ಹೇಳುವುದು ಮತ್ತು ಮಾಡುವುದು ಒಂದೇ ಆಗಬೇಕು...
ಸಾಮಾನ್ಯವಾಗಿ ಮತ್ತು ಸಹಜವಾಗಿ ಜನ ಭಕ್ತಿಯಿಂದ ಓದುವುದು, ಗೌರವಿಸುವುದು ಮತ್ತು ನಂಬುವುದು ಪವಿತ್ರ ಗ್ರಂಥಗಳೆಂದು ಭಾವಿಸಲಾದ ರಾಮಾಯಣ, ಮಹಾಭಾರತ, ವೇದ- ಉಪನಿಷತ್ತುಗಳು, ಕುರಾನ್, ಬೈಬಲ್, ಗ್ರಂಥಸಾಹಿಬ್ ಇತ್ಯಾದಿಗಳನ್ನು. ಅದೇ ರೀತಿ ಮನದಾಳದಲ್ಲಿ ಪೂಜಿಸುವುದು ರಾಮ, ಕೃಷ್ಣ, ಶಿವ, ಅಲ್ಲಾ, ಪೈಗಂಬರ್, ಜೀಸಸ್, ಗುರುನಾನಕ್ ಮುಂತಾದವರನ್ನು.
ಇನ್ನು ಅತ್ಯಂತ ಹೆಚ್ಚು ಗೌರವಿಸುವುದು ಬುಧ್ಧ, ಮಹಾವೀರ, ದಾಸರು, ಆಚಾರ್ಯರು, ಸೂಫಿಸಂತರು, ಬಸವ, ವಿವೇಕಾನಂದ, ಗಾಂಧಿ, ಅಂಬೇಡ್ಕರ್, ಹಾಗೂ ಇನ್ನೂ ಅನೇಕರನ್ನು. ನಮ್ಮ ದೇಶದ ಮಟ್ಟಿಗೆ ಹೇಳುವುದಾದರೆ, ಶೇಕಡ 95% ಕ್ಕೂ ಹೆಚ್ಚು ಜನ ಈ ಪವಿತ್ರ ಗ್ರಂಥಗಳ ಅಥವಾ ಈ ಮಹಾನ್ ವ್ಯಕ್ತಿಗಳ ಆರಾಧಕರೋ ಅಭಿಮಾನಿಗಳೋ ಅನುಯಾಯಿಗಳೋ ಭಕ್ತರೋ ಆಗಿರುತ್ತಾರೆ.
ಆದರೆ ವಿಪರ್ಯಾಸ ನೋಡಿ......
ವಾಸ್ತವ ನೆಲೆಯಲ್ಲಿ ನಮ್ಮ ದೇಶದ ಸಾಮಾಜಿಕ ಆರ್ಥಿಕ ಮಾನಸಿಕ ಸ್ಥಿತಿ ಈ ಎಲ್ಲಾ ಗ್ರಂಥ ಅಥವಾ ಮಹನೀಯರ ಚಿಂತನೆಗಳಿಗೆ ಹೆಚ್ಚು ಕಡಿಮೆ ವಿರುಧ್ಧ ದಿಕ್ಕಿನಲ್ಲೇ ಇದೆ. ಆ 95% ಜನ ಒಂದು ವೇಳೆ ತಾವು ನಂಬಿದ ಮೌಲ್ಯಗಳಲ್ಲಿ ಕನಿಷ್ಠ 50% ಆದರೂ ಆಚರಣೆಗಳಲ್ಲಿ ಅಳವಡಿಸಿಕೊಂಡಿದ್ದರೆ ಬಹುಶಃ ನಾವೆಲ್ಲಾ ಅಪೇಕ್ಷಿಸುವ ಜೀವನ ಪಟ್ಟ ಎಂದೋ ಲಭಿಸುತ್ತಿತ್ತು .
ಹಾಗಾದರೆ ನಾವು ಯಾರನ್ನು, ಯಾವುದನ್ನು ಅನುಸರಿಸುತ್ತಿದ್ದೇವೆ ಮತ್ತು ಯಾವ ಆದರ್ಶಗಳ ಮೇಲೆ ಬದುಕುತ್ತಿದ್ದೇವೆ. ಈ ಬಗ್ಗೆ ಎಲ್ಲರೂ ಆತ್ಮವಲೋಕನ ಮಾಡಿಕೊಳ್ಳಲೇ ಬೇಕಿದೆ. ಮೇಲ್ನೋಟಕ್ಕೆ ನನಗೆ ಅನಿಸುವುದು...
ಆಧ್ಯಾತ್ಮಿಕವಾಗಿ ಶ್ರೀಮಂತ ಮಠಾಧೀಶರುಗಳು, ನಕಲಿ ಬಾಬಾಗಳು, ಸ್ವಯಂ ಘೋಷಿತ ದೇವ ಮಾನವರು, ನಾಮ ಕುಂಕುಮವಿಟ್ಟ ಮಹರ್ಷಿಗಳು, ಕತ್ತಿಗೆ ವಿಚಿತ್ರ ಸರಗಳನ್ನು ಹಾಕಿಕೊಂಡ ಜ್ಯೋತಿಷಿಗಳು ಮುಂತಾದವರನ್ನು. ಆರ್ಥಿಕವಾಗಿ ಬಲಿಷ್ಟವಾಗಿರುವ ಕೋಟ್ಯಾಧಿಪತಿ ಉದ್ಯೋಗಪತಿಗಳನ್ನು, ರಾಜಕೀಯವನ್ನೇ ಬದುಕಾಗಿಸಿಕೊಂಡು ಜನರ ಬದುಕನ್ನು ಹೈರಾಣಾಗಿಸಿ ತಾವು ಐಷಾರಾಮ ಜೀವನ ನಡೆಸುತ್ತಿರುವ, ಅಧಿಕಾರ ಹಿಡಿಯಲು ಯಶಸ್ವಿಯಾದ ರಾಜಕೀಯ ನಾಯಕರುಗಳನ್ನು, ಸಾಮಾಜಿಕವಾಗಿ ಮತ್ತು ಜೀವನ ಶೈಲಿಗೆ ರಜನೀಕಾಂತ್, ಅಮಿತಾಬ್ ಬಚ್ಚನ್, ಶಾರುಕ್, ಸಲ್ಮಾನ್ ಅಮೀರ್ ಖಾನ್, ಅಕ್ಷಯ್ , ಹೃತಿಕ್, ದರ್ಶನ್, ಸುದೀಪ್, ಪುನೀತ್, ಯಶ್ ಮುಂತಾದ ಸಿನಿಮಾ ನಟರೇ ಹೆಚ್ಚಾಗಿ ಆದರ್ಶಗಳಾಗಿ, ಪ್ರೇರಕರಾಗಿ ಅನುಕರಿಸಲು ಪ್ರಯತ್ನಿಸುತ್ತೇವೆ. ಬಹುಶಃ ಸಾಮಾನ್ಯರಲ್ಲಿನ ಈ ದ್ವಂದ್ವಗಳೇ ನಮ್ಮ ಇಂದಿನ ಸಾಮಾಜಿಕ ಮಾನಸಿಕ ಸ್ಥಿತಿಗೆ ಕಾರಣವಿರಬಹುದೆ? ಹೇಳಲು ಕೇಳಲು ಮಹಾನ್ ವ್ಯಕ್ತಿಗಳು ಗ್ರಂಥಗಳು ,ಅನುಸರಿಸಲು ಮಾತ್ರ ಈಗಿನ ಜನಪ್ರಿಯರು.
ವ್ಯಕ್ತಿತ್ವಕ್ಕಿಂತ ವ್ಯಕ್ತಿ ಮತ್ತು ಆತನ ಜನಪ್ರಿಯತೆ ಹಿಂದೆ ಬಿದ್ದು ಆತನ ಹಿನ್ನೆಲೆ ಗಮನಿಸದೆ ಅಂಧಾನುಕರಣೆ ಮಾಡುವುದು ಎಲ್ಲೋ ವ್ಯವಸ್ಥೆಯೇ ದಾರಿ ತಪ್ಪಿದೆ ಎಂದೆನಿಸುತ್ತಿದೆ. ಹೇಳುವುದು ಮತ್ತು ಮಾಡುವುದು ಒಂದೇ ಆಗಬೇಕು ಹಾಗೂ ಮಾತು ಕೃತಿಯ ನಡುವೆ ಅಂತರ ಕಡಿಮೆಯಾದರೆ ವ್ಯವಸ್ಥೆ ನಿಯಂತ್ರಣಕ್ಕೆ ಸಿಗಬಹುದು. ಹಾಗಾಗಲಿ ಎಂಬ ನಿರೀಕ್ಷೆಯೊಂದಿಗೆ...
- ಜ್ಞಾನ ಭಿಕ್ಷಾ ಪಾದಯಾತ್ರೆಯ 231 ನೆಯ ದಿನ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನಿಂದ ಸುಮಾರು 40 ಕಿಲೋಮೀಟರ್ ದೂರದ ಚಿತ್ರದುರ್ಗ ಜಿಲ್ಲೆಯ ಸೂರಮನಹಳ್ಳಿ ಗ್ರಾಮ ತಲುಪಿ ಅಲ್ಲಿ ವಾಸ್ತವ್ಯ ಹೂಡಿದ ಸಂದರ್ಭದಲ್ಲಿ ಬರೆದ ಲೇಖನ..
-ವಿವೇಕಾನಂದ. ಹೆಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಅಂತರ್ಜಾಲ ತಾಣ