ಹೊಣೆಗಾರಿಕೆ ಹೆಗಲೇರಿದೆ

ಹೊಣೆಗಾರಿಕೆ ಹೆಗಲೇರಿದೆ

ಬರಹ

  ಆಡಳಿತದ ದಿಕ್ಕು ಬದಲಾಗಬೇಕೆಂದು ನಿರ್ಧರಿಸಿ ಬೆಂಗಳೂರಿನ ಮತದಾರರು ಮಹಾನಗರದ ಆಡಳಿತದ ಚುಕ್ಕಾಣಿಯನ್ನು ಇದೇ ಮೊದಲ ಬಾರಿಗೆ ಕಮಲದ ಸನ್ನಿಧಿಗೆ ಒಪ್ಪಿಸಿದ್ದಾರೆ. ’ದೇನೇವಾಲಾ ಜಬ್ ಭೀ ದೇತಾ, ದೇತಾ ಚಪ್ಪರ್ ಫಾಡ್‌ಕೇ’ ಎಂಬಂತೆ ಬಿಜೆಪಿಗೆ ಪ್ರಥಮ ಯಶಸ್ಸಿನಲ್ಲೇ ಪ್ರಪ್ರಥಮ ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ ಆಡಳಿತವೇ ಒಲಿದುಬಿಟ್ಟಿದೆ. ಆದರೆ, ಅದೃಷ್ಟದ ಜೊತೆಗೆ ಸವಾಲೂ ಬೃಹತ್ತಾದುದಾಗಿದೆ. ಬಿಬಿಎಂಪಿಯ ಬಿಜೆಪಿ ಆಡಳಿತವೀಗ ಬೃಹತ್ ಬೆಂಗಳೂರನ್ನು ಸಂಭಾಳಿಸಬೇಕಾಗಿದೆ, ಅಭಿವೃದ್ಧಿ ಪಡಿಸಬೇಕಾಗಿದೆ. ರಾಜ್ಯದ ಆಡಳಿತವೂ ಇದೇ ಪಕ್ಷದ ಕೈಯಲ್ಲಿರುವುದು ಈ ದಿಸೆಯಲ್ಲೊಂದು ವಿಶೇಷ ಅನುಕೂಲವಾಗಿದೆ. ಈ ಅವಕಾಶ ಮತ್ತು ಅನುಕೂಲಗಳನ್ನು ಉಪಯೋಗಿಸಿಕೊಂಡು ರಾಜಧಾನಿಯ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸಬೇಕಾದ್ದು ಬಿಬಿಎಂಪಿಯ ನೂತನ ಆಡಳಿತದ ಆದ್ಯ ಕರ್ತವ್ಯವಾಗಿದೆ.
  ಬೆಂಗಳೂರಿನ ಅಭಿವೃದ್ಧಿಗೆ ಮೂರು ಮುಖಗಳಿರುತ್ತವೆಂಬುದನ್ನು ಹೊಸದಾಗಿ ಆಯ್ಕೆಗೊಂಡ ಸದಸ್ಯರು ಅರಿತು ಮೂರೂ ಮುಖಗಳ ಸ್ವಾಸ್ಥ್ಯ-ಸೊಬಗುಗಳನ್ನು ಹೆಚ್ಚಿಸುವ ದಿಸೆಯಲ್ಲಿ ಮುನ್ನಡೆಯಬೇಕು. ಬೃಹತ್ ಬೆಂಗಳೂರಿನ ನಿವಾಸಿಗಳ ಕ್ಷೇಮಾಭ್ಯುದಯ ಮೊದಲನೆಯ ಮುಖ. ರಾಜ್ಯದ ರಾಜಧಾನಿಯಾಗಿ ಬೆಂಗಳೂರು ಈ ರಾಜ್ಯಕ್ಕೆ ಸಲ್ಲಿಸಬೇಕಾದ ಸೇವೆ ಎರಡನೆಯ ಮುಖ. ಮೆಟ್ರೊಪಾಲಿಟನ್ ಸಿಟಿಯಾಗಿ, ಅಂದರೆ ಮಹಾನಗರವಾಗಿ ಬೆಂಗಳೂರು ಈ ದೇಶಕ್ಕೆ ನೀಡಬೇಕಾದ ಕೊಡುಗೆ ಮೂರನೆಯ ಮುಖ. ಈ ಮೂರೂ ಮುಖಗಳ ಉನ್ನತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಗರಾಡಳಿತವು ಕ್ರಿಯಾಶೀಲವಾಗಬೇಕು. ಅದುವೇ ಬೆಂಗಳೂರಿನ ಸರ್ವಾಂಗೀಣ ಪ್ರಗತಿಯತ್ತ ದೃಢ ಹೆಜ್ಜೆ. ಈ ನಿಟ್ಟಿನಲ್ಲಿ ದೂರದೃಷ್ಟಿ ಹೊಂದಿ, ಜೊತೆಗೆ ಮೂರೂ ಮುಖಗಳ ಸಮತೋಲ ಕಾಯ್ದುಕೊಂಡು ಅತೀವ ಜವಾಬ್ದಾರಿಯಿಂದ ಸಾಗಬೇಕಾದ ಹೊಣೆಗಾರಿಕೆ ಈಗ ಬಿಬಿಎಂಪಿಯ ಬಿಜೆಪಿ ಆಡಳಿತದ ಹೆಗಲೇರಿದೆ.