ಹೊಸಗನ್ನಡ ಕಾವ್ಯಶ್ರೀ

ಹೊಸಗನ್ನಡ ಕಾವ್ಯಶ್ರೀ

ಪುಸ್ತಕದ ಲೇಖಕ/ಕವಿಯ ಹೆಸರು
ಸಂಗ್ರಾಹಕರು: ದ ರಾ ಬೇಂದ್ರೆ ಮತ್ತು ಎಂ ಎಂ ಭಟ್
ಪ್ರಕಾಶಕರು
ಶ್ರೀ ಕೃಷ್ಣಾ ಪ್ರೆಸ್, ಬೆಂಗಳೂರು
ಪುಸ್ತಕದ ಬೆಲೆ
ರೂ. ೧.೭೫, ಮುದ್ರಣ: ೧೯೫೭

ದಕ್ಷಿಣ ಭಾಷಾ ಪುಸ್ತಕ ಸಂಸ್ಥೆಯವರ ಸೌಜನ್ಯದಿಂದ ಪ್ರಕಟವಾದ ಪುಸ್ತಕ ‘ಹೊಸಗನ್ನಡ ಕಾವ್ಯಶ್ರೀ’. ಈ ಪುಸ್ತಕದ ಮುದ್ರಣವಾಗಿ ಈಗಾಗಲೇ ಆರು ದಶಕಗಳು ಸಂದಿವೆ. ಆದರೂ ಅಂದಿನ ಕವಿಗಳ ಹೊಸಗನ್ನಡ ಕಾವ್ಯಗಳು ಮನಸ್ಸಿಗೆ ಮುದ ನೀಡುತ್ತಿವೆ. ಅಂದಿನ ಸಮಯದ ಭಾಷಾ ಪ್ರಯೋಗ, ವಿಷಯ ವಸ್ತುಗಳು ಹೊಸ ಕವಿಗಳಿಗೆ ಇನ್ನಷ್ಟು ಕಲಿಯುವ ಹುಮ್ಮಸ್ಸು ಮೂಡಿಸುತ್ತದೆ. ಈ ಕೃತಿಯ ಕವನಗಳನ್ನು ಸಂಗ್ರಹಿಸಿದವರು ‘ವರಕವಿ’ ದ ರಾ ಬೇಂದ್ರೆ ಹಾಗೂ ಸಾಹಿತಿ ಎಂ. ಮರಿಯಪ್ಪ ಭಟ್ ಇವರು. 

ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಅಂದಿನ ಮದರಾಸಿನ ಶ್ರೇಷ್ಟ ನ್ಯಾಯಾಲಯದ ಪ್ರಧಾನ ಕಾರ್ಯದರ್ಶಿಗಳಾದ ಪಿ ವಿ ರಾಜಮನ್ನಾರ್ ಇವರು. ಅವರು ತಮ್ಮ ಮುನ್ನುಡಿಯಲ್ಲಿ “ ದಕ್ಷಿಣ ಭಾರತದ ನಾಲ್ಕೂ ಭಾಷೆಗಳಲ್ಲಿಯೂ ಬರೆಯಲ್ಪಟ್ಟ ಮೂಲ ಗ್ರಂಥಗಳನ್ನು, ಮುಖತಃ ಸಾಂಸ್ಕೃತಿಕ ಮತ್ತು ವೈಜ್ಞಾನಿಕ ವಿಷಯಗಳ ಗ್ರಂಥಗಳನ್ನು ಮತ್ತು ಜಗತ್ತಿನ ಇತರ ಭಾಷೆಗಳಲ್ಲಿ ಕೆಲವು ಮಹದ್ಗ್ರಂಥಗಳ ಭಾಷಾಂತರ ಕೃತಿಗಳನ್ನು ಪ್ರಕಟಿಸುವುದು ದಕ್ಷಿಣ ಭಾಷಾ ಪುಸ್ತಕ ಸಂಸ್ಥೆಯವರ ಗುರಿ.

‘ಅಲ್ಪ ಬೆಲೆಗೆ ಉತ್ತಮ ಪುಸ್ತಕಗಳು' ಎಂಬುದೇ ಈ ಸಂಸ್ಥೆಯ ಧ್ಯೇಯವಾಗಿದೆ. ಈಗ ಪ್ರಕಟವಾಗುತ್ತಿರುವ ಪುಸ್ತಕಗಳಿಂದ ಆ ಧ್ಯೇಯವು ಎಷ್ಟರ ಮಟ್ಟಿಗೆ ಫಲಿಸಿದೆ ಎಂಬುದನ್ನು ಸಾರ್ವಜನಿಕರೇ ಹೇಳಬೇಕು. ಈ ಸಾಹಸದ ಫಲ ಪರಿಣಾಮಗಳು ಸ್ಪಷ್ಟವಾಗಲು ಬಹುಷಃ ಒಂದು ದಶಕ ಬೇಕಾದೀತು; ಆದರೂ ವಾಸ್ತವಿಕ ಕಲ್ಪನೆಯುಳ್ಳ ಯಾವನಾದರೂ ಈ ಯೋಜನೆಯ ಮಹತ್ವವನ್ನು ಮನಗಾಣದೇ ಇರನು ; ಸಾಧಿಸಬಹುದಾದದ್ದು ಘನತರವಾಗಿದೆ.” ಎಂದಿದ್ದಾರೆ.

ಪುಸ್ತಕದ ಸಂಪಾದಕರಲ್ಲಿ ಓರ್ವರಾದ ಎಂ ಮರಿಯಪ್ಪ ಭಟ್ ಇವರು ತಮ್ಮ ನುಡಿಯಲ್ಲಿ “ಹೊಸಗನ್ನಡ ಸಾಹಿತ್ಯದ ಬಹುತೇಕ ಎಲ್ಲ ಗಣ್ಯ ಕವಿಗಳ ಪ್ರಕಟಿತ ಕವನ ಸಂಕಲನಗಳಿಂದ ಆಯ್ದು ಅಣಿಗೊಳಿಸಿದ ಭಾವಗೀತ ಮಣಿಮಾಲೆ ಇದು. ಹೊಸಗನ್ನಡವೆಂದರೆ ಕಳೆದ ಶತಮಾನದ ಕೊನೆಯ ದಶಕದಿಂದ ಈ ಶತಮಾನದ ಐದನೆ ದಶಕದ ಕೊನೆಯವರೆಗಿನ ಕನ್ನಡ ಸಾಹಿತ್ಯ ಎಂಬ ಸ್ಥೂಲದೃಷ್ಟಿಯನ್ನಷ್ಟೇ ಇಟ್ಟುಕೊಂಡು ಈ ಕಾವ್ಯ ಪ್ರಪಂಚಕ್ಕೊಂದು ಮೇರುಗಟ್ಟಲಾಗಿದೆ. ಕನ್ನಡದಲ್ಲಿಂದು ‘ಆಧುನಿಕ ಸಾಹಿತ್ಯ'ದ ಕುರಿತು ಬರೆಯುವವರೂ ಭಾಷಣ ಮಾಡುವವರೂ ನಾವಿಟ್ಟುಕೊಂಡಿರುವ ಕಾಲಮಾನ ದೃಷ್ಟಿಯನ್ನನುಸರಿಸುತ್ತಿರುವುದು ಸರ್ವವಿದಿತ.

ಕಾಲಮಾನಕ್ಕನುಗುಣವಾದ ಜೀವನ ರೀತಿನೀತಿಗಳೂ, ಸಮಸ್ಯೆಗಳೂ ಉಂಟಾಗುವುದು ಸಮಾಜ ವಿಕಾಸದ ಒಂದು ಸ್ವಾಭಾವಿಕ ಕ್ರಮವಾಗಿದೆ. ಈ ಸಂಕಲನದಲ್ಲಿ ಅದು ಪ್ರತಿಬಿಂಬಿತವಾಗಿರುವುದನ್ನು ಗುರುತಿಸಿಕೊಳ್ಳಬಹುದು. ಬಂಗಾರವು ಒಂದೇ ಆದರೂ ಅದರಿಂದ ವಿಧವಿಧದ ಆಕೃತಿಯ ಆಭರಣಗಳನ್ನು ಮಾಡುವಂತೆ ಕಾವ್ಯ ಪ್ರತಿಭೆಯೆಂಬ ಮೂಲದ್ರವ್ಯ ಒಂದೇ ಆದರೂ ಆಯಾ ಪಾತ್ರ (ವ್ಯಕ್ತಿ) ದ ಗುಣ ಧರ್ಮ ಶಿಕ್ಷಣ ಸಂಸ್ಕಾರ ಅನುಭವಗಳಿಗನುಗುಣವಾಗಿ ಅದು ಬಗೆ ಬಗೆಯ ವ್ಯಕ್ತಿ ವಿಶಿಷ್ಟತೆಯ ಶೈಲಿ, ಭಾವನೆ, ಕಲ್ಪನೆಗಳನ್ನೊಳಗೊಂಡ ಕಾವ್ಯರೂಪಗಳನ್ನು ತಳೆಯುತ್ತದೆ. ಹೊಸಗನ್ನಡದ ಈ ಕವಿಪ್ರವರರ ಕೃತಿಗಳಲ್ಲಿ ಅಂತಹ ವ್ಯಕ್ತಿ ವಿಶಿಷ್ಟತೆಯನ್ನು ಕಾವ್ಯ ರಸಿಕರು ಕಾಣಬಹುದಾಗಿದೆ.” ಎಂದು ಅಭಿಪ್ರಾಯ ಪಟ್ಟಿದ್ದಾರೆ. 

ಈ ಕೃತಿಯಲ್ಲಿ ೫೨ ಕವಿಗಳ ಸುಮಾರು ೭೦ ಕವನಗಳಿವೆ. ಈ ಕೃತಿಯಿಂದ ಆಯ್ದ ಕವನಗಳನ್ನು ‘ಸಂಪದ' ದಲ್ಲಿ ನಾನು ಪ್ರಕಟಿಸಲಿದ್ದೇನೆ. ಏಕೆಂದರೆ ಸುಮಾರು ಆರು ದಶಕಗಳ ಹಿಂದಿನ ಈ ಕೃತಿ ಈಗ ಬಹುಷಃ ಯಾವ ಗ್ರಂಥಾಲಯದಲ್ಲೂ ಸಿಗುವ ಸಾಧ್ಯತೆ ಕಡಿಮೆ. ಸುಮಾರು ೨೦೦ ಪುಟಗಳ ಈ ಹೊತ್ತಗೆಯ ಕೊನೆಯಲ್ಲಿ ಈ ಕೃತಿಯಲ್ಲಿರುವ ಕವನಗಳ ರಚನೆಕಾರರ ಪುಟ್ಟ ಪರಿಚಯವನ್ನು ನೀಡಿದ್ದಾರೆ. ಇದು ಆಯಾ ಕವನದ ಕವಿಗಳ ಬಗ್ಗೆ ತಿಳಿದುಕೊಳ್ಳಲು ಸಹಕಾರಿಯಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.