ಹೊಷಿನ್ ಕೊನೆಯ ಕವನ

ಹೊಷಿನ್ ಕೊನೆಯ ಕವನ

'ಸಂಪದ'ದಲ್ಲಿ ಕಳೆದ ಹಲವಾರು ಸಮಯದಿಂದ ಶ್ರೀಯುತ ಅಡ್ಡೂರು ಕೃಷ್ಣ ರಾವ್ ಅವರು ಝೆನ್ ಪ್ರಸಂಗವನ್ನು ಬಹಳ ಅಚ್ಚುಕಟ್ಟಾಗಿ ನಮಗೆ ನೀಡುತ್ತಾ ಬಂದಿದ್ದಾರೆ. ಝೆನ್ ಪ್ರಸಂಗಗಳೇ ಹಾಗೆ, ಒಮ್ಮೆ ಓದಿದಾಗ ಒಂದು ಅರ್ಥ ನೀಡಿದರೆ, ಮತ್ತೊಮ್ಮೆ ಓದುವಾಗ ವಿಭಿನ್ನ ಅರ್ಥ ನೀಡುತ್ತದೆ. ಕೆಲವೇ ಕೆಲವು ಸಾಲಿನಲ್ಲಿ ಅರ್ಥಪೂರ್ಣ ಓದು ನಿಮ್ಮದಾಗುತ್ತದೆ. ಅದೇ ರೀತಿಯ ಒಂದು ಪ್ರಸಂಗವನ್ನು ನಾನು ಹಳೆಯ ಕಸ್ತೂರಿಯ ಪುಟಗಳಿಂದ ಆಯ್ದು ನೀಡುತ್ತಿದ್ದೇನೆ. ಓದುವ ಸಂಭ್ರಮ ನಿಮ್ಮದಾಗಲಿ…

***

ಝೆನ್ ಗುರು ಹೊಷಿನ್ ಹಲವಾರು ವರ್ಷ ಚೀನಾದಲ್ಲಿ ವಾಸ ಮಾಡಿದ ನಂತರ ಜಪಾನಿಗೆ ವಾಪಾಸಾಗಿದ್ದರು. ಈಶಾನ್ಯ ಪ್ರಾಂತ್ಯದ ಒಂದು ಊರಲ್ಲಿ ನೆಲೆಸಿ ಪಾಠ ಹೇಳಲಾರಂಬಿಸಿದರು. ಪಾಠಶಾಲೆ ಸಾಗಿದಂತೆ ಅವರಿಗೆ ವಯಸ್ಸಾಗುತ್ತಾ ಬಂತು. ವೃದ್ಧಾಪ್ಯದಲ್ಲಿ ಒಂದು ದಿನ ಹೊಷಿನ್, ಚೀನಾದಲ್ಲಿ ತಾನು ಕೇಳಿದ ಕತೆಯೊಂದನ್ನು ಶಿಷ್ಯರಿಗೆ ಹೇಳಿದ.

ಆ ವರ್ಷ ಡಿಸೆಂಬರ್ ೨೫ನೇ ದಿನ, ತೊಕುಫು ಎಂಬ ಝೆನ್ ಗುರು ಹಣ್ಣು ಹಣ್ಣು ಮುದುಕನಾಗಿದ್ದ. ತೊಕುಫು ಶಿಷ್ಯರನ್ನು ಕರೆದು ಹೇಳಿದ “ಮುಂದಿನ ವರ್ಷದವರೆಗೆ ಮಾತ್ರ ನನ್ನ ಆಯಸ್ಸು. ಈ ವರ್ಷ ನನ್ನನ್ನು ಚೆನ್ನಾಗಿ ನೋಡಿಕೊಳ್ಳಿ."

ಗುರುಗಳು ತಮಾಷೆ ಮಾಡುತ್ತಿದ್ದಾರೆ ಎಂದೆನಿಸಿತು ಶಿಷ್ಯರಿಗೆ. ಗುರುಗಳು ಮಹಾ ಉಪಾಧ್ಯಾಯರು. ಶಿಷ್ಯರಲ್ಲಿ ಪುತ್ರ ವಾತ್ಸಲ್ಯವನ್ನು ಹೊಂದಿದ್ದ ಗುರುಗಳು. ಶಿಷ್ಯರು ಗುರುಗಳ ಮಾತಿನಂತೆ ಸ್ನಾನ, ಜಪ-ತಪ, ಊಟ-ವಿಶ್ರಾಂತಿ ಯಾವುದರಲ್ಲೂ ಕೊರತೆ ಬಾರದಂತೆ ನೋಡಿಕೊಂಡರು.

ಹೊಸ ವರ್ಷ ಬಂತು. ಅದರ ಹಿಂದಿನ ದಿನ ಸಂಜೆ ತೊಕೊಫು ಶಿಷ್ಯರಿಗೆ ಹೀಗೆ ನುಡಿದರು “ನೀವು ನನ್ನ ತುಂಬಾ ಆದರದಿಂದ ನೋಡಿಕೊಂಡಿದ್ದೀರಿ. ನಾಳೆ ಮದ್ಯಾಹ್ನ ಹಿಮಪಾತ ನಿಂತ ನಂತರ ನಾನು ದೇಹ ತ್ಯಜಿಸಲಿರುವೆ. ನಿಮ್ಮಿಂದ ನಾನು ದೂರವಾಗುವೆ.”

ಶಿಷ್ಯರಿಗೆ ನಗು ಬಂತು. ಮುದುಕನಿಗೆ ಅರಳು ಮರಳು, ಬಾಯಿಗೆ ಬಂದಂತೆ ಬಡಬಡಿಸುತ್ತಿದ್ದಾನೆ ಎಂದುಕೊಂಡರು. ಆಕಾಶ ಎಷ್ಟು ಶುಭ್ರನೀಲವಾಗಿದೆ. ಹಿಮಪಾತ ಎಲ್ಲಿಂದ ಬಂದೀತು ಎಂದುಕೊಂಡು ಮುಸಿ ಮುಸಿ ನಕ್ಕರು. ಆದರೆ ಅಂದು ರಾತ್ರಿ ಹಿಮ ಬೀಳಲು ಶುರುವಾಯಿತು. ಮರುದಿನ ಗುರುಗಳು ಕಾಣಿಸಲಿಲ್ಲ. ಅವರ ಧ್ಯಾನದ ಕೋಣೆಗೆ ಹೋಗಿ ನೋಡಿದರು. ಗುರುಗಳು ನಿಧನ ಹೊಂದಿದ್ದರು.

ಕಥೆ ಮುಗಿಸಿದ ಹೊಷಿನ್, “ಝೆನ್ ಗುರು ತನ್ನ ಮರಣದ ಮುನ್ಸೂಚನೆ ನೀಡಬೇಕೆಂದು ಕಡ್ಡಾಯವೇನಿಲ್ಲ. ಆದರೆ ಅವಸಾನ ಸಮೀಪಿಸುತ್ತಿದೆ ಎಂದು ತಿಳಿಸಲು ಅಡ್ಡಿ ಇಲ್ಲ. “ ಎಂದರು.

“ನೀವು ನಿಮ್ಮ ಮರಣದ ದಿನ ತಿಳಿಸಲು ಸಾಧ್ಯವೇ?” - ಶಿಷ್ಯನೊಬ್ಬನ ಪ್ರಶ್ನೆ.

“ಖಂಡಿತವಾಗಿಯೂ, ಮುಂದಿನ ಏಳು ದಿನಗಳಲ್ಲಿ ನನ್ನ ಕಾರ್ಯವೇನೆಂಬುದನ್ನು ನಿಮಗೆ ತೋರಿಸಿಕೊಡುತ್ತೇನೆ.”

ಶಿಷ್ಯರು ಹೊಷಿನ್ ಗುರುಗಳ ಮಾತನ್ನು ನಂಬಲಿಲ್ಲ. ಒಂದೆರಡು ದಿನಗಳಲ್ಲಿ ಈ ಮಾತನ್ನು ಮರೆತೆ ಬಿಟ್ಟಿದ್ದರು. 

ಹೊಷಿನ್ ಶಿಷ್ಯರನ್ನು ಕರೆದಾಗ ಅವರಿಗೆ ತಬ್ಬಿಬ್ಬಾಯಿತು. 

“ಏಳು ದಿವಸಗಳ ಹಿಂದೆ ನಿಮಗೆ ಹೇಳಿದ್ದೆ. ನಿಮ್ಮಿಂದ ಅಗಲುವೆ ಎಂದು. ಅಗಲುವ ಮುನ್ನ ವಿದಾಯ ಗೀತೆ ಬರೆಯುವುದು ಇಲ್ಲಿನ ವಾಡಿಕೆ. ಆದರೆ ನಾನು ಕವಿಯಲ್ಲ. ಅಂದವಾಗಿ ಅಕ್ಷರಗಳನ್ನು ಬರೆಯುವುದೂ ನನ್ನಿಂದ ಸಾಧ್ಯವಾಗದು. ನನ್ನ ಕೊನೆಯ ಮಾತುಗಳನ್ನು ನಿಮ್ಮಲ್ಲಿ ಯಾರಾದರೂ ಬರೆದುಕೊಳ್ಳಿ. “

ಗುರುಗಳು ಈಗಲೂ ತಮಾಷೆ ಮಾಡುತ್ತಿದ್ದಾರೆ ಎಂದೇ ಶಿಷ್ಯರು ಭಾವಿಸಿದ್ದರು. ಅವರಲ್ಲಿ ಒಬ್ಬ ಬರೆದುಕೊಳ್ಳಲು ಮುಂದಾದ. “ ನೀನು ಬರೆದುಕೊಳ್ಳುವಿಯಾ” ಹೊಷಿನ್ ಪ್ರಶ್ನೆ.

“ಸಿದ್ಧನಾಗಿರುವೆ, ಹೇಳಿ ಗುರುಗಳೇ”

ಹೊಷಿನ್ ನುಡಿದ ಬರೆದುಕೋ-

“ನಾನು ತೇಜಪುಂಜದಿಂದ ಬಂದವನು

ಮತ್ತೆ ತೇಜಪುಂಜಕ್ಕೆ ಹಿಂದಿರುಗುವೆನು

ಏನಿದರ ಅರ್ಥ?”

ಹೊಷಿನ್ ಮುಂದಕ್ಕೆ ಏನೂ ಹೇಳಲಿಲ್ಲ. ಕಾವ್ಯ ಮೀಮಾಂಸೆ ಪ್ರಕಾರ ಕವನವೆಂದರೆ ನಾಲ್ಕು ಪಂಕ್ತಿಗಳಿರಬೇಕು. ಒಂದು ಸಾಲು ಕಮ್ಮಿಯಾಯಿತಲ್ಲ?

“ಗುರುಗಳೇ ಒಂದು ಸಾಲು ಕಮ್ಮಿಯಾಗಿದೆ"

ಶಿಷ್ಯನೊಬ್ಬ ಅಂಜುತ್ತಲೇ ಅಂದ. ಮರುಕ್ಷಣವೇ ಹೊಷಿನ್ ಸಿಂಹದಂತೆ ‘ಗುರ್..’ ಎನ್ನುತ್ತಾ ಘರ್ಜಿಸಿ ಅಸ್ತಂಗತನಾದ.

(ಕೃಪೆ:ದುಷ್ಯಂತ)

ಚಿತ್ರ: ಅಂತರ್ಜಾಲ ತಾಣದ ಕೃಪೆ