ಹೊರಗುತ್ತಿಗೆಗೆ ತೆರಿಗೆ (Outsourcing Tax) ಒಂದು ನೋಟ

ಹೊರಗುತ್ತಿಗೆಗೆ ತೆರಿಗೆ (Outsourcing Tax) ಒಂದು ನೋಟ

ಬರಹ

ಇಲ್ಲಿ ನಾನು ಯಾವುದನ್ನೂ ಸರಿ ತಪ್ಪು ಎಂದು ವಿಶ್ಲೇಷಲು ಹೋಗುವುದಿಲ್ಲ. ಒಬಾಮರವರು ಇತ್ತೀಚೆಗೆ ನೀಡಿದ ಹೇಳಿಕೆ, ಅಮೇರಿಕಾದ ಕಂಪನಿಗಳು ಬೆಂಗಳೂರಿನಲ್ಲಿ ಉದ್ಯೋಗ ಸೄಷ್ಟಿಸುವುದು ಬೇಡ, ನ್ಯೂಯಾರ್ಕ್ ನಲ್ಲೇ ಮಾಡಲಿ ಎಂದು ಹೇಳಿರುವುದು, ಭಾರತೀಯ ಮಾಹಿತಿ ತಂತ್ರಙ್ನಾನ (IT) ವಲಯದಲ್ಲಿ ಅಷ್ಟು ಆತಂಕ ಸೃಷ್ಟಿಸದೇ ಇದ್ದರೂ, ಸುದ್ದಿ ಮಾಧ್ಯಮಗಳಿಗೆ ಇದು ಒಂದು ರಸಭರಿತ ಸುದ್ದಿಯಾಗಿಬಿಟ್ಟಿದೆ. ಒಬಾಮ ಹೊರಗುತ್ತಿಗೆ ಮಾಡುವ ಅಮೇರಿಕಾ ಕಂಪನಿಗಳಿಗೆ ತೆರಿಗೆ ವಿಧಿಸುವುದರಿಂದ ಭಾರತಕ್ಕೆ ಆಷ್ಟೋಂದು ನಷ್ಟವಾದೀತೆ? ಅಥವಾ ಅಮೇರಿಕಾದ ಜನರಿಗೆ ಹೆಚ್ಚಿನ ಉದ್ಯೋಗಗಳು ಸಿಗಬಲ್ಲವೇ?

ಸುಮಾರು ವರ್ಷಗಳಿಂದ ಈ ಕ್ಷೇತ್ರದಲ್ಲಿ ಕೆಲಸ ಮಾಡಿ, ಹೊರಗುತ್ತಿಗೆ ಆಧಾರಿತ ವ್ಯವಹಾರವನ್ನು ಸಾಕಷ್ಟು ಹತ್ತಿರದಿಂದ ಕಂಡಿರುವ ನನಗೆ ಮೇಲಿನ ಎರಡೂ ಪ್ರಶ್ನೆಗಳಿಗೆ "ಇಲ್ಲ" ಎಂಬ ಉತ್ತರ ಹೊಳೆಯುತ್ತದೆ. ಇಲ್ಲಿ ಒಬಾಮರು, ಜಾಗತಿಕ ಆರ್ಥಿಕ ಹಿಂಜರಿತದಿಂದ ಒದಗಿರುವ ಸಮಸ್ಯೆಯನ್ನು ಇನ್ನೂ ಜಟಿಲಗೊಳಿಸುತ್ತಿದ್ದಾರೇನೋ ಎಂದೆನಿಸುತ್ತದೆ.

ಅಮೇರಿಕಾ ಜಗತ್ತಿನ ಅತೀ ದೊಡ್ಡ ಬಂಡವಾಳಶಾಹಿ(capitalistic) ದೇಶ. ಇಲ್ಲಿನ ಬಹುತೇಕ ಜನರು ಬಂಡವಾಳಶಾಹಿಗಳು. ಹೂಡಿದ ಬಂಡವಾಳಕ್ಕೆ ಲಾಭವನ್ನು ತೆಗೆಯುವುದೇ ಅವರ ಪ್ರಮುಖ ಧ್ಯೇಯ. ಲಾಭ ಮತ್ತು ಆಸ್ತಿಗಳನ್ನು ವ್ಯಯಕ್ತಿಕವಾಗಿ ಅನುಭವಿಸುವವರು. ಇದೇ ಆ ದೇಶದ ಜನರ ಪ್ರಮುಖ ಮನಸ್ಥಿತಿ. ಈ ಮನಸ್ಥಿತಿಯೇ ಹೊರಗುತ್ತಿಗೆಗೆ ಪ್ರಮುಖ ಕಾರಣ. ಹೀಗಿರುವಾಗ, ಹೊರಗುತ್ತಿಗೆ ತೆರಿಗೆ ವಿಧಿಸಿದರೆ, ಲಾಭ ಮಾಡುವ ಮಾರ್ಗ ಬೇರೆಯಾಗಬಹುದೇ ಹೊರತು ಮನಸ್ಥಿತಿ ಬೇರೆಯಾಗುವುದಿಲ್ಲ.

ಸಣ್ಣ ಉದಾಹರಣ ತೆಗೆದುಕೊಳ್ಳೋಣ. ಲ್ಯೂಸೆಂಟ್ ಅಮೇರಿಕಾದ ಅತಿ ದೊಡ್ದ ದೂರಸಂಪರ್ಕ ತಂತ್ರಙ್ನಾನವನ್ನು ಒದಗಿಸುವ ಸಂಸ್ಥೆ. ಇವರ ತಂತ್ರಙ್ನಾವನ್ನು ಅಮೇರಿಕಾದ ಮತ್ತೊಂದು ದೈತ್ಯ ಸಂಸ್ಥೆ AT&T ಎಂಬ ದೂರಸಂಪರ್ಕ ಸೇವೆಗಳನ್ನು ಒದಗಿಸುವ ಸಂಸ್ಥೆ ಕೊಂಡುಕೊಳ್ಳುತ್ತದೆ. (ಈಗ ಲ್ಯೂಸೆಂಟ್ , ಅಲ್ಕಾಟೆಲ್-ಲ್ಯೂಸೆಂಟ್ ಆಗಿದ್ದರೂ ನಮ್ಮ ಚರ್ಚೆಗೆ ಲ್ಯೂಸೆಂಟ್ ಅಮೇರಿಕಾದ ಒಂದು ಸಂಸ್ಥೆಯೇ ಎಂದಿಟ್ಟುಕೊಳ್ಳೋಣ). ಲ್ಯೂಸೆಂಟ್ ಸುಮಾರು ೨೦೦೦ ಇಸವಿಯಲ್ಲಿ, ಮುಳುಗುವ ಅಂಚಿಗೆ ಬಂದು, ತನ್ನೆಲ್ಲಾ ಬಹುತೇಕ ಕಾರ್ಯಕ್ಷೇತ್ರವನ್ನು ಭಾರತಕ್ಕೆ ವಿಸ್ತರಿಸಿ ಈಗ ಇನ್ನೂ ಜೀವಂತವಾಗಿದೆ ಮತ್ತು ಮುಂಚೂಣಿಯಲ್ಲೂ ಇದೆ. ಈಗ ಹೊಸದಾಗಿ ತೆರಿಗೆ ವಿಧಿಸಿರುವುದರಿಂದ, ಲ್ಯೂಸೆಂಟ್ ಗೆ ಎರಡು ಆಯ್ಕೆಗಳಿವೆ. ಹೆಚ್ಚಿನ ತೆರಿಗೆ ಕಟ್ಟುವುದು ಅಥವಾ ಹೊರಗುತ್ತಿಗೆ ಕೆಲಸವನ್ನೆಲ್ಲಾ ಮತ್ತೆ ಹಿಂಪಡೆದು ಅಮೇರಿಕಾದಲ್ಲಿ ನೌಕರರಿಗೆ ಹೆಚ್ಚಿನ ಸಂಬಳ ಕೊಟ್ಟು (ಸಂಬಳವಷ್ಟೇ ಅಲ್ಲದೆ ನಿರ್ವಹಣಾ ವೆಚ್ಚವೂ ದುಬಾರಿ ಅಲ್ಲಿ) ಅಲ್ಲಿಯೇ ತಂತ್ರಙ್ನಾನ ಅಭಿವೃದ್ಧಿ ಮಾಡುವುದು. ಎರಡೂ ಆಯ್ಕೆಗಳಲ್ಲಿ ತಾವು ವೃದ್ಧಿಪಡಿಸಿದ ತಂತ್ರಙ್ನಾದ ಬೆಲೆ ಹೆಚ್ಚಾಗುತ್ತದೆ. AT&T ಸಾರಾಸಗಟಾಗಿ ಹೆಚ್ಚಿನ ಬೆಲೆಯ ತಂತ್ರಙ್ನಾವನನ್ನು ಕೊಳ್ಳಲು ನಿರಾಕರಿಸಿ, ಸ್ವೀಡನ್ ಸಂಸ್ಥೆಯಾದ ’ಎರಿಕ್ಸನ್’ ನಿಂದಲೋ, ಚೈನಾ ಸಂಸ್ಥೆಯಾದ ’ಹ್ಯುವಾವೆ’ ಯಿಂದಲೋ ಕಡಿಮೆ ಬೆಲೆಗೆ ಅದೇ ತಂತ್ರಙ್ನಾವನ್ನು ಪಡೆದುಕೊಳ್ಳುತ್ತದೆ. ಮಾರುಕಟ್ಟೆಯಲ್ಲಿ ಉಳಿಯುವುದೇ ಇಂದಿನ ತಂತ್ರಗಾರಿಕೆ. ನಮ್ಮ ದೇಶದ ಸಂಸ್ಥೆ, ಎಂಬ ಭಾವಾವೇಶವೆಲ್ಲಾ ವ್ಯವಹಾರದಲ್ಲಿ ಶೂನ್ಯ. ಇನ್ನು ಅಮೇರಿಕಾ/ಒಬಾಮ ಬೇರೆ ದೇಶದ ಉತ್ಪನ್ನಗಳನ್ನು ನಿಷೇದಿಸುವ ಸಾಹಸಕ್ಕೆ ಕೈ ಹಾಕಲಾರರು. ಜಾಗತಿಕ ಮಾರುಕಟ್ಟೆ, ಭಾರತದಲ್ಲಿ ಮೋಟೋರೋಲಾ ಫೋನುಗಳು ಮಾರಾಟವಾಗುತ್ತಿವೆ ಎಂಬುದು ಅವರಿಗೂ ಗೊತ್ತು. ಭಾರತದ ಏರ್ ಟೆಲ್ ಕಂಪನಿ ತನ್ನ ಸೇವೆಗಳಿಗೆ ಅಲ್ಕಾಟೆಲ್-ಲ್ಯೂಸೆಂಟ್ ಉತ್ಪನ್ನಗಳನ್ನು ಬಳಸುತ್ತದೆ ಎಂಬುದೂ ಗೊತ್ತು. ಕೊನೆಗೆ ಏನಾಯಿತು? ಲ್ಯೂಸೆಂಟ್ ಅಳಿವಿನ ಅಂಚಿಗೆ ಬರುವ ಲಕ್ಷಣಗಳು ಹೆಚ್ಚಾಗುತ್ತವೆ. ಈಗಾಗಲೇ ಜಪಾನ್ ಕಾರ್ ಸಂಸ್ಥೆಗಳು ಕೊಡುತ್ತಿರುವ ಸ್ಪರ್ಧೆಗೆ, ಕಾರ್ ಉದ್ಯಮದಲ್ಲಿ ಅಮೇರಿಕಾ ಸಂಸ್ಥೆಗಳು(GM, FORD) ನಲುಗಿ ಹೋಗಿವೆ. ಇದೇ ಪರಿಸ್ಥಿತಿ ಮಾಹಿತಿ ತಂತ್ರಙ್ನಾನ ಉತ್ಪನ್ನ ಕ್ಷೇತ್ರಕ್ಕೂ ಬರಬಹುದು. ಭಾರತ ಮತ್ತು ಚೈನಾದ ಪ್ರಾಬಲ್ಯ ಸಿಲಿಕಾನ್ ವ್ಯಾಲಿಯಲ್ಲಿ ಹೆಚ್ಚಾಗಿ ಅಮೇರಿಕಾ ಹೆಚ್ಚಿನ ಉದ್ಯೋಗಗಳನ್ನು ಕಳೆದುಕೊಳ್ಳುವಂತಾಗಬಹುದು. ಇದು ನಮ್ಮ ಆಶಾವಾದವೂ ಅಲ್ಲ ಉತ್ಪ್ರೇಕ್ಷೆಯೂ ಅಲ್ಲ. ಬಹುತೇಕ ಜಾಗತಿಕ ವಿಷಯಗಳಲ್ಲಿ ತಪ್ಪು ಹೆಜ್ಜೆಗಳನ್ನಿಟ್ಟುರುವ ಅಮೇರಿಕಾ, ಮತ್ತೊಂದು ತಪ್ಪು ಮಾಡಲು ದಾಪುಗಾಲು ಹಾಕುತ್ತಿದೆಯೇ ಎಂಬ ಸಂಶಯ ಬರದೆ ಇರಲಾರದು!

ಇನ್ನು ಕೆಳಗಿರುವುದೆಲ್ಲಾ, ತಮಾಷೆಗಾಗಿ, ಯಾವುದೇ ದುರುದ್ದೇಶದಿಂದ ಕೂಡಿದ್ದಲ್ಲ!

ಕಸ್ತೂರಿ ವಾಹಿನಿಯಲ್ಲಿ ಬರಾಕ್ ಒಬಾಮ ಹೇಳಿಕೆ ಸ್ಪೋಟಕ ಸುದ್ದಿಯಾಗಿ (breaking news ನ ಪದಾನುವಾದ!, ಸಮರ್ಪಕವಲ್ಲ ಎಂದರೆ ಕ್ಷಮೆ ಇರಲಿ) ಬಿತ್ತರಿಸಲಾಗುತ್ತಿದ್ದು, ಇಂತಹ ಸನ್ನಿವೇಶ ಸೃಷ್ಟಿಯಾಗಿರುವುದರಿಂದ ಯಡ್ಡಿಯವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಕುಮಾರಣ್ಣ ಆಗ್ರಹಿಸಿದ್ದಾರೆ. ಮಾಹಿತಿ ತಂತ್ರಙ್ನಾನ ಮತ್ತು ಮಾಹಿತಿ ತಂತ್ರಙ್ನರು ದೇಶ ಮತ್ತು ರಾಜ್ಯಕ್ಕೆ ಅಮೂಲ್ಯವಾಗಿದ್ದು ಇವರ ರಕ್ಷಣೆಗೆ ಯಾವುದೇ ತ್ಯಾಗ ಬಲಿದಾನಕ್ಕೂ ಸಿದ್ಧ ಎಂದು ಗೌಡರು ಗುಡುಗಿರುವುದರಲ್ಲಿ ಯಾವುದೇ ರಾಜಕೀಯ ಪ್ರೇರಣೆ ಇಲ್ಲವಂತೆ. ಲೋಕಸಭೆಗೆ ೧೫ ಜನರನ್ನು ಆ(ಹಾ)ರಿಸಿ ಕಳಿಸಿ ಸಾಕು, ಒಬಾಮ ಕೊರಳು ಪಟ್ಟಿಯನ್ನು ಹಿಡಿದು, ಹೊರಗುತ್ತಿಗೆಗೆ ಹಾಕಿರುವ ತೆರಿಗೆಯನ್ನು ಹಿಂತೆಗೆದುಕೊಳ್ಳುವ ಹಾಗೆ ಮಾಡುತ್ತೇವೆ ಎಂದು, ದೇವೇಗೌಡರ ಪಕ್ಕದಲ್ಲೇ ಕುಳಿತಿದ್ದ ರೇವಣ್ಣನವರು ತಮ್ಮ ಸುಲಲಿತ ಆಂಗ್ಲ ಮಾತುಗಳಲ್ಲಿ ನುಡಿದಿದ್ದಾರೆ.

ಈ ಬಗ್ಗೆ ಯಡ್ಡಿಯವರನ್ನು ಪ್ರಶ್ನಿಸಿದಾಗ, ಯಡ್ಡಿಯವರು ತಬ್ಬಿಬ್ಬಾದಂತೆ ಕಂಡುಬಂದರೂ, ಎಂದಿನಂತೆ ತಮ್ಮ ರೋಷದ ದಾಟಿಯಲ್ಲಿ ಪ್ರತಿಪಕ್ಷಗಳ ಮೇಲೆ ಹರಿಹಾಯ್ದಿದ್ದಾರೆ. ಒಬಾಮರವರ ಹೇಳಿಕೆಗೂ ಆಪರೇಷನ್ ಕಮಲಕ್ಕೂ ಯವುದೇ ಸಂಬಂಧವಿಲ್ಲವೆಂದು ಸ್ಪಷ್ಟಪಡಿಸಿರುವುದಲ್ಲದೆ, ಇದು ಗೌಡರು ಮಾಡಿಸಿರುವ ಮಾಟ ಮಂತ್ರದ ಫಲ ಎಂದಿದ್ದಾರೆ! ಎಲ್ಲದಕ್ಕೂ ಮೇ ೧೬ ರ ನಂತರ ಉತ್ತರಿಸುವುದಾಗಿ ಹೇಳಿದ್ದಾರೆ.

ಸಿದ್ಧುರವರು ಪ್ರತಿಪಕ್ಷದ ನಾಯಕನ ಸ್ಥಾನದಲ್ಲಿ ತಮ್ಮನ್ನು ಕುಳ್ಳರಿಸುವವರೆಗೂ ಈ ಹೇಳಿಕೆಯ ಬಗ್ಗೆ, ಯಡ್ಡಿಯನ್ನು ತರಾಟೆಗೆ ತೆಗೆದುಕೊಳ್ಳುವುದಿಲ್ಲ ಎಂದು ಪ್ರತಿಙ್ನೆ ಮಾಡಿ ಗೋವಾ ದ ರೇಸಾರ್ಟನಲ್ಲಿ ಅಙ್ನಾತವಾಸಕ್ಕೆ ಮೊರೆ ಹೋಗಿರುವುದು, ಕಾಂಗ್ರೆಸ್ಸ್ ಹೈಕಮ್ಯಾಂಡ್ ಗಮನಕ್ಕೆ ಇನ್ನೂ ಬಂದಿಲ್ಲವಂತೆ.

ಇನ್ನು ಖರ್ಗೆಯವರು ತಮ್ಮ ಎಂದಿನ ಶೈಲಿಯಲ್ಲಿ, ಈ ಹೊರಗುತ್ತಿಗೆ ಏನ್ ಅದಾ, ಅದಕ್ಕೆ ತೆರಿಗೆ ಹಾಕಿರೋದು, ರಾಜ್ಯ ಸರ್ಕಾರದ ಅಲ್ಪ ಸಂಖ್ಯಾತ ವಿರೋಧಿ ತನದ ಪ್ರತಿಫಲ. ಮಾಡಿದ್ದುಣ್ಣೋ ಮಹರಾಯ ಅಂತ ನಿಟ್ಟುಸಿರು ಬಿಟ್ಟರಂತೆ.

ಇನ್ನು ಖ್ಯಾತ ಪತ್ರಕರ್ತ ಪ್ರತಾಪ್ ಸಿಂಹರಿಗೆ ಮಾಹಿತಿ ತಂತ್ರಙ್ನ ಕೂಲಿಗಳಿಗಾಗಬಹುದಾದ ತೊಂದರೆಗಳನ್ನು ಅಂತರ್ಜಾಲದಲ್ಲಿ ಹುಡುಕುತ್ತಿದ್ದಾರಂತೆ! ಯಾವುದೇ ಮಾಹಿತಿ ಸಿಗದ ಕಾರಣ, ತಮ್ಮ ಮುಂದಿನ ಪುಸ್ತಕ "ಒಬಾಮ ತುಳಿದ ಹಾದಿ" ಯನ್ನು ಪ್ರಾರಂಭಿಸುವುದಾಗಿ ಆಪ್ತ ವಲಯದಲ್ಲಿ ಹೇಳಿಕೊಂಡಿದ್ದಾರೆ. ಅಧಿಕೃತ ಪ್ರಕಟಣೆಗಾಗಿ ಕಾದು ನೋಡಬೇಕು.