ಹೊರನಾಡು ಅನ್ನಪೂರ್ಣೇಶ್ವರಿ ದೇವಿ

ಹೊರನಾಡು ಅನ್ನಪೂರ್ಣೇಶ್ವರಿ ದೇವಿ

ಮುಂಚಿತವಾಗಿಯೇ ನವರಾತ್ರಿ ಹಬ್ಬದ ಶುಭಾಶಯ ಕೋರುತ್ತಾ, ಈ ವಾರದ ಪಯಣ ಸೇರಿ ಮುಂದಿನ ಪಯಣದಲ್ಲಿ ಶ್ರೀ ದೇವಿಯರ ದೇಗುಲದ ದರ್ಶನ ನಿಮ್ಮ ಮುಂದೆ ಇಡಲು ಪ್ರಯತ್ನಿಸಲಾಗುವುದು.

'ಭವತಿ ಭಿಕ್ಷಾಂ ದೇಹಿ' ಎಂದು ಕೈ ನೀಡಿ ಬೇಡಿದ ಕೈಲಾಸನಾಥನಾದ ಶಂಕರನಿಗೆ ಭಿಕ್ಷೆ ನೀಡಿದ ತಾಯಿ ಅನ್ನಪೂರ್ಣೇಶ್ವರಿಯನ್ನು ಸ್ತುತಿಸುವುದೇ ಹೀಗೆ. ಮಂಗಳಮಯಳಾದ ತಾಯಿಯು ಕರ್ನಾಟಕದ ನಿತ್ಯಹರಿದ್ವರ್ಣದ ಕಾನನದ ಗಿರಿ ಪ್ರದೇಶವಾದ ಮಲೆನಾಡ ಮಡಿಲ ಸೌಂದರ್ಯ ಲಹರಿ ಹೊರನಾಡಿನಲ್ಲಿ ನೆಲೆಸಿದ್ದಾಳೆ. ಭಕ್ತಿ ಭಾವ ಉಕ್ಕಿಸುವ ಆರು ಅಡಿ ಎತ್ತರದ ಸುಂದರ ವಾದ ವಿಗ್ರಹ ರೂಪದಲ್ಲಿ ಹೊರನಾಡಿನಲ್ಲಿ ನೆಲೆ ನಿಂತಿರುವ ಆದಿಶಕ್ತಿಯಾದ ತಾಯಿ ಅನ್ನಪೂರ್ಣೆಶ್ವರಿಯನ್ನು ನೋಡುವುದೇ ಒಂದು ಸೌಭಾಗ್ಯ.

ಹೀಗಾಗಿ ಕವಿ - "ಕಣ್ಣು ನೂರು ಸಾಲದು ಅನ್ನಪೂರ್ಣೆಯ ನೋಡಲು, ನಾಲಿಗೆ ಸಾವಿರ ಸಾಲದು, ಈಶ್ವರಿ ನಿನ್ನನು ಪಾಡಲು" .... ಎಂದು ಹಾಡಿರುವುದು. ಚಿಕ್ಕಮಗಳೂರು ಜಿಲ್ಲೆಯ ಸಮೃದ್ಧ ಸಸ್ಯ ಶ್ಯಾಮಲೆಯ ಮಡಿಲಲ್ಲಿ ಝುಳು ಝುಳು ಹರಿವ ಜಲಲ ಜಲಧಾರೆಗಳ ನಡುವೆ ಅನಂತ ಪ್ರಕೃತಿಯ ಅನನ್ಯತೆಯಿಂದ ಮನಸ್ಸಿಗೆ ಮುದನೀಡುವ ಸುಂದರ ಘಟ್ಟಪ್ರದೇಶದಲ್ಲಿ ಇರುವ ಪುಣ್ಯಕ್ಷೇತ್ರದಲ್ಲಿ ತಾಯಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು 1973ರಲ್ಲಿ. 

ಶಂಖ, ಚಕ್ರ, ಶ್ರೀಚಕ್ರ ಹಿಡಿದ ಚತುರ್ಭುಜೆಯಾದ ಈ ತಾಯಿಯ ಮೂರ್ತಿಯನ್ನು ತಮಿಳುನಾಡಿನ ಶಂಕೋಟೆಯಿಂದ ತಂದು ಪ್ರತಿಷ್ಠಾಪಿಸಲಾಗಿದೆ. ಆರು ಅಡಿ ಎತ್ತರದ ವಿಗ್ರಹದ ಕೆಳಭಾಗದಲ್ಲಿ ಮೂಲದೇವಿಯ ಮೂರ್ತಿ ಇದೆ. ಇಲ್ಲಿ ನಿತ್ಯವೂ ಬೆಳಗ್ಗೆ ಏಳರಿಂದ ರಾತ್ರಿ ಒಂಭತ್ತರವರೆಗೂ ದೇವಿಯ ದರುಶನ ಪಡೆಯಬಹುದು. ದೇವಿಯ ಪಾದದ ಬಳಿಯೇ ನಿಂತು ಅತಿ ಹತ್ತಿರದಿಂದ ತಾಯಿ ಅನ್ನಪೂರ್ಣೆಯ ದರ್ಶನ ಪಡೆವ ಅವಕಾಶವೂ ಇಲ್ಲುಂಟು.

ಹೊರನಾಡಿನ ದೊಡ್ಡಮನೆ ಪಾಳೆಗಾರ ಮನೆತನದ ಕುಲದೇವತೆ ಎಂದೂ ಹೇಳಲಾಗುವ ಈ ತಾಯಿ ಹೊರನಾಡಿನ ಸುತ್ತಮುತ್ತಲ ಪ್ರದೇಶದ ಜನರ ಅಧಿದೇವತೆ. ಇದು ಭದ್ರಾ ನದಿಯ ದಡದಲ್ಲಿದೆ. ರಾಜ್ಯದ ರಾಜಧಾನಿ ಬೆಂಗಳೂರಿನಿಂದ 330 ಕಿ.ಮೀ ದೂರದಲ್ಲಿರುವ ಹೊರನಾಡಿಗೆ ಹೋಗಲು ನೇರ ಬಸ್ ಸೌಕರ್ಯವಿದೆ. ಹೊರನಾಡಿನಿಂದ ಶಾರದಾಪೀಠ - ವಿದ್ಯಾ ಶಂಕರ ದೇವಾಲಯಗಳಿರುವ ಶೃಂಗೇರಿಗೆ ಕೇವಲ 75 ಕಿ.ಮೀ. ಕರ್ನಾಟಕದ ಕಾಫಿಯ ಕಣಜ ಚಿಕ್ಕಮಗಳೂರಿನಿಂದ 100 ಕಿ.ಮೀ. ದೂರವಿದೆ.

ಅನ್ನದೇವಿಯ ತಾಣವಾದ ಇಲ್ಲಿ ಊಟ - ವಸತಿಯ ಸಮಸ್ಯೆ ಇಲ್ಲ. ಆದಿಶಕ್ತಿಯಾದ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ದೇವಸ್ಥಾನದ ಆಡಳಿತ ಮಂಡಳಿಯೇ ಊಟ - ವಸತಿಯ ವ್ಯವಸ್ಥೆ ಮಾಡಿದೆ. ಇಲ್ಲಿ ಸುಸಜ್ಜಿತವಾದ ಪಾಕಶಾಲೆ, ವಸತಿ ಗೃಹಗಳೂ ಇವೆ. ಭಕ್ತಾದಿಗಳಿಗೆ ಬೆಳಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿಯ ಭೋಜನದ ವ್ಯವಸ್ಥೆ ಇದೆ.

ಸರ್ವಮಂಗಳಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ ।

ಶರಣ್ಯೇ ತ್ರ್ಯಮ್ಬಕೇ ಗೌರಿ ನಾರಾಯಣಿ ನಮೋ ಸ್ತುತೇ ॥

ದಸರ ರಜೆಯೂ ಬರುತ್ತಿದೆ, ನವರಾತ್ರಿ ಹಬ್ಬದ ಸಡಗರವು ಮುಂದಿದೆ, ಹಬ್ಬಗಳಲ್ಲಿ ಹಬ್ಬಲಿ ಎಲ್ಲರಲ್ಲಿಯೂ ಬಾಂಧವ್ಯ, ತಬ್ಬಿ - ಒಪ್ಪಿಕೊಳ್ಳಲಿ  ಎಲ್ಲರಲ್ಲಿಯೂ ಹಂಚಿ ತಿನ್ನುವ ವಾತ್ಸಲ್ಯ , ಎಲ್ಲರಲ್ಲಿಯೂ ಮೂಡಿ ಬರಲಿ ಭರತ ಭೂಮಿಯ ಕಾರುಣ್ಯ.

(ಚಿತ್ರಗಳು : ಅಂತರ್ಜಾಲ ಕೃಪೆ)

-ರಮೇಶ ನಾಯ್ಕ, ಉಪ್ಪುಂದ, ಬೈಂದೂರು