ಹೊಳೆಯುವುದು ತಾರೆ, ಉಳಿಯುವುದು ಆಕಾಶ

ಹೊಳೆಯುವುದು ತಾರೆ, ಉಳಿಯುವುದು ಆಕಾಶ

ಬರಹ

ಸದ್ಯ ಲಭ್ಯವಿರುವ ಮಾಧ್ಯಮಗಳಲ್ಲಿ ಸಿನಿಮಾ ಅತ್ಯಂತ ಶಕ್ತಿಶಾಲಿಯಾದುದು ಎಂಬುದರಲ್ಲಿ ಯಾರಿಗೂ ಸಂಶಯ ಇರಲಿಕ್ಕಿಲ್ಲ. ಅತಿ ಪ್ರಬಲವಾದ, ಹಾಗೇ ಪರಿಣಾಮಕಾರಿಯಾಗಿ ಹೆಚ್ಚು ಜನರನ್ನು ತಲುಪಬಲ್ಲ ಸಮೂಹ ಮಾಧ್ಯಮ ಇದಾಗಿರುವುದರಿಂದ, ಹಣ ಹೂಡಿಕೆಗೆ ಪ್ರಶಸ್ತವಾದ ಉದ್ದಿಮೆಯೂ ಇದೇ ಆಗಿದೆ. ಲಾಭ ಪಡೆಯುವುದೇ ಹೂಡಿಕೆದಾರನ ಉದ್ದೇಶವಾಗಿರುವುದರಿಂದ ಸಹಜವಾಗಿ ಹಣ ಮತ್ತು ಖ್ಯಾತಿ ಈ ಉದ್ಯಮದ ಮುಖ್ಯ ಉಸಿರಾಗಿದೆ.

ಕನಸುಗಳನ್ನು ಹಂಚುವ, ಭ್ರಮೆಗಳನ್ನು ಪೋಷಿಸುವ, ಮಿಥ್ಯೆಗಳನ್ನು ಲೀಲಾಜಾಲವಾಗಿ ನಿಭಾಯಿಸುವ ತಾಕತ್ತು ಸಿನಿಮಾಕ್ಕಲ್ಲದೇ ಬೇರಾವ ಮಾಧ್ಯಮಕ್ಕೂ ಇಲ್ಲದೇ ಇರುವುದರಿಂದಲೇ, ಅದಿಂದು ರಾಜಕೀಯದವರ, ಭೂಗತ ಜಗತ್ತಿನವರ, ಹೂಡಿಕೆದಾರರ ಸ್ವರ್ಗವಾಗಿದೆ. ಹಳ್ಳಿಗಳಲ್ಲಿದ್ದ ಟೂರಿಂಗ್ ಟಾಕೀಸುಗಳ ಯುಗ ಮುಗಿದು, ಮನೆ ಮನೆಗೂ ಡಿ.ಟಿ.ಎಚ್‌ಗಳೆಂಬ ಇಪ್ಪತ್ತನಾಲ್ಕೂ ತಾಸೂ ಚಲನಚಿತ್ರಗಳನ್ನು ಪ್ರದರ್ಶಿತ್ತಲೇ ಇರುವ ದೂರದರ್ಶನದ ಪರಿ ಯಾವ ಮಟ್ಟದಲ್ಲಿದೆಯೆಂದರೆ, ಹೊಲ, ಗದ್ದೆಗಳ ಕೆಲಸಕ್ಕಿಂತಲೂ ಸಿನಿಮಾ ನೋಡುತ್ತಲೇ ಇರುವುದು ಈವತ್ತಿನ ಹಳ್ಳಿಗಳ
ನಾಗರೀಕ ಪ್ರಜ್ಞೆಯಾಗಿಬಿಟ್ಟಿದೆ. ಹಳೆಯ ಕಾಲದ ಕಟೌಟ್, ಸ್ಟಾರ್, ಮೆರವಣಿಗೆಗಳ ಯುಗ ಮುಗಿದು ಖಂಡಾಂತರದಲ್ಲೂ ಉಪಗ್ರಹಗಳ ಮೂಲಕ ಚಲನ ಚಿತ್ರ ನೋಡುವ ಭಾಗ್ಯ ಪ್ರೇಕ್ಷಕನದ್ದಾಗಿದೆ.

ಒಳ್ಳೆಯ ಸಿನಿಮಾ, ಕೆಟ್ಟ ಸಿನಿಮಾ, ಕಮರ್ಷಿಯಲ್ ಸಿನಿಮಾ, ಕಲಾತ್ಮಕ ಸಿನಿಮಾ- ಹೀಗೆ ವರ್ಗೀಕರಣಗೊಂಡ ಗುಣವಾಚಕಗಳ ಮೂಲಕವೇ ಆ ಸಿನಿಮಾದ ಆತ್ಮ ಯಾವುದೆಂದು ಮೊಹರು ಹಾಕುವ ವಿಮರ್ಶಕ ಪ್ರಜ್ಞೆಯೇ ಈ ವರೆವಿಗೂ ಒಂದು ಸಿನಿಮಾವನ್ನು ಬರಿಯ ಸಿನಿಮಾವನ್ನಾಗಿ ನೋಡುವ ಕ್ರಮದಿಂದ ಪ್ರೇಕ್ಷಕನನ್ನು ಹೊರಗಿಟ್ಟಿದೆ ಹಾಗೂ ವಿಶ್ಲೇಷಣೆಯ ಸ್ವರೂಪ ಮತ್ತು ದಾರಿಗಳನ್ನು ನಿರ್ಧರಿಸದೇ ಅದನ್ನೊಂದು ಸಾಂಸ್ಕೃತಿಕ ಸಂಗತಿಯನ್ನಾಗಿಯೋ ಅಥವಾ ಹಣಗಳಿಕೆಯ ದುರುದ್ದೇಶವೆಂದೋ ಜರಿದು ನಿಜ ಸಿನಿಮಾವೊಂದು ತನ್ನೊಳಗೇ ಇಟ್ಟುಕೊಂಡಿರಬಹುದಾದ
ಭಾಷೆಯನ್ನು ನೋಡುಗನಲ್ಲಿ ಬಿತ್ತುವುದನ್ನು ತಡೆಯುತ್ತಿದೆ. ಪ್ರಾಯಶಃ ಈ ಕಾರಣಗಳಿಂದಾಗಿಯೇ, ಕಮರ್ಷಿಯಲ್ ಮತ್ತು ಕಲಾತ್ಮಕ ಚಿತ್ರಗಳ ನಡುವಿನ ಕಂದಕ ಈ ನಡುವೆ ಹೆಚ್ಚಾಗುತ್ತಿದೆ.

ಜೊತೆಗೇ ಕಮರ್ಷಿಯಲ್ ಮತ್ತು ಕಲಾತ್ಮಕ ಎಂಬೆರಡೂ ಪ್ರಬೇಧಗಳು, ಈ ಎರಡೂ ವಿಧಗಳಿಗಂಟಿಕೊಂಡಿರುವ ಪೂರ್ವಾಗ್ರಹ, ಪರಿಕಲ್ಪನೆ, ಕಾಳಜಿ ಇತ್ಯಾದಿ ಗುಣಗಳ ಸಹಜ ಮಾಪಕದಂತಿದೆ. ಕಮರ್ಷಿಯಲ್ ಎಂಬ ಕಾರಣಕ್ಕೇ ಎರಡು ಹಾಡು, ಒಂದು ಕೊಲೆ, ಐಟಂ ಸಾಂಗ್, ಇತ್ಯಾದಿಗಳಿಂದ ಅತಿವಿಜೃಂಭಿಸುವ ಚಿತ್ರಗಳಿಗಿಂತಲೂ ಸೋಗಲಾಡಿತನವನ್ನೇ ಪ್ರದರ್ಶಿಸುವ, ಯಾವುದೋ ಕ್ಷುಲ್ಲಕ ಸಮಸ್ಯೆಯನ್ನು ಗುಡ್ಡವಾಗಿ ಭ್ರಮಿಸುತ್ತ, ಬೋರ್ ಹೊಡೆಸಿ ಪ್ರಶಸ್ತಿ ಗಿಟ್ಟಿಸುವ ಕಲಾತ್ಮಕ ಚಿತ್ರಗಳು ಈ ಮಾಧ್ಯಮಕ್ಕೆ ಸಲ್ಲಿಸಿರುವ ಕೊಡುಗೆಗಳೇನಾದರೂ ಇವೆಯೇ ಎನ್ನುವ ಪ್ರಶ್ನೆ ನಿರುತ್ತರವಾಗಿಯೇ ಉಳಿಯುತ್ತದೆ. ಏಕೆಂದರೆ ಕಮರ್ಷಿಯಲ್ ಸೂತ್ರಗಳ ಸಿನಿಮಾ, ಕಾಸು ಕೊಟ್ಟು, ಸಮಯ ಒತ್ತೆ ಇಟ್ಟು ಬಂದಿರುವ ಪ್ರೇಕ್ಷಕ ಮಹಾಪ್ರಭುವಿಗೆ ಎರಡು, ಎರಡೂವರೆ ಗಂಟೆಗಳ ಕಾಲವಾದರೂ ಲೌಕಿಕದ ಕಷ್ಟ ಮರೆಸಿ ಫ್ಯಾಂಟಸಿಯ ಅದ್ಭುತ ಲೋಕವೊಂದನ್ನು ತೋರಿಸಿರುತ್ತದೆ.

ದುರದೃಷ್ಟವೆಂದರೆ ಕಲಾತ್ಮಕ ಎಂಬ ಹಣೆಪಟ್ಟಿಹೊತ್ತು ಚಿತ್ರೀಕರಣ ಆರಂಭಿಸುವ ಹಲವು ಚಿತ್ರಗಳು ಪೂರ್ತಿಯಾಗುವ ಮೊದಲೇ ಡಬ್ಬ ಸೇರುತ್ತವೆ. ಬಿಡುಗಡೆಯ ಭಾಗ್ಯವನ್ನೇ ಕಾಣದ ಇನ್ನು ಕೆಲವು ದೇಶ-ವಿದೇಶಗಳ ಉತ್ಸವದಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ/ ಪದಕ, ಬಹುಮಾನಗಳನ್ನು ಎತ್ತಿಹಾಕಿಕೊಳ್ಳುತ್ತ ಸದಾ ಚರ್ಚೆಯಲ್ಲಿರುತ್ತವೆ. ಈ ಚಿತ್ರಗಳ ನಿರ್ದೇಶಕ/ಕಿ ಮತ್ತು ನಿರ್ಮಾಪಕ/ಕಿ ಬಹುತೇಕ ಸಂದರ್ಭಗಳಲ್ಲಿ ಒಬ್ಬನೇ ವ್ಯಕ್ತಿ ಆಗಿರುತ್ತಾನೆ/ಳೆ. ಇನ್ನೊಂದು ಸ್ವಾರಸ್ಯದ ಸಂಗತಿಯೆಂದರೆ ಒಂದು ಚಿತ್ರ ಅದರ ತಯಾರಿಕೆಯ ವೇಳೆ ಅಥವ ಬಿಡುಗಡೆಗೆ ಮೊದಲು ತೋರಿಸಿದ್ದ ಎಲ್ಲ ಬಗೆಯ ಗಿಮಿಕ್‌ಗಳೂ ಮುಗಿದು, ಕೇವಲ ಚಲಾವಣೆಗೆ ಬಿಟ್ಟ ನಾಣ್ಯ ಅದಾಗಿರುತ್ತದೆ.

ಹತ್ತು ಹಲವು ಬಗೆಯ ಚಲನಚಿತ್ರಗಳು ಬೆಳ್ಳಿತೆರೆಗೆ ಅಪ್ಪಳಿಸುತ್ತಿರುವ ಈ ವರ್ತಮಾನದಲ್ಲಿ ಕೆಲವು ಚಿತ್ರಗಳಿಗಂತೂ ಯಾವುದೇ ಬಗೆಯ ಪ್ರತಿಕ್ರಿಯೆ ನೀಡುವುದೂ ದುಸ್ತರಾವಾಗತೊಡಗಿದೆ. ಅಭಿಮಾನಿ ಎನ್ನುವ ಹೆಸರಲ್ಲಿರುವ ಗುಪ್ತಚರಿ ಏನು ಮಾಡುತ್ತಾನೋ ತಿಳಿಯದ ವಿಷಯವಾಗಿದೆ. ಈ ಸಮಸ್ಯೆಗೆ ಪರಿಹಾರವಿದೆಯೇ? ಒಂದು ಚಲನಚಿತ್ರವನ್ನು ವರ್ಗೀಕರಣದ ಹಂಗಿಲ್ಲದೇ ಕೇವಲ ಮನರಂಜನೆಯ ಸರಕಾಗಿ ನೋಡಲು ಸಾಧ್ಯವಿಲ್ಲವೇ? ಚಿತ್ರವೊಂದರಲ್ಲಿ ವ್ಯಕ್ತವಾಗುವ ಸೃಜನಾತ್ಮಕ/ತಾಂತ್ರಿಕ ಅಂಶಗಳು ಸಾಮಾನ್ಯ ಪ್ರೇಕ್ಷಕನಿಗೆ ಮುಟ್ಟಬಲ್ಲುದೇ? ಚಲನಚಿತ್ರವು ನಿರ್ದೇಶಕನ ಮಾಧ್ಯಮವೋ ಅಥವಾ ಹಣ ಹೂಡುವ ನಿರ್ಮಾಪಕನದೋ? ನಾಟಕೀಯ ಅಂಶಗಳು ಚಿತ್ರವೊಂದನ್ನು ಎತ್ತರಕ್ಕೆ ಏರಿಸಬಲ್ಲುದೋ ಅಥವ ಬಳಸಿರುವ ಕತೆಯೇ ಅಭಿವ್ಯಕ್ತಿಯ ಮಾಧ್ಯಮವಾಗಿಪರಿವರ್ತನೆಗೊಳ್ಳುತ್ತದೋ ಎಂಬೆಲ್ಲ ಪ್ರಶ್ನೆಗಳ ಅಕ್ಷಯ ಪಾತ್ರೆ ಬತ್ತುವುದೇ ಇಲ್ಲ.

ಚಲನಚಿತ್ರಗಳಿಗೆ ಕಮರ್ಷಿಯಲ್ ಅಥವ ಕಲಾತ್ಮಕ ಎನ್ನುವ ಹಣೆಪಟ್ಟಿ ಹಚ್ಚಿ ನೋಡುವುದು ಮುಜುಗರದ ವಿಚಾರವಾದರೂ ಅನುಕೂಲಕ್ಕೋಸ್ಕರ ಮಾಡಿಕೊಂಡ ಈ ಬಗೆಯ ವರ್ಗೀಕರಣವೇ ಆ ಚಿತ್ರದ ಸೋಲು ಅಥವ ಗೆಲುವನ್ನು ಅಂದಾಜು ಮಾಡಬಲ್ಲುದು. ಈ ರೀತಿಯ ಬ್ರಾಂಡಿಂಗ್ ಮಾರುಕಟ್ಟೆಯಲ್ಲಿ ತದ್ವಿರುದ್ಧವಾಗಿ ಕೆಲಸ ಮಾಡುವ ಅಪಾಯ ಇದ್ದೇಇರುತ್ತದೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ಬರಗೂರರ
ಹಗಲು ವೇಷ ಮತ್ತು ನಾಗಾಭರಣರ ಚಿಗುರಿದ ಕನಸು.ಈ ಎರಡೂ ಚಿತ್ರಗಳೂ ಶಿವರಾಜ್‌ಕುಮಾರ್ ನಾಯಕನಾಗಿದ್ದರೂ ಇನ್ನಿಲ್ಲದಂತೆ ನೆಲ ಕಚ್ಚಿದ್ದು ಆ ಚಿತ್ರಗಳನ್ನು ಬ್ರಾಂಡ್ ಮಾಡಿದ್ದ ಕಾರಣದಿಂದ. ಮತ್ತೊಂದು ಉದಾಹರಣೆ ಎನ್ನಬಹುದಾದ್ದು ನಾಗಾಭರಣರ ಕಲ್ಲರಳಿ ಹೂವಾಗಿ. ಹಾಗಾಗಿಯೇ ೧೯೭೨ ರ ಆಸುಪಾಸಿನಲ್ಲಿ ಕನ್ನಡದಲ್ಲಿ ನಡೆದ ಹೊಸ ಅಲೆಯ ಪ್ರಯೋಗಗಳು ಕಲಾತ್ಮಕ ಚಿತ್ರಗಳನ್ನು ಸಾಮಾನ್ಯ ನೋಡುಗನಿಗೂ ತೆರೆದಿಟ್ಟ ದಿಟ್ಟ ಪ್ರಯತ್ನಗಳೆಂದು ನನಗನ್ನಿಸುತ್ತದೆ.

ಬಾಕ್ಸ್ ಆಫೀಸ್‌ನತ್ತಲೇ ಕಣ್ಣಿಟ್ಟಿರುವ ಕಾರಣಕ್ಕೆ ಸೂತ್ರಗಳಿಗೂ, ದ್ವಂದ್ವಾಂರ್ಥದ ಸಂಭಾಷಣೆಗಳಿಗೂ, ಐಟಂ ಹಾಡುಗಳಿಗೂ ಗಂಟುಬಿದ್ದಿರುವ ಕಮರ್ಷಿಯಲ್ ಸಿನಿಮಾ ಮತ್ತು ಅಸಂಗತವಾದುದನ್ನು ಸೆಲ್ಯುಲಾಯಿಡ್ ಮಾಧ್ಯಮದ ಮೂಲಕ ಅಭಿವ್ಯಕ್ತಿಸಲು ಹೆಣಗುವ ಕಲಾತ್ಮಕ ಚಿತ್ರಗಳ ಬೆಸುಗೆ ನಮ್ಮ ಸಂದರ್ಭದ ಅತ್ಯುತ್ತಮ ಪರ್ಯಾಯ ಸಿನಿಮಾ ಜಗತ್ತೊಂದನ್ನು ಸೃಷ್ಟಿಸಬಲ್ಲುದೆಂದು ನಾವು ಭಾವಿಸುವ ಕಾಲ ಇನ್ನು ದೂರವಿಲ್ಲ. ಯಾರು ಒಪ್ಪಲಿ ಬಿಡಲಿ ಕಳೆದ ವರ್ಷದ ಸೂಪರ್ ಹಿಟ್ ಚಿತ್ರವಾದ
ಆಪ್ತಮಿತ್ರ ಇಂಥದೊಂದು ಪ್ರಯತ್ನವೆಂದೇ ನಾನು ಭಾವಿಸುತ್ತೇನೆ. ಕಮರ್ಷಿಯಲ್ ಅಂಶಗಳಿದ್ದರೂ ಕಲಾತ್ಮಕವಾಗಿ ಚಿತ್ರಿಸಿದ್ದ ವಸ್ತು ಮೌಢ್ಯವನ್ನು ಧಿಕ್ಕರಿಸುತ್ತಲೇ ವೈಜ್ಞಾನಿಕ ಮನೋಭಾವನೆಯನ್ನು ತೆರೆದಿಟ್ಟಿತ್ತು. ಹಾಡು, ನೃತ್ಯ, ಹೊಡೆದಾಟಗಳಿದ್ದರೂ ಸಹ್ಯವಾದ ರೀತಿಯಲ್ಲಿ ಅವೆಲ್ಲವನ್ನೂ ಸಂಯೋಜಿಸಿದ್ದರಿಂದ ಗೆಲುವು ಸಾಧಿಸಿತು. ದಶಕಗಳ ಹಿಂದಿನ ನಾಗಾಭರಣರ ಅನ್ವೇಷಣೆ, ಪಿ.ಎನ್.ಶ್ರೀನಿವಾಸರ ಸ್ಪಂದನ, ವಾದಿರಾಜ್‌ರ ಪರಸಂಗದ ಗೆಂಡೆತಿಮ್ಮ ಪುಟ್ಟಣ್ಣನವರ ಬಹುತೇಕ ಚಿತ್ರಗಳು ಈ ಎರಡು ಪ್ರಬೇಧಗಳ ಹಿತಮಿತದ ಬ್ಲೆಂಡ್ ಆಗಿತ್ತೆನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು. ಕಲಾತ್ಮಕ ಚಿತ್ರಗಳ ನಿರ್ದೇಶಕರಷ್ಟೇ ಭಿನ್ನ ಪ್ರಯತ್ನಗಳನ್ನು ರವಿಚಂದ್ರನ್‌ರಂಥವರೂ ಮಾಡಿದ್ದಾರೆನ್ನುವುದನ್ನೂ ನಾವು ಮರೆಯಬಾರದು. ಹಾಗೇ ಇತ್ತೀಚೆಗೆ ಕವಿತಾ ಲಂಕೇಶರ ಪ್ರೀತಿ, ಪ್ರೇಮ, ಪ್ರಣಯ ಇಂದ್ರಜಿತ್ ಅವರ ಒಂದೆರಡು ಚಿತ್ರಗಳು, ವಿಮರ್ಶಕ ವಲಯ ತುಂಬ ಹೊಗಳಿ ಅಟ್ಟಕ್ಕಿಟ್ಟಿದ್ದ ಸಯನೈಡ್, ಅಗ್ನಿ ಶ್ರೀಧರ್ ಸಾರಥ್ಯದ ಆ ದಿನಗಳು ಇಂಥ ಪ್ರಯತ್ನಗಳೇ. ಕಲಾತ್ಮಕ ದೃಷ್ಟಿಕೋನವನ್ನು ಮೀರಿ ಕಮರ್ಷಿಯಲ್ ಸ್ಪರ್ಷಕೊಡ ಹೋದ ಶಂಕರ ನಾಗ್, ನಾಗತಿಹಳ್ಳಿ, ನಾಗಾಭರಣ ಮುಂತಾದವರು ಗೆದ್ದದ್ದಕ್ಕಿಂತ ಸೋತದ್ದೇ ಹೆಚ್ಚು. ಯಶಸ್ಸು ಎನ್ನುವುದನ್ನು ಪ್ರಶಸ್ತಿಗಳ ಮೂಲಕವೇ ಅಳೆಯಬೇಕಿರುವ ಕಾಸರವಳ್ಳಿಯವರ ಪ್ರಯತ್ನಗಳು ಸಾಮಾನ್ಯ ಪ್ರೇಕ್ಷಕನಿಗೆ ದಕ್ಕಿದೆಯೇ ಎನ್ನುವುದು ಇಲ್ಲಿ ಮುಖ್ಯ ಪ್ರಶ್ನೆ. ದ್ವೀಪ ಮತ್ತು ನಾಯಿನೆರಳು ಚಿತ್ರಗಳು ಓಟ ಮತ್ತು ವಸ್ತು ನಿರ್ವಹಣೆಯ ಅನನ್ಯ ರೀತಿಯಿಂದ ಎಲ್ಲರಿಗೂ ತಲುಪವಂತಿದ್ದರೂ ಆ ಚಿತ್ರಗಳು ಸಣ್ಣ ಪುಟ್ಟ ಊರುಗಳಲ್ಲಿ ಪ್ರದರ್ಶನವಾಗದ ಕಾರಣ ಬಾಕ್ಸ್ ಆಫೀಸ್ ಯಶಸ್ಸಿನಿಂದ ವಂಚಿತವಾದುವು.

ಹಿಂದಿ ಚಲನಚಿತ್ರರಂಗದಲ್ಲಿ ಇಂಥ ಪ್ರಯತ್ನಗಳನ್ನು ಬ್ರಿಡ್ಜ್ ಸಿನಿಮಾಗಳೆಂದು ಗುರ್ತಿಸುತ್ತಾರೆ. ಸಂಜೀವ್ ಕುಮಾರ್, ನಾಸಿರುದ್ದೀನ್ ಷಾ, ಫರೂಕ್ ಶೇಖ್, ಉತ್ಪಲ್ ದತ್ ತಕ್ಷಣಕ್ಕೆ ನೆನಪಾಗುತ್ತಾರೆ. ದುಡ್ಡು ಚೆಲ್ಲದೇ, ಸ್ಟಾರ್ ನೆರವಿಲ್ಲದೇ ನಗುವಿನ ಬುಗ್ಗೆ ಎಬ್ಬಿಸಿದ ಕಾರಣಕ್ಕೇ ಬಾಕ್ಸ್ ಆಫೀಸನ್ನು ಚಿಂದಿ ಉಡಾಯಿಸಿದ ಸಾಯಿ ಪರಾಂಜಪೆಯವರ ಚಿತ್ರಗಳು ಸರ್ವಕಾಲದ ಉದಾಹರಣೆಗಳಾಗಿ ನಿಲ್ಲುತ್ತವೆ. ಕನ್ನಡದ ಮಟ್ಟಿಗೆ ಹೇಳುವುದಾದರೆ ಅನಂತನಾಗ್, ಫಣಿ ರಾಮಚಂದ್ರ, ಮೋಹನ್, ಕೋಡ್ಲು ರಾಮಕೃಷ್ಣ ಇಂಥ ಪ್ರಯತ್ನಕ್ಕೆ ಈಗಾಗಲೇ ಕೈ ಇಟ್ಟು ಸಮರ್ಥರೆನ್ನಿಸಿಕೊಂಡಿದ್ದರೆ, ತಮ್ಮ ಚಿತ್ರಗಳಲ್ಲಿ ಕಲಾತ್ಮಕ ಅಂಶಗಳನ್ನೇ ಬಳಸುತ್ತೇವೆಂದು ಹೇಳಿಕೊಂಡಿದ್ದ ಕಾರಣಕ್ಕೇ ಸೋತು ಹೋದ ಪಿ.ಶೇಷಾದ್ರಿ, ಟಿ.ಎನ್.ಸೀತಾರಾಂ, ಕಟ್ಟೆ ರಾಮಚಂದ್ರ, ಜಗ್ಗೇಶ್(ಮೇಕಪ್) ಮೊದಲಾದವರ ನೆನಪು ಬಾಧಿಸತೊಡಗುತ್ತದೆ. ಲಂಕೇಶ್, ಕಾರ್ನಾಡ್, ಕಾರಂತ್ ಹೀಗೆ ಕಾಕ್‌ಟೇಲ್ ಮೂಲಕ ಗೆದ್ದವರೇ! ಮೊನ್ನೆ ಮೊನ್ನೆ ನೆಲಕಚ್ಚಿದ
ಕಾನೂರ ಹೆಗ್ಗಡತಿ ಕೇವಲ ಕಲಾತ್ಮಕ ದೃಷ್ಟಿಕೋನವೊಂದೇ ಚಿತ್ರವನ್ನು ಗೆಲ್ಲಿಸಲಾರದೆಂಬ ಸತ್ಯಕ್ಕೆ ದೊರೆತ ಮತ್ತೊಂದು ಋಜುವಾತು. ಅವಸ್ಥೆ ಬ್ಯಾನ್ ಆಗದೇ ಇದ್ದಿದ್ದರೆ ಚಿತ್ರ ರಂಗ ಕಂಡರಿಯದ ಮತ್ತೊಂದು ಮೈಲಿಕಲ್ಲನ್ನು ಅದು ನೆಡುತ್ತಿತ್ತು. ಕೋಟಿಗಟ್ಟಲೇ ಸುರಿದು, ದೇಶ ವಿದೇಶಗಳಲ್ಲಿ ಹಾಡು, ಡ್ಯಾನ್ಸು ಚಿತ್ರೀಕರಿಸಿದ ಅಸಂಖ್ಯಾತ ಮಸಾಲೆ ಚಿತ್ರಗಳು ದಾಖಲೆಗೂ ಇಲ್ಲದಂತೆ ಕೊಚ್ಚಿಹೋಗುತ್ತಿರುವಾಗ, ಕಲಾತ್ಮಕ ಅಂಶಗಳ ಜೊತೆ ಜೊತೆಗೆ ಮಾನವೀಯ ನಿಲುವುಗಳ ಪರ ನಿಲ್ಲುವ ಮತ್ತು ನೋಡುಗನಲ್ಲಿ ಇದು ತನ್ನದೇ ಅನುಭವ ಎಂಬ ಮತ್ತೊಂದು ಭ್ರಮೆ ಹುಟ್ಟಿಸುವ ಹೊಸ ಬಗೆಯ ಪರ್ಯಾಯ ಚಿತ್ರಗಳೇ ಇಂದು ನಮಗೆ ಬೇಕಿರುವ ಜರೂರು ಅಗತ್ಯವಾಗಿದೆ. ಇಂಥ ವಸ್ತುಗಳನ್ನು ಅತ್ಯಂತ ಸುಲಭದಲ್ಲಿ ನಿರ್ವಹಿಸಬಹುದಾಗಿದ್ದ ನಮ್ಮ ದೂರದರ್ಶನವಾಹಿನಿಗಳು ಗೋಳುಕರೆಯ, ಅವಾಸ್ತವದ, ಅನೈತಿಕ ಸಂಬಂಧಗಳನ್ನು ಎತ್ತಿಹಿಡಿಯುವ ಕಥಾವಸ್ತುಗಳಲ್ಲೇ ತಮ್ಮ ಕೈವಲ್ಯವನ್ನು ದಾಟುತ್ತಿರುವ ಈ ಹೊತ್ತು, ಪರ್ಯಾಯ ಸಿನಿಮಾಗಳಿಗೆ ತೆರೆದಿಟ್ಟ ಆಕಾಶದಂತಿದೆ. ಆದರೇನು ಮಾಡುವುದು? ನಮಗೆ ಹೊಳೆಯುವುದು ತಾರೆಯಾದರೂ, ದಕ್ಕುವುದು ಮಾತ್ರ ಆಕಾಶ ತಾನೆ?

ಇನ್ನು ನಮ್ಮ ಚಿತ್ರರಂಗವು ಪದೇ ಪದೇ ಬೊಬ್ಬೆ ಇಡುವ ಕತೆಗಳಿಲ್ಲವೆಂಬ ಅದೇ ಹಳೆಯ ರಾಗಕ್ಕೆ ಮದ್ದು ಕಾಸರವಳ್ಳಿಯವರ ದ್ವೀಪ, ನಾಯಿನೆರಳು, ತಾಯಿ ಸಾಹೇಬ, ಮುಂತಾದ ಕಾದಂಬರಿ ಆಧಾರಿತ ಚಿತ್ರಗಳು ಕೊಡದೇ ಇರುವುದು ಈ ಚಿತ್ರಗಳು ಗಾಂಧಿನಗರವು ವಿಂಗಡಿಸಿರುವ ಬಿ ಮತ್ತು ಸಿ ಕೇಂದ್ರಗಳಲ್ಲಿ ಹಣ ಗಳಿಸದೇ ಇರುವುದೇ ಆಗಿದೆ. ಕನ್ನಡದಲ್ಲಿ ಮೊದಲೇ ಬಂದಿದ್ದ ಲಗ್ನಪತ್ರಿಕೆ
- ಹಂ ಆಪ್ಕೆ ಹೇ ಕೌನ್ ಆದರೆ, ಮಲ್ಲಮ್ಮನ ಪವಾಡ ಬೇಟಾ ಆಗಿ ಹಿಂದಿಯಲ್ಲಿ ಭರ್ಜರಿ ಯಶಸ್ವಿಯಾಗುತ್ತವೆ. ಕನ್ನಡದ ಕಾದಂಬರಿಗಳು ಸಿನಿಮಾ ಆಗದೇ ಇರುವುದಕ್ಕೆ ನಮ್ಮ ಕಾದಂಬರಿಕಾರರೂ ಕಾರಣರಾಗಿದ್ದಾರೆ. ತೇಜಸ್ವಿ ತಬರನ ಕತೆ ಮತ್ತು ಕುಬಿ ಇಯಾಲದ ನಂತರ ಯಾರಿಗೂ ತಮ್ಮ ಕತೆಗಳ ಹಕ್ಕು ಕೊಟ್ಟ ಬಗ್ಗೆ ಸುದ್ದಿ ಬರಲೇ ಇಲ್ಲ. ಜುಗಾರಿ ಕ್ರಾಸ್ ನೆನೆಗುದಿಗೆ ಬಿದ್ದುದು ಎದ್ದು ಬಂದ ಸುದ್ದಿಯೂ ಇಲ್ಲ. ಶಾಂತಿನಾಥ ದೇಸಾಯಿ ಅವರ ಬೀಜ ತೇಜಸ್ವಿಯವರ ಜುಗಾರಿ ಕ್ರಾಸ್ ಮತ್ತು ಚಿದಂಬರ ರಹಸ್ಯ, ಭೈರಪ್ಪನವರ ಬಹುತೇಕ ಎಲ್ಲ ಕಾದಂಬರಿಗಳು, ಅ.ನ.ಕೃ, ತ.ರಾ.ಸು, ಟಿ.ಕೆ.ರಾಮರಾವ್, ಪಟ್ಟಿ ಮಾಡ ಹೋದರೆ ಉದ್ದೋ ಉದ್ದ ಬೆಳೆಯುವ ಅದೆಷ್ಟೆಷ್ಟೋ ಸಣ್ಣ ಕತೆಗಳು, ನಮ್ಮ ಚಿತ್ರರಂಗದವರ ಕಣ್ಣಿಗೆ ಬಿದ್ದ ಹಾಗೆ ಕಾಣುವುದಿಲ್ಲ. ಯೋಗರಾಜ ಭಟ್ಟ, ಜಯಂತ ಕಾಯ್ಕಿಣಿ ಬರೆದ ಹೊಸ ಅಧ್ಯಾಯ ಕೂಡ ಆಗಲೇ ಮಸಕಾಗತೊಡಗಿದೆ.

ಏಕೆ? ಕನ್ನಡದ ಪ್ರೇಕ್ಷಕ ಹೊಸ ಸಂವೇದನೆಗಳಗೆ ಸ್ಪಂದಿಸದ ಜಡತ್ವದಲ್ಲಿದ್ದಾನೆಯೇ? ಪಕ್ಕದ ತಮಿಳು, ತೆಲುಗುಗಳಲ್ಲಿ ಹೊಸ ಹೊಸ ನಾಯಕರು, ಹೊಸ ಹೊಸ ತಂತ್ರಜ್ಞರು, ತಾಂತ್ರಿಕ ಪ್ರಯೋಗಗಳು ಯಶಸ್ಸು ಸಾಧಿಸುತ್ತಿದ್ದರೆ, ನಾವಿಲ್ಲಿ ಇನ್ನೂ ೪೦+ ನಾಯಕರೇ ಕಾಲೇಜಿಗೆ ಹೋಗುವುದನ್ನು, ಹೊಟ್ಟೆ ಕುಣಿಸಿಕೊಂಡು ಬಡಿದಾಡುವುದನ್ನು ಸಹಿಸಿಕೊಂಡಿದ್ದೇವೆ. ಅಮಿತಾಭ್ ತಮ್ಮ ವಯಸ್ಸಿಗೆ ತಕ್ಕ, ಹಾಗೇ ಯಾವ ಇಮೇಜಿಗೂ ತಲೆಕೆಡಿಸಿಕೊಳ್ಳದೇ ಹೊಸ ಹೊಸ ಯತ್ನಗಳಿಗೆ ಕೈ ಹಾಕುತ್ತಿದ್ದರೆ ನಾವಿನ್ನೂ ಮೆಲೋಡ್ರಾಮಾಗಳನ್ನು, ಕೂಡು ಕುಟುಂಬದ ಸವೆದು ಹೋದ ಕೊಂಡಿಗಳನ್ನೇ ಇನ್ನೂ ನೆಚ್ಚಿಕೊಂಡಿದ್ದೇವೆ.

ಇದಕ್ಕೆ ಪ್ರಾಯಶಃ ನಮ್ಮ ಸೀಮಿತ ಮಾರುಕಟ್ಟೆಯೇ ಕಾರಣ. ತಮಿಳು, ತೆಲುಗು, ಹಿಂದಿಗಳಿಗಾದರೆ ವಿಶ್ವಾದ್ಯಂತ ಮಾರುಕಟ್ಟೆ ಇದ್ದರೆ, ನಮ್ಮ ಚಿತ್ರಗಳಿಗೆ ಕೆಂಪೇಗೌಡ ರಸ್ತೆಯಲ್ಲಿಯೇ ಚಿತ್ರಮಂದಿರಗಳ ಕೊರತೆ ಇದೆ. ವಾರಕ್ಕೆರಡರಂತೆ ಬಿಡುಗಡೆಯಾಗುವ ಚಿತ್ರಗಳು ಗೆಲ್ಲುವುದಿರಲಿ, ಪೈಪೋಟಿ ಎದುರಿಸಿ ಉಳಿದುಕೊಳ್ಳುವುದೇ ದುರ್ಭರವಾಗಿದೆ. ಜೊತೆಗೇ ಈಗಾಗಲೇ ಸ್ಥಾಪಿತ ಹಿತಾಸಕ್ತಿಗಳ ಕೊನೆಮೊದಲಿಲ್ಲದ ದುಂಡಾವರ್ತನೆಯೂ ಹೊಸಬರ ಉತ್ಸಾಹವನ್ನು ಆಪೋಷನ ತೆಗೆದುಕೊಂಡ ಹಲವು ನಿದರ್ಶನಗಳು ನಮ್ಮ ಕಣ್ಣ ಮುಂದೆ ಇವೆ. ರವಿಚಂದ್ರನ್ ಕ್ರೇಜಿತನವೆಲ್ಲ ಕಳೆದುಕೊಂಡ ಮಾಜಿ ಯೋಧನಂತೆ ಕಾಣುತ್ತಿದ್ದರೆ, ಇನ್ನೂ ನಾವಿದ್ದೇವೆ ಎನ್ನುವ ವ೦iiಸ್ಸು ಏರಿದ ನಟರುಗಳು ಚಿರಂಜೀವಿಯನ್ನೋ, ರಜನಿ, ಕಮಲ್‌ರನ್ನೋ ಉದಾಹರಿಸಿ ತಮ್ಮ ಇರುವಿಕೆಗೆ ಕಾರಣ ಕೂಡ ಕೊಡುತ್ತಾರೆ. ಒಂದುಕಾಲದಲ್ಲಿ ಚಲನಚಿತ್ರ ಸಂಗೀತಕ್ಕೆ ಹೊಸ ವ್ಯಾಖ್ಯಾನ ಬರೆದ ಹಂಸಲೇಖರಂಥವರು ಇವತ್ತಿನ ಸ್ಪರ್ಧೆಗೆ ಬೆದರಿ ಅದೆಲ್ಲಿ ಅವಿತಿದ್ದಾರೋ, ತಿಳಿದವರೇ ಹೇಳಬೇಕು.

ಕನ್ನಡದಲ್ಲೂ ತಮ್ಮ ಪ್ರಯತ್ನಗಳನ್ನು ದಾಖಲಿಸಿದ ಬಾಲುಮಹೇಂದ್ರ, ಮಣಿರತ್ನಂ, ಸಿಂಗೀತಂ, ದಾಸರಿಯಂಥವರು ಈ ನೆಲದ ಸಾಂಸ್ಕೃತಿಕ ವೈಭವಕ್ಕೆ ಮಾರುಹೋಗಿದ್ದರೆ, ನಮ್ಮವರೇ ಕೆಲವರು ಈ ನೆಲ, ಜಲ, ಭಾಷೆ, ಸಂಪತ್ತುಗಳನ್ನು ತಮ್ಮ ಲಾಭಕ್ಕೆ ಬಳಸಿಕೊಂಡೂ ನಮ್ಮನ್ನು ಕಡೆಗಣಿಸುತ್ತಲೇ ಇರುವ ನಿತ್ಯಸತ್ಯವನ್ನು ಚರಿತ್ರೆಯ ಉದ್ದಕ್ಕೂ ಮನಗಾಣುತ್ತಲೇ ಬಂದಿದ್ದೇವೆ. ನಮ್ಮ ಚರಿತ್ರೆಯ ಖಜಾನೆ ಬರಿದಲ್ಲವೆಂಬುದನ್ನು ಮತ್ತೆ ಮತ್ತೆ ನೆನಪಿಸುವ ಹಾಗೆ ನಮ್ಮ ಎಫ್.ಎಂ ರೇಡಿಯೋಗಳು, ದೂರದರ್ಶನದ ವಾಹಿನಿಗಳಲ್ಲಿ ದಿನವಹಿ ಬಿತ್ತರವಾಗುತ್ತಲೇ ಇರುವ ಚಲನ ಚಿತ್ರಗಳೂ ಸಾಕ್ಷಿ ಹೇಳುತ್ತಲೇ ಇವೆ. ಆದರೂ
ರಣಧೀರ ಕಂಠೀರವ ಅಮರಶಿಲ್ಪಿ ಜಕಣಾಚಾರಿ ಗೋವಾದಲ್ಲಿ ಸಿ.ಐ.ಡಿ.೯೯೯, ಬಂಗಾರದ ಮನುಷ್ಯ, ನಾಗರಹಾವು ಮುಂತಾದ ಚಿತ್ರಗಳು ಎಬ್ಬಿಸಿದ ಅಲೆ ಮತ್ತು ಆ ಕಾಲದಲ್ಲಿ ಅವುಗಳ ತಯಾರಿಯ ಹಿಂದಿದ್ದ ಮನಸ್ಸು ಅರ್ಥವಾಗದಿರುವುದು ನಮ್ಮ ಈ ಕಾಲದ ದೌರ್ಬಲ್ಯ ಎಂದೇ ವ್ಯಾಖ್ಯಾನಿಸಬೇಕಾಗುತ್ತದೆ. ಇಂಥ ಪ್ರಯತ್ನಗಳಲ್ಲಿ ಗೆಲ್ಲುವುದು ಛಲ ಎಂಬುದೊಂದೇ. ಛಲವೇ ಇರದ ಮೇಲೆ ಅಥವ ಪರ್ಯಾಯ ಉಪಾಯಗಳನ್ನು ಆಲೋಚಿಸದೇ ಹೋದರೆ ನಷ್ಟವಾಗುವುದು ನಮಗೇ ವಿನಾ ಬೇರೆಯವರಿಗಲ್ಲ.

ನಮ್ಮ ನಡುವೆ ಅತ್ಯುತ್ತಮ ಎನ್ನಬಹುದಾದ ತಂತ್ರಜ್ಞರಿದ್ದಾರೆ. ಬರಹಗಾರರಿದ್ದಾರೆ. ಉದ್ದಿಮೆಯ ಆಳ, ಅಗಲಗಳನ್ನು ಬಲ್ಲ ನಿಷ್ಣಾತ ಮಂದಿಗೇನೂ ಕೊರತೆ ಇಲ್ಲ. ಆದರೂ ಎಲ್ಲೋ ಒಂದು ಕಡೆ ಕಾಡುವ ಆತಂಕ ಮತ್ತು ಸ್ವಸಾಮರ್ಥ್ಯದ ಮೇಲಣ ಅಪನಂಬುಗೆ ಹೊಸ ಸಾಹಸಗಳಿಂದ ಇವರನ್ನೆಲ್ಲ ವಿಮುಖರನ್ನಾಗಿಸಿದೆ. ಮಾರುಕಟ್ಟೆಯ ಏರಿಳಿತಗಳು ಮತ್ತು ಯಾವತ್ತಿಗೂ ತನಗೇನು ಬೇಕೆಂದು ಬಾಯಿ ಬಿಟ್ಟು ಹೇಳದ ಪ್ರೇಕ್ಷಕ ಮಹಾಪ್ರಭುವಿನ ಮರ್ಜಿ ಕೂಡ ಇವರ ಎಣಿಕೆಗೆ ಸಿಕ್ಕದೇ ಗೊಂದಲಕ್ಕೆ ದಬ್ಬಿದೆ.

ನಮಗಿಂದು ಬೇಕಿರುವುದು ಅಸಂಗತತೆಯ ಮೂಲಕ ಪ್ರದರ್ಶಿಸಬಹುದಾದ ಬೌದ್ಧಿಕ ಕಸರತ್ತಲ್ಲ. ಅಥವಾ ತಮ್ಮ ತಿಕ್ಕಲುಗಳನ್ನು ಅನ್ಯರ ಮೇಲೂ ಹೊರಿಸಿ ಮತ್ತೊಂದು ಜ್ವರ ಸೃಷ್ಟಿಸುವ ಪಾಷಾಂಡಿತನವೂ ಅಲ್ಲ. ನಮ್ಮ ಸಮಸ್ಯೆಗಳನ್ನು ಪರಿಭಾವಿಸುತ್ತಲೇ ಅದಕ್ಕೊಂದು ಸೈದ್ಧಾಂತಿಕ ಹಿನ್ನೆಲೆಯ ಸ್ಪಷ್ಟ, ನಿರ್ದಿಷ್ಟ ನಿಲುವು. ಅದು ಸಾಕರಗೊಳ್ಳಬೇಕೆಂದರೆ ಅದು ಪರ್ಯಾಯ ಸಿನಿಮಾ ಎಂಬ ಮತ್ತೊಂದು ಮಜಲಿನಿಂದಲೇ ಸಾಧ್ಯ. ಈಗಾಗಲೇ ಯಶಸ್ಸು ಗಳಿಸಿರುವ ಈ ಮಾದರಿಯನ್ನು ಆಧುನಿಕ ತಂತ್ರಜ್ಞಾನ ಮತ್ತು ಸುಧಾರಿತ ಮನಸ್ಸುಗಳ ಮೂಲಕ ಮತ್ತೊಮ್ಮೆ ಪ್ರಯತ್ನಿಸಬೇಕಿದೆ. ಅದಕ್ಕೆ ತಕ್ಕ ಭೂಮಿಕೆಯನ್ನು ಚಲನಚಿತ್ರ ರಂಗ ಮತ್ತು ಪ್ರೇಕ್ಷಕ ಸಮುದಾಯ ತಮ್ಮ ಖಚಿತ ಒಳನೋಟ ಮತ್ತು ಆಶಾದಾಯಕ ಭರವಸೆಗಳ ಮೂಲಕ ಈಗಾಗಲೇ ಇಂಥ ಚಿತ್ರಗಳನ್ನು ಗೆಲ್ಲಿಸುವ ಮೂಲಕ ಧೃಢಪಡಿಸಿವೆ.

ಚಲಿಸುತ್ತಲೇ ಇರುವ ಇಮೇಜುಗಳ ಮೂಲಕ ಹಾಗೂ ಅದಕ್ಕೆ ಪೂರಕವಾದ ಸಂಗೀತದ ಮೂಲಕ ನಮ್ಮ ಮೈ ಮನಸ್ಸು ಹಾಗೂ ಕಣ್ಣುಗಳು ಈ ಹಿಂದೆ ಕಂಡುದನ್ನೇ ಕಲಾಕೃತಿಯಾಗಿ ಅನುಭವಿಸುವಂತೆ ಮಾಡುವ ಪರಮ ಶಕ್ತಿ ಸಿನಿಮಾಕ್ಕಿದೆ. ಮೂರ್ತದಲ್ಲೇ ಅಮೂರ್ತವನ್ನು ಪರಿಭಾವಿಸುವಂತೆ ಮಾಡುವ ಈ ಮಾಯಾಬಜಾರು, ತಾಂತ್ರಿಕವಾಗಿ ಹಾಗೂ ತಂತ್ರಪೂರ್ವಕವಾಗಿ ಪರಿಪೂರ್ಣ ಶ್ರದ್ಧೆ ಮತ್ತು ಗಂಭೀರ ಪ್ರಯತ್ನಗಳನ್ನಷ್ಟೇ ಮುಂದಿನ ಕಾಲಕ್ಕೆ ಒಯ್ಯುತ್ತದೆ. ಸಿನಿಮಾ ರಸಗ್ರಹಣ ಶಿಬಿರಗಳಲ್ಲಿ ತೋರಿಸುವ ಚಿತ್ರಗಳೆಲ್ಲವೂ ಬಹಳ ಹಳೆಯ ಕಾಲದವಾಗಿದ್ದರೂ ಮತ್ತು ತಾಂತ್ರಿಕವಾಗಿ ತೀರ ದುರ್ಬಲವಾಗಿದ್ದರೂ ಅವು ವರ್ತಮಾನದ ನೋಡುಗನಲ್ಲಿ ಉಂಟುಮಾಡುವ ಪರಿಣಾಮಗಳು ಉಚ್ಛಮಟ್ಟದ್ದೇ ಆಗಿರುತ್ತವೆ. ಎಷ್ಟೆಲ್ಲ ಪ್ರಯತ್ನಗಳ ಮೂಲಕ ಚಿತ್ರೀಕರಿಸಿ, ಸಂಸ್ಕರಿಸಿ, ಮುಗಿಸಿ, ಕಡೆಗೂ ಆ ಚಿತ್ರ ಪ್ರೇಕ್ಷಕನಿಗೆ ತಲುಪದೇ ಇದ್ದರೆ, ಅಂಥ ಪ್ರಯತ್ನಗಳು ವ್ಯರ್ಥವಾಗುತ್ತವೆ. ಪರ್ಯಾಯ ಸಿನಿಮಾದ ಮಾತು ಬಂದಾಗೆಲ್ಲ ಇನ್ನೂ ನಾವು ಸಂಸ್ಕಾರ, ಪಲ್ಲವಿ, ಎಲ್ಲಿಂದಲೋ ಬಂದವರು, ಆಕ್ರಮಣ, ಗ್ರಹಣಗಳನ್ನೇ ಉದಾಹರಿಸುತ್ತೇವೆಯೇ ವಿನಾ ನಂತರದ ಈ ದೀರ್ಘ ವರ್ಷಗಳ ಪ್ರಯತ್ನಗಳನ್ನು ಕನಿಷ್ಠ ಹೆಸರಿಸುವುದೂ ಇಲ್ಲ. ಕೇಸರಿ ಹರವೂ, ಫಣಿ ರಾಮಚಂದ್ರ, ಪಿ.ಶೇಷಾದ್ರಿ, ರಮೇಶ್ ಅರವಿಂದ್, ಮುಂತಾದವರ ಪ್ರಯತ್ನಗಳು ಏಕೋ ದಾಖಲಾಗಲೇ ಇಲ್ಲ. ಕಂಬಾರ್, ನಾಗಾಭರಣ, ಬರಗೂರು ಇಲ್ಲಿದ್ದೂ ಇಲ್ಲದವರಂತೆ ಆಗಿರುವುದೂ ಪರಿಸ್ಥಿತಿಯ ವ್ಯಂಗ್ಯವೆಂದೇ ಭಾವಿಸಬೇಕಾಗುತ್ತದೆ. ಸಿನಿಮಾ ಬರಿಯ ಮಾರಾಟದ ಸರಕಲ್ಲ. ಅದೊಂದು ಸಾಂಸ್ಕೃತಿಕ ಸಂಗತಿ. ಅದರ ಅರಿವಿರದೇ ಇದನ್ನೊಂದು ಹಣಮಾಡುವ ಗಣಿ ಎಂದಂದುಕೊಂಡಿರುವವರಿಂದ ಹೆಚ್ಚೇನನ್ನೂ ನಿರೀಕ್ಷಿಸುವ ಹಾಗಿಲ್ಲ.

ಇಂಥ ನಿರಾಸೆಗಳ ನಡುವೆಯೂ ಪರ್ಯಾಯ ಸಿನಿಮಾ ಅನ್ನುವುದು ಸಿದ್ಧಾಂತಗಳ ಜೊತೆಗೇ ಸಾಗುವ ಮತ್ತು ಕಮರ್ಷಿಯಲ್ ಸಿನಿಮಾಗಳ ಘಾತಗಳಿಂದ ಪ್ರೇಕ್ಷಕನನ್ನು ಪಾರುಮಾಡುತ್ತಿರುವ ಉತ್ತಮ ಪ್ರಯತ್ನವಾಗಿದೆ. ಆದರೂ ಒಂದು ಚಿತ್ರ ಯಾಕೆ ಯಶಸ್ವಿಯಾಯಿತು ಎಂದು ಅರಿಯುವ ಪ್ರಯತ್ನ ಮಾಡದೇ, ಇಮೇಜುಗಳಲ್ಲೇ ಮುಳುಗಿಹೋಗುವ ಸಿನಿಕತನ ಬಿಡದ ಹೊರತೂ ಈ ಬಗೆಯ ಚಿತ್ರಗಳು ಯಶಸ್ಸಿನಿಂದ ದೂರವೇ ಉಳಿಯುತ್ತವೆ. ಒಬ್ಬೊಬ್ಬ ನಿರ್ದೇಶಕನದೂ ಒಂದೊಂದು ಬಗೆಯ ಕ್ರಿಯಾಶೀಲ ಮನಸ್ಸಾದರೂ ಅವೆಲ್ಲವುಗಳನ್ನೂ ಒಟ್ಟಿಗೆ ಸೇರಿಸಿ, ಹೊಸ ಸಾಧ್ಯತೆಗಳ ಕುರಿತು ಆಲೋಚಿಸದಿದ್ದರೆ, ಬರಿಯ ರಸಗ್ರಹಣ ಶಿಬಿರಗಳಷ್ಟೇ ಮುಂದಿನ ಪೀಳಿಗೆಗೆ ಉಳಿಯುತ್ತವೇ ವಿನಾ ಹೊಸ ಚಿತ್ರಗಳ ಪಟ್ಟಿ ಸೇರುವುದೇ ಇಲ್ಲ. ಅದಕ್ಕಾಗಿ ಸಿನಿಮಾ ತೆಗೆಯುವ ಪ್ರಕ್ರಿಯೆಯ ಹಲವು ಹಂತಗಳಲ್ಲಿ ಯುವಕರನ್ನು, ಅವರ ತವಕ, ತಲ್ಲಣಗಳನ್ನು, ಅವರು ಸಮಸ್ಯೆಯೊಂದನ್ನು ಅನುಸಂಧಾನಿಸುವ ಬಗೆಯನ್ನು ತಿಳಿಯುತ್ತಲೇ ಮುಂದಿನ ಹಂತಗಳಿಗೆ ಹೋಗಬೇಕಾಗುತ್ತದೆ. ಸಿದ್ಧ ಸೂತ್ರಗಳನ್ನು ಮುರಿಯದ ಹೊರತೂ ಹೊಸ ಕನಸುಗಳನ್ನು ನೇಯಲಾಗುವುದಿಲ್ಲವೆಂಬ ಸತ್ಯ ನಮ್ಮ ಚಿತ್ರನಿರ್ಮಾತೃಗಳಿಗೆ ಹೊಳೆಯಬೇಕು. ಸಿನಿಮಾದ ತುಂಬ ಬರಿಯ ಫ್ರೇಂಗಳನ್ನು ತುಂಬಿ ಅದನ್ನೊಂದು ರಮ್ಯ ಲೋಕವನ್ನಾಗಿಸಿದ ಮಾತ್ರಕ್ಕೇ ಅದನ್ನು ನೋಡುವ, ಗ್ರಹಿಸುವ, ಅನುಭವಿಸುವ ಮನಸ್ಸನ್ನು ಗೆಲ್ಲಲಾಗುವುದಿಲ್ಲ.

ಸಿನಿಮಾ ಸಾಂಸ್ಕೃತಿಕ ಚಟುವಟಿಕೆಯಾಗಿದ್ದರೂ, ಅದು ಉಳಿದು ಬೆಳೆಯಬೇಕಾದರೆ ನಿರಂತರ ಆದಾಯದ ಮೂಲವೊಂದನ್ನು ತನ್ನೊಟ್ಟಿಗೆ ಇಟ್ಟುಕೊಂಡಿರಲೇ ಬೇಕಾಗುತ್ತದೆ. ನಿರ್ದೇಶಕನನ್ನು ನಂಬಿ ಹಣ ಸುರಿಯುವ ನಿರ್ಮಾಪಕ ಮತ್ತೊಂದು ಚಿತ್ರಕ್ಕೆ ಬಂಡವಾಳ ಹೂಡಬೇಕೆಂದರೆ ಅವನು ಮೊದಲು ನಿರ್ಮಿಸಿದ ಚಿತ್ರ ಕನಿಷ್ಠ ಲಾಭವನ್ನಾದರೂ ಮಾಡಿರಲೇ ಬೇಕು. ಮಾರುಕಟ್ಟೆಯ ಸರಳ ನಿಯಮಗಳನ್ನು ಅರಿಯದೇ ಬರಿದೇ ಉತ್ಸಾಹದಿಂದ ಬಂದ ಅದೆಷ್ಟೋ ಜನರನ್ನು ಈ ಉದ್ದಿಮೆ ನಾಮಾವಶೇಷ ಮಾಡಿದೆ. ಸೂತ್ರಗಳಿಗೆ ಗಂಟು ಬೀಳದೆ, ಆದರೆ ಸದಾ ಹೊಸತನ್ನು ಹುಡುಕುತ್ತಲೇ ಇರುವ ಮನಸ್ಸುಗಳಿಗೆ ಹಿತವೆನ್ನಿಸುವಂತೆ, ನೋಡಿದರೆ ಅಹುದು ಅಹುದು ಎನ್ನಿಸುವಂತೆ ಚಿತ್ರವೊಂದು ನೋಡುಗನ ಮನಸ್ಸಿನಲ್ಲಿ ಪರಿಣಾಮ ಬೀರಿದರೆ ಅದು ಸಾರ್ಥಕದ ಕೆಲಸ. ಆ ಕೆಲಸ ಹಿಂದೆ ನಡೆದಿದೆ. ಈಗಲೂ ನಡೆಯುತ್ತಿದೆ. ಮುಂದಿನ ದಿನಗಳಿಗೆ ಇಂದಿನ ಮತ್ತು ನಿನ್ನೆಗಳ ಅನುಭವ ಬರಿಯ ಪಾಠವಷ್ಟೇ ಅಲ್ಲ, ಅವು ಆ ಪ್ರಯತ್ನಗಳ ಹಿಂದಿನ ಚೇತನವೂ ಆಗಿರುತ್ತವೆ.

ಪುನರಾವರ್ತನೆ ಸೃಜನಶೀಲತೆಯನ್ನು ಕೊಲ್ಲುತ್ತದೆ. ಒಂದೇ ಸೂತ್ರಕ್ಕೆ ಅಂಟಿಕೊಂಡ ಕಾರಣಕ್ಕೇ ನಮ್ಮ ಕಮರ್ಷಿಯಲ್ ಚಿತ್ರರಂಗ ಏನೆಲ್ಲ ಸಾಧ್ಯತೆಗಳಿದ್ದರೂ, ಇದ್ದಲ್ಲೇ ಬಿದ್ದು ನರಳುತ್ತಿದೆ. ಮಾದರಿಗಳನ್ನಿಟ್ಟುಕೊಳ್ಳದೇ ಕನಸುಗಳನ್ನು ಮೂರ್ತೀಕರಿಸುವುದು ಕೇವಲ ಚಲನಚಿತ್ರಗಳ ನಿರ್ಮಾಣದಲ್ಲಿ ಮಾತ್ರ ಸಾಧ್ಯವಿರುವ ಸಂಗತಿ. ಪ್ರಯೋಗಶೀಲತೆಯ ಹುರುಪು ಮತ್ತು ಅಂಥ ಪ್ರಯತ್ನಗಳ ಮೇಲಿನ ಗಂಭೀರ ಚರ್ಚೆ ಇದನ್ನು ಸಾಧ್ಯವಾಗಿಸಬಲ್ಲುದು. ಅಭಿರುಚಿಯ ವಿಸ್ತರಣೆ, ಒಂದೇ ಬಗೆಯ ಮನೋಧರ್ಮದವರ ಸಂಘಟನೆ, ಹೊಸ ಸಾಧ್ಯತೆಗಳ ಬಗೆಗಿನ ನಿರಂತರ ಶೋಧನೆ ಇದನ್ನು ಸ್ಥಿರೀಕರಿಸಬಲ್ಲುದು. ಅದಕ್ಕೆ ಪೂರಕವಾದ ವಾತಾವರಣ ಮತ್ತು ಹದ ಇದೀಗ ನಮ್ಮ ಮುಂದಿದೆ. ಚಲನಚಿತ್ರ ಸಮಾಜಗಳನ್ನು ಹೆಚ್ಚು ಹೆಚ್ಚು ಸ್ಥಾಪಿಸಿ ಚರ್ಚೆಗಳ ಮೂಲಕ ಹೊಸ ಸಾಧ್ಯತೆಗಳನ್ನು ಅನಾವರಣ ಮಾಡುವ ಮೂಲಕ ನಾವೆಲ್ಲರೂ ಪರ್ಯಾಯ ಸಿನಿಮಾಗಳ ಕ್ರಾಂತಿಗೆ ನಮ್ಮ ಕಾಣಿಕೆಗಳನ್ನು ನೀಡಲು ಇದು ಸಕಾಲ.