ಹೊಂಬಳ್ಳಿ

ಹೊಂಬಳ್ಳಿ

ಪುಸ್ತಕದ ಲೇಖಕ/ಕವಿಯ ಹೆಸರು
ಎಂ ಆರ್ ಕಮಲ
ಪ್ರಕಾಶಕರು
ಅಮೂಲ್ಯ ಪುಸ್ತಕ, ವಿಜಯನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೫೦.೦೦, ಮುದ್ರಣ: ೨೦೨೪

ಹೊಂಬಳ್ಳಿ' ಹಿರಿಯ ಲೇಖಕಿ ಎಂ.ಆರ್. ಕಮಲ ಅವರ ಹಗುರ ಪ್ರಬಂಧಗಳ ಸಂಕಲನ. ಬಯಲು ಸೀಮೆಯ ಬೇಲಿಗಳಲ್ಲಿ, ತೆಂಗಿನ ತೋಟಗಳಲ್ಲಿ, ಎಲ್ಲೆಂದರಲ್ಲಿ ಹಬ್ಬುವ ಬಳ್ಳಿಯೇ `ಹೊಂಬಳ್ಳಿ’. ತೋಟದಲ್ಲಿ ಬಿದ್ದಿರುವ ಕುರುಂಬಾಳೆ, ಹೆಡೆಮಟ್ಟೆ, ಸೀಬಿ, ಸೋಗೆ ಮುಂತಾದ ತೆಂಗಿನ ಭಾಗಗಳನ್ನು ಹೊರೆ ಕಟ್ಟಲು ಈ ಬಳ್ಳಿಯನ್ನು ಬಳಸುತ್ತಾರೆ. ಈ ಹೊರೆಯಲ್ಲಿ ನಿರ್ದಿಷ್ಟ ವಸ್ತುಗಳು ಇರಬೇಕೆಂಬ ನಿಯಮವಿಲ್ಲ. ಗಟ್ಟಿಯಾದ ಈ ಬಳ್ಳಿ ಎಲ್ಲವನ್ನು ಬಿಗಿಯಾಗಿ ಹಿಡಿದಿಡಬಲ್ಲದು. ಹಾಗಾಗಿ ಅನೇಕ ವಿಷಯಗಳನ್ನು ಒಟ್ಟಾಗಿಸಿರುವ ಈ ಪ್ರಬಂಧ ಸಂಕಲನಕ್ಕೆ `ಹೊಂಬಳ್ಳಿ’ ಎಂದು ಹೆಸರಿಟ್ಟಿದ್ದೇನೆ ಎಂದಿದ್ದಾರೆ. 

ಕಥೆಗಾರ್ತಿ ಚೇತನಾ ಕುಕ್ಕಿಲ ಅವರು ಈ ಹಗುರ ಪ್ರಬಂಧಗಳ ಸಂಕಲನ `ಹೊಂಬಳ್ಳಿ’ ಬಗ್ಗೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಅವರ ಅಭಿಪ್ರಾಯದಂತೆ... ಶ್ರೀಮತಿ ಎಂ. ಆರ್. ಕಮಲ ಅವರು ಬರೆದ ಹಗುರ ಪ್ರಬಂಧಗಳ ಸಂಕಲನ “ಹೊಂಬಳ್ಳಿ”. ಲೇಖಕಿಯವರು ಈ ಪುಸ್ತಕವನ್ನು ತೆಂಗಿನ ಕೃಷಿಯಲ್ಲಿ ಬಹಳ ಆಸಕ್ತಿಯಿದ್ದು, ಅದಕ್ಕಾಗಿ ಶ್ರಮಿಸಿ, “ಭೂ ಕಲ್ಪವೃಕ್ಷ” ಎಂಬ ಪುಸ್ತಕವನ್ನು ಬರೆದು, ತಮ್ಮದೇ ಖರ್ಚಿನಲ್ಲಿ ಪ್ರಕಟಿಸಿ, ರೈತರಿಗೆ ಉಚಿತವಾಗಿ ಪುಸ್ತಕಗಳನ್ನು ನೀಡಿ ಪ್ರೋತ್ಸಾಹಿಸಿದ ಲೇಖಕಿಯವರ ಅಜ್ಜನವರಾದ ‘ಎಂ.ಎಚ್.ಹರಿಹಣ್ಣ’ ಅವರಿಗೆ ಅರ್ಪಣೆ ಮಾಡಿದ್ದಾರೆ.

‘ಹೊಂಬಳ್ಳಿ’ಯಲ್ಲಿರುವ ಪ್ರಬಂಧಗಳು ಮೇಲ್ನೋಟಕ್ಕೆ ಹಗುರವಾಗಿ ಕಾಣಬಹುದು, ಆದರೆ ಒಳ ಹೊಕ್ಕು ನೋಡಿದಾಗ ಅವುಗಳ ತೂಕವೇ ಬೇರೆ. ಇಲ್ಲಿ ಪ್ರತಿಯೊಂದು ಪ್ರಬಂಧವು ಪುಟ್ಟ ಪುಟ್ಟ ಸಂದೇಶವನ್ನು ಸಾರುತ್ತದೆ. ಇಲ್ಲಿ ಲೇಖಕಿಯವರು ತಮ್ಮ ಅನೇಕ ಅನುಭವಗಳನ್ನು ಬರೆದಿದ್ದಾರೆ. ಇವು ಕೇವಲ ಲೇಖಕಿಯವರ ಅನುಭವಗಳಲ್ಲ. ಕೆಲವೊಂದು ನಮ್ಮದೇ ಕಥೆಯೇನೋ ಎಂದು ಅನಿಸಿದರೆ, ಇನ್ನು ಕೆಲವು ಇವುಗಳನ್ನು ಅಳವಡಿಸಿಕೊಳ್ಳಬಹುದು ಎಂಬ ಭಾವನೆ ಮೂಡುತ್ತದೆ. ಬಾಲ್ಯದಿಂದ ಹಿಡಿದು ಈಗಿನವರೆಗಿನ ಹಲವಾರು ಸವಿ ನೆನಪುಗಳನ್ನು ನೆನಪಿಸುತ್ತವೆ. ಹೊಂಬಳ್ಳಿ ಪುಸ್ತಕದ ಮೊದಲ ಪ್ರಬಂಧವಾದ “ನಂಜಿಲ್ಲದೆ ಮಾತುಕತೆಯಾಡುವ ಕಾಲ”ದಲ್ಲಿ ದರ್ವಿಶ್ ಕವಿಯ ಕವನದ ಸಾಲುಗಳಿಂದ ಪ್ರಾರಂಭವಾಗಿ, ಆ ಸಾಲುಗಳ ಒಳಾರ್ಥವನ್ನು ಲೇಖಕಿಯವರು ವಿವರಿಸಿ, ಯಾವುದೇ ಹಳೆಯ ಕಹಿ ಘಟನೆಗಳಿಂದ ಉಂಟಾದ ವೈಮನಸ್ಸು ಮತ್ತು ದ್ವೇಷವನ್ನು ಮುಂದುವರಿಸದೆ, ಮುಕ್ತವಾಗಿ ಕಹಿ ಇಲ್ಲದೆ ಮಾತನಾಡಿದರೆ ಸಮಸ್ಯೆಗಳಿಗೆ ಜಾಗವಿರುವುದಿಲ್ಲ ಎಂಬುದನ್ನು ತಿಳಿಸಿದ್ದಾರೆ.

ಹಳೆಯ ವಸ್ತುಗಳನ್ನು ಅಮೂಲ್ಯವಾದವುಗಳೆಂದು ಯಾರು ಜೋಪಾನವಾಗಿ ಸಂಗ್ರಹಿಟ್ಟಿದ್ದಾರೋ, ಅವರಿಗೆ ಮಾತ್ರ ಅವುಗಳಲ್ಲಡಗಿದ ಬೆಲೆ ಗೊತ್ತಿರಲು ಸಾಧ್ಯ. ಅದೇ ವಸ್ತುಗಳು ಬೇರೆಯವರಿಗೆ ಕಸದಂತೆ ಕಾಣಬಹುದು. ಆ ವಸ್ತುಗಳ ಹಿಂದಿರುವ ಒಂದೊಂದು ಕಥೆಯೂ ನಮ್ಮನ್ನು ನೆನಪಿನಾಳಕ್ಕೆ ಕರೆದೊಯ್ದು ಮುದಗೊಳಿಸುತ್ತವೆ ಎಂಬುದನ್ನು ಲೇಖಕಿಯವರು “ಕಥೆಗಳನ್ನು ಹೇಳಿಕೊಳ್ಳೋಣ” ಎಂಬ ಪ್ರಬಂಧದ ಮುಖಾಂತರ ಓದುಗರನ್ನೂ ನೆನಪಿನಾಳಕ್ಕೆ ಕಳುಹಿಸಿದ್ದಾರೆ. ಹೆಣ್ಣು ಮಕ್ಕಳು ಬೇರೆಯವರು ಹೇಳಿದ್ದನ್ನು ಕೇಳಿಕೊಂಡು ‘ಹೂಂ’ಗುಟ್ಟಿಕೊಂಡಿರುವುದರ ಬದಲು, ತಮ್ಮ ಅಭಿಪ್ರಾಯಗಳನ್ನು ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಹೇಳಿ “ನಮ್ಮ ಬದುಕಿಗೆ ನಾವೇ ನಾಯಕಿಯರಲ್ಲವೇ” ಎಂಬುದನ್ನು ತೋರಿಸಿಕೊಡಬೇಕೆಂಬುದು ಒಂದು ಭಾವನಾತ್ಮಕ ಪ್ರಬಂಧ.

ಈಗಿನ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಎಂಬುದು ಮನುಷ್ಯರಲ್ಲಡಗಿದ ಕಲೆಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರೆ, ಮನುಷ್ಯರಲ್ಲಿ ಉಳಿಯುವುದೇನು ಎಂಬ ಪ್ರಶ್ನೆ ಮೂಡುವ ಪ್ರಬಂಧವನ್ನು ಯುವಕವಿ ಆಕರ್ಷ ಅವರ ಕವನಗಳ ಉಲ್ಲೇಖದೊಂದಿದೆ “ಕಲಾ ಲೋಕಕ್ಕೆ ಕಂಟಕವಾಗಿರುವ ಕೃತಕ ಬುದ್ಧಿಮತ್ತೆ”ಯಲ್ಲಿ ನೋಡಬಹುದು. “ಹೆಣ್ಣುಮಕ್ಕಳೆಲ್ಲ ಆತ್ಮಕಥೆ ಬರೆಯುವಂತಾದರೆ” ಎಂಬ ಪ್ರಬಂಧದಲ್ಲಿ ನನಗೆ ಬಹಳ ಇಷ್ಟವಾದ ಅಂಶವೆಂದರೆ, ಲೇಖಕಿಯವರು ಕಾಲೇಜಿನಲ್ಲಿ ತಮ್ಮ ವಿದ್ಯಾರ್ಥಿಗಳ ಬರವಣಿಗೆ ಸುಧಾರಿಸಲು ಮತ್ತು ಅವರ ನೋವೇನಾದರಿದ್ದರೆ ಅದನ್ನು ಬರವಣಿಗೆಯ ಮೂಲಕ ಹೊರಹಾಕಲು ಕೊಡುತ್ತಿದ್ದ ಪ್ರೋತ್ಸಾಹ. ವಿದ್ಯಾರ್ಥಿನಿಯರ ಬರಹಗಳಲ್ಲಿದ್ದ ಬೇರೆ ಬೇರೆ ಭಾವನೆಗಳನ್ನು ಓದಿದ ಲೇಖಕಿಯವರಿಗೆ ಕಾಡುವ ವಿಚಾರವೆಂದರೆ, ಎಲ್ಲಾ ಹೆಣ್ಣು ಮಕ್ಕಳು ತಮ್ಮ ಜೀವನದ ಕಥೆಯನ್ನು ಬರೆಯುವಂತಾದರೆ ಎಂಬುದಾಗಿತ್ತು. ಇದೇ ಅಲ್ಲವೇ ಓದುಗರಿಗೂ ಯೋಚನೆಗೀಡಾಗುವ ವಸ್ತು!

“ಮೂಕ ನಾಯಿಗಳು ಇವೆಯಾ” ಎಂಬ ಪ್ರಬಂಧವನ್ನು ಓದುತ್ತಾ ಹೋದಂತೆ ಮನಕಲಕುತ್ತದೆ. ಕೊನೆಗೆ ಲೇಖಕಿಯವರಿಗೆ ಮೂಡಿದ ಪ್ರಶ್ನೆಯನ್ನು ಚಿಂತಿಸುವಂತೆ ಮಾಡುತ್ತದೆ. “ಸಹಜತೆಯೇ ನನ್ನ ನುಡಿ”ಯಲ್ಲಿ ನಮ್ಮತನವನ್ನು ಬಿಟ್ಟು ಬೇರೆಯವರ ಪ್ರಭಾವದಿಂದ ಕೃತಕವಾಗಿ ನಮ್ಮ ಸ್ವಭಾವವನ್ನು ಬೆಳೆಸಿದರೆ, ಅದು ಬಹಳ ದಿನ ನಡೆಯಲು ಸಾಧ್ಯವಿಲ್ಲ ಎಂಬ ವಿಚಾರವನ್ನು ಲೇಖಕಿಯವರು ಅವರ ಕಾಲೇಜು ಜೀವನದ ಉದಾಹರಣೆಯೊಂದಿಗೆ ತಿಳಿಸಿದ್ದಾರೆ.

ಬೆಳ್ಳಿಮೋಡ ಚಲನಚಿತ್ರದಿಂದಾಗಿ ಆದ ಬದಲಾವಣೆ, ಹೊಗೆ ವಾಸನೆ ಅಡುಗೆಮನೆ, ಹಳೆ ಕಾಲದ ಬಚ್ಚಲುಮನೆ, ತೆಂಗಿನ ಗರಿಯ ಗಿರಗಿಟ್ಟಲೆ, ಅಜ್ಜನವರೊಂದಿಗಿನ ನೆನಪು, ‘ಡೇರ್ ಡೆವಿಲ್ ಮುಸ್ತಫಾ’ ಚಿತ್ರವನ್ನು ನೋಡಿದಾಗ ಲೇಖಕಿಯವರಿಗೆ ಮರುಕಳಿಸಿದ ಪ್ರಾಂಶುಪಾಲ ಹುದ್ದೆಯ ಕೆಲವು ಘಟನೆಗಳು, ಬೆಳಗಿನ ನಡಿಗೆಯ ಸಮಯದಲ್ಲಿ ಪರಿಚಿತ ಮತ್ತು ಅಪರಿಚಿತರ ಭೇಟಿಯಿಂದ ಸಿಗುವ ಸಂತೋಷ, ರೀಲ್ಸ್ ಎಂಬ ಭಾವಗಳ ಬಿಡುಗಡೆ, ಮೊಬೈಲಿನಲ್ಲಿ ತೆಗೆದ ಯಾವುದೇ ಫೋಟೋಗಳನ್ನು ಅಳಿಸಿ ಹಾಕಲಾಗದಷ್ಟು ಅಡಗಿರುವ ನೆನಪು, ಹೀಗೆ ಇನ್ನೂ ಹಲವಾರು ವಿಷಯಗಳನ್ನೊಳಗೊಂಡ ಪ್ರಬಂಧಗಳನ್ನು ಶ್ರೀಮತಿ ಎಂ ಆರ್ ಕಮಲ ಅವರು ಹೊಂಬಳ್ಳಿಯಲ್ಲಿ ಕಟ್ಟಿ ಕೊಟ್ಟಿದ್ದಾರೆ. ಸುಮಾರು ೧೧೫ ಪುಟಗಳ ಈ ಸಂಕಲನದ ಬರಹಗಳು ಓದುತ್ತಾ ಹೋದಂತೆ ಮನಸ್ಸಿಗೆ ಬಹಳ ಆಪ್ತವಾಗುತ್ತವೆಯಾದುದರಿಂದ ಒಮ್ಮೆಯಾದರೂ ಎಲ್ಲರೂ ಓದಬೇಕು.”