ಹೈಕೋರ್ಟ್ ಜಡ್ಜ್ ಗಳಿಗೆ ಕೊಲೆ ಬೆದರಿಕೆ !

ಹೈಕೋರ್ಟ್ ಜಡ್ಜ್ ಗಳಿಗೆ ಕೊಲೆ ಬೆದರಿಕೆ !

ರಾಜ್ಯದ ಹೈಕೋರ್ಟ್ ಕೆಲ ನ್ಯಾಯಮೂರ್ತಿಗಳಿಗೆ ಅನಾಮಧೇಯ ವ್ಯಕ್ತಿಗಳಿಂದ ಕೊಲೆ ಬೆದರಿಕೆ ವಾಟ್ಸಾಪ್ ಸಂದೇಶಗಳು ರವಾನೆಯಾಗಿರುವುದು ಕಳವಳಕಾರಿ. ಈ ಸಂಬಂಧ ಬೆಂಗಳೂರಿನ ಪೋಲೀಸರಿಗೆ ದಾಖಲಾಗಿದೆ. ಪಾಕಿಸ್ತಾನದಿಂದ ರವಾನೆಯಾಗಿದೆ ಎನ್ನಲಾದ ವಾಟ್ಸಾಪ್ ಸಂದೇಶದಲ್ಲಿ ಐವರು ನ್ಯಾಯಮೂರ್ತಿಗಳನ್ನು (ಇದರಲ್ಲಿ ಒಬ್ಬರು ಮೊನ್ನೆಯಷ್ಟೇ ನಿವೃತ್ತರಾಗಿದ್ದಾರೆ) ಕೊಲೆ ಮಾಡುವ ಸ್ಪಷ್ಟ ಸಂದೇಶವಿದೆ. ಇಂತಹ ಸಂದೇಶಗಳು ನಿಜಕ್ಕೂ ಭಾರತದ ಗಡಿಯಾಚೆಯಿಂದ ಬಂದಿದ್ದೇ ಅಥವಾ ದೇಶದೊಳಗಿನ ವಿದ್ರೋಹಿಗಳೇ ರವಾನಿಸಿದಂತಹ ಸಂದೇಶವೇ ಎಂಬುದು ಪೋಲೀಸ್ ಪೂರ್ವಭಾವಿ ತನಿಖೆಯಿಂದ ತಿಳಿದುಬಂದಿದೆ. ಅದೇನೇ ಇರಲಿ. ಇದೊಂದು ಗಂಭೀರ ಪ್ರಕರಣವಂತೂ ಹೌದು.

ವಿಧಾನ ಸೌಧ ಮತ್ತು ಹೈಕೋರ್ಟ್ ಸ್ಫೋಟಿಸುವ ಕೆಲ ಅನಾಮಧೇಯ ಪತ್ರಗಳು ಈ ಹಿಂದೆಯೇ ರವಾನೆಯಾಗಿದ್ದವು. ಆದರೆ ಇಂದಿನ ಜಾಗತಿಕ ಮಟ್ಟದಲ್ಲಿ ಮೊಬೈಲ್ ತಂತ್ರಜ್ಞಾನದ ಕ್ರಾಂತಿಯಿಂದ, ಪ್ರಪಂಚದ ಯಾವುದೇ ಮೂಲೆಯಿಂದಾದರೂ ವಾಟ್ಸಾಪ್ ಸಂದೇಶ ಕಳಿಸುವುದು ಸುಲಭ.

ರಾಜ್ಯದ ಹೈಕೋರ್ಟ್ ನಲ್ಲಿ ಹಿಜಾಬ್ ಸೇರಿದಂತೆ ಕೆಲವೊಂದು ಗಂಭೀರ ಪ್ರಕರಣಗಳ ವಿಚಾರಣೆ ನಡೆದಿದ್ದು, ಉಗ್ರರನ್ನು ಸದೆಬಡಿಯುವಂತಹ ತೀರ್ಪುಗಳು ಹೊರಬಂದಿರುವುದು ಗಮನಾರ್ಹ. ನ್ಯಾಯಸ್ಥಾನದಲ್ಲಿ ಕುಳಿತ ನ್ಯಾಯಮೂರ್ತಿಗಳು ನಿರ್ಭೀತಿಯಿಂದ ನ್ಯಾಯದಾನದ ಪ್ರಕ್ರಿಯೆಯಲ್ಲಿ ತೊಡಗಬೇಕಾದರೆ, ಪೊಲೀಸ್ ಮತ್ತು ಸಂಬಂಧಪಟ್ಟ ಇಲಾಖೆಯು ಉನ್ನತ ನ್ಯಾಯಾಂಗಕ್ಕೆ ಸೂಕ್ತ ಭದ್ರತೆ ಕಲ್ಪಿಸುವುದು ಅತಿಮುಖ್ಯ. ಏಕೆಂದರೆ ರಾಜ್ಯ ಹೈಕೋರ್ಟ್ ದೇಶದ ಎಲ್ಲ ಹೈಕೋರ್ಟ್ ಗಳಿಗಿಂತಲೂ ಕೆಲವೊಂದು ವಿಷಯಗಳಲ್ಲಿ ವಿಶೇಷತೆಯನ್ನು ಹೊಂದಿದೆ. ನೂರಾರು ಎಕರೆಯ ವಿಸ್ತೀರ್ಣವುಳ್ಳ ಕಬ್ಬನ್ ಪಾರ್ಕಿನಲ್ಲಿ ವಿಸ್ತರಿಸಿರುವ ಹೈಕೋರ್ಟ್, ವಿದ್ರೋಹಿಗಳು ಮತ್ತು ಕೊಲೆಗಡುಕರ ಮುಕ್ತ ಪ್ರವೇಶಕ್ಕೆ ರಹದಾರಿ ಆಗಬಾರದು.

ಹೈಕೋರ್ಟ್ ಗೆ ಬಿಗಿ ಭದ್ರತೆ ಆಗಬೇಕಾದರೆ, ಈ ಕಟ್ಟಡದ ನಾಲ್ಕೂ ದಿಕ್ಕಿನಲ್ಲಿರುವ ಕಬ್ಬನ್ ಪಾರ್ಕಿನ ಆಯಕಟ್ಟಿನ ಪ್ರವೇಶ ದ್ವಾರಗಳು ಮತ್ತು ಸುತ್ತಲಿನ ಬೇಲಿ ಕೂಡಾ ಸಂರಕ್ಷಣೆಯಾಗಬೇಕಿದೆ. ರಾಜ್ಯ ಹೈಕೋರ್ಟ್ ನಲ್ಲಿಯೂ ಇಂದು ಇಲ್ಲಿಗೆ ಭೇಟಿ ನೀಡುವ ಕಕ್ಷಿದಾರರು ಮತ್ತು ವಾದವನ್ನು ಮಂಡಿಸಲೆಂದು ಬರುವ ನ್ಯಾಯವಾದಿಗಳ ಸಂಖ್ಯೆ ಅಧಿಕವಾಗಿದೆ. ಈ ದಿಶೆಯಲ್ಲಿ ಹೈಕೋರ್ಟ್ ನೊಳಗೆ ಪ್ರವೇಶಿಸುವ ಎಲ್ಲ ಕಕ್ಷಿದಾರರನ್ನು ಸಂಪೂರ್ಣವಾಗಿ ತಪಾಸಣೆಗೊಳಪಡಿಸುವ ಭದ್ರತೆ ಕೂಡಾ ಅತಿಮುಖ್ಯ.

ಹತ್ತು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ವಿಧ್ವಂಸಕ ಶಕ್ತಿಗಳ ಕುಕೃತ್ಯದಿಂದ ಸರಣಿ ಬಾಂಬ್ ಸ್ಫೋಟವಾಗಿತ್ತು. ಮಿಗಿಲಾಗಿ ವಿದ್ರೋಹಿಗಳೆಂದು ಹಲವು ಹತ್ತು ಆಧುನಿಕ ತಂತ್ರಗಳನ್ನು ಬಳಸಿ ತಮ್ಮ ಉದ್ದೇಶ ಈಡೇರೀಸಿಕೊಳ್ಳಲು ನಿಸ್ಸೀಮರು. ಪಾಕಿಸ್ತಾನ ಮತ್ತು ಬಾಂಗ್ಲಾ ದೇಶದಿಂದ ಉದ್ಯಾನನಗರಿ ಬೆಂಗಳೂರಿಗೆ ಬಹಳಷ್ಟು ಮಂದಿ ವಲಸಿಗರು ಬಂದು ಅಕ್ರಮವಾಗಿ ನೆಲೆಸಿರುವುದು ಗಂಭೀರ ಸಂಗತಿ. ಇಲ್ಲೇ ಇದ್ದುಕೊಂಡು ಗಡಿಯಾಚೆಗಿನ ಉಗ್ರರ ಜೊತೆ ಕೈ ಜೋಡಿಸಿರುವ ಸಾಧ್ಯತೆಗಳನ್ನು ಸಾರಾಸಗಟಾಗಿ ತಳ್ಳಿ ಹಾಕಲಾಗದು. ಒಟ್ಟಿನಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಬಂದಿರುವ ಕೊಲೆ ಬೆದರಿಕೆ ಕರೆಗಳ ಹಿಂದಿನ ನಗ್ನಸತ್ಯವನ್ನು ಹೊರಗೆಳೆಯುವುದು ಪೋಲೀಸರ ಕೆಲಸವಾಗಿದೆ.

ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೨೬-೦೭-೨೦೨೩

ಚಿತ್ರ ಕೃಪೆ: ಅಂತರ್ಜಾಲ ತಾಣ