'ಹೊಸಗನ್ನಡ ಕಾವ್ಯಶ್ರೀ’ (ಭಾಗ ೧೪) - ಪು.ತಿ.ನರಸಿಂಹಾಚಾರ್

'ಹೊಸಗನ್ನಡ ಕಾವ್ಯಶ್ರೀ’ (ಭಾಗ ೧೪) - ಪು.ತಿ.ನರಸಿಂಹಾಚಾರ್

ನರಸಿಂಹಾಚಾರ್ಯರು ಅಂದಿನ ಮೈಸೂರು ರಾಜ್ಯದ ಹೊಸಗನ್ನಡ ಭಾವಗೀತ ಕವಿಗಳಲ್ಲಿ ಮೇಲ್ಮಟ್ಟದವರಲ್ಲೊಬ್ಬರೆಂದು ಖ್ಯಾತಿವೆತ್ತವರು. ಕಾಲೇಜಿನಲ್ಲಿ ಕಲಿಯುವಾಗಿನಿಂದಲೇ ದಿವಂಗತ “ಶ್ರೀ” ಯವರ (ಬಿ. ಎಂ. ಶ್ರೀಕಂಠಯ್ಯ) ಆದರ್ಶವನ್ನು ಅನುಸರಿಸಿ ಹೊಸ ಮಾದರಿಯ ಪದ್ಯರಚನೆ ಮಾಡುತ್ತಾ ಬಂದವರಲ್ಲೊಬ್ಬರು. “ಮಾಂದಳಿರು", “ಹಣತೆ", “ರಸಸರಸ್ವತಿ", “ಮಲೆದೇಗುಲ" ಮೊದಲಾದ ಕವನ ಸಂಗ್ರಹಗಳನ್ನು ಪ್ರಕಟಿಸಿದ್ದಾರೆ. “ಶಬರಿ", “ಗೋಕುಲ ನಿರ್ಗಮನ" ಮೊದಲಾದ ಗೀತ ನಾಟಕಗಳನ್ನು ರಚಿಸಿದ್ದಾರೆ. ಗದ್ಯದಲ್ಲೂ ವಿಡಂಬನಾತ್ಮಕ ಪ್ರಬಂಧಗಳ ಸಂಗ್ರಹಗಳನ್ನು ಪ್ರಕಟಿಸಿದ್ದಾರೆ. ಇವರು ಎಂ ಎ ಪದವೀಧರರು. ಇವರನ್ನು ಕಾವ್ಯ ಲೋಕದಲ್ಲಿ ‘ಪು ತಿ ನ'’ ಎಂದು ಕರೆಯುತ್ತಿದ್ದರು. ಮೈಸೂರು ಶಾಸನ ಸಭೆಯ ಕಚೇರಿಯಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತರಾದವರು.

ಪು ತಿ ನ ಅವರ ಎರಡು ಕವನಗಳು ‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಲ್ಲಿ ಪ್ರಕಟವಾಗಿದೆ. ರಸ ಸರಸ್ವತಿ ಎಂಬ ನೀಳ್ಗವನ ಹಾಗೂ ದಾಳಿಂಬೆ ಎಂಬ ಕವನ ಪ್ರಕಟವಾಗಿವೆ. 

ದಾಳಿಂಬೆ

ಇದು ಮೀಸಲೇ ನನಗೆ, ಈ ಬೆಳ್ಳಿ ಬಟ್ಟಲೊಳು

ರತ್ನಕಾಂತಿಯ ಚೆಲ್ಲಿ ಕಳಕಳಿಪ ದಾಳಿಂಬೆ?

ನೂತ್ನ ಋದ್ದಿಯ ಪಡೆದ ಮೋದದೊಳಗೀ ಜಿಹ್ವೆ

ಇದುವರೆಗು ಕಾರ್ಪಣ್ಯದೊಳಗಿದ್ದೆನೆನುತಿಹುದು

 

ಬಿತ್ತಬಿತ್ತದ ರಸವ ಸವಿದು ಸವಿದಾಕ್ಷಣದಿ

ಆಯುಷ್ಯ ಸಾರವನ್ನು ಬಟ್ಟಿಯಿಳಿಸುವ ತೆರದಿ.

ದೇಯವಿದನಾ ರೂಕ್ಷವೃಕ್ಷವೀ ಪೃಥ್ವಿಯಿಂ

ದೆತ್ತಿ ಈ ಮುದವೆರೆವೊಲಾವರ್ತಿ ಚೋದಿಸಿತು?

 

ಋತುಋತುಗಳಾದರವ, ಗಾಳಿಯಪ್ಪುಗೆಸೊಬಗ,

ಬೆಂಗದಿರ ರಕ್ತಿಯನು ತಂಗದಿರ ಸಕ್ತಿಯನು

ತಂಗಿಸಿತೊ ಮಳೆಮಂಜಿನೊಲವ ಮಧುರಾಮ್ಲದೊಳು

ಇತರೇಂದ್ರಿಯ ದ್ಯುತಿಯ ರಸನೆಗನುವದಿಸುವೊಲು ?

 

ರಸವಿದೇನಿದ ಸವಿವರಾರ್ ಏನಿದಚ್ಚರಿಯ ಭೋಗ

ರಸನೆಹಸೆಯೊಳಗಿಂತು ಪ್ರಕೃತಿ ಪುರುಷರ ದಿವ್ಯಯೋಗ !

(ಹೊಸಗನ್ನಡ ಕಾವ್ಯಶ್ರೀ ಕೃತಿಯಿಂದ ಆಯ್ದ ಕವನ)