ಹೈಟೆಕ್ ಒಲಿಂಪಿಕ್ಸ್

ಹೈಟೆಕ್ ಒಲಿಂಪಿಕ್ಸ್

 ಹೈಟೆಕ್ ಒಲಿಂಪಿಕ್ಸ್

ಆಸ್ಟ್ರೇಲಿಯಾದ ಸೈಕ್ಲಿಸ್ಟ್‌ಗಳು ಲಂಡನ್‌ನ ಸೈಕಲ್ ಟ್ರಾಕ್‌ಗಳಲ್ಲಿ ಸೈಕಲ್ ಸವಾರಿ ಅಭ್ಯಾಸ ಮಾಡಲು ಲಂಡನ್‌ಗೆ ಹೋಗಲಿಲ್ಲ.ಅವರು ತಂತ್ರಾಂಶದ ಮೂಲಕ ಮಿಥ್ಯಾ ವಾಸ್ತವ ವ್ಯವಸ್ಥೆಯ ಅಳವಡಿಸಿ, ಲಂಡನ್‌ನ ಸೈಕಲ್ ಟ್ರಾಕ್‌ಗಳಲ್ಲಿ ಸೈಕಲ್ ಸವಾರಿ ಮಾಡುವಂತೆ ತರಬೇತಿ ಪಡೆದರು.ಕಳೆದ ಬೀಜಿಂಗ್ ಒಲಿಂಪಿಕ್ ಪಂದ್ಯಾಟದ ಈಜಾಳುಗಳು ಎಲ್‌ಜೆಡ್‌ಆರ್ ಎನ್ನುವ ಹೈಟೆಕ್ ಸೂಟುಗಳನ್ನು ಧರಿಸಿ,ವೇಗವರ್ಧಿಸಿಕೊಂಡರು ಎನ್ನುವ ಆರೋಪಗಳ ಕಾರಣ,ಅಂತಹ ಸೂಟುಗಳನ್ನು ಈ ಸಲ ನಿಷೇಧಿಸಲಾಗಿದೆ.ಒಲಿಂಪಿಕ್ಸ್ ಪಂದ್ಯಾಟಗಳು ಹೈಟೆಕ್ ಆಗಿವೆ ಎನ್ನುವ ಬದಲೀಗ ಅವು ಲೋಟೆಕ್ ಆಗಿವೆ ಎನ್ನುವ ಪರಿಸ್ಥಿತಿ ಈಜಾಳುಗಳ ಮಟ್ಟಿಗೆ ನೈಜವಾಗಿದೆ.ಟೆಕ್ವಾಂಡೊ ಸ್ಪರ್ಧೆಗಳ್ಳಲ್ಲಿ ಸ್ಪರ್ಧಿಗಳ ಒದೆತದ ಬಗ್ಗೆ ರೆಫ್ರಿಗಳ ನಿರ್ಣಯ ವಿವಾದಗ್ರಸ್ತವಾಗುವುದು ಹೆಚ್ಚು.ರೆಫ್ರಿಗಳ ನಿರ್ಣಯ ನ್ಯಾಯಬದ್ಧವಾಗಿರದಿದ್ದರೆ,ಆಟದ ಗುಣಮಟ್ಟ ಕೆಡುತ್ತದೆ.ಹೀಗಾಗಿ ಈ ಸ್ಪರ್ಧೆಯನ್ನು ಒಲಿಂಪಿಕ್ಸಿನಿಂದ ಕೈಬಿಡುವ ಸಾಧ್ಯತೆಯೂ ಇತ್ತು.ಆದರೀಗ ಸೆನ್ಸರುಗಳ ಸಹಾಯ ಪಡೆದು ರೆಫ್ರಿಗಳಿಗೆ ಸರಿಯಾದ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗಲಿದೆ.ಹಾಗಾಗಿ ಟೆಕ್ವಾಂಡೊ ಸ್ಪರ್ಧೆಗಳಿಗೆ ಜೀವದಾನ ಲಭಿಸಿದೆ.ಇಂತಹ ಸೆನ್ಸರ್ ವ್ಯವಸ್ಥೆಯು ಲಭ್ಯವಿರುವ ಕ್ರೀಡೆಗಳ ಪೈಕಿ ಟೆಕ್ವಾಂಡೊ ಒಂದಾಗಿರುವುದು,ಅದರ ಅಭಿಮಾನಿಗಳಿಗೆ ಹೆಮ್ಮೆ ತಂದಿದೆ.ಅಮೆರಿಕಾದ ಓಟಗಾರ ಶಾನನ್ ರೌಬೆರಿಯವರು ನಾಸಾದ ಟ್ರೆಡ್‌ಮಿಲ್ ಬಳಸಿ ಓಟದ ಅಭ್ಯಾಸ ನಡೆಸಲಿದ್ದಾರೆ.ಈ ಟ್ರೆಡ್‌ಮಿಲ್‌ನ್ನು ನಾಸಾ ವಿನ್ಯಾಸಗೊಳಿಸಿದ್ದು,ಇದು ಭೂಮಿಯ ಗುರುತ್ವ ಶಕ್ತಿಯ ಐದನೇ ಒಂದು ಭಾಗ ಗುರುತ್ವಶಕ್ತಿಯ ವಾತಾವರಣವನ್ನು ಸೃಷ್ಟಿಸುತ್ತದೆ.ಹೀಗಾಗಿ,ಓಟಗಾರನು ತನ್ನ ಐದನೇ ಒಂದು ಪಾಲು ತೂಕ ಹೊಂದಿದ ಅನುಭವದೊಂದಿಗೆ ಓಡುತ್ತಾನೆ.ಗಾಯದ ಸಮಸ್ಯೆಯಿಂದ  ಚೇತರಿಸಿಕೊಳ್ಳುತ್ತಿರುವ ಕ್ರೀಡಾಳುಗಳಿಗಿದು ಹೆಚ್ಚು ನೆರವಾಗುತ್ತದಂತೆ.ಕಾಲಿಲ್ಲದ ಓಟಗಾರ,ಬ್ಲೇಡ್ ರನ್ನರ್ ಎಂಬೆಲ್ಲಾ ಅಡ್ಡ ಹೆಸರಿನಿಂದ ಕರೆಯಲ್ಪಡುವ ದಕ್ಷಿಣ ಆಪ್ರಿಕಾದ ಆಸ್ಕರ್ ಪಿಸ್ಟೋರಿಯಸ್ ಕೃತಕ ಕಾಲುಗಳನ್ನು ಬಳಸಿ ಓಡಲಿದ್ದಾರೆ.ನಿಜವಾಗಿ ಇವರು ಪಾರಾ ಒಲಿಂಪಿಕ್ಸ್ ಪಂದ್ಯಗಳಲ್ಲಿ ಭಾಗವಹಿಸಬೇಕಿತ್ತು.ಆದರೆ ಸಶಕ್ತರಾದ ಇತರ ಕ್ರೀಡಾಳುಗಳ ಜತೆ ಭಿನ್ನವಾಗಿ ಶಕ್ತರಾದ ಈತನು ಸ್ಪರ್ಧಿಸುವುದು ಮೊದಲಿಗೆ ವಿವಾದ ಎಬ್ಬಿಸಿದರೂ,ಈಗ ನಿಜವಾಗುವುದರಲ್ಲಿದೆ.ಲಂಡನ್‌ನಲ್ಲಿ ಬಳಸಲಾಗುತ್ತಿರುವ ವಿಶೇಷ ಓಟದ ಟ್ರಾಕ್‌ಗಳಲ್ಲಿ ಕ್ರೀಡಾಳುಗಳು ಸ್ಪೈಕ್ ಇರುವ ಬೂಟುಗಳನ್ನು ಧರಿಸಬೇಕಿಲ್ಲ.ಟ್ರ್ಯಾಕುಗಳು ಎರಡು ಪದರುಗಳನ್ನು ಹೊಂದಿದ್ದು,ಮೇಲಿನ ಪದರವು ಜಾರದ ಹಾಗೆ ವಿನ್ಯಾಸ ಮಾಡಲಾಗಿದೆ.ಕೆಳಗಿನ ಪದರವು ಮೆತ್ತೆಹಾಸಿನ ತರ ಕೆಲಸ ಮಾಡುತ್ತದೆ.ಲಂಡನ್ ಒಲಿಂಪಿಕ್ಸ್‌ನ ಸಮಯದಲ್ಲಿ ರೊಬೋಟಿಕ್ ಕ್ಯಾಮರಾಗಳು ವಿಭಿನ್ನ ಕೋನಗಳಿಂದ ಕ್ರೀಡೆಯ ನೋಟಗಳನ್ನು ಸೆರೆ ಹಿಡಿಯಲು ಸಹಾಯ ಮಾಡಲಿವೆ.ಫ್ಲಡ್‌ಲೈಟುಗಳಂತಹ ಎತ್ತರದ ಸ್ಥಳಗಳಲ್ಲಿರುವ ಈ ಕ್ಯಾಮರಾಗಳು ಮುನ್ನೂರರುವತ್ತು ಕೋನಗಳ ನೋಟವನ್ನು ಒದಗಿಸಲಿವೆ.
---------------------------------
ಬ್ರಾಡ್‌ಬ್ಯಾಂಡ್ ಸೇವೆಯಲ್ಲಿ ಪಾರದರ್ಶಕತೆ ಅಗತ್ಯ:ಟ್ರಾಯ್
ಬ್ರಾಡ್‌ಬ್ಯಾಂಡ್ ಸೇವೆಯಲ್ಲಿ ಪಾರದರ್ಶಕತೆ ಇರಬೇಕು ಎಂದು ಟ್ರಾಯ್ ಪ್ರಾಧಿಕಾರ ಸೇವಾದಾತೃಗಳಿಗೆ ವಿಧಿಸಿದೆ.ಸೇವೆಯ ದತ್ತಾಂಶ ವೇಗವು ಇನ್ನೂರೈವತ್ತು ಬಿಪಿಎಸ್ ವೇಗವನ್ನು ಹೊಂದಿರಲೇ ಬೇಕು ಎಂದದು ವಿಧಿಸಿದೆ.ಪ್ರಿಪೈಡ್ ಬಳಕೆದಾರರು ತಮ್ಮ ನಿಗದಿತ ಯೋಜನೆಯ ಶೇಕಡಾ ಎಂಭತ್ತು ಭಾಗ ಬಳಕೆ ಮಾಡಿಮುಗಿಸಿದೊಡನೆ,ಅವರನ್ನೆಚ್ಚರಿಸಬೇಕು.ಹಾಗೆಯೇ ಪೂರ್ತಿ ಖಾಲಿಯಾದಾಗಲೂ ಎಸ್ಸೆಮ್ಮೆಸ್ ಸಂದೇಶದ ಮೂಲಕ ಗಮನ ಸೆಳೆಯಬೇಕು ಎಂದು ಟ್ರಾಯ್ ಹೇಳಿದೆ.
----------------------------------------------
ಐರಿಸ್ ಕೂಡಾ ರಿಸ್ಕ್!
ಕಣ್ಣಿನ ಐರಿಸ್ ಚಹರೆಯನ್ನು ಜೈವಿಕ ಚಹರೆಯಾಗಿ ಬಳಸುವುದಿದೆ.ಬೆರಳಚ್ಚು,ಮುಖಚಹರೆಗಿಂತ ಈ ಜೈವಿಕ ಚಹರೆಯು ಹೆಚ್ಚು ಸುಭದ್ರವೆಂಬ ಅನಿಸಿಕೆ ಈಗ ಇದೆ.ಆದರೆ,ಐರಿಸ್ ಚಹರೆಯನ್ನೂ ಕೃತಕವಾಗಿ ರೂಪಿಸಿ,ಭದ್ರತೆಯನ್ನು ಬೇಧಿಸಬಹುದೆಂದು ಸಂಶೋಧಕರು ತೋರಿಸಿಕೊಟ್ಟಿದ್ದಾರೆ.ಯುನಿವರ್ಸಿಡಾಡ್ ಅಟೋನಮಾ ಡಿ ಮ್ಯಾಡ್ರಿಡ್‌ನ ತಂಡವು ಕಂಪ್ಯೂಟರಿನಲ್ಲಿ ಶೇಖರಿಸಿದ ಐರಿಸ್ಸಿನ ದತ್ತಾಂಶಗಳ ಸಹಾಯದಿಂದ ಕೃತಕ ಐರಿಸ್ ರೂಪಿಸಿ,ಅದರ ಸಹಾಯದಿಂದ ಐರಿಸ್ ಗುರುತು ಮೂಲಕ ವ್ಯಕ್ತಿಯ ಸಾಚಾತನವನ್ನು ಪತ್ತೆ ಮಾಡುವ ವ್ಯವಸ್ಥೆಯನ್ನು ಮೋಸಗೊಳಿಸಲು ಸಮರ್ಥರಾದರು.ವೆಸ್ಟ್ ವರ್ಜೀನಿಯಾ ವಿಶ್ವವಿದ್ಯಾಲಯದ ಜೇವಿಯರ್ ಮತ್ತವರ ತಂಡದವರು ಕೃತಕ ಐರಿಸ್ ರೂಪಿಸಿದವರು.ವಾಣಿಜ್ಯವಾಗಿ ಬಳಕೆಯಲ್ಲಿರುವ ಐರಿಸ್ ಮೂಲಕ ಚಹರೆ ಪತ್ತೆ ಮಾಡುವ ವ್ಯವಸ್ಥೆಯನ್ನು ಪರೀಕ್ಷೆಗೊಡ್ಡಿದಾಗ,ಕೃತಕ ಐರಿಸ್ ಚಹರೆಯನ್ನದು ನೈಜ ಕಣ್ಣು ಎಂಬುದಾಗಿ ಸ್ವೀಕರಿಸಿದ್ದು ಕಂಡು ಬಂತು.ಶೇಕಡಾ ಎಂಭತ್ತು ಸಲ,ವ್ಯವಸ್ಥೆಯು ಮೋಸ ಹೋದದು ಕಂಡುಬಂತು.ನಮ್ಮ ಆಧಾರ್ ಯೋಜನೆಯಲ್ಲಿ ಬೆರಳಚ್ಚು ಮಾತ್ರವಲ್ಲದೆ ಕಣ್ಣಿನ ಐರಿಸ್ ಚಹರೆಯನ್ನೂ ಪಡೆಯುವುದನ್ನು ಗಮನಿಸಿದ್ದೀರಿ ತಾನೇ?
-----------------------------------------------------------
ರೇಡಿಯೋ ಅಲೆ ಬಳಸಿ,ಮೊಬೈಲ್ ವಶೀಕರಣ
ಲಾಸ್ ವೇಗಸ್‌ನಲ್ಲಿ ಈಗಷ್ಟೇ ಹ್ಯಾಕರುಗಳ ಸಮಾವೇಶ ಮುಗಿದಿದೆ.ಅದರಲ್ಲಿ ಭಾಗವಹಿಸಿದ,ಮಿಲ್ಲರ್ ಎನ್ನುವ ಹ್ಯಾಕರ್,ರೇಡಿಯೋ ಅಲೆ ಬಳಸಿ,ಮೊಬೈಲ್ ಸೆಟ್‌ಗಳ ವಶೀಕರಿಸಲು ಸಫಲರಾದರು,ನೋಕಿಯಾ,ಸ್ಯಾಮ್‌ಸಂಗ್ ಗ್ಯಾಲಕ್ಸಿ ಮತ್ತು ಗೂಗಲ್ ಗ್ಯಾಲಕ್ಸಿ ಮೊಬೈಲುಗಳನ್ನು ವಶೀಕರಿಸಿಕೊಂಡು ಅವುಗಳ ಮೂಲಕ,ಎಸ್ಸೆಮ್ಮೆಸ್ ಕಳುಹಿಸುವುದು,ಕರೆ ಮಾಡಲು ಹ್ಯಾಕರ್‌ನಿಗೆ ಸಾಧ್ಯವಾಯಿತು.ಮೊಬೈಲ್ ಸೆಟ್‌ಗಳನ್ನು ಮುಟ್ಟದೆ,ರೇಡಿಯೋ ಅಲೆಗಳನ್ನುಪಯೋಗಿಸಿಕೊಂಡು,ಅವುಗಳನ್ನು ನಿಯಂತ್ರಿಸಿ,ಅವುಗಳ ಬ್ರೌಸರಿನಲ್ಲಿ ಬೇರೆ ಬೇರೆ ಇಂಟರ್‌ನೆಟ್ ತಾಣಗಳನ್ನು ತೆರೆಯುವುದರಲ್ಲಿ ಮಿಲ್ಲರ್ ಯಶಸ್ಸು ಸಿಕ್ಕಿತು.ಆ ತಾಣಗಳಲ್ಲಿದ್ದು ವೈರಸ್ ಪ್ರೊಗ್ರಾಮುಗಳು ಮೊಬೈಲ್ ಸೆಟ್ಟುಗಳನ್ನು ಬಾಧಿಸಿ,ಸೆಟ್‌ಗಳಲ್ಲಿದ್ದ ಮಾಹಿತಿಯನ್ನು ಪಡೆಯಲು ಸಾಧ್ಯವೆಂಬುದನ್ನವರು ಪ್ರದರ್ಶಿಸಿದರು.
----------------------------------------------------------
ಟ್ವಿಟರ್‌ನತ್ತ ಆಪಲ್ ಕಣ್ಣು

 



ಆಪಲ್ ಕಂಪೆನಿಯು ಐಪ್ಯಾಡ್,ಐಪೋನುಗಳಂತಹ ಸಾಧನಗಳನ್ನು ಜನಪ್ರಿಯಗೊಳಿಸುವಲ್ಲಿ ಮುಂದಿದೆ.ಆದರದು ತನ್ನದೇ ಸಾಮಾಜಿಕ ಜಾಲತಾಣವನ್ನು ಹೊಂದಿಲ್ಲ.ತನ್ನ ಸಾಧನಗಳಲ್ಲಿ ಫೇಸ್‌ಬುಕ್ ಸಾಮಾಜಿಕ ಜಾಲತಾಣವನ್ನು  ಬಳಸುವುದನ್ನು ಸರಳವಾಗಿಸಲು ಆಪಲ್ ಮುತುವರ್ಜಿ ಹೊಂದಿತ್ತು.ಆದರೆ ಫೇಸ್‌ಬುಕ್‌ನಲ್ಲಿ ತನ್ನ ಪಿಂಗ್ ಎನ್ನುವ ಸಂಗೀತ ಅಪ್ಲಿಕೇಶನ್ ಅನ್ನು ಪೇಸ್‌ಬುಕ್ಕಿನ ಭಾಗವಾಗಿಸಲು ಬಯಸಿದ್ದ ಆಪಲ್,ಆ ಬಗ್ಗೆ ಫೇಸ್‌ಬುಕ್‌ನಿಂದ ಉತ್ಸಾಹದಾಯಕ ಪ್ರತಿಕ್ರಿಯೆ ಬಾರದೆ ನಿರಾಶೆ ಹೊಂದಿತ್ತು.ಈಗದು ಟ್ವಿಟರಿನ ಜತೆ ಕೈಗೂಡಿಸಲು ಬಯಸಿದೆ.ಟ್ವಿಟರಿನಲ್ಲಿ ತುಸು ಹೂಡಿಕೆ ಮಾಡಲು ಆಪಲ್ ಮಾತುಕತೆ ನಡೆಸಿದೆ ಎಂದು ಗುಸುಗುಸು ಕೇಳಿ ಬರುತ್ತಿದೆ.ಅಲ್ಲದೆ,ಆಪಲ್ ಸಾಧನಗಳಲ್ಲಿ ಟ್ವಿಟರ್ ಅನ್ನು ಬಳಸುವುದನ್ನು ಸರಾಗವಾಗಿಸುವತ್ತ ಆಪಲ್ ಗಮನವಿತ್ತಿದೆ.ಈಗ ಮಾಸಿಕ ಹದಿನಾಲ್ಕು ಕೋಟಿ ಬಳಕೆದಾರನ್ನು ಆಕರ್ಷಿಸುತ್ತಿರುವ ಟ್ವಿಟರ್‌ಗೆ ಆಪಲ್ ಸಹಭಾಗಿತ್ವ ಲಾಭದಾಯಕವಾಗಬಹುದು.
------------------------------------------
ಇಂಟರ್ನೆಟ್ ಮೂಲಕ ಒಲಿಂಪಿಕ್ 
ಒಲಿಂಪಿಕ್ ಪಂದ್ಯಾಟಗಳು ಆರಂಭವಾಗಿವೆ.ಲಂಡನ್ ಒಲಿಂಪಿಕ್ಸ್ ಪಂದ್ಯಗಳನ್ನು ಟಿವಿಗಿಂತ ಮೊಬೈಲ್,ಟ್ಯಾಬ್ಲೆಟ್ ಸಾಧನಗಳಲ್ಲಿ ವೀಕ್ಷಿಸುವವರ ಸಂಖ್ಯೆ ಹೆಚ್ಚು ಇದ್ದರೆ ಆಶ್ಚರ್ಯವಿಲ್ಲ.NBCOlympics.comನಂತಹ ಇಂಟರ್ನೆಟ್ ತಾಣಗಳಲ್ಲಿ ಪಂದ್ಯಾಟಗಳ ವಿಡಿಯೋ ಕ್ಲಿಪ್ಪಿಂಗ್‌ಗಳು ಸಿಗುತ್ತವೆ.ಯುಟ್ಯೂಬ್ ತಾಣದಲ್ಲೂ ವಿವಿಧ ಸ್ಪರ್ಧೆಗಳ,ಸ್ಮರಣೀಯ ಘಟನೆಗಳ ವಿಡಿಯೋ ಸಿಗಲಿದೆ.ಇನ್ನು ನೇರ ಪ್ರಸಾರ ಬೇಕಿದ್ದರೆ,ಮೊಬೈಲ್‌ನಲ್ಲಿ ಟಿವಿ,ಇಲ್ಲವೇ ಆ ಸವಲತ್ತು ಒದಗಿಸುವ ಸೇವಾದಾತೃಗಳ ಸೇವೆಗೆ ನೋಂದಾಯಿಸ ಬೇಕಾಗುತ್ತದೆ.
----------------------------------------------------------
ಬರವಣಿಗೆಯ ಮೂಲಕ ಶೋಧ
ಗೂಗಲ್ ತನ್ನ ಶೋಧ ಸೇವೆಯಲ್ಲಿ ಹೊಸ ಮಜಲನ್ನು ತಲುಪಿದೆ.ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಹೊಸ ಸೇವೆ ಲಭ್ಯವಿದೆ.ಗೂಗಲ್ ಪುಟವನ್ನು ಮೊಬೈಲ್ ಅಥವಾ ಟ್ಯಾಬ್ಲೆಟ್ ಸಾಧನದ ಮೂಲಕ ತೆರೆದಾಗ,ಶೋಧ ಮಾಡಬೇಕಾದ ಪದಪುಂಜವನ್ನು ಟೈಪಿಸುವ ಬದಲು ಬರವಣಿಗೆಯ ಮೂಲಕ ಸ್ಪರ್ಶಸಂವೇದಿ ತೆರೆಯಲ್ಲಿ ಬರೆದಾಗ,ಅದನ್ನು ಹುಡುಕುವುದೇ ಸೇವೆಯ ವಿಶೇಷತೆಯಾಗಿದೆ.ಇದು ಸಾಧ್ಯವಾಗಲು ಹೊಸ ಆಂಡ್ರಾಯಿಡ್ ಆಪರೇಟಿಂಗ್ ವ್ಯವಸ್ಥೆಯಿದ್ದ ಪೋನು ಬೇಕು.ಆಪಲ್ ಸಾಧನಗಳಲ್ಲೂ ಶೋಧ ಸೇವೆ ಲಭ್ಯ.
-------------------------------------------------

ಈ ಅಂಕಣ ಬರಹಗಳು http::/ashok567.blogspot.comನಲ್ಲೂ ಲಭ್ಯವಿವೆ.


udayavani
*ಅಶೋಕ್‌ಕುಮಾರ್ ಎ