ಹೇ ಇರುಳೇ ನೀನೊಂದು ಮಾಯೆ !
ಕವನ
ಕಾಣೆ ನಾನು ಎಲ್ಲೂ ನಿನ್ನಂಥ ಮಾಯೆಯ
ಆಣೆ ಮಾಡಿ ಹೇಳುವೆ ನೀನೊಂದು ವಿಸ್ಮಯ !
ನಿನ್ನ ಜಗದೊಳಗೆ ಬರೀ ಕತ್ತಲು
ಅದೇ ಅನುಭವ ನಾ ಕಣ್ಮುಚ್ಚಿದಾಗಲೂ
ಆ ಕತ್ತಲೆಯ ಏಕಾಂತ ಬೇಕೆನಗೆ
ನನ್ನೊಳಗೆ ನಾ ಕುಳಿತು
ಕಳೆದು ಹೋಗಿರುವ ನನ್ನನೇ ಹುಡುಕಲು…!
ನಿನ್ನೊಳಗೆ ನೀ ತುಂಬಿಕೊಂಡಿರುವುದೆಲ್ಲಾ ಕಪ್ಪು
ಆದರೂ ಅದೇನು ಮಾಯೆ ನಿನ್ನದು
ನೀ ಹರಿದು ಹೋಗುವುದರೊಳಗೆ
ಬಿಸಿ ಹನಿಗಳ ಸುರಿಸಿ ಮಂಜು ಕವಿದ ಕಣ್ಣುಗಳಿಗೆ
ತುಂಬುವೆ ಭರವಸೆಯ ಹೊಸ ಬೆಳಕು…!
ಇಹದೊಡನೆ ಬಿಟ್ಟೂ ಬಿಡಲಾರದ ಸೆಳೆತ
ನಿನ್ನ ಕತ್ತಲ ಕಡಲೊಳಗೊಮ್ಮೆ ಮುಳುಗಿದರೆ
ಪರ ಜಗದೊಳಗೆ ಕನಸುಗಳಲೆಗಳ ಮೊರೆತ
ದೇಹಾತ್ಮಗಳ ಕೊಂಡಿ ಕಳಚಿ ಮತ್ತೆ ಬೆಸೆಯುವೆ
ನೀ ಬೇರೆ ಯಾರೂ ಅಲ್ಲ ಇಹಪರಗಳ ಸೇತುವೆ... !
ಸಣ್ಣ ಮರಣ ನೀಡಿ ದೊಡ್ಡ ಪಾಠ ಹೇಳುವೆ
ಕಲ್ಲಿನಂತೆ ಹೊತ್ತ ಭಾರವ
ಕಣ್ತೆರೆಯುವುದರೊಳಗೆ ಇಳಿಸುವೆ
ಏನೆಂದು ಕರೆಯಲಿ ನಿನ್ನ
ಹೇ ಇರುಳೇ ನೀನೊಂದು ಮಾಯೆ …!
-ರೂಪಾ ಹೊಸದುರ್ಗ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್