'ಹೊಸಗನ್ನಡ ಕಾವ್ಯಶ್ರೀ’ (ಭಾಗ ೩೬) - ಕಮಲನಾಭ

'ಹೊಸಗನ್ನಡ ಕಾವ್ಯಶ್ರೀ’ (ಭಾಗ ೩೬) - ಕಮಲನಾಭ

‘ಕಮಲನಾಭ' ಎನ್ನುವುದು ಕಿನ್ನಿಗೋಳಿಯ ‘ಯುಗಪುರುಷ' ಪತ್ರಿಕೆಯ ಸಂಸ್ಥಾಪಕ, ಸಂಪಾದಕರಾಗಿದ್ದ ಅನಂತ ಪದ್ಮನಾಭ ಉಡುಪ ಇವರ ಕಾವ್ಯನಾಮ. ಇವರು ‘ತೀರ್ಷಯಜ್ಞ', ಸುಮಸಂಚಯ, ಸಮರ್ಪಣೆ ಎಂಬ ಕವನ ಸಂಕಲನಗಳನ್ನು ರಚನೆ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಆಧುನಿಕ ಕನ್ನಡ ಕವಿಗಳಲ್ಲಿ ಒಬ್ಬರಾಗಿದ್ದಾರೆ. ಇವರ ಬಗ್ಗೆ ಅಧಿಕ ಮಾಹಿತಿ, ಭಾವಚಿತ್ರ ಎಲ್ಲೂ ಸಿಗುತ್ತಿಲ್ಲ.

ಇವರ ಒಂದು ಕವನ ‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಲ್ಲಿದೆ. ಅದನ್ನು ಆಯ್ದು ಪ್ರಕಟ ಮಾಡಲಾಗಿದೆ.

ರಜಪೂರ ರಮಣಿಯ ವೀರ ಸಂದೇಶ

ಓ ನಲ್ಲ ರಜಪೂತ ಮಾನಿನಿಯು, ತನ್ನೆದೆಯ

ಸ್ವಾರ್ಥಸಂಕದಿ ಕುಸಿಯೆ ಮುನಿಯದಿರಳು

ಮಾನವಧನವನ್ನುಳಿಸೆ ಕಡುಬೇಗ ಜನ್ನದಲಿ

ಸರ್ವಸ್ವದಾಹುತಿಗು ಚಿರಸಿದ್ಧಳು

“ತೋರಿಕೆಯ ಮೃಗಜಲಕೆ ಮರುಳಾಗಿ ತೊರೆಯದಿರು

ಕರ್ತವ್ಯದ ಮರೆತೆಯ ಸಗ್ಗ ಸಿರಿಯ !

ಸಂಸಾರ ಸರಸಿಯಲಿ ಸೊಗದಾವರೆಯ ಕೆಳಗೆ

ಮರೆಯದಿರು ದುಗುಡಗಳ ಕೆಸರಪರಿಯ"

“ಸವಿದನಿತು ತಣಿಯದಿಹೆ ಬಗೆಯ ಕೊರಡನು ಸವೆವ

ವಿಷಯ ವಾಸನೇಗೀಯು ತಿಲತರ್ಪಣ

ಬುವಿಯ ಕಟ್ಟಳುಗಳ ಕೃತಿ, ಶೃಂಗದಗ್ರತೆಯ

ಶಿವಗಿರಿಯ ಸೋಪಾನ-ತೊಟ್ಟಹ ಪಣ !”

“ಬೀರಂಗೆ ಗೆಲವೆಣ್ಣೆ ಮೆಚ್ಚಿಕೆಯ ಮನದನ್ನೆ

ಕೆನ್ನೀರಿನೋಕುಳಿಯೆ ಗಂಗಾಜಲ !

ಕೆಚ್ಚೆದೆಯ ಸಾಸದಲಿ ಸವಿನಪ್ಪುಗೆ ದೊರೆಯ

ಅದುವೆ ನವಕಲ್ಪಲತೆ ಅಮೃತದ ಫಲ"

“ಅಳಿಯಲಿರುವೀತನುವ ನೆಚ್ಚದಿರು ಮೆಚ್ಚದಿರು 

ಕೊನೆಯಕ ಉಳಿಯುವುದು ಕೀರ್ತಿಕಾಯ !

ಋತವೊಂದೆ ಗೆಲಲಿಹುದು ಅನೃತಕಿದೆ ನೆರೆಸೋಲು

ನಂಬದಿರು ತೋರಿಕೆಯು ಮಾಯಾಮಯ"

ಹಿನ್ನಡೆಗೆ ನರಕದೊಲು ಮುನ್ನಡೆಗೆ ನಾಕವಿದೆ

ಚಪಲತೆಯ ಮೃಗಜಲವ ತೊರೆ ವಲ್ಲಭ

ವಿಜಯಕಾಂತೆಯ ಕೈಯ ಕುಸುಮಮಾಲೆಯ ಭಾಗ್ಯ

ಹುಲುಮಾನನಿಸಗಹುದು ಅತಿ ದುರ್ಲಭ-

“ವೀರನಿಗೆ ಒರೆಗಳಚಿ ಬರಸೆಳೆದ ಕೂರಸಿಯು

ಕೈಯ್ಯೊಳಿರೆ ಅರಮನೆಯ ತನ್ನ ಕಾಂತೆ

ಅಂಗಣವನಿಳಿದೈದಿ ಬೆಂಬಳಿಸಿ ಬಂದಂತೆ

ಮತ್ತಿರದು ಮಿಕ್ಕ ವ್ಯಾಮೋಹ ಚಿಂತೆ !

“ಸತಿಯೂರ್ಮಿಳೆಯು ಲಕ್ಷ್ಮಣನನು ಮೇಣುತ್ತರೆಯು

ಅಭಿಮನ್ಯುವನು ಸೆರೆಯನಿಗಳವಿಕ್ಕಿ

ಕರ್ತವ್ಯಪಥದಿಂದ ತೊಲಗಿಸಿದ್ದರೆ ಲೋಕ

ಬೆರಗಾಗಲಿತ್ತೆ ಜಸಗಡಲುವಿಕ್ಕಿ ?”

“ಕನಜ ಜಣಜಕ್ಕಾಗಿ, ಕನ್ನಡಿಯ ನಿಧಿಗಾಗಿ

ಬಡಿದಾಡಿ ಸಾಯುವುದೆ ದೌರ್ಭಾಗ್ಯವು

ಶೂರ ಜನರೆಳಸುತಿಹೆ ಮೃತ್ಯುದೇವಿಯ ತೋಳ

ತೆಕ್ಕೆಯಲಿ ಮೈಮರೆಯ ಸೌಭಾಗ್ಯವು !

“ಹಗಲೊಗೆದ ಚಂದ್ರಕಲೆ ರವಿಯನ್ನೆ ಕುರುಡಿಸಲಿ,

ಹಿಮಗಡ್ಡೆ ಕರಗಿ ಬೆನ್ನೀರೆರೆಯಲಿ

ರಜಪೂತ ರಮಣಿಯರು ಕುಲಗೌರವಕೆ ಕುಂದು

ತರುವರೆ? ವಿಷವಕ್ಕೆ ಅಮೃತವಲ್ಲಿ !

“ನಾಡದೇಗುಲ ದೆಡೆಯ ಜನಕಠಕ ಹಳೆಗಳೆ

ಮೊಳಗುತಿವೆ ನೀವೀರರತ್ನನೆಂದು !

ಇಹವೇನು ಪರವೇನು? ಎಲ್ಲೆಡೆಗು ಜತೆಗೂಡಿ

ಅನುಸರಿಪೆ ನಿನ್ನೊಡನೆ ಮಿಲನಕೆಂದು"

(‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಿಂದ ಅಯ್ದ ಕವನ)