಹಿಂದೆ, ಕೊರಕಲಲಿ, ಕೋವಿನಲಿ ತೂರಿ
ಉಲಿಯದೆಯೆ ಬಾರದೇ ಕಡಲಲೆಯ ಬೀರಿ!
ಬೆಳಗಾಗ ಮೂಡದೆಸೆಬಾಗಿಲೊಳೆ ಬರದು,
ಬೆಳಕು ತಾ ಬರುವಂದು, ಹೊಸಬೆಳಕು ಹರಿದು;
ಮುಂದೆ ಮೆಲ್ಲಗೆ ಮೆಲ್ಲಗೇರುವುದು ಹೊತ್ತು -
ಹಿಂದೆ ಪಡುವಲು ನೋಡು - ನೆಲದ ಸಂಪತ್ತು!