ಹೊತ್ತು ಕಳೆಯುವ ಸಂಗತಿಗಳು!

ಹೊತ್ತು ಕಳೆಯುವ ಸಂಗತಿಗಳು!

ರಾಜ್ಯಾದ್ಯಂತ ಲಾಕ್ ಡೌನ್ ಸಮಯ. ಮನೆಯಿಂದಲೇ ಕಚೇರಿ ಸಂಬಂಧಿ ಕೆಲಸ ಮಾಡಲು ಸಾಧ್ಯವಿರುವವರಿಗಾದರೆ ಸಮಯ ಕಳೆಯುತ್ತದೆ. ಇಲ್ಲವಾದರೆ ಬರೀ ಬೋರ್ ಬೋರ್! ಪುಸ್ತಕಗಳನ್ನು ಓದುವ ಹವ್ಯಾಸ ಇರುವವರಿಗೆ ಹೊತ್ತು ಕಳೆಯುವುದು ತುಂಬಾ ಕಷ್ಟವಲ್ಲ. ಈಗ ಮುದ್ರಿತ ಪುಸ್ತಕಗಳೇ ಬೇಕೆಂದಿಲ್ಲ. ಅಂತರ್ಜಾಲ ತಾಣದಲ್ಲಿ ಇ- ಪುಸ್ತಕಗಳ ಹಾಗೂ ಆಡಿಯೋ ಪುಸ್ತಕಗಳ ರಾಶಿಯೇ ಇದೆ. ಕೆಲವೊಂದು ಪುಸ್ತಕಗಳ ಖರೀದಿಗೆ ಪುಟ್ಟ ಮೊತ್ತವನ್ನು ಕೊಡಬೇಕಾಗುತ್ತದೆ. ಆದರೂ ಹಿತಕರವಾದ ಓದು ನಿಮ್ಮದಾಗಲಿದೆ. ಒಂದೆರಡು ಸ್ವಾರಸ್ಯಕರವಾದ ಸಂಗತಿಗಳನ್ನು ನಾನಿಲ್ಲಿ ಹಂಚಿಕೊಂಡಿರುವೆ. ಓದಿ ಬಿಡಿ…

*

ಕಪ್ಪು ಗುಲಾಬಿ, ನೀಲಿ ಗುಲಾಬಿ ಮತ್ತು ನೇರಳೆ ದಾಸವಾಳ

ಕೆಂಪು ಗುಲಾಬಿ ಪ್ರೇಮದ ಸಂಕೇತ ಅಲ್ವಾ? ಹಾಗೆಯೇ ಬಿಳಿ ಗುಲಾಬಿ ಶಾಂತಿ, ಹಳದಿ ಗುಲಾಬಿ ಸ್ನೇಹದ ಪ್ರತೀಕವಾಗಿ ಬಳಸುತ್ತಾರೆ. ಆದರೆ ನೀವು ಕಪ್ಪು ಗುಲಾಬಿಯನ್ನು ಕಂಡಿರುವಿರಾ? ಅರಳಿದ ಗುಲಾಬಿ ಒಣಗಿ ಕಪ್ಪಾಗುತ್ತದಲ್ಲಾ ? ಅದಲ್ಲ, ನೈಸರ್ಗಿಕವಾಗಿ ಬೆಳೆದ ಕಪ್ಪು ಗುಲಾಬಿಯನ್ನು ನೋಡಿರುವಿರಾ? 

ನೈಜವಾದ ಕಪ್ಪು ಗುಲಾಬಿಯು ಕೇವಲ ಟರ್ಕಿ ದೇಶದ ಹಾಲ್ಫೆಟಿ (Halfeti) ಎಂಬ ಸಣ್ಣ ಊರಿನಲ್ಲಿ ಬೆಳೆಯಲಾಗುತ್ತದೆ. ಇದು ಬೇಸಿಗೆ ಸಮಯದಲ್ಲಿ ಮಾತ್ರ ಗಾಢ ಕಪ್ಪಾಗಿ ಕಾಣಿಸುತ್ತದೆ ಅಂತೆ. ಇದು ತಾಂತ್ರಿಕವಾಗಿ ಕೆಂಪು, ನೇರಳೆ ಹಾಗೂ ಮೆರೂನ್ ಬಣ್ಣಗಳ ಸಂಯೋಜನೆಯಿಂದ ಗಾಢವಾದ ಕಪ್ಪುಬಣ್ಣವಾಗಿ ಕಾಣಿಸುತ್ತದಂತೆ. 

ಅಪರೂಪದಲ್ಲಿ ಅಪರೂಪವಾದ ಗುಲಾಬಿ ಯಾವುದು ಗೊತ್ತಾ? ನೀಲಿ ಗುಲಾಬಿ. ಅದರೆ ಇದು ನೈಜವಾಗಿ ಬೆಳೆಯದೇ, ಅನುವಂಶಿಕತೆಯಲ್ಲಿ ಮಾರ್ಪಾಡು (Genetic Modification) ಗಳನ್ನು ಮಾಡಿ ಕೃತಕವಾಗಿ ಬೆಳೆಸಲಾಗುತ್ತದೆ. ಕೆಂಪು ಗುಲಾಬಿಯನ್ನು ಪ್ರೇಮಿಗೆ ಕೊಡಬಹುದಾದರೆ ಭಗ್ನ ಪ್ರೇಮಿಗಳಿಗೆ ಕಪ್ಪು ಗುಲಾಬಿ ಕೊಡಬಹುದೇನೋ? 

ಕೊನೆಯ ಹನಿ: ಈ ಬರಹ ಬರೆಯುವ ಸಮಯದಲ್ಲಿ ನಮ್ಮ ಮನೆಯಲ್ಲೂ ಒಂದು ಅಪರೂಪದ ನೇರಳೆ ಬಣ್ಣದ ದಾಸವಾಳದ ಹೂ ಅರಳಿದೆ. (ಚಿತ್ರವನ್ನು ಗಮನಿಸಿ)

*

ಒಂದು ಗಂಟೆಯ ಅನುಮತಿ

ಸೈಕಲ್ ಬಳಕೆ ಭಾರತದಲ್ಲಿ ಪ್ರಾರಂಭವಾದಾಗ ಬ್ರಿಟೀಷರು ಮಾತ್ರ ಅದನ್ನು ಬಳಸಬಹುದಾಗಿತ್ತು. ೧೯೧೯ರಲ್ಲಿ ಪಂಜಾಬಿನ ಐವರು ಭಾರತೀಯರು ಬ್ರಿಟೀಷ್ ಗವರ್ನರ್ ರಿಂದ ವಿಶೇಷ ಅನುಮತಿಯನ್ನು ಪಡೆದು ಇಂಗ್ಲೆಂಡ್ ನಿಂದ ಬಿ ಎಸ್ ಎ ಬ್ರಾಂಡಿನ ಸೈಕಲ್ ಗಳನ್ನು ತರಿಸಿಕೊಂಡಿದ್ದರು. ಅಂದು ದಿನಕ್ಕೆ ಒಂದು ಗಂಟೆಗಳ ಕಾಲ ಮಾತ್ರ ತುಳಿಯಲು ಅನುಮತಿ ಇತ್ತು. ಆ ಸಮಯ ಸೈಕಲ್ ಸವಾರಿಯನ್ನು ನೋಡಲು ನೂರಾರು ಜನರು ಸೇರುತ್ತಿದ್ದರಂತೆ.

*

ಮರುಲಾ ಎಂಬ ಹಣ್ಣು

ನೀವು ದಕ್ಷಿಣ ಆಫ್ರಿಕಾ ಪ್ರವಾಸ ಹೋಗಿದ್ದರೆ ಮರುಲಾ ಎಂಬ ಹಣ್ಣಿನ ಬಗ್ಗೆ ಕೇಳಿಯೇ ಇರುತ್ತೀರಿ. ಮರುಲಾ ಹಣ್ಣು ದೊಡ್ದ ದೊಡ್ದ ಮರಗಳಲ್ಲಿ ಬೆಳೆಯುತ್ತದೆ. ಇದನ್ನು ತಿನ್ನಲು ಆನೆಗಳು ನಾ ಮುಂದು , ತಾ ಮುಂದು ಎಂದು ಓಡೋಡುತ್ತಾ ಬರುತ್ತವೆಯಂತೆ. ಮಂಗ, ಹಂದಿಗಳು ಮುಂತಾದ ಪ್ರಾಣಿಗಳಿಗೂ ಈ ಹಣ್ಣು ಬಹಳ ಇಷ್ಟ. ದೊಡ್ಡದಾಗಿ ಬೆಳೆದ ಮರವೊಂದು ಸುಮಾರು ಎರಡು ಸಾವಿರದಷ್ಟು ಹಣ್ಣುಗಳನ್ನು ನೀಡಬಲ್ಲುದು. ಹಣ್ಣಾಗುವ ಸಮಯದಲ್ಲಿ ಮರದ ಬಳಿ ಬರುವ ಆನೆ ಆ ಮರವನ್ನು ಜೋರಾಗಿ ಅಲುಗಾಡಿಸುತ್ತದೆ. ಆಗ ಹಣ್ಣುಗಳು ದೊಪ ದೊಪನೇ ಕೆಳಗೆ ಬೀಳುತ್ತವೆ. ಈ ಹಣ್ಣುಗಳನ್ನು ಆನೆಗಳು ಇಷ್ಟ ಪಟ್ಟು ತಿನ್ನುತ್ತವೆ. ಹಣ್ಣು ತಿಂದರೆ ಸ್ವಲ್ಪ ಪ್ರಮಾಣದಲ್ಲಿ ಮತ್ತೇರಿ ಅಮಲೇರುವುದೂ ಇದೆ.

ಈಗ ನಿಜವಾದ ವಿಷಯ ಕೇಳಿ, ಈ ಹಣ್ಣು ಆನೆಗಳಿಗೆ ಇಷ್ಟವೇನೋ ನಿಜ, ಆದರೆ ಅಮರುಲಾ ಎಂಬ ಮದ್ಯ ಕಂಪೆನಿಯ ಮಾರ್ಕೆಟಿಂಗ್ ತಂತ್ರ ಏನೆಂದರೆ ಈ ಹಣ್ಣುಗಳನ್ನು ಉದುರಿಸಿದ ಆನೆಗಳು ಒಂದು ವಾರದ ಬಳಿಕ ಹಣ್ಣು ತಿನ್ನಲು ಬರುತ್ತವೆ. ಆಗ ಹಣ್ಣುಗಳು ಕೊಳೆಯಲಾರಂಬಿಸಿರುತ್ತವೆ. ಅವುಗಳನ್ನು ತಿಂದಾಗ ಆ ಹಣ್ಣಿನ ಪ್ರಭಾವದಿಂದ ಆನೆಗಳಿಗೆ ಮತ್ತೇರುತ್ತದಂತೆ. ಆನೆಗಳು ಕುಣಿಯಲು ಪ್ರಾರಂಭಿಸುತ್ತವೆ. ಈ ಬಗ್ಗೆ ಹಲವಾರು ಚಲನ ಚಿತ್ರಗಳೂ ಬಂದಿವೆ. ಇದೇ ವಿಷಯವನ್ನು ಮಾರ್ಕೆಟಿಂಗ್ ಮಾಡಿದ ಅಮರುಲಾ ಕಂಪೆನಿ, ತನ್ನ ಮದ್ಯ ಬಾಟಲಿಯಲ್ಲಿ ಆನೆಯ ಚಿತ್ರವನ್ನು ಮುದ್ರಿಸಿದೆ. ಕುಡುಕರಿಗೆ ಇದನ್ನು ನೋಡಿಯೇ ಈ ವಿಷಯ ಸತ್ಯ, ಆ ಹಣ್ಣಿನಿಂದಲೇ ಈ ಮದ್ಯವನ್ನು ಮಾಡುತ್ತಾರೆ ಎಂದು ಅನಿಸುತ್ತದೆ. ದಕ್ಷಿಣ ಆಫ್ರಿಕಾದ ಕೆಲವು ಊರುಗಳಲ್ಲಿ ಮರುಲಾ ಹಣ್ಣಿನ ಉತ್ಸವವನ್ನು ಆಯೋಜಿಸುವುದೂ ಇದೆ. ಕತೆ ಹೇಳಿ ಹಣ ಮಾಡುವುದೆಂದರೆ ಇದೇ ಇರಬೇಕು.

*

ತಪ್ಪು ಆರ್ಡರ್

ಜಪಾನ್ ದೇಶದ ಟೋಕಿಯೋ ನಗರದಲ್ಲಿ ಕಳೆದ ಬೇಸಿಗೆಯಲ್ಲಿ ಒಂದು ಹೋಟೇಲ್ ಪ್ರಾರಂಭವಾಯಿತು. ಅದರ ಹೆಸರು ‘The Restaurant of Order Mistakes‘ (ತಪ್ಪು ಆರ್ಡರ್ ಗಳ ಹೋಟೇಲ್ ಎನ್ನ ಬಹುದೇ?). ಈ ಹೋಟೇಲ್ ನಲ್ಲಿರುವ ವೈಟರ್ ಗಳೆಲ್ಲಾ ಬುದ್ಧಿಮಾಂದ್ಯರು ಇಲ್ಲವೇ ಮರೆಗುಳಿ ಕಾಯಿಲೆಯುಳ್ಳವರು. ಈ ಕಾರಣದಿಂದ ನೀವು ಈ ಹೋಟೇಲ್ ನಲ್ಲಿ ಏನು ಆರ್ಡರ್ ಮಾಡುತ್ತೀರೋ ಅದು ಸಿಗುವ ಸಾಧ್ಯತೆ ಬಹಳ ಕಮ್ಮಿ. ನಿಮ್ಮ ಆರ್ಡರ್ ಬರುವ ತನಕ ನಿಮ್ಮ ಟೇಬಲ್ ಗೆ ಯಾವ ಆಹಾರ ಬರಬಹುದು ಎನ್ನುವ ಕುತೂಹಲ ಇದ್ದೇ ಇರುತ್ತದೆ. ಸಸ್ಯಹಾರಿಗಳಿಗೆ ಮಾಂಸಹಾರ ಬಂದರೆ ಕಷ್ಟವೇನೋ? ಭಾರತದಲ್ಲಾದರೆ ತಪ್ಪು ಆರ್ಡರ್ ನೀಡಿದರೆ ಗಲಾಟೆಯೇ ಆಗುತ್ತದೆ. ಆ ಕಾರಣದಿಂದ ಭಾರತದಲ್ಲಿ ಈ ಹೋಟೇಲ್ ಬ್ರಾಂಚ್ ಪ್ರಾರಂಭಿಸುವುದು ಕಷ್ಟವೇನೋ? 

ಟೋಕಿಯೋದ ಆ ಹೋಟೇಲಿನಲ್ಲಿ ನೀವು ಆರ್ಡರ್ ಮಾಡಿದ ಆಹಾರವೇ ಸರ್ವ್ ಆದರೆ ತಪ್ಪಾಗಿ ಬಂದಿದೆ ಎಂದು ಅರ್ಥವೋ ಏನೋ? ಗ್ರಾಹಕರಿಗೆ ಇಲ್ಲಿ ಬಂದರೆ ಗಲಿಬಿಲಿ ಖಚಿತ ಎಂದು ಕಾಣುತ್ತದೆ.

*

ಲೇಟ್ ಡೆಲಿವರಿ!

ಇಸ್ರೇಲ್ ಹಾಗೂ ಪ್ಯಾಲೆಸ್ತೇನ್ ನಡುವಿನ ಕಾಳಗದ ಬಗ್ಗೆ ನಿಮಗೆ ಗೊತ್ತೇ ಇದೆ. ಈ ವೈಮನಸ್ಸು ಹಲವಾರು ವರ್ಷಗಳಿಂದ ನಿರಂತರವಾಗಿ ನಡೆಯುತ್ತಾ ಬಂದಿದೆ. ಎರಡು ವರ್ಷಗಳ ಹಿಂದೆ ಏನಾಯಿತೆಂದರೆ ಇಸ್ರೇಲ್ ಕಡಲ ತೀರಕ್ಕೆ ಅಂಚೆ ಪತ್ರಗಳು, ಪಾರ್ಸೆಲ್ ಗಳು, ಗಿಫ್ಟ್ ಐಟಂ ಗಳು ಎಲ್ಲವೂ ಬಂದು ಅಪ್ಪಳಿಸಿವೆ. ಗಮನಿಸಲು ಹೋದರೆ ಅವೆಲ್ಲಾ ಸುಮಾರು ಎಂಟು ವರ್ಷಗಳ ಹಿಂದೆ ಕಳುಹಿಸಿದ ವಸ್ತುಗಳು. ಅವೆಲ್ಲಾ ಪ್ಯಾಲಸ್ತೇನ್ ನಿಂದ ಬಂದ ಸಾಮಾಗ್ರಿಗಳು. ಶತ್ರು ದೇಶದಿಂದ ಬಂದ ಅವುಗಳೆಲ್ಲಾ ನಮಗೆ ಬೇಡವೆಂದು ಇಸ್ರೇಲ್ ಇವನ್ನೆಲ್ಲಾ ಒಂದೆಡೆ ಗುಡ್ಡೆ ಹಾಕಿತ್ತಂತೆ. ಹೇಗೂ ಅದು ಸಮುದ್ರ ಸೇರಿ ಮತ್ತೆ ಇಸ್ರೇಲ್ ಕಡಲ ತೀರ ಸೇರಿದೆ. ಎಂಟು ವರ್ಷಗಳು ಕಳೆದ ಬಳಿಕ ಡೆಲಿವರಿಯಾದದ್ದು ಬಹುಷಃ ಲೇಟ್ ಡೆಲಿವರಿಯೇ ಏನೋ? 

ಆದರೂ ಈ ಪಾರ್ಸೆಲ್ ನಲ್ಲಿರುವ ಬಹಳಷ್ಟು ಐಟಂಗಳು ಇನ್ನೂ ಪೂರ್ತಿಯಾಗಿ ಕೆಟ್ಟಿಲ್ಲವಂತೆ. ಔಷಧಗಳು, ಕ್ಯಾಮರಾಗಳು, ಕಾಣಿಕೆ ವಸ್ತುಗಳು ಹಾಳಾಗದೇ ಉಳಿದಿವೆಯಂತೆ. ಬೇಡ ಬೇಡವೆಂದರೂ ತಮ್ಮ ಕಡಲ ತೀರಕ್ಕೇ ಮರಳುವ ಈ ಪಾರ್ಸೆಲ್ ಗಳನ್ನು ಏನು ಮಾಡುವುದೆಂದು ಇಸ್ರೇಲ್ ಸರಕಾರಕ್ಕೆ ತಲೆಬಿಸಿಯಾಗಿದೆ ಈಗ...

*

ಚಿತ್ರ ವಿವರ: ೧. ನೇರಳೆ ವರ್ಣದ ದಾಸವಾಳ

೨. ಕಪ್ಪು ಗುಲಾಬಿ

೩. ಮರುಲಾ ಹಣ್ಣು

೪. ತಪ್ಪು ಆರ್ಡರ್ ಹೋಟೇಲ್ ಸಿಬ್ಬಂದಿಗಳು

 

 (ವಿವಿಧ ಮೂಲಗಳಿಂದ ಸಂಗ್ರಹಿತ)