ಹೊನ್ನ ಹಣೆಯ ಎಲೆಹಕ್ಕಿಯ ಕಂಡೀರಾ?

ಹೊನ್ನ ಹಣೆಯ ಎಲೆಹಕ್ಕಿಯ ಕಂಡೀರಾ?

ಮೊನ್ನೆ ಶಾಲೆಗೆ ಹೋಗಿ ಬೈಕ್ ನಿಲ್ಲಿಸುವಷ್ಟರಲ್ಲಿ ಯಾರದ್ದೋ ಕರೆ ಬಂತು. ಕರೆ ಬಂದವರ ಜೊತೆ ಮಾತನಾಡುತ್ತಾ ಶಾಲೆಯ ಅಂಗಳದ ಕೊನೆಯಲ್ಲಿ ನಿಂತಿದ್ದೆ. ತಲೆ ಮೇಲೆ ಏನೋ ಬಿದ್ದ ಹಾಗಾಯಿತು. ಅದೇನು ಅಂತ ನೋಡುವಾಗ ಪಕ್ಕದಲ್ಲೇ ಇದ್ದ ಮರದಿಂದ ಹೂವು ನನ್ನ ತಲೆ ಮೇಲೆ ಬಿದ್ದಿತ್ತು. ಮರ ಹೂ ಬಿಟ್ಟಿದೆ ಅಂತ ಗೊತ್ತಾಯ್ತು, ಅಷ್ಟರಲ್ಲಿ ಇನ್ನೊಂದು ಹೂವು ತಲೆ ಮೇಲೆ ಬಿತ್ತು. ಹೂ ಹೇಗೆ ಬೀಳುತ್ತಿದೆ ಅಂತ ಸಂಶಯ ಆಯಿತು. ತಲೆ ಎತ್ತಿ ನೋಡುತ್ತೇನೆ ಮರದ ಮೇಲೆ ಅರಳಿದ ಹೂಗಳಲ್ಲಿ ಹಕ್ಕಿಗಳು ಓಡಾಡುತ್ತಿದ್ದವು. 

ಹೂವಿನ ಮಕರಂದವನ್ನ ಕೇಸರವನ್ನ ತಿನ್ನುತ್ತಾ, ಒಂದು ಹೂವಿನಿಂದ ಇನ್ನೊಂದು ಹೂವಿಗೆ ನೆಗೆಯುತ್ತಿದ್ದವು ಅಂತ ಗೊತ್ತಾಯ್ತು. ಯಾವುದಪ್ಪ ಈ ಹಕ್ಕಿ ಅಂತ ನೋಡಿದ್ರೆ ಹಸುರು ಬಣ್ಣದ ದೇಹ, ರೆಕ್ಕೆ ಹಸಿರು, ಬಾಲವು ಹಸಿರು. ಕಪ್ಪು ಕೊಕ್ಕು, ಕುತ್ತಿಗೆಯ ಭಾಗದಲ್ಲಿ ಕಪ್ಪು ಬಣ್ಣ. ಅದರ ನಡುವೆ ಮಿರಿ ಮಿರಿ ಮಿಂಚುವ ನೀಲಿ ಬಣ್ಣ. ಸರಿಯಾಗಿ ಗಮನಿಸಿ ನೋಡಿದಾಗ ಕಂಡದ್ದೇನು ಅಂದರೆ ತಲೆಯ ಮೇಲೆ ಚಂದದ ಹೊನ್ನಿನ ಬಣ್ಣ. ಅದರ ಜೊತೆ ಜೊತೆಗೆ ಇನ್ನೊಂದು ಹಕ್ಕಿಯೂ ಹೂಗಳ ಮೇಲೆ ಓಡಾಡುತ್ತಾ ಮಕರಂದ ಮತ್ತು ಕೇಸರದ ಸವಿ ಸವಿಯುತ್ತಿತ್ತು. ಆ ಹಕ್ಕಿಗೆ ತಲೆಯ ಮೇಲೆ ಹೊಳೆಯುವ ಹೊಂಬಣ್ಣ ಇರಲಿಲ್ಲ. ಥೇಟ್ ಎಲೆಯ ಹಾಗೇ ಕಾಣುವ ಈ ಜೋಡಿ ಹಕ್ಕಿ ಯಾವುದು ಅಂತ ಬಂದು ಪುಸ್ತಕದಲ್ಲಿ ಹುಡುಕಿದೆ. ಎಲೆಯ ಹಾಗೆಯೇ ಕಾಣುವುದರಿಂದ ಕನ್ನಡದಲ್ಲಿ ಇದರ ಹೆಸರು ಎಲೆಹಕ್ಕಿ. 

ಹೂವಿನ ಮಕರಂದ, ಕೇಸರ, ಹಣ್ಣುಗಳು, ಜೇಡಗಳು ಮತ್ತು ಸಣ್ಣಪುಟ್ಟ ಕೀಟಗಳೇ ಇವುಗಳ ಮುಖ್ಯ ಆಹಾರ. ಈ ಕುಟುಂಬಕ್ಕೆ ಸೇರಿದ ಹಕ್ಕಿಗಳಲ್ಲಿ ಗಂಡು ಹಕ್ಕಿ ಹೆಣ್ಣಿಗಿಂತ ಹೆಚ್ಚು ಬಣ್ಣ ಬಣ್ಣವಾಗಿರುತ್ತವೆ. ಸುಂದರವಾಗಿ ಹಾಡಬಲ್ಲ ಈ ಹಕ್ಕಿಗಳು ಪಿಕಳಾರ ಮತ್ತು ಕಬ್ಬಕ್ಕಿಗಳ ಜೊತೆ ಹೂವಿನ ಮರಗಳ ಮೇಲೆ ಕಾಣಸಿಗುತ್ತವೆ. ಇತರೇ ಹಕ್ಕಿಗಳಾದ ಪಿಕಳಾರ, ಕಾಜಾಣ, ಕಳಿಂಗ, ಮಡಿವಾಳಗಳ ಕೂಗನ್ನು ಮಿಮಿಕ್ರಿ ಮಾಡಬಲ್ಲ ಈ ಹಕ್ಕಿ ಮೇ ತಿಂಗಳಿನಿಂದ ಆಗಸ್ಟ್ ತಿಂಗಳ ನಡುವೆ ಮರದ ಮೇಲೆ ಕೊಂಬೆಯ ತುದಿಯಲ್ಲಿ ಪುಟಾಣಿ ಬಟ್ಟಲಿನಾಕಾರದ ಗೂಡು ಮಾಡುತ್ತದೆ. ಮಳೆ ಬಂದಾಗ ಹಚ್ಚ ಹಸುರಿನ ನಡುವೆ ಇದನ್ನು ಮತ್ತು ಇದರ ಗೂಡನ್ನು ಗುರುತಿಸುವುದು ಬಹಳ ಕಷ್ಟ. ನಿಮ್ಮ ಮನೆಯ ಆಸುಪಾಸಿನಲ್ಲಿ ಮರಗಳು ಹೂ ಬಿಟ್ಟಿದ್ದರೆ ಖಂಡಿತ ನೋಡಲು ಸಿಗಬಹುದು.

ಕನ್ನಡದ ಹೆಸರು: ಹೊನ್ನ ಹಣೆಯ ಎಲೆಹಕ್ಕಿ

ಇಂಗ್ಲೀಷ್ ಹೆಸರು: Golden-fronted Leafbird

ವೈಜ್ಞಾನಿಕ ಹೆಸರು: Chloropsis aurifrons 

ಚಿತ್ರ ಕೃಪೆ: ಅರುಣ್ ಪ್ರಭು

-ಅರವಿಂದ ಕುಡ್ಲ, ಬಂಟ್ವಾಳ