ಹೊನ್ನರಶ್ಮಿ
ನಿವೃತ್ತ ಮುಖ್ಯ ಶಿಕ್ಷಕಿ, ಸಾಹಿತಿ ರತ್ನಾ ಕೆ ಭಟ್ ಅವರು ಬರೆದ ಕವನಗಳ ಸಂಕಲನವೇ ‘ಹೊನ್ನರಶ್ಮಿ'. ಕವಯತ್ರಿ ವಿವಿಧ ಸಂದರ್ಭಗಳಲ್ಲಿ ಬರೆದ ಕವನಗಳನ್ನು ಒಟ್ಟು ಸೇರಿಸಿ ‘ಹೊನ್ನರಶ್ಮಿ' ಎನ್ನುವ ಸಂಕಲನ ಹೊರತಂದಿದ್ದಾರೆ. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಗಝಲ್ ಕವಿ, ವೈದ್ಯರೂ ಆಗಿರುವ ಡಾ. ಸುರೇಶ ನೆಗಳಗುಳಿ. ಇವರು ತಮ್ಮ ‘ನೆಗಳಗುಳಿ ಮುಮ್ಮಾತುಗಳು' ಇದರಲ್ಲಿ ಬರೆದಂತೆ “ ಹೊನ್ನರಶ್ಮಿ ಕವನ ಸಂಕಲನವು ಹಲವು ವಿಧದ ಕಾವ್ಯ ಪ್ರಕಾರ ಸಹಿತವಾದ ಒಂದು ಕಾವ್ಯ ಗುಚ್ಛ. ಇದರಲ್ಲಿ ಹಲವಾರು ಮಜಲಿನ ಕವನಗಳನ್ನು ಕಾಣಬಹುದು. ಆಕರ್ಷಕವಾದ ಪುಷ್ಪವನ್ನು ಕೇಂದ್ರವಾಗಿರಿಸಿ ಆರಂಭವಾಗುವ ಸಂಕಲನವು ಹೂವಿನ ವಿವಿಧ ಪ್ರಕಾರಗಳ ಸ್ಥಾನಮಾನವನ್ನು ನೆನಪಿಸುತ್ತಾ ‘ಮೋಹಕ ಹೂವು ಮುಡಿಗೆ ದೇವಿಗೆ' ಎನ್ನುತ್ತಾ ಡಿ ವಿ ಜಿ ಯವರ ಕಗ್ಗದ ಸಾಲನ್ನು ನೆನಪಿಸಿತು. ರಸಿಕನಿಗೆ ನಲ್ಲೆಯ ಮುಡಿಗೇರಿಸುವಾಸೆ, ಭಕ್ತನಿಗೆ ದೇವರ ಮುಡಿಗಿಡುವಾಸೆ ಎಂಬ ಹಾಗೆ ಹೂವಿನ ಗುಣಗಾನ ಕಂಡೆ.
ತುಳಸಿಯ ಮಹತ್ವ ಸಾರುತ್ತಾ ವಿಷ್ಣು ದೇವರ ಸಂಬಂಧವೂ ಸಹ ಒಂದು ಕವನದಲ್ಲಿ ಹಾಸುಹೊಕ್ಕಾಗಿದೆ. ಹಾಗೆಯೇ ಏಕ ಬಿಲ್ವಂ ಶಿವಾರ್ಪಣಾಂ ಎಂಬ ದೇವ ಪ್ರೀತಿಯ ಭಕ್ತಿಭಾವ ಹೊಮ್ಮಿಸುವ ಕವನವೂ ಜೊತೆ ಜೊತೆಗೆ ಇತರೇತರ ಭಕ್ತಿ ಗೀತೆಗಳೂ ಭಜನಾ ಯೋಗ್ಯವೂ ಆಗಿರುವುದು ವಿಶೇಷ. ಜೀವನಗಾಥೆಯ ಸಂದೇಶ ಸಾರುವ ನವ ಪಲ್ಲವಿಯಾಗಲೀ ‘ಚಿಂತೆ ಚಿತೆಗಳ ನಡುವೆ ಬರಿಯ ಸೊನ್ನೆ' ಎನ್ನುವ ನೆಮ್ಮದಿಯ ಚಾಪೆ ಮುಂತಾದ ಸಮಾಜಮುಖೀ ಕವನಗಳೂ ಮನ ಸೆಳೆಯುತ್ತವೆ.
ಮೃಗೀಯ ವರ್ತನೆಯ ತೊರೆ ಮಾನವನೇ ಎನ್ನುತ್ತಾ ಮಾನವತ್ವದ ಬಗ್ಗೆ ಬೆಳಕು ಬೀರಿ ನಿನ್ನನ್ನು ನೀನು ನೋಡಿಕೋ ಒಮ್ಮೆ ಎಂದಿದ್ದಾರೆ ಮನಸೆಂಬ ಮಾಯೆ ಕವನದಲ್ಲಿ. ಹಲವಾರು ಬಳಗಗಳ ಸಾಂಗತ್ಯದ ಫಲವಾಗಿ ಕಾಗುಣಿತ ಕವನ, ಭಾವಗೀತೆ, ಜಾನಪದ ಮಾದರಿಯ ಗೀತೆಗಳೂ ಇಲ್ಲಿ ತಮ್ಮ ಅಸ್ತಿತ್ವವನ್ನು ತೋರಿವೆ. ದೀಪದ ಹಬ್ಬ, ಬಲಿ ಪಾಡ್ಯಮಿ ಇತ್ಯಾದಿ ಹಬ್ಬ ಹರಿದಿನಗಳ ನೆನಪನ್ನು ಮತ್ತದರ ಮಹತ್ವವನ್ನು ಸಾರುವ ಕವನಗಳೂ ಉತ್ತಮವಾಗಿವೆ.
ಪುರುಶೋಕ್ತ ಪ್ರೇಮಕವನವಾಗಿ ಪ್ರಣಯಿನಿಗೆ ಉದ್ದೇಶಿಸಿ ಹೇಳುವ ತರಹದಲ್ಲಿ ಈ ಮಹಿಳಾ ಕವಯಿತ್ರಿಯವರು ಬರೆದುದು ನನರಗಿಣಿ ಕವನದಲ್ಲಿ ಕಂಡು ಬರುತ್ತದೆ. ಇದು ಬಹಳ ಕಠಿಣ ಕಾರ್ಯ. ಇಲ್ಲಿ ಪುರುಷನ ಪರಕಾಯ ಪ್ರವೇಶ ಮಾಡಿ ಬರೆಯಬೇಕಾಗುತ್ತದೆ. ಹಾಗೆಯೇ ರಾಗಾತ್ಮಕವಾಗಿ ಹಾಡ ಬಲ್ಲ ಪ್ರೇಮ ಬಂಧನ ದಂತಹ ಕವನಗಳೂ ಗಮನ ಸೆಳೆಯುತ್ತವೆ.”
ರತ್ನಾ ಭಟ್ ಅವರ ಸೋದರನೂ, ಸ್ವತಃ ಕವಿಯೂ ಆಗಿರುವ ಹಾ ಮ ಸತೀಶರು ತಮ್ಮ ಅಕ್ಕನ ಕವನ ಸಂಕಲನದ ಬಗ್ಗೆ ‘ಆಶಯ ನುಡಿ'ಗಳನ್ನಾಡಿದ್ದಾರೆ. ಪ್ರಕಾಶಕರಾದ ಪಿ ವಿ ಪ್ರದೀಪ್ ಕುಮಾರ್ ಅವರು ಬೆನ್ನುಡಿಯನ್ನು ಬರೆದು ಕವಯತ್ರಿಗೆ ಶುಭ ಕೋರಿದ್ದಾರೆ. ರತ್ನಾ ಭಟ್ ಅವರು ತಮ್ಮ ಮಾತಿನಲ್ಲಿ ಅವರಿಗೆ ಈ ಪ್ರಯಾಣದಲ್ಲಿ ಸಹಕಾರ ನೀಡಿದ ಹಲವರನ್ನು ಸ್ಮರಿಸಿಕೊಂಡಿದ್ದಾರೆ ಮತ್ತು ಕವನ ಬರೆಯಲು ಪ್ರೇರಣೆಯಾದ ಬಗ್ಗೆ ವಿವರ ನೀಡಿದ್ದಾರೆ. ಸುಮಾರು ೭೦ ಪುಟಗಳ ಈ ಕವನ ಸಂಕಲನವನ್ನು ರತ್ನಾ ಭಟ್ ಅವರು ತಮ್ಮ ತಂದೆ ಪುತ್ರೋಡಿ ಈಶ್ವರ ಭಟ್ ಮತ್ತು ತಾಯಿ ಪುತ್ರೋಡಿ ಶಂಕರಿ ಅಮ್ಮ ಹಾಲುಮಜಲು ಅವರಿಗೆ ಅರ್ಪಣೆ ಮಾಡಿದ್ದಾರೆ.