ಹೊಲದೆಡೆಗೆ

ಹೊಲದೆಡೆಗೆ

ಕವನ

ಕಾರ್ಮುಗಿಲು ಕಪ್ಪಿಟ್ಟು ಕರಗುತಿರೆ ಮಳೆಯಾಗಿ 

ನೆಲದೊಡಲು ಒಪ್ಪಾಗಿ ಹಸಿಮಣ್ಣು ಹದವಾಗಿ 

ಧೋಯೆಂದು ಬಳಬಳನೆ ಸುರಿಯುತಿದೆ ಮಳೆಧಾರೆ 

ನಾಟಿಯಿದೆ ಗದ್ದೆಯಲಿ ಬನ್ನಿರೇ ನಾರಿಯರೆ ॥

 

ಉತ್ಸಾಹ ಮೈಯಡರಿ ಉಲ್ಲಾಸ ಗರಿಗೆದರಿ 

ಬೀಸುನಡೆ ಹೊಲದೆಡೆಗೆ ಗೊರಬೊಂದು ಬೆನ್ನೇರಿ 

ಭೂತಾಯ ಮಡಿಲೊಳಗೆ ಬೆವರಾಗಿ ದುಡಿಯೋಣ 

ಕಾಯಕವೆ ಕೈಲಾಸ ನುಡಿಮಾತ ನೆನೆಯೋಣ ॥

 

ಬೇಸಾಯ ಕೈಬೀಸಿ ಕರೆಯುತಿದೆ ರೈತರನು 

ತಾ ದುಡಿದು ನೀಡುತಿಹ ಹಸಿದವಗೆ ಅನ್ನವನು 

ಎಳೆದಷ್ಟು ಸಾಗದಿದು ಬದುಕಿನಾ ಸುಖತೇರು 

ಬೆಳೆದಷ್ಟು ಉಳಿಯುವುದು ಹಸಿರೊಳಗಿನಾ ಬೇರು ॥

 

ನೀಲವ್ವ ಗಂಗವ್ವ ನಡೆಯಿರೇ ಹೊಲದೆಡೆಗೆ 

ಮಾತಲ್ಲಿ ಮಲ್ಲವ್ವ ಹಾಡನುಡಿ ಜತಜತೆಗೆ 

ಸರಸಕ್ಕ ಬಿಡುವಿರಸ ಮಾತಾಡು ಮಲ್ಲಿಗೆ 

ಮೂರ್ನಾಲ್ಕು ದಿನಬಾಳು ಅಪರಿಚಿತರು ಇಲ್ಲಿಗೆ |

-ವಿಜಯಲಕ್ಷ್ಮೀ ಕಟೀಲು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್